ಹರಿಯಾಣ ರಾಜ್ಯದಲ್ಲಿ ಭುಗಿಲೆದ್ದಿರುವ ಕೋಮು ಗಲಭೆ ರಾಷ್ಟ್ರ ರಾಜಧಾನಿಗೆ ವ್ಯಾಪಿಸದಂತೆ ದೆಹಲಿ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.
ಗುರುಗ್ರಾಮದ ಸೆಕ್ಟರ್ 70ರಲ್ಲಿ ಹಲವು ಅಂಗಡಿ ಹಾಗೂ ಗುಡಿಸಲುಗಳಿಗೆ ಬೆಂಕಿ ಹಚ್ಚಲಾಗಿದ್ದು, ಗಲಭೆ ನಿಯಂತ್ರಿಸಲು ಪೆಟ್ರೋಲ್ ಹಾಗೂ ಡೀಸೆಲ್ ಚಿಲ್ಲರೆ ಮಾರಾಟವನ್ನು ಜಿಲ್ಲಾಡಳಿತ ನಿಷೇಧಿಸಿದೆ.
ಎರಡು ದಿನಗಳ ಹಿಂದೆ ಹರಿಯಾಣದ ಸಮೀಪದ ನುಹ್ ಜಿಲ್ಲೆಯಲ್ಲಿ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವಿನ ಹಿಂಸಾತ್ಮಕ ಘರ್ಷಣೆಯಲ್ಲಿ ಐವರು ಮೃತಪಟ್ಟಿದ್ದರು. ಗಲಭೆಯು ಗುರುಗ್ರಾಮದ ಸೆಕ್ಟರ್ 57ರಲ್ಲಿರುವ ಅಂಜುಮನ್ ಮಸೀದಿಗೆ ಅಪರಿಚಿತರು ಬೆಂಕಿ ಹಚ್ಚಿದ್ದು, ಘಟನೆಯಲ್ಲಿ 26 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದರು.
ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ ಇಡಲು ಡ್ರೋನ್‌ಗಳನ್ನು ಬಳಸಲು ಪೊಲೀಸರು ಚಿಂತಿಸುತ್ತಿದ್ದು, ಯಾವುದೇ ಕಾರಣಕ್ಕೂ ಹಿಂಸಾಚಾರಕ್ಕೆ ಅನುವು ಮಾಡಿಕೊಡಬಾರದು ಎಂಬ ನಿರ್ಧರಿಸಿದ್ದಾರೆ.
ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ ಇಡಲು ಡ್ರೋನ್‌ಗಳ ಬಳಕೆ, ಹೆಚ್ಚಿನ ಗಸ್ತು ಮತ್ತು ಪೊಲೀಸರು ಕಣ್ಗಾವಲು ಇಡುವ ಮೂಲಕ ದೆಹಲಿ ಅಡಳಿತ ಎಚ್ಚರಿಕೆಯಲ್ಲಿದೆ.
ಗಲಭೆ ಪ್ರದೇಶದಿಂದ ಕೇವಲ ಇಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ನೆರೆಯ ಪ್ರದೇಶಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಇದರ ಪರಿಣಾಮವಾಗಿ ರಾಷ್ಟ್ರ ರಾಜಧಾನಿಯಲ್ಲಿ ಉದ್ಭವಿಸುವ ಯಾವುದೇ ಪರಿಸ್ಥಿತಿಯನ್ನು ತಡೆಯಲು ಪೊಲೀಸ್ ಪಡೆ ಸಿದ್ಧವಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಸಭೆ: ಲೋಕಸಭೆ ಚುನಾವಣೆ ಗೆಲ್ಲಲು ರಣತಂತ್ರ
ಹಿಂಸಾಚಾರದ ಘಟನೆಗಳು ನಡೆದ ನಂತರ ಗುರುಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಗರದಲ್ಲಿ ಹಿಂಸಾಚಾರದ ಕುರಿತು ಗುರುಗ್ರಾಮ್ ಪೊಲೀಸರು ಪರಿಶೀಲನೆಗಳ ಮೂಲಕ ಎಚ್ಚರಿಕೆ ವಹಿಸುತ್ತಿದ್ದಾರೆ.
ವದಂತಿಗಳನ್ನು ನಂಬಬೇಡಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿನ ವರದಿಗಳ ಮೇಲೆ ವಿಶ್ವಾಸವಿಡಬೇಡಿ ಎಂದು ಪೊಲೀಸರು ನಾಗರಿಕರಿಗೆ ಮನವಿ ಮಾಡಿದ್ದಾರೆ.
ಶಾಲಾ ಕಾಲೇಜುಗಳು, ಕೆಲಸದ ಕೇಂದ್ರಗಳನ್ನು ಮುಚ್ಚಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸಂದೇಶಗಳು ಸುಳ್ಳು. ಎಲ್ಲ ವಾಹನ ಸಂಚಾರ, ಶಾಲಾ ಕಾಲೇಜುಗಳು ಎಂದಿನಂತೆ ನಡೆಯುತ್ತದೆ, ಯಾವುದೇ ನಿರ್ಬಂಧಗಳಿಲ್ಲ ಎಂದು ಗುರುಗ್ರಾಮದ ಸಹಾಯಕ ಪೊಲೀಸ್ ಆಯುಕ್ತ ವರುಣ್ ಕುಮಾರ್ ದಹಿಯಾ ಹೇಳಿದ್ದಾರೆ.