ಕೇಜ್ರಿವಾಲರ ಸ್ವಪ್ರತಿಷ್ಠೆ, ಅಹಂಕಾರ, ಏಕವ್ಯಕ್ತಿ ಪಕ್ಷವನ್ನಾಗಿ ಬೆಳೆಸುವ ಮಹಾತ್ವಾಕಾಂಕ್ಷೆ, ತಾನೂ ಸೋತು ಪಕ್ಷವನ್ನೂ ಸೋಲುವಂತೆ ಮಾಡಿತು. ಜೊತೆಗೆ ಪರ್ಯಾಯ ರಾಜಕಾರಣದ ಚಿಗುರನ್ನೂ ಚಿವುಟಿ ಹಾಕಿತು. ಕೆಟ್ಟ, ದುಷ್ಟ ಬಿಜೆಪಿಗೆ ದಾರಿಯನ್ನೂ ಸುಗಮಗೊಳಿಸಿತು.
‘ದೇಶವನ್ನು ಗೆದ್ದಿರಬಹುದು. ದಿಲ್ಲಿ ಗೆಲ್ಲುವುದು ಮೋದಿಗೆ ಈ ಜನ್ಮದಲ್ಲಿ ಸಾಧ್ಯವಿಲ್ಲ. ಆಮ್ ಆದ್ಮಿ ಪಕ್ಷದ ನಾಯಕರನ್ನು ಜೈಲಿಗೆ ಕಳುಹಿಸಿರಬಹುದು. ಅವರನ್ನು ಖಳನಾಯಕರನ್ನಾಗಿ ಚಿತ್ರಿಸಿರಬಹುದು. ಆದರೆ, ಆಮ್ ಆದ್ಮಿ ಪಕ್ಷ ಜನರ ಮನಸ್ಸಿನಲ್ಲಿದೆ, ದಿಲ್ಲಿ ಈ ಜನ್ಮದಲ್ಲಿ ನಿಮ್ಮದಾಗುವುದಿಲ್ಲ’ ಎಂದು 2023ರಲ್ಲಿ ಅರವಿಂದ ಕೇಜ್ರಿವಾಲ್ ಹೂಂಕರಿಸಿದ್ದರು. ಪ್ರಧಾನಿ ಮೋದಿಯವರಿಗೆ ಸಾರ್ವಜನಿಕವಾಗಿ ಸವಾಲು ಹಾಕಿದ್ದರು.
ಈ ರೀತಿಯ ಮಾತುಗಳು ರಾಜಕೀಯ ವಲಯದಲ್ಲಿ, ನಾಯಕರ ನಡುವೆ ಸರ್ವೇಸಾಮಾನ್ಯ. ಆದರೆ ಇಂತಹ ಮಾತಿಗೆ ಬೆಲೆ ಬರುವುದು ಚುನಾವಣಾ ಫಲಿತಾಂಶ ಹೊರಬಿದ್ದಾಗ. ಚುನಾವಣೆಗಳನ್ನು ಗೆಲ್ಲುತ್ತಿದ್ದಾಗ, ಪಕ್ಷ – ನಾಯಕ ಬೆಳೆಯುತ್ತಿದ್ದಾಗ, ಇಂತಹ ಮಾತುಗಳು ಗೌಣವಾಗುತ್ತವೆ. ಬದಲಿಗೆ ಪಕ್ಷ – ನಾಯಕ ಸೋಲಿನ ಜಾಡಿಗೆ ಬಿದ್ದಾಗ, ಆ ಮಾತು ದುರಹಂಕಾರದಂತೆ ಕಾಣುತ್ತದೆ. ನಾಯಕನನ್ನು ನೆಲಮಟ್ಟ ಮಲಗಿಸುತ್ತದೆ.
ಈಗ ಆಗಿರುವುದು ಇದೇ. ಇಂದು ಹೊರಬಿದ್ದ ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್‌ರನ್ನು ಮಕಾಡೆ ಮಲಗಿಸಿದೆ. ಪಕ್ಷಕ್ಕೆ ಅರಗಿಸಿಕೊಳ್ಳಲಾಗದ ಅನಾಹುತವನ್ನು ತಂದೊಡ್ಡಿದೆ. ಆ ಮೂಲಕ ಭಿನ್ನ ಬಗೆಯ ರಾಜಕಾರಣ ಬಯಸುವವರಿಗೆ, ಪರ್ಯಾಯ ರಾಜಕಾರಣದತ್ತ ಚಿಂತನೆ ಮಾಡುವವರಿಗೆ ಭಾರೀ ನಿರಾಶೆಯನ್ನುಂಟುಮಾಡಿದೆ. ಬಲಿಷ್ಠ ಪಕ್ಷ ರಾಜಕಾರಣವನ್ನು ಬಲಗೊಳಿಸಿ, ಪ್ರತಿರೋಧದ ದನಿಯನ್ನು ದಮನಿಸಿದೆ.
ಐಆರ್‌ಎಸ್ ಆಫೀಸರ್ ಆಗಿದ್ದ ಅರವಿಂದ ಕೇಜ್ರಿವಾಲ್, ದೇಶದ ರಾಜಕಾರಣದಲ್ಲಿ ಭದ್ರವಾಗಿ ಬೇರು ಬಿಟ್ಟಿದ್ದ ಭ್ರಷ್ಟಾಚಾರ ಮತ್ತು ವಂಶ ಪಾರಂಪರ್ಯ ಆಡಳಿತದಿಂದ ಬೇಸತ್ತಿದ್ದರು. ಪ್ರಜಾಪ್ರಭುತ್ವದ ರೀತಿ-ನೀತಿಗೆ ಹತ್ತಿರವಾದ ರಾಜಕಾರಣವನ್ನು, ಆಡಳಿತವನ್ನು ಕೊಡಬೇಕೆಂಬ ನಿಟ್ಟಿನಲ್ಲಿ ಒಂದಷ್ಟು ಸಮಾನ ಮನಸ್ಕರೊಂದಿಗೆ ಸೇರಿ 2012ರಲ್ಲಿ ಆಮ್ ಆದ್ಮಿ ಪಕ್ಷ ಹುಟ್ಟು ಹಾಕಿದ್ದರು.
ಆ ಸಂದರ್ಭದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. 2ಜಿ, ಬೋಫೋರ್ಸ್, ಕಲ್ಲಿದ್ದಲು ಹಗರಣಗಳಿಂದ ಸರ್ಕಾರ ಹೆಸರು ಕೆಡಿಸಿಕೊಂಡಿತ್ತು. ಆಡಳಿತ ಕುಸಿತ ಕಂಡಿತ್ತು. ಅತಿಯಾದ ಭ್ರಷ್ಟಾಚಾರ ಜನರಲ್ಲಿ ಹೇಸಿಗೆ ಹುಟ್ಟಿಸಿತ್ತು. ಪರ್ಯಾಯ ರಾಜಕಾರಣಕ್ಕೆ ನೆಲ ಹದವಾಗಿತ್ತು. ಹಿರಿಯರಾದ ಅಣ್ಣಾ ಹಜಾರೆಯವರ ನೇತೃತ್ವದಲ್ಲಿ ಕೇಜ್ರಿವಾಲ್, ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್, ಕಿರಣ್ ಬೇಡಿ, ಅಡ್ಮಿರಲ್ ರಾಮದಾಸ್, ಮೇಧಾ ಪಾಟ್ಕರ್ ಥರದ ಸಮಾಜದ ವಿವಿಧ ಸ್ತರಗಳಿಂದ ಬಂದ ಚಿಂತಕರು, ಸಂಘಟಕರು, ಹೋರಾಟಗಾರರು ಭ್ರಷ್ಟಾಚಾರದ ವಿರುದ್ಧ ಗಟ್ಟಿ ದನಿಯಲ್ಲಿ ಗುಡುಗಿ, ಜನರ ಹೃದಯ ಗೆಲ್ಲತೊಡಗಿದರು. ಜನನಾಯಕರಾಗಿ ರೂಪುಗೊಂಡರು. ದೇಶದ ದಿಕ್ಕನ್ನು ಬದಲಿಸುವ ಭರವಸೆ ಮೂಡಿಸತೊಡಗಿದರು.
ಇದನ್ನು ಓದಿದ್ದೀರಾ?: ಮದ್ಯ ಹಗರಣದಿಂದಲೇ ಎಎಪಿ-ಕೇಜ್ರಿವಾಲ್ ಸೋಲು: ಅಣ್ಣಾ ಹಜಾರೆ
ಅದೇ ಸಂದರ್ಭದಲ್ಲಿ, ಆಮ್ ಆದ್ಮಿ ಪಕ್ಷ 2013ರಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ, ಅಭೂತಪೂರ್ವ ಗೆಲುವು ಸಾಧಿಸಿತು. ತಳವೂರಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಬೆಚ್ಚಿಬೀಳಿಸಿತು. ಎಎಪಿ ನಾಯಕ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ, ಸಾಮಾನ್ಯನೇ ಕುರ್ಚಿ ಮೇಲೆ ಕೂತಂತೆ ಭಾಸವಾಯಿತು. ಭಿನ್ನ ರಾಜಕಾರಣದ ಮೂಲಕ ಅಧಿಕಾರಕ್ಕೇರಿದ ಕೇಜ್ರಿವಾಲ್ ಗೇಮ್ ಚೇಂಜರ್ ಎನಿಸಿಕೊಂಡರು. 21ನೇ ಶತಮಾನದ ರಾಜಕೀಯ ನಕ್ಷತ್ರದಂತೆ ಗೋಚರಿಸತೊಡಗಿದರು.
ಇದಾಗಿ, ಕೇವಲ ಹದಿಮೂರು ವರ್ಷಗಳಾಗುವಷ್ಟರಲ್ಲಿ, ಅರವಿಂದ್ ಕೇಜ್ರಿವಾಲ್ ಮತ್ತವರ ತಂಡ ಕಟ್ಟಿದ ಪರ್ಯಾಯ ರಾಜಕಾರಣದ ಕೋಟೆ ಕುಸಿದು ಬಿದ್ದಿದೆ. 2013ರಿಂದ 2025ರವರೆಗೆ ದಿಲ್ಲಿಯ ಮತದಾರರ ಮನ ಗೆದ್ದು ಆಡಳಿತ ನಡೆಸಿದ ಆಮ್ ಆದ್ಮಿ ಪಕ್ಷ, ಇಂದು ಜನರ ನಂಬಿಕೆ ಕಳೆದುಕೊಂಡು ಸೋಲಿಗೆ ಶರಣಾಗಿದೆ. ಬಲಿಷ್ಠ ಬಿಜೆಪಿಗೆ ತಲೆಬಾಗಿ, ಅಧಿಕಾರವನ್ನು ಹಸ್ತಾಂತರಿಸಿದೆ.
ಜನಸಾಮಾನ್ಯರನ್ನು ಪ್ರತಿನಿಧಿಸುತ್ತಿದ್ದ ಆಮ್ ಆದ್ಮಿ ಪಕ್ಷ, ಇವತ್ತು ಹುಟ್ಟಿ, ನಾಳೆ ಬೆಳೆದು, ನಾಡಿದ್ದು ಕಣ್ಮರೆಯಾಗುವ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸ್ಟಾರ್ಟ್ ಅಪ್ ಕಂಪನಿಯಂತೆ ಕಾಣತೊಡಗಿದೆ. ರಾಜಕೀಯ ಪಂಡಿತರ ವಿಶ್ಲೇಷಣೆಗೆ ಸರಕಾಗಿದೆ.
ಆಮ್ ಆದ್ಮಿ ಪಕ್ಷದ ಹೀನಾಯ ಸೋಲಿಗೆ ಕಾರಣವೇನು? ಅಧಿಕಾರಕ್ಕೇರುತ್ತಿದ್ದಂತೆ ಯಾರನ್ನೂ ನಂಬದಿದ್ದುದೇ, ಸಮಾನ ಮನಸ್ಕರು ಪಕ್ಷ ತೊರೆಯುವಂತೆ ಷಡ್ಯಂತ್ರ ರೂಪಿಸಿದ್ದೇ, ನಾನು ಎಂಬ ಅಹಂ ತಲೆಗೇರಿದ್ದೇ, ದೆಹಲಿ ಬಿಟ್ಟು ಬೇರೆ ರಾಜ್ಯಗಳತ್ತ ಪಕ್ಷ ವಿಸ್ತರಿಸಲು ಗಮನ ಹರಿಸಿದ್ದೇ, ಚುನಾವಣೆಗಳನ್ನು ಗೆಲ್ಲಲು ಭ್ರಷ್ಟಾಚಾರಕ್ಕೆ ಮುಂದಾಗಿದ್ದೇ, ಬಿಜೆಪಿಯನ್ನು ಮತ್ತು ಮೋದಿಯನ್ನು ಎದುರು ಹಾಕಿಕೊಂಡಿದ್ದೇ, ಆಡಳಿತ ವಿರೋಧಿ ಅಲೆಯೇ? ಎಲ್ಲವೂ ನಿಜ.
ಆಮ್ ಆದ್ಮಿ ಪಕ್ಷ ದೇಶದ ರಾಜಕಾರಣದಲ್ಲಿ ನೆಲೆಯೂರಿದ್ದ ಕಾಂಗ್ರೆಸ್ ಮತ್ತು ಬಿಜೆಪಿ ಎಂಬ ಬಲಿಷ್ಠ ಪಕ್ಷಗಳನ್ನು ಮಣಿಸಿ, ದೆಹಲಿಯ ಅಧಿಕಾರ ಹಿಡಿದಾಗ, ಸಾಮಾನ್ಯಜನ ನಮ್ಮದೇ ಸರ್ಕಾರವೆಂದು ಭಾವಿಸಿದರು. ಜೊತೆಗೆ ಶಿಕ್ಷಣ, ವಿದ್ಯುತ್, ನೀರು ನೀಡಿ, ಗ್ಯಾರಂಟಿಗಳ ಮೂಲಕ ಜನಪರ ಆಡಳಿತ ಕೊಟ್ಟು ಜನರಿಗೆ ಹತ್ತಿರವಾದರು. ಇದು ಸಹಜವಾಗಿಯೇ ಪಕ್ಷ ಬೆಳವಣಿಗೆಗೆ ಕಾರಣವಾಯಿತು. ಪಕ್ಷ ಬೆಳೆದಂತೆಲ್ಲ ಕೇಜ್ರಿವಾಲ್ ತಲೆ ಕುತ್ತಿಗೆ ಮೇಲೆ ನಿಲ್ಲದಾಯಿತು. ನಾನು ಎಂಬ ಅಹಂ ತಲೆಗೆ ಹತ್ತಿತು. ಪಕ್ಷ ಕಟ್ಟುವಾಗ ಜೊತೆಯಾಗಿದ್ದವರು, ಒಬ್ಬೊಬ್ಬರಾಗಿ ಪಕ್ಷ ತೊರೆಯತೊಡಗಿದರು.
ಇಷ್ಟಾದರೂ, ಎರಡನೇ ಅವಧಿಗೆ ದೆಹಲಿ ಗೆದ್ದು ಮುಖ್ಯಮಂತ್ರಿಯಾದಾಗ, ಕೇಜ್ರಿವಾಲರ ಕೊಳಕು ಮತ್ತು ಕುತಂತ್ರ ಮುಚ್ಚಿಹೋಯಿತು. ಪಕ್ಷ ಬೆಳೆಸುವ ದುರಾಸೆ ಮೊಳಕೆಯೊಡೆದು ಬೇರೆ ರಾಜ್ಯಗಳತ್ತ ಆಮ್ ಆದ್ಮಿ ಪಕ್ಷ ಹೆಜ್ಜೆ ಹಾಕತೊಡಗಿತು. ಚುನಾವಣೆ ಗೆಲ್ಲಲು ಹಣ ಮುಖ್ಯವೆಂದು ಭ್ರಷ್ಟಾಚಾರಕ್ಕಿಳಿಯಿತು. ಪಕ್ಷ ಪಕ್ಕದ ಪಂಜಾಬ್ ಗೆದ್ದಾಗ ಕೇಜ್ರಿವಾಲರಿಗೆ, ತಮ್ಮ ಹಾದಿ ಸರಿ ಎನಿಸಿತು. ಕೆಲವರು ಕೇಜ್ರಿವಾಲರನ್ನು ಮುಂದಿನ ಪ್ರಧಾನಿ ಅಭ್ಯರ್ಥಿ ಎಂದಾಗ, ತಲೆ ತಿರುಗಿತು. ದೊಡ್ಡ ದೊಡ್ಡ ನಾಯಕರು ತೃಣಸಮಾನರಂತೆ ಕಾಣತೊಡಗಿದರು. ಗುಜರಾತ್, ಹರ್ಯಾಣ ರಾಜ್ಯಗಳತ್ತಲೂ ಗಮನ ಹರಿಸಿದರು.
ಇಲ್ಲಿಯವರೆಗೂ ಸುಮ್ಮನಿದ್ದ ಬಿಜೆಪಿ, ನಂತರ ಎಚ್ಚೆತ್ತುಕೊಂಡಿತು. ಆಮ್ ಆದ್ಮಿ ಮತ್ತು ಕೇಜ್ರಿವಾಲ್‌ರನ್ನು ಬಗ್ಗುಬಡಿಯದೆ ಭವಿಷ್ಯವಿಲ್ಲ ಎನ್ನುವುದನ್ನು ಅರಿಯಿತು. ಅದಕ್ಕೆ ಬೇಕಾದ ಅಸ್ತ್ರಗಳಿಗೆ ಕೈಹಾಕಿತು. ಅದರ ಫಲವೇ… ಲೆಫ್ಟಿನೆಂಟ್ ಗೌವರ್ನರ್ ಬಳಸಿ ಆಡಳಿತದಲ್ಲಿ ಮೂಗು ತೂರಿಸತೊಡಗಿತು. ಸಿಎಎ-ಎನ್ಆರ್‍ಸಿ ನೆಪದಲ್ಲಿ ಕೋಮು ಗಲಭೆ ಹುಟ್ಟುಹಾಕಿತು. ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ರನ್ನು ಬ್ಲ್ಯಾಕ್‌ಮೇಲ್ ಮಾಡಿ, ಕೇಜ್ರಿವಾಲ್ ವಿರುದ್ಧ ಹರಿಹಾಯಲು ಬಳಸಿಕೊಂಡಿತು. ಅಬಕಾರಿ ಹಗರಣವನ್ನು ಹೊರತಂದು, ಭ್ರಷ್ಟಾಚಾರದ ಆರೋಪ ಹೊರಿಸಿತು. ಮಡಿಲ ಮಾಧ್ಯಮಗಳನ್ನು ಬಳಸಿಕೊಂಡು ಆಪ್ ಕೂಡ ಭ್ರಷ್ಟ ಪಕ್ಷ ಎಂದು ಸಾಬೀತು ಮಾಡಲು ಪ್ರಾಪಗ್ಯಾಂಡದಲ್ಲಿ ನಿರತವಾಯಿತು. ಐಟಿ, ಇಡಿ, ಸಿಬಿಐ ದುರ್ಬಳಕೆ ಮಾಡಿಕೊಂಡು ಆಮ್ ಆದ್ಮಿ ಪಕ್ಷದ ನಾಲ್ಕೈದು ನಾಯಕರನ್ನು ಜೈಲಿಗೆ ಅಟ್ಟಿತು. ಸಾರ್ವಜನಿಕ ವ್ಯಕ್ತಿತ್ವಕ್ಕೆ, ವರ್ಚಸ್ಸಿಗೆ ಮಸಿ ಬಳಿಯಿತು. ದಾಳಿ ಮತ್ತು ಆಮಿಷವೊಡ್ಡಿ ಆಮ್ ಆದ್ಮಿ ಪಕ್ಷದ ಶಾಸಕರ ಸಂಖ್ಯೆಯನ್ನು ಕಡಿಮೆ ಮಾಡಲು, ಸ್ಥೈರ್ಯವನ್ನು ಕುಗ್ಗಿಸಲು ಹವಣಿಸಿತು.
ಬಿಜೆಪಿಯ ಕುತಂತ್ರಕ್ಕೆ ಸೆಟೆದು ನಿಲ್ಲಬೇಕಾದ ಕೇಜ್ರಿವಾಲ್, ಸ್ವಯಂಕೃತ ಅಪರಾಧಗಳ ಬಲೆಯಲ್ಲಿ ಬಂಧಿಯಾದರು. ಸಮರ್ಥಿಸಿಕೊಳ್ಳಲಾಗದೆ ಸುಸ್ತಾದರು. ಆಗ ಸಹಾಯಕ್ಕೆ ಬಂದದ್ದು ‘ಇಂಡಿಯಾ’ ಒಕ್ಕೂಟ. ಕಾಂಗ್ರೆಸ್ಸಿನ ರಾಹುಲ್ ಗಾಂಧಿ, ಎಸ್‌ಪಿಯ ಅಖಿಲೇಶ್ ಯಾದವ್, ತೃಣಮೂಲ್‌ನ ಮಮತಾ ಬ್ಯಾನರ್ಜಿ, ಎನ್‌ಸಿಪಿಯ ಶರದ್ ಪವಾರ್, ನ್ಯಾಷನಲ್ ಕಾನ್ಫರೆನ್ಸ್‌ನ ಒಮರ್ ಅಬ್ದುಲ್ಲಾ, ಡಿಎಂಕೆಯ ಸ್ಟಾಲಿನ್ ಬೆಂಬಲಕ್ಕೆ ನಿಂತರು.
ಇದನ್ನು ಓದಿದ್ದೀರಾ?: Delhi Result | ಕಳಚಿಬಿದ್ದ ಕೇಜ್ರಿವಾಲ್ ಮುಖವಾಡ: ರಾಜ್ಯ ಬಿಜೆಪಿ ನಾಯಕರಿಂದ ವಾಗ್ದಾಳಿ
ಈ ಪಕ್ಷಗಳ ಬೆಂಬಲದಿಂದ, ಒಗ್ಗಟ್ಟಿನಿಂದ ಲೋಕಸಭಾ ಚುನಾವಣೆಯನ್ನು ಎದುರಿಸಿದ ‘ಇಂಡಿಯಾ’ ಒಕ್ಕೂಟ, ಬಲಿಷ್ಠ ಮೋದಿಯ ವಿರುದ್ಧ ಒಂದು ಮಟ್ಟಿಗಿನ ಜಯ ಸಾಧಿಸಿತ್ತು. ನಾನೂರರ ನಾಗಾಲೋಟದಲ್ಲಿದ್ದ ಮೋದಿಯನ್ನು 242ಕ್ಕೆ ಕಟ್ಟಿಹಾಕಿತು. ಮೋದಿಯ ಗರ್ವ ಮುರಿಯಿತು. ಆದರೆ, ಆನಂತರದ ಜಮ್ಮು-ಕಾಶ್ಮೀರ, ಹರ್ಯಾಣ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳಲ್ಲಿ ಒಗ್ಗಟ್ಟು ಪ್ರದರ್ಶಿಸಿ, ಹೊಂದಾಣಿಕೆ ಮಾಡಿಕೊಳ್ಳದೆ, ನಾಯಕರ ಸ್ವಾರ್ಥಕ್ಕೆ ಬಲಿಯಾಗಿ ‘ಇಂಡಿಯಾ’ ಒಕ್ಕೂಟ ಒಡೆದು ಛಿದ್ರವಾಯಿತು.
ಇನ್ನು ಈಗ, ದೆಹಲಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ, ಕೇಜ್ರಿವಾಲ್ ಅನಗತ್ಯವಾಗಿ ಯಮುನಾ ನದಿಯ ಕೊಳಕನ್ನು ಎಳೆದು ತಂದರು. ಕುಂಭಮೇಳದ ಸಂದರ್ಭದಲ್ಲಿ ಇದು ಹಿಂದೂಗಳ ಭಾವನೆಗೆ ಧಕ್ಕೆ ತಂದು, ಆಪ್‌ಗೆ ತೊಡಕಾಗಿ ಪರಿಣಮಿಸಿತು. ಸರಳ-ಸಾಮಾನ್ಯ ಎನ್ನುತ್ತಲೇ ವೈಭವೋಪೇತ ಶೀಶ್ ಮಹಲ್‌ನಲ್ಲಿ ವಾಸ್ತವ್ಯ ಹೂಡಿ, ಹೆಸರು ಕೆಡಿಸಿಕೊಂಡದ್ದು ದುಬಾರಿಯಾಯಿತು. ದೆಹಲಿ ಕೋಮುಗಲಭೆಗಳ ಬಗ್ಗೆ ಖಡಕ್ ಕ್ರಮ ಕೈಗೊಳ್ಳದೆ, ಒಳಗೊಳಗೇ ಹಿಂದುಗಳ ಪರವಿದ್ದು ಮುಸ್ಲಿಮರನ್ನು ಕಡೆಗಣಿಸಿದ್ದು, ಮುಸ್ಲಿಮರು ಕಾಂಗ್ರೆಸ್‌ನತ್ತ ನೋಡುವಂತೆ ಮಾಡಿತು.

ಆಮ್ ಆದ್ಮಿ ಪಕ್ಷದ ಈ ಲೋಪಗಳನ್ನು ಬಿಜೆಪಿ ಸದುಪಯೋಗಪಡಿಸಿಕೊಳ್ಳಲು, ಕೇಂದ್ರ ಬಜೆಟ್‌ನಲ್ಲಿ ಮಧ್ಯಮವರ್ಗಕ್ಕೆ ತೆರಿಗೆ ವಿನಾಯಿತಿ ನೀಡಿತು. ಒಲಿಸಿಕೊಂಡಿತು. ಗೃಹ ಸಚಿವ ಅಮಿತ್ ಶಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೊಳೆಗೇರಿಗಳಿಗೆ ಭೇಟಿ ನೀಡಿ ಅಕ್ರಮ ವಸತಿಗಳನ್ನು ಸಕ್ರಮಗೊಳಿಸುವುದಾಗಿ ಬಡವರಿಗೆ ಭರವಸೆ ನೀಡಿದರು. ಮನ ಗೆದ್ದರು. ಅಲ್ಲಿಗೆ ದೊಡ್ಡ ವರ್ಗವಾದ ಬಡವರು, ಮಧ್ಯಮವರ್ಗದವರು, ಶ್ರೀಮಂತರು ಮತ್ತು ಧರ್ಮದ ಅಮಲೇರಿಸಿಕೊಂಡವರು ಬಿಜೆಪಿ ಬೆಂಬಲಿಸಿದರು. ಜೊತೆಗೆ ದಲಿತರು ಮತ್ತು ಮುಸ್ಲಿಮರು ಕಾಂಗ್ರೆಸ್ ಪಕ್ಷದತ್ತ ಹೊರಳಿದರು. ಈ ಎಲ್ಲ ಕಾರಣಗಳು ಆಪ್ ಸೋಲಿಗೆ ಕಾರಣವಾದವು.
ಜೊತೆಗೆ ಕೇಜ್ರಿವಾಲರ ಸ್ವಪ್ರತಿಷ್ಠೆ, ಅಹಂಕಾರ, ಏಕವ್ಯಕ್ತಿ ಪಕ್ಷವನ್ನಾಗಿ ಬೆಳೆಸುವ ಮಹಾತ್ವಾಕಾಂಕ್ಷೆ, ತಾನೂ ಸೋತು ಪಕ್ಷವನ್ನೂ ಸೋಲುವಂತೆ ಮಾಡಿತು. ಜೊತೆಗೆ ಪರ್ಯಾಯ ರಾಜಕಾರಣದ ಚಿಗುರನ್ನೂ ಚಿವುಟಿ ಹಾಕಿತು. ಕೆಟ್ಟ, ದುಷ್ಟ ಬಿಜೆಪಿಗೆ ದಾರಿಯನ್ನೂ ಸುಗಮಗೊಳಿಸಿತು. ಇದಲ್ಲವೇ ದುರಂತ?

ಲೇಖಕ, ಪತ್ರಕರ್ತ