ದೆಹಲಿಯಲ್ಲಿ ಸೇವೆಗಳ ನಿಯಂತ್ರಣಕ್ಕೆ ಸಂಬಂಧಿಸಿದ ಕೇಂದ್ರದ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಮಸೂದೆ ಅಂಗೀಕರಿಸಿದ ನಂತರ ವಿರೋಧ ಪಕ್ಷದ ಸಂಸದರು ಸಭಾತ್ಯಾಗ ಮಾಡಿದರು.
ಸರ್ಕಾರ ಹಾಗೂ ವಿಪಕ್ಷ ಸದಸ್ಯರ ನಡುವೆ ಸುಮಾರು ನಾಲ್ಕು ಗಂಟೆಗಳ ಸುದೀರ್ಘ ಚರ್ಚೆಯ ನಂತರ ದೆಹಲಿ ಸೇವಾ ಮಸೂದೆಯನ್ನು ಅಂಗೀಕರಿಸಲಾಯಿತು. ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಶಾಹಿಗಳನ್ನು ಯಾರು ನಿಯಂತ್ರಿಸುತ್ತಾರೆ ಎಂಬ ಸುಪ್ರೀಂ ಕೋರ್ಟ್ ಆದೇಶವನ್ನು ತಿರಸ್ಕರಿಸುವ ಸರ್ಕಾರದ ಮಸೂದೆಯನ್ನು ಗೃಹ ಸಚಿವ ಅಮಿತ್ ಶಾ ಸಮರ್ಥಿಸಿಕೊಂಡರು.
“ಈ ವಿಧೇಯಕ ದೇಶಕ್ಕೆ ಒಳ್ಳೆಯದು ಎಂದು ಹೇಳಿದ ಅಮಿತ್ ಶಾ, ಯಾವುದೇ ಮಸೂದೆಯನ್ನು ಬೆಂಬಲಿಸುವ ಹಾಗೂ ವಿರೋಧಿಸುವ ಹಿತದೃಷ್ಟಿ ಜನಪರವಾಗಿ ಇರಬೇಕು. ರಾಜಕೀಯ ಕಾರಣಗಳಿಗಾಗಿ ಯಾವುದೇ ಮಸೂದೆಗಳನ್ನು ಬೆಂಬಲಿಸುವ ವಿರೋಧಿಸುವ ರಾಜಕಾರಣ ಸರಿಯಲ್ಲ. ಹೊಸ ಹೊಸ ಮೈತ್ರಿ ಮಾಡಿಕೊಳ್ಳಲು ಹಲವು ಮಾರ್ಗಗಳಿವೆ. ಮಸೂದೆಯನ್ನು ಮುಂದಿಟ್ಟುಕೊಂಡು ರಾಜಕೀಯದ ಬೇಳೆ ಬೇಯಿಸಿಕೊಳ್ಳಬಾರದು. ಮಸೂದೆಗಳು ಇರುವುದು ದೇಶದ ಒಳಿತಿಗಾಗಿ. ಇದನ್ನು ದೇಶ ಅಥವಾ ದೆಹಲಿಯ ಒಳಿತಿಗಾಗಿ ವಿರೋಧಿಸಬೇಕು ಅಥವಾ ಬೆಂಬಲಿಸಬೇಕು. ಒಂದು ಮಸೂದೆಯಿಂದ ನಮಗೇನು ಲಾಭವಾಗಲಿದೆ ಎನ್ನುವುದನ್ನು ಯೋಚಿಸಿಕೊಂಡು ಮಸೂದೆಯ ಬೆಂಬಲ-ವಿರೋಧಕ್ಕೆ ನಿಲ್ಲಬಾರದು”ಎಂದು ಮಸೂದೆ ಉಲ್ಲೇಖಿಸಿ ಅಮಿತ್ ಶಾ ಹೇಳಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ ಜೀನ್ಸ್ ಘಟಕಗಳಿಗೆ ಸೌಲಭ್ಯ ಕಲ್ಪಿಸಿ: ರಾಜ್ಯ ಸರ್ಕಾರಕ್ಕೆ ರಾಹುಲ್ ಪತ್ರ
ಮಸೂದೆಯನ್ನು ಅಂಗೀಕರಿಸುವ ಮೊದಲು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಈ ಮಸೂದೆಯನ್ನು ದೆಹಲಿಯ ಜನರನ್ನು “ಗುಲಾಮರನ್ನಾಗಿ” ಮಾಡಲು ಪ್ರಯತ್ನಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
“ದೆಹಲಿ ಜನರ ಹಕ್ಕುಗಳನ್ನು ಕಸಿದುಕೊಳ್ಳುವ ಮಸೂದೆಯ ಕುರಿತು ಇಂದು ಲೋಕಸಭೆಯಲ್ಲಿ ಅಮಿತ್ ಶಾ ಅವರು ಮಾತನಾಡುವುದನ್ನು ನಾನು ಕೇಳಿದ್ದೇನೆ. ಮಸೂದೆಯನ್ನು ಬೆಂಬಲಿಸಲು ಅವರಲ್ಲಿ ಒಂದೇ ಒಂದು ಮಾನ್ಯವಾದ ವಾದವಿಲ್ಲ ಅವರು ತಪ್ಪು ಮಾಡುತ್ತಿದ್ದಾರೆ ಎಂದು ಅವರಿಗೂ ತಿಳಿದಿದೆ. ಮಸೂದೆಯು ದೆಹಲಿಯ ಜನರನ್ನು ಗುಲಾಮರನ್ನಾಗಿ ಮಾಡುವ ಮಸೂದೆಯಾಗಿದೆ. ಇದು ಅವರನ್ನು ಅಸಹಾಯಕ ಮತ್ತು ಅಸಹಾಯಕರನ್ನಾಗಿ ಮಾಡುವ ಮಸೂದೆಯಾಗಿದೆ. ಇಂಡಿಯಾ ಒಕ್ಕೂಟ ಇದನ್ನು ಎಂದಿಗೂ ಅಂಗೀಕರಿಸಲು ಬಿಡುವುದಿಲ್ಲ, ”ಎಂದು ಕೇಜ್ರಿವಾಲ್ ಮಸೂದೆಯನ್ನು ಅಂಗೀಕರಿಸುವ ಮೊದಲು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ನೂತನ ಮಸೂದೆಯ (ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರದ (ತಿದ್ದುಪಡಿ) ಮಸೂದೆ, 2023) ಪ್ರಕಾರ, ದೆಹಲಿಯ ಅಧಿಕಾರಿಗಳು ಮತ್ತು ನೌಕರರ ಸೇವೆಯ ಕಾರ್ಯಗಳು, ನಿಯಮಗಳು ಮತ್ತು ಇತರ ಷರತ್ತುಗಳನ್ನು ಒಳಗೊಂಡಂತೆ ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರದ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ಮಾಡಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.
ದೆಹಲಿ ಸರ್ಕಾರದ ಪರವಾಗಿ ಸುಪ್ರೀಂ ಕೋರ್ಟ್ ಮೇ 11 ರಂದು ತೀರ್ಪು ನೀಡಿತು. ಸಾರ್ವಜನಿಕ ಸುವ್ಯವಸ್ಥೆ, ಭೂಮಿ ಮತ್ತು ಪೊಲೀಸ್ ವಿಷಯಗಳನ್ನು ಹೊರತುಪಡಿಸಿ ರಾಜಧಾನಿಯಲ್ಲಿ ಹೆಚ್ಚಿನ ಸೇವೆಗಳ ಮೇಲೆ ದೆಹಲಿ ಸರ್ಕಾರಕ್ಕೆ ನಿಯಂತ್ರಣವನ್ನು ನೀಡಿತ್ತು. ಆದರೆ ಮೇ 19 ರಂದು, ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ಕೇಂದ್ರವು ಸುಗ್ರೀವಾಜ್ಞೆಯನ್ನು ಹೊರಡಿಸಿ ನ್ಯಾಯಾಲಯ ನೀಡಿದ ಅಧಿಕಾರವನ್ನು ಕಸಿದುಕೊಂಡಿತು.