ಮುಖ್ಯಮಂತ್ರಿ ಸಿದ್ದರಾಮಯ್ಯನವರ ‘CHIEF MINISTER’ ನಾಮಫಲಕವಿರುವ ಫೋಟೋವನ್ನು ಎಡಿಟ್ ಮಾಡಿ, ‘COLLECTION MASTER’ ಎಂದು ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಜಿಲ್ಲಾ ಪಂಚಾಯತ್ನ ಮಾಜಿ ಸದಸ್ಯ, ಬೆಳ್ತಂಗಡಿಯ ಕಾಂಗ್ರೆಸ್ ಮುಖಂಡ ಶೇಖರ್ ಕುಕ್ಕೇಡಿ ನೀಡಿದ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 1869 U/S 504, 505(2) ಅಡಿಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.
ಸಿಎಂ ಕಚೇರಿ, ಗೃಹ ಕಚೇರಿ ಮತ್ತು ಸಿಎಂ ನಿವಾಸದ ಗೇಟ್ಗೆ ಕಲೆಕ್ಷನ್ ಮಾಸ್ಟರ್ ಎಂದು ಬೋರ್ಡ್ ಹಾಕಿರುವ ಫೋಟೋ ಎಡಿಟ್ ಮಾಡಿ ಶಾಸಕ ಹರೀಶ್ ಪೂಂಜಾ ಹೆಸರಿನಲ್ಲಿರುವ ಅಧಿಕೃತ ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡಲಾಗಿತ್ತು.
ಇದು ರಾಜ್ಯದ ಮುಖ್ಯಮಂತ್ರಿಯವರನ್ನು ಅವಮಾನ ಮಾಡುವ ಉದ್ದೇಶದಿಂದ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಪೂರ್ವಕವಾಗಿ ಉದ್ರೇಕಿಸಿ, ಕಾನೂನು ಸುವ್ಯವಸ್ಥೆಗೆ ಮತ್ತು ಸಮಾಜದ ಶಾಂತಿ ಕೆಡಿಸುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ. ಹಾಗಾಗಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶೇಖರ್ ಕುಕ್ಕೇಡಿ ದೂರಿನಲ್ಲಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 1869 U/S 504, 505(2) ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಶಾಸಕರ ವಿರುದ್ಧ ಇದು ಎರಡನೇ ಎಫ್ಐಆರ್
ಇತ್ತೀಚೆಗೆ ಚಾರ್ಮಾಡಿ ಅರಣ್ಯ ಪ್ರದೇಶದಲ್ಲಿ ಮನೆ ನಿರ್ಮಾಣ-ತೆರವು ಜಟಾಪಟಿಯ ವಿಚಾರವಾಗಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಸರ್ಕಾರಿ ಅಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿದ್ದಲ್ಲದೇ, ಸಾರ್ವಜನಿಕವಾಗಿ ಅವಮಾನ ಎಸಗಿದ ಆರೋಪದ ಮೇಲೆ ಹರೀಶ್ ಪೂಂಜಾ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.