- ‘ಇನ್ನಷ್ಟು ವಿಸ್ಮಯಗಳನ್ನು ಅರಿಯಲು, ಸಂಭ್ರಮಿಸಲು, ಇದು ದಾರಿಯಾಗಲಿ’ ಎಂದು ಅಭಿನಂದಿಸಿ ನಟ ಟ್ವೀಟ್
- ಸಿನಿಮಾವೊಂದರಲ್ಲಿ ಪ್ರಕಾಶ್ ರೈ ಅವರ ಕೆನ್ನೆಗೆ ಹೊಡೆಯುವ ವಿಡಿಯೋ ತುಣುಕು ಹಂಚಿ ಟ್ರೋಲ್
ಚಂದ್ರಯಾನ-3 ಕುರಿತು ಇತ್ತೀಚೆಗೆ ಟ್ವೀಟ್ ಮಾಡಿ ಸುದ್ದಿಗೊಳಗಾಗಿದ್ದ ನಟ ಪ್ರಕಾಶ್ ರಾಜ್, ಇಸ್ರೋಗೆ ಅಭಿನಂದನೆ ಸಲ್ಲಿಸಿದ್ದಾರೆ. ಆದರೂ ಕೂಡ ಹಲವು ನೆಟ್ಟಿಗರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
ಚಂದ್ರಯಾನ-3 ಯಶಸ್ವಿಯಾದ ಬೆನ್ನಲ್ಲೇ, ಪ್ರಕಾಶ್ ರಾಜ್ ಕೂಡಾ ಇಸ್ರೋಗೆ ಧನ್ಯವಾದ ಸಲ್ಲಿಸಿ ಟ್ವೀಟ್ ಮಾಡಿದ್ದರು.
ಟ್ವೀಟ್‌ನಲ್ಲಿ, ‘ಭಾರತದ ಮನುಕುಲದ ಹೆಮ್ಮೆಯ ಕ್ಷಣಗಳಿವು ಮತ್ತು ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ ಧನ್ಯವಾದಗಳು, ವಿಶಾಲ ವಿಶ್ವದ ಇನ್ನಷ್ಟು ವಿಸ್ಮಯಗಳನ್ನು ಅರಿಯಲು, ಸಂಭ್ರಮಿಸಲು, ಇದು ದಾರಿಯಾಗಲಿ’ ಎಂದಿದ್ದರು.
ಇತ್ತೀಚೆಗೆ ನಟ ಪ್ರಕಾಶ್ ರಾಜ್ ಮಾಡಿದ್ದ ಟ್ವೀಟ್ ಹಲವರಲ್ಲಿ ಅಸಮಾಧಾನ ಉಂಟು ಮಾಡಿತ್ತು. ಈ ಹಿನ್ನೆಲೆಯಲ್ಲಿ ಇದನ್ನೇ ಗುರಿಯನ್ನಾಗಿಸಿರುವ ಟ್ರೋಲಿಗರು, ತೆಲುಗು ಚಿತ್ರ ‘ರಂಗ ಮಾರ್ತಾಂಡ’ದಲ್ಲಿ ಹಾಸ್ಯ ನಟ ಬ್ರಹ್ಮಾನಂದಂ ಅವರು ಪ್ರಕಾಶ್ ರೈ ಅವರ ಕೆನ್ನೆಗೆ ಹೊಡೆಯುವ ವಿಡಿಯೋ ತುಣುಕನ್ನು ಟ್ವಿಟರ್ ನಲ್ಲಿ ಹಂಚಿಕೊಂಡು ರೈಗೆ ಕಿಚಾಯಿಸಿದ್ದಾರೆ.
ಇದೇ ರೀತಿಯಲ್ಲಿ ಹಲವು ಮಂದಿ ಪ್ರಕಾಶ್ ರಾಜ್ ಅವರನ್ನು ಕಾಲೆಳೆದಿದ್ದು, ಪ್ರಕಾಶ್ ಅವರ ಫೋಟೋ ಬಳಸಿಕೊಂಡು ‘ವಿಕ್ರಮ್ ನಿಂದ ಬಂದ ಮೊದಲ ಫೋಟೋ’ ಎಂದು ಚಂದ್ರನ ಅಂಗಳ ಗುಂಡಿಯಲ್ಲಿರುವಂತೆ ಎಡಿಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.
ಚಂದ್ರಯಾನ-3 ಕುರಿತು ಅವರು ಇತ್ತೀಚಿಗೆ ಮಾಡಿದ್ದ ಚಾಯ್ ವಾಲಾ ಟ್ವೀಟ್ ಗೆ ತೀವ್ರ ಟೀಕೆ ವ್ಯಕ್ತವಾಗಿತ್ತು. ವ್ಯಕ್ತಿಯೊಬ್ಬ ಚಹಾ ಮಗುಚುವ ವ್ಯಂಗ್ಯ ಚಿತ್ರ ಪೋಸ್ಟ್ ಮಾಡಿದ್ದ ಪ್ರಕಾಶ್ ರಾಜ್, ತಾಜಾ ಸುದ್ದಿ, ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದೃಶ್ಯ ಎಂದು ಕ್ಯಾಪ್ಶನ್ ಬರೆದಿದ್ದರು.
ನಂತರ ಸ್ಪಷ್ಟನೆ ನೀಡಿದ್ದ ಅವರು ‘ದ್ವೇಷಕ್ಕೆ ದ್ವೇಷ ಮಾತ್ರ ಕಾಣಿಸುವುದು. ನಾನು ನಮ್ಮ ಕೇರಳದ ಚಾಯ್ವಾಲಾರನ್ನು ಸಂಭ್ರಮಿಸುವ ಆರ್ಮ್ಸ್ಟ್ರಾಂಗ್ ಕಾಲದ ಜೋಕ್ ಹೇಳಿದ್ದೆ. ಟ್ರೋಲಿಗರಿಗೆ ಕಂಡ ಚಾಯ್ವಾಲಾ ಯಾರು? ಸ್ವಲ್ಪ ಪ್ರೌಢಿಮೆ ಬೆಳೆಸಿಕೊಳ್ಳಿ’ ಎಂದು ಟೀಕಿಸಿದವರಿಗೆ ಹೇಳಿದ್ದರು.