ವ್ಯಕ್ತಿ ವಿಶೇಷ | ಎಸ್.ಕೆ. ಕಾಂತ ಎಂಬ ಸರಳ ಸಜ್ಜನರಿಗೆ ದೇವರಾಜ ಅರಸು ಪ್ರಶಸ್ತಿ

Date:

Advertisements
ಎಸ್.ಕೆ. ಕಾಂತ ಅವರು ಕಾರ್ಮಿಕರಾಗಿ, ಕಾರ್ಮಿಕ ನಾಯಕರಾಗಿ, ಸಂಘಟಕರಾಗಿ, ಸಮಾಜ ಸೇವಕರಾಗಿ, ಶಾಸಕರಾಗಿ, ಸಚಿವರಾಗಿ ತಮ್ಮನ್ನು ಪೊರೆದ ಸಮಾಜಕ್ಕೆ ತೆತ್ತುಕೊಂಡವರು. ಜನ ಮುಖ್ಯ ಎಂದವರು. ಜನರಲ್ಲಿ ಜಾಗೃತಿ ಮೂಡಿಸಲು ಶ್ರಮಿಸಿದವರು. ಅಧಿಕಾರದ ಸ್ಥಾನಗಳು, ಅವಕಾಶಗಳು ಸಿಕ್ಕರೂ ಹಣ- ಆಸ್ತಿಗಳತ್ತ ತಿರುಗಿ ನೋಡದವರು. ಬದುಕನ್ನು ಜನಕಲ್ಯಾಣಕ್ಕಾಗಿ ಮುಡಿಪಿಟ್ಟ ಕಾಂತ ಅವರಿಗೆ ಈ ಬಾರಿ ದೇವರಾಜ ಅರಸು ಪ್ರಶಸ್ತಿ ಸಂದಿರುವುದು, ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಿದೆ...

86ರ ಹರೆಯದ ಎಸ್.ಕೆ. ಕಾಂತ, ಕಲ್ಯಾಣ ಕರ್ನಾಟಕ ಭಾಗದ ಅಸಲಿ ಹೋರಾಟಗಾರರು. ರಾಜ್ಯ ರಾಜಧಾನಿ ಬೆಂಗಳೂರಿನಿಂದ ಬಹಳ ದೂರದ ಕಲಬುರಗಿಯಲ್ಲಿದ್ದು, ಪ್ರಚಾರ-ಪ್ರಶಸ್ತಿಗಳಿಂದ ದೂರವೇ ಉಳಿದವರು. ಅಪರೂಪದ ಸಮಾಜಸೇವಕರು.

ಇಂತಹ ಸರಳ ಸಜ್ಜನರಿಗೆ, ಪರಮ ಪ್ರಾಮಾಣಿಕರಿಗೆ ಈ ಬಾರಿ ದೇವರಾಜ ಅರಸು ಪ್ರಶಸ್ತಿ ನೀಡಿ ಗೌರವಿಸಿರುವುದು, ಪ್ರಶಸ್ತಿಗೇ ಬೆಲೆ ಬಂದಂತಾಗಿದೆ.

ಎಸ್.ಕೆ. ಕಾಂತ ಅವರು ಕಾರ್ಮಿಕರಾಗಿ, ಕಾರ್ಮಿಕ ನಾಯಕರಾಗಿ, ಸಂಘಟಕರಾಗಿ, ಸಮಾಜ ಸೇವಕರಾಗಿ, ರಾಜಕಾರಣಿಯಾಗಿ ತಮ್ಮನ್ನು ಪೊರೆದ ಸಮಾಜಕ್ಕೆ ತೆತ್ತುಕೊಂಡವರು. ಜನ ಮುಖ್ಯ ಎಂದವರು. ಜನರಲ್ಲಿ ಜಾಗೃತಿ ಮೂಡಿಸಲು ಶ್ರಮಿಸಿದವರು. ಅಧಿಕಾರದ ಸ್ಥಾನಗಳು, ಅವಕಾಶಗಳು ಸಿಕ್ಕರೂ ಹಣ- ಆಸ್ತಿಗಳತ್ತ ತಿರುಗಿ ನೋಡದವರು. ಬದುಕನ್ನು ಜನಕಲ್ಯಾಣಕ್ಕಾಗಿ ಮುಡಿಪಿಟ್ಟು ಕಲಬುರಗಿ ಭಾಗದ ಜನರ ಪಾಲಿನ ಗಾಂಧಿಯಾದವರು.

Advertisements

ಕಲಬುರಗಿಯ ಕಾಂತ ಅವರ ದೋಸ್ತಿಗಳಾದ ಅಸ್ಲಾಂ ಕಲ್ಯಾಣಿಯವರನ್ನು ಮಾತಿಗೆಳೆದರೆ, ‘ನಮ್ ಸಾಹೇಬ್ರುದು ಭಾಳ ದೊಡ್ ಜೀವಾರಿ. ಅವರೇ ನಮ್ಗೆ ಮೊದ್ಲು ಕರ್‍ದು ಟಿಕೆಟ್ ಕೊಟ್ಟಿದ್ದು. ಕಾರ್ಪೊರೇಟರ್ ಆದೆ, ಇವತ್ತು ಮಗ ಕಾರ್ಪೊರೇಟರ್ ಆಗವ್ನೆ. ಎಲ್ಲ ಕಾಂತ ಅವರ ಕೃಪೆ. ಅವರು ನನ್ನ ದೋಸ್ತಿ ಅಂತ ಹೇಳ್ಕಳಕೆ ಹೆಮ್ಮೆ ಐತ್ರಿ’ ಎನ್ನುತ್ತಾರೆ. ಅವರ ಗೆಳೆಯರಾಗಿ, ಹಿಂಬಾಲಕರಾಗಿ, ಪಕ್ಷದ ಕಾರ್ಯಕರ್ತರಾಗಿ ಅವರ ಹಿಂದೆ ಬಿದ್ದದ್ದಕ್ಕೆ ಬರೋಬ್ಬರಿ ಮೂವತ್ತೈದು ವರ್ಷ ಆಗಿದ್ದರೂ, ಇವತ್ತಿಗೂ ಅವರು ಹಾಕಿದ ಗೆರೆ ದಾಟದ ಕಲ್ಯಾಣಿಯವರು, ‘ಈಗಲೂ ಬಾಡಿಗೆ ಮನೇಲೆ ಇರೋದ್ರಿ, ಮೂರು ಮಕ್ಕಳಿದಾವ, ಒಂದು ಗಂಡು, ಎರಡು ಹೆಣ್ಣು. ಹೆಣ್ಮಕ್ಕಳು ಇಬ್ಬರೂ ಡಾಕ್ಟರ್ ಇದಾರ್‍ರಿ, ಅವತ್ತು ಹೆಂಗಿದ್ರೋ ಇವತ್ತು ಕೂಡ ಹಂಗೇ ಇದಾರೆ. ಅವ್ರು ನಮ್ಮೋರು, ನಮ್ ನಾಯಕರು’ ಎನ್ನುತ್ತಾರೆ.

ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯ ಹಾಗರಗುಂಡಗಿಯಲ್ಲಿ 1938ರಲ್ಲಿ ಜನಿಸಿದ ಎಸ್.ಕೆ.ಕಾಂತ ಅವರು, ಕಡುಕಷ್ಟದ ಕುಟುಂಬದಿಂದ ಬಂದವರು. ಹಸಿವು, ಅವಮಾನಗಳನ್ನು ಅರಗಿಸಿಕೊಂಡೇ ಬೆಳೆದವರು. ಪ್ರಾಥಮಿಕ ಶಾಲೆಗೆ ಓದಲು ಕಲಬುರಗಿಗೆ ಬಂದ ಕಾಂತ, ಮನೆಯ ಪರಿಸ್ಥಿತಿ ಸರಿ ಇಲ್ಲದ ಕಾರಣ ಶಾಲೆ ಬಿಟ್ಟರು. ಎಂಎಸ್‌ಕೆ ಮಿಲ್​ನಲ್ಲಿ ಕಾರ್ಮಿಕರಾಗಿ ಕೆಲಸಕ್ಕೆ ಸೇರಿದರು. ತಮ್ಮಂತೆಯೇ ಇದ್ದ ಕೂಲಿ ಕಾರ್ಮಿಕರ ಕಷ್ಟ-ಸುಖ ಅರಿತು ಅರಗಿಸಿಕೊಂಡರು. ಮಿಲ್ ಕಾರ್ಮಿಕರಿಗೆ ಆಗುತ್ತಿದ್ದ ಅನ್ಯಾಯವನ್ನು ಪ್ರತಿಭಟಿಸುವ ಮೂಲಕ ಕಾರ್ಮಿಕ ನಾಯಕರಾಗಿ ಗುರುತಿಸಿಕೊಂಡರು.

ಇದನ್ನು ಓದಿದ್ದೀರಾ?: ಈ ದಿನ ವಿಶೇಷ | ದಮನಿತರ ಸಾಧನೆಗಳೇ ಮಾತನಾಡುವ ಕಾಲದಲ್ಲಿ

ಆ ನಂತರ, ರಾಜಕಾರಣಕ್ಕೆ ಧುಮುಕಿ, 1967ರಲ್ಲಿ ಪ್ರಜಾ ಸೋಷಲಿಸ್ಟ್ ಪಕ್ಷ ಸೇರಿದರು. ಅದೇ ಸಮಯದಲ್ಲಿ ಕಾಂತ ಅವರು ಕೆಲಸ ಮಾಡುತ್ತಿದ್ದ ಎಂಎಸ್‌ಕೆ ಮಿಲ್ಲನ್ನು ವಿನಾಕಾರಣ ಸರಕಾರವೇ ಬಂದ್ ಮಾಡಿತು. ಆಗ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ವೀರೇಂದ್ರ ಪಾಟೀಲರು. ಅದೇ ಭಾಗದವರು. ಆದರೂ ಕಾರ್ಮಿಕರ ಪರ ನಿಲ್ಲಲಿಲ್ಲ. ಸ್ಥಳೀಯ ಶಾಸಕರೂ ಸರ್ಕಾರದ ಪರವೇ ಕೈಜೋಡಿಸಿದರು. ಆಗ ಕಾಂತ ಅವರ ನೇತೃತ್ವದಲ್ಲಿ ಕಾರ್ಮಿಕರ ಪ್ರತಿಭಟನೆ, ಧರಣಿ, ಸತ್ಯಾಗ್ರಹಗಳು ಜರುಗಿದವು. ಅದು ಅವರನ್ನು ಜನನಾಯಕನನ್ನಾಗಿ ರೂಪಿಸಿತು. 1983ರಲ್ಲಿ ಜನತಾ ಪಕ್ಷ ಸೇರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದರು. ಲಿಂಗಾಯತರಾದರೂ, ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಪರ ಹೋರಾಟಕ್ಕಿಳಿಯುತ್ತಿದ್ದರಿಂದ, ಆ ಜನರೇ ಹಣ ಹಾಕಿ, ಓಡಾಡಿ ಕಾಂತರನ್ನು ಗೆಲ್ಲಿಸಿಕೊಂಡು ಬಂದರು. ಮೊದಲ ಬಾರಿಗೆ ಶಾಸಕರಾಗಿ ವಿಧಾನಸೌಧದ ಮೆಟ್ಟಿಲು ತುಳಿದರು.

ಅದಾದ ನಂತರ, 1985ರಲ್ಲಿ ಮತ್ತೆ ಜನತಾ ಪಕ್ಷದಿಂದ ಕಲಬುರಗಿ ನಗರದಿಂದ ಸ್ಪರ್ಧಿಸಿದ ಕಾಂತ ಅವರಿಗೆ ಸರೋಜಿನಿ ಮಹಿಷಿಯವರು ಚುನಾವಣಾ ಖರ್ಚಿಗಾಗಿ 10 ಸಾವಿರ ಕೊಟ್ಟಿದ್ದರು. ಬಂಗಾರಪ್ಪ, ಮಧು ದಂಡವತೆ ಮತ್ತು ನಜೀರ್ ಸಾಬ್‌ರಂತಹ ನಾಯಕರು ಕಲಬರುಗಿಗೆ ಬಂದು ಕಾಂತ ಪರ ಪ್ರಚಾರ ಭಾಷಣ ಮಾಡಿದ್ದರು. ಅವರೆಲ್ಲರ ಪ್ರಯತ್ನದ ಫಲವಾಗಿ ಕಾಂತ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾದರು.

ಆಗ, ಎರಡನೇ ಬಾರಿಗೆ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆಯವರು, ಕಲ್ಯಾಣ ಕರ್ನಾಟಕ ಭಾಗದ ಹಿರಿಯರು, ಲಿಂಗಾಯತ ನಾಯಕರೂ ಆದ ವಿಶ್ವನಾಥರೆಡ್ಡಿ ಮುದ್ನಾಳರನ್ನು ಮಂತ್ರಿ ಮಾಡುತ್ತಾರೆಂದು ಎಲ್ಲರೂ ಭಾವಿಸಿದ್ದರು. ಆದರೆ ಹೆಗಡೆಯವರು, ಕಾರ್ಮಿಕ ನಾಯಕ ಎಸ್.ಕೆ. ಕಾಂತ ಅವರನ್ನು ಕ್ಯಾಬಿನೆಟ್ ಸಚಿವರನ್ನಾಗಿಸಿದರು. ಅದೂ ಅವರದೇ ಕ್ಷೇತ್ರವಾದ ಕಾರ್ಮಿಕ ಖಾತೆಯನ್ನೇ ಕೊಟ್ಟಿದ್ದರು. ಕಾಂತ ಅವರೊಂದಿಗೆ ಅಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದವರಲ್ಲಿ ಈಗಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೂ ಇದ್ದರು.

ಹೋರಾಟದಿಂದ ಬಂದವರು ಅಧಿಕಾರದ ಸ್ಥಾನಗಳಿಗೆ ಏರಿದರೆ, ಮುಂದುವರೆದು ಶಾಸಕ, ಸಚಿವರಾದರೆ, ವ್ಯವಸ್ಥೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಸಹಜ. ಸರ್ಕಾರದ ಭಾಗವಾಗಿ ಕಾರ್ಮಿಕರ ವಿರುದ್ಧ ನಿಲುವು ತಾಳುವುದೂ ಇದೆ. ಆದರೆ ಕಾಂತ ಅವರ ವಿಷಯದಲ್ಲಿ ಹಾಗಾಗಲಿಲ್ಲ. ಅವರು ಮಂತ್ರಿಯಾಗಿದ್ದರೂ ಕಾರ್ಮಿಕರ ಪರವಾಗಿಯೇ ಇದ್ದರು. ಕೆಲವು ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಕಾರ್ಮಿಕರ ಪರವೇ ವಕಾಲತ್ತು ವಹಿಸಿದರು. ಆ ಕಾರಣದಿಂದಾಗಿ ಅವರ ಸಚಿವ ಸ್ಥಾನ 18 ತಿಂಗಳಿಗೆ ಕೊನೆಯಾಯಿತು.

ಕಲಬುರಗಿಯ ಶೇಖ್ ಮೊಹಮ್ಮದ್ ಜಿಯಾವುದ್ದೀನ್, ಕಾಂತರ ಖಾಸ ದೋಸ್ತ್. ಕಾಂತ ಅವರು 1986ರಲ್ಲಿ ರಾಮಕೃಷ್ಣ ಹೆಗಡೆಯವರ ಕ್ಯಾಬಿನೆಟ್‌ನಲ್ಲಿ ಕಾರ್ಮಿಕ ಖಾತೆ ಸಚಿವರಾಗಿದ್ದಾಗಿನಿಂದಲೂ ಜೊತೆಯಲ್ಲಿರುವವರು. ಆಗ ನಡೆದ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. ಅದೇನೆಂದರೆ, ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಂದ ಎಸ್.ಕೆ. ಕಾಂತ ಅವರಿಗೆ ಪತ್ರವೊಂದು ಬಂದಿತ್ತು. ಅದನ್ನು ಅವರು ಜನರ ಮುಂದೆಯೇ ಒಡೆದು ಓದಿ, ಪ್ರತಿಕ್ರಿಯಿಸಿದ್ದನ್ನು ಕಣ್ಣಾರೆ ಕಂಡ ಜಿಯಾವುದ್ದೀನ್ ವಿವರಿಸಿದ್ದು ಹೀಗೆ.

”ಅದು ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಪತ್ರ. ಸಾಹೇಬ್ರು ಕಲಬುರಗಿಯಲ್ಲಿದ್ರು. ನಾವೆಲ್ಲ ಅವರ ಸುತ್ತ ಕೂತಿದ್ದೋ. ನಮ್ಮ ಮುಂದೆಯೇ ಆ ಪತ್ರ ಒಡೆದು ಓದಿದರು. ಅದರಲ್ಲಿ ಏನಿತ್ತೆಂದರೆ, ಹೆಗಡೆಯವರು ಕಾಂತರಿಗೆ ಬೆಂಳೂರಿನ ಪ್ರತಿಷ್ಠಿತ ಬಡಾವಣೆಯಾದ ಡಾಲರ್‍ಸ್ ಕಾಲನಿಯಲ್ಲಿ ಅವರ ಹೆಸರಿಗೆ 50 x 80 ಸೈಟ್ ಮಂಜೂರು ಮಾಡಿದ್ದರು. ಅದಕ್ಕೆ ಕಾಂತ ಅವರು ಒಪ್ಪಿಗೆ ಸೂಚಿಸಬೇಕಾಗಿತ್ತು. ಆದರೆ ನಮ್ಮ ಕಾಂತ ಸಾಹೇಬ್ರು, ‘ಮಾನ್ಯ ಶ್ರೀ ಮುಖ್ಯಮಂತ್ರಿಗಳಿಗೆ, ನಿಮ್ಮ ಕಾಳಜಿಗೆ ಧನ್ಯವಾದಗಳು, ಆದರೆ ನಾನು ಈ ಸೈಟನ್ನು ಪಡೆಯಲು ಅರ್ಹನಲ್ಲ, ಪಡೆಯುವುದಿಲ್ಲ. ಅನ್ಯಥಾ ಭಾವಿಸಬೇಡಿ’ ಎಂದಷ್ಟೇ ಹೇಳಿ ಅದನ್ನು ವಾಪಸ್ ಮಾಡಿಬಿಟ್ಟರು. ಯಾರಿದಾರೆ ಹೇಳಿ ಸ್ವಾಮಿ? 1986ರಲ್ಲಿ ಡಾಲರ್‍ಸ್ ಕಾಲನಿಯಲ್ಲಿ ಸೈಟ್ ಅಂದ್ರೆ, ಅದು ಇವತ್ತು ಎಷ್ಟು ಕೋಟಿಯಾಗುತ್ತಿತ್ತು? ಕಾಂತ ಸಾಹೇಬ್ರದ್ದು ಒಂದೇ ಮಾತು. ಅವರ ಬಗ್ಗೆ ನಮ್ಗೆ ಯಾಕ್ ಅಷ್ಟು ಗೌರವ ಅಂದ್ರೆ- ಇಂಥಾದ್ದು ಒಂದಲ್ಲ ಬೇಕಾದಷ್ಟು ಮಾಡಿದಾರೆ. ಇಂಥ ಮನುಷ್ಯ ಸಿಗಾಕಿಲ್ಲ. ಗಾಂಧಿ, ಬುದ್ಧ, ಅಂಬೇಡ್ಕರ್ ಮೂವರನ್ನು ಒಟ್ಟಿಗೆ ಸೇರಿಸಿದ್ರೆ ಆಗುವಂತಹ ವ್ಯಕ್ತಿತ್ವ ಅದು. ಅವರ ಜೊತೆಗಿರೋದೆ ನಮ್ಮ ಭಾಗ್ಯ. ಅವರ ಹೆಸರಲ್ಲಿ ಇವತ್ತಿಗೂ ಒಂದೇ ಒಂದು ಇಂಚು ಭೂಮಿ ಇಲ್ಲ. ನಂಬ್ತೀರಾ?”  ಎಂದರು.

ಅಷ್ಟೇ ಅಲ್ಲ, ಸ್ವತಃ ಕಾಂತ ಅವರೇ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ‘ಎಷ್ಟು ದಿನ ನಾವು ಅಧಿಕಾರದಲ್ಲಿದ್ದೆವು ಎನ್ನುವುದಲ್ಲ, ಏನು ಕೆಲಸ ಮಾಡಿದೆವು ಎನ್ನುವುದು ಮುಖ್ಯ’ ಎಂದಿದ್ದರು. ಮತ್ತೂ ಮುಂದುವರೆದು, ‘ರಾಜಕೀಯದಲ್ಲಿ ನೀತಿ ಇರಬೇಕು. ಜನತೆ ನಮ್ಮ ಮೇಲೆ ವಿಶ್ವಾಸವಿಟ್ಟು ಆರಿಸಿ ಕಳಿಸಿದಾಗ ಜನರ ಸೇವೆಯನ್ನು ನಿಷ್ಠೆಯಿಂದ ಮಾಡಬೇಕು. ಮತದಾರರ ನಂಬಿಕೆ ಉಳಿಸಿಕೊಂಡು ಹೋಗಬೇಕು’ ಎಂದಿದ್ದರು.

ಸಚಿವ ಸ್ಥಾನ ಹೋದರೂ ಕಾರ್ಮಿಕರು ಮತ್ತು ಶ್ರಮಿಕರ ಪರವಾದ ಹೋರಾಟ ನಿಲ್ಲಲಿಲ್ಲ. ಆಳಂದ ಸಕ್ಕರೆ ಕಾರ್ಖಾನೆಯ ಕಾರ್ಮಿಕರ ಪರವಾಗಿ ಸತ್ಯಾಗ್ರಹ ನಡೆಸುತ್ತಿದ್ದಾಗ ಅವರನ್ನು ಬಂಧಿಸಿ ಜೈಲಿಗೆ ಕಳಿಸಲಾಗಿತ್ತು. ರೈತರು, ಸಿಮೆಂಟ್ ಕಾರ್ಖಾನೆ ಕಾರ್ಮಿಕರು, ದಲಿತರು ಮತ್ತಿತರರ ಸಮಸ್ಯೆಗಳಿಗಾಗಿ ಹೋರಾಟದ ಮುಂಚೂಣಿಯಲ್ಲಿರುವ ಕಾಂತ, ಕಲಬುರ್ಗಿಯಲ್ಲಿ ಕೆರೆಗಳ ರಕ್ಷಣೆಗೆ, ಸರ್ಕಾರಿ ಭೂಮಿಯ ಅತಿಕ್ರಮಣ, ಒತ್ತುವರಿಯ ತಡೆಗೆ ಹೋರಾಟ ಮಾಡಿದ್ದಿದೆ.

SK Kanta2

ಅದರಲ್ಲೂ ಕಲಬುರಗಿಯ ವಕ್ಫ್ ಆಸ್ತಿಗಳ ರಕ್ಷಣೆ ವಿಷಯದಲ್ಲಿ ಅವರದು ನಿರಂತರ ಹೋರಾಟ. ರಾಜ್ಯದ ಯಾವ ಭಾಗದಲ್ಲೂ ಇಲ್ಲದಷ್ಟು ವಕ್ಫ್ ಆಸ್ತಿ ಕಲಬುರಗಿಯಲ್ಲಿದೆ. ಖಾಜಾ ಬಂದೇನವಾಬರದ್ದು 800 ಎಕರೆ, ರಾಣಿಸಪೀರರದ್ದು 600 ಎಕರೆ ಮತ್ತು ಶೇಖ ರೋಜರದ್ದು 220 ಎಕರೆ ಜಮೀನಿದೆ. ಈ ಜಮೀನು ಅಕ್ರಮ ಒತ್ತುವರಿಯಾಗದಂತೆ ತಡೆಯುವಲ್ಲಿ, ಕಾಲಕಾಲಕ್ಕೆ ಕೋರ್ಟ್ ಮೆಟ್ಟಿಲು ಹತ್ತಿ, ಉಳಿಸುವಲ್ಲಿ ಕಾಂತ ಅವರ ಪಾಲು ಸಾಕಷ್ಟಿದೆ.

ಉದ್ದಕ್ಕೂ ಸಾಮಾಜಿಕ ಪಿಡುಗುಗಳಾದ ಪಾನನಿಷೇಧ, ಜಾತೀಯತೆ, ಶೋಷಣೆ, ಕಂದಾಚಾರ, ಮೂಢನಂಬಿಕೆ, ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತುತ್ತಲೇ ಬಂದ ಕಾಂತ ಅವರು, ದಲಿತ ಚಳವಳಿ, ರೈತ ಚಳವಳಿ, ಕನ್ನಡದ ಆದ್ಯತೆಗಾಗಿ ನಡೆದ ಗೋಕಾಕ್ ಚಳವಳಿಯಲ್ಲಿ ಸಕ್ರಿಯವಾಗಿ ಪಾಲುಗೊಂಡವರು. ಈಗಲೂ ಹೋರಾಟ ನಡೆಸುತ್ತಿದ್ದಾರೆ. ಅಮಾಯಕ, ಅಲಕ್ಷಿತ, ತುಳಿತಕ್ಕೆ ಒಳಗಾದ ಜನರಿಗೆ ನ್ಯಾಯ ಕೊಡಿಸಿ ಸಹಸ್ರಾರು ಕುಟುಂಬಗಳಿಗೆ ನೆರವಾಗುತ್ತಿದ್ದಾರೆ. ಇಂದಿಗೂ ಬಾಡಿಗೆ ಮನೆಯಲ್ಲಿರುವ ಎಸ್ ಕೆ ಕಾಂತ ಸಾಮಾಜಿಕ ಹೋರಾಟಗಾರರಿಗೆ ಮಾದರಿಯಾಗಿದ್ದಾರೆ.

ಸಮಾನ ಕೆಲಸಕ್ಕೆ ಸಮಾನ ವೇತನ ಸಿಗಬೇಕು, ಸಮಾಜದಲ್ಲಿ ಪ್ರೀತಿ ವಿಶ್ವಾಸ ಇರಬೇಕು. ದೇಶದ ಬಗ್ಗೆ ಕಳಕಳಿ ಇರಬೇಕು. ಜಾತಿ ಪದ್ಧತಿ ನಿಲ್ಲಬೇಕು. ಎಲ್ಲ ಕಡೆ ನೀತಿ ಬೆಳೆಯಬೇಕು. ದೇಶ ಆಳುವವರು ಆದರ್ಶದ ಬದುಕು ನಡೆಸಬೇಕು. ವ್ಯಕ್ತಿಪೂಜೆ ನಿಲ್ಲಬೇಕು ಎಂಬುದನ್ನು ಪ್ರತಿಪಾದಿಸುತ್ತಾ ಅದೇ ರೀತಿ ಬದುಕುತ್ತಿರುವ ಕಾಂತ ಅಪರೂಪದ ಅಸಲಿ ಸಮಾಜಸೇವಕ. ಇಂತಹ ಕಾಂತ ಅವರಿಗೆ ಈ ಬಾರಿ ದೇವರಾಜ ಅರಸು ಪ್ರಶಸ್ತಿ ಸಂದಿರುವುದು, ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಿದೆ. ಸಮಾಜದ ಬಗ್ಗೆ ಅರಸು ಅವರಿಗಿದ್ದ ಕಾಳಜಿ, ಕಳಕಳಿಯನ್ನು ಮುಂದುವರೆಸಿದ ಕಾಂತ ಅವರ ಹೋರಾಟದ ಬದುಕಿಗೆ ಬೆಲೆ ಬಂದಿದೆ.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಹಾಯ ಧನ ನೀಡುವಂತೆ ಒತ್ತಾಯ

ಕಾರ್ಮಿಕರ ಮಕ್ಕಳಿಗೆ ಸಹಾಯ ಧನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಕಲ್ಯಾಣ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

Download Eedina App Android / iOS

X