ತುರ್ತುಪರಿಸ್ಥಿತಿಯನ್ನು ಖುದ್ದಾಗಿ ಕಂಡ, ಅಂದು ದೇವರಾಜ ಅರಸು ಅವರ ಒಡನಾಡಿಗಳಾಗಿದ್ದ ಹಲವರು ತಮ್ಮ ಅನುಭವಗಳನ್ನು, ನೆನಪುಗಳನ್ನು, ದೇವರಾಜ ಅರಸು ನಿರ್ವಹಿಸಿದ ಬಗೆಯನ್ನು ಹಂಚಿಕೊಂಡಿರುವುದು ಇಲ್ಲಿದೆ.
ಜೂನ್ 25, 1975, ಇಂದಿರಾ ಗಾಂಧಿಯವರು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ದಿನ. ಇಂದು ತುರ್ತುಪರಿಸ್ಥಿತಿಗೆ 50 ವರ್ಷಗಳು ತುಂಬಿದ ದಿನ.
ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿಯವರ ಚುನಾವಣಾ ಗೆಲುವನ್ನು ಅಲಹಾಬಾದ್ ಹೈಕೋರ್ಟು ಅಕ್ರಮವೆಂದು ಸಾರಿ ಅಸಿಂಧುಗೊಳಿಸಲಾಗುತ್ತದೆ. ತಳಮಳಕ್ಕೊಳಗಾದ ಪ್ರಧಾನಮಂತ್ರಿ ಇಂದಿರಾಗಾಂಧಿ ತಮ್ಮ ಗದ್ದುಗೆ ಉಳಿಸಿಕೊಳ್ಳಲು ದೇಶವನ್ನು ತುರ್ತುಪರಿಸ್ಥಿತಿಗೆ ತಳ್ಳುತ್ತಾರೆ.
ದೇಶದ ಜನತೆಯ ಮೂಲಭೂತ ಹಕ್ಕುಗಳನ್ನು ಅಮಾನತಿನಲ್ಲಿ ಇರಿಸಿ, ಭಿನ್ನಮತವನ್ನು ದೇಶಾದ್ಯಂತ ದಮನ ಮಾಡಲಾಗುತ್ತದೆ. ಆ ನಿಟ್ಟಿನಲ್ಲಿ ಸರ್ಕಾರ ವಿರೋಧ ಪಕ್ಷಗಳ ನೂರಾರು ನಾಯಕರನ್ನು ರಾತ್ರೋರಾತ್ರಿ ಬಂಧಿಸಿ ಜೈಲಿಗೆ ಹಾಕುತ್ತದೆ. ನಿರ್ಬಂಧ ಹೇರುವ ಮೂಲಕ ಪತ್ರಿಕಾ ಮಾಧ್ಯಮವನ್ನು ಮೌನಗೊಳಿಸುತ್ತದೆ. ಬೀದಿ ಹೋರಾಟ, ಪ್ರತಿಭಟನೆ, ಮುಷ್ಕರಗಳನ್ನು ನಿಷೇಧಿಸುತ್ತದೆ. ಉಲ್ಲಂಘಿಸಿದವರನ್ನು ಜೈಲಿಗೆ ಹಾಕುತ್ತದೆ.
ಕರ್ನಾಟಕವನ್ನೂ ಒಳಗೊಂಡಂತೆ ದಕ್ಷಿಣದ ಕೆಲವು ರಾಜ್ಯಗಳಲ್ಲಿ ತುರ್ತುಪರಿಸ್ಥಿತಿ ಕಾಲದ ಸರ್ವಾಧಿಕಾರಿ ದಬ್ಬಾಳಿಕೆಯನ್ನು ಗಮನಿಸಿದರೆ, ಉತ್ತರ ಭಾರತದಷ್ಟು ಘನಘೋರವಾಗಿರಲಿಲ್ಲ. ಕರ್ನಾಟಕದಲ್ಲಿ ಅದಕ್ಕೆ ಕಾರಣ, ಅಂದಿನ ಮುಖ್ಯಮಂತ್ರಿ ದೇವರಾಜ ಅರಸು. ಅವರ ಅರಿವು ಮತ್ತು ಅನುಭವ. ಅವರ ಜನಪರ ಕಾಳಜಿಗಳು ಮತ್ತು ಕಾರ್ಯಕ್ರಮಗಳು. ಅರಸು ಅವರಿಗೆ ಬುದ್ಧಿಜೀವಿಗಳ ಬೆಂಬಲವಿರಲಿಲ್ಲ. ಥಿಂಕ್ ಟ್ಯಾಂಕ್ ಬೇಕೆಂದು ಅರಸು ಕೂಡ ಬಯಸಿರಲಿಲ್ಲ. ಆದರೆ ಅದಕ್ಕಿಂತ ದೊಡ್ಡ ವಿಚಾರಗಳು ಅರಸು ಅವರಲ್ಲಿದ್ದವು. ಅಂತಹ ಅರಸು ಅವರನ್ನು ಹತ್ತಿರದಿಂದ ಕಂಡ ಅವರ ಒಡನಾಡಿಗಳು ತುರ್ತುಪರಿಸ್ಥಿತಿಯ ಕರಾಳ ದಿನಗಳನ್ನು, ಅರಸು ನಿರ್ವಹಿಸಿದ ಬಗೆಯನ್ನು ಇಲ್ಲಿ ಹಂಚಿಕೊಂಡಿದ್ದಾರೆ.
ಸಿ.ಎಸ್. ಮಲ್ಲಯ್ಯ
ಸಿ.ಎಸ್. ಮಲ್ಲಯ್ಯನವರು ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಬೆಂಗಳೂರಿನ ಕೇಂದ್ರ ಕಾರಾಗೃಹದ ಸೂಪರಿಂಟೆಂಡೆಂಟ್ ಆಗಿ ಕಾರ್ಯ ನಿರ್ವಹಿಸಿದವರು. ಶುದ್ಧಹಸ್ತರಾಗಿ ಅತ್ಯಂತ ದಕ್ಷ, ನಿಷ್ಠುರತೆಯಿಂದ ಸೇವೆ ಸಲ್ಲಿಸಿ, ‘ಖಡಕ್ ಆಫೀಸರ್’ ಎಂದು ಹೆಸರು ಗಳಿಸಿದ್ದರು. ಅವರ ಮಾತುಗಳು ಹೀಗಿವೆ…
ನಮ್ಮ ಸೆಂಟ್ರಲ್ ಜೈಲಿನ ಕೆಪಾಸಿಟಿ 12ರಿಂದ 13 ಸಾವಿರ ಮಾತ್ರ. ಅಲ್ಲಿರುವ ಕೈದಿಗಳಿಗೇ ಹಾಸೋಕೆ, ಹೊದಿಯೋಕೆ ಇರ್ತಿರಲಿಲ್ಲ. ಇನ್ನು ತಿನ್ನೋಕೆ, ಕುಡಿಯೋಕೆ ಒಂದಿದ್ರೆ ಒಂದಿಲ್ಲ ಅನ್ನೋ ದರ್ದಿನ ದಿನಗಳವು. ಅಂತಹ ಸಂದರ್ಭದಲ್ಲಿ 21 ತಿಂಗಳ (ಜೂನ್ 25, 1975ರಿಂದ ಮಾರ್ಚ್ 21, 1977ವರೆಗೆ) ಎಮರ್ಜೆನ್ಸಿ ಬಂತು. ಬೇರೆ ಬೇರೆ ರಾಜ್ಯಗಳ ತಂಟೆಕೋರರನ್ನೆಲ್ಲ ತಂದು ಇಲ್ಲಿಗೆ ಹಾಕಿಬಿಟ್ರು. ಸುಮಾರು 12 ಸಾವಿರ ಹೊಸ ಕೈದಿಗಳು. ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ, ಮಧು ದಂಡವತೆ, ನಾಗಪ್ಪ ಆಳ್ವ, ರಾಮಕೃಷ್ಣ ಹೆಗಡೆ, ದೇವೇಗೌಡರಂತಹ ರಾಷ್ಟ್ರ ನಾಯಕರು. ರಾಜಕೀಯ ಧುರೀಣರು, ಸಾಹಿತಿ-ಕಲಾವಿದರು, ಪತ್ರಕರ್ತರು, ಬುದ್ಧಿಜೀವಿ-ಚಿಂತಕರು ಎಲ್ಲರೂ ಇದ್ದರು. ಜೊತೆಗೆ ಅವರೆಲ್ಲರೂ ಇಂದಿರಾ ಗಾಂಧಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ವಿರುದ್ಧವಿರುವವರು. ಅವರು ಯಾವುದೋ ಕೆಟ್ಟ ಕೆಲಸ ಮಾಡಿ ಅಲ್ಲಿಗೆ ಬಂದವರಲ್ಲ, ಅವರನ್ನು ಇತರ ಕೈದಿಗಳಂತೆ ಕಾಣುವಂತಿಲ್ಲ, ಕೆಟ್ಟದಾಗಿ ನಡೆಸಿಕೊಳ್ಳುವಂತಿಲ್ಲ. ಸ್ವಲ್ಪ ಹೆಚ್ಚೂಕಡಿಮೆಯಾದರೂ ರಾಜ್ಯ ಸರಕಾರಕ್ಕೆ, ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಕೆಟ್ಟ ಹೆಸರು ಬರುತ್ತದೆ.
ಇದನ್ನು ಓದಿದ್ದೀರಾ?: ಬಿಜೆಪಿಗರೇ ಹೇಳಿ- ಅಘೋಷಿತ ತುರ್ತುಪರಿಸ್ಥಿತಿ ಮುಗಿಯುವುದು ಯಾವಾಗ?
ಆದರೆ ಅವತ್ತು ದೊಡ್ಡ ನಾಯಕರೆನಿಸಿಕೊಂಡವರೆಲ್ಲ ದೊಡ್ಡವರಂತೆಯೇ ವರ್ತಿಸಿದರು. ಎಲ್ಲೋ ಕೆಲವರು ಹಾಲಿಲ್ಲ, ಊಟಕ್ಕೆ ಉಪ್ಪಿಲ್ಲ, ಸೊಳ್ಳೆಕಾಟ ಅಂತ ಗಲಾಟೆ ಮಾಡಿದರು. ಅರಸು ಕೂಡ ಅಷ್ಟೆ, ಅವರು ಕಾಂಗ್ರೆಸ್ ವಿರೋಧಿಗಳು, ಇಂದಿರಾ ಗಾಂಧಿಯವರನ್ನು ಕಂಡರಾಗದವರು, ತಮ್ಮ ಆಡಳಿತಕ್ಕೆ ತೊಂದರೆ ಕೊಡುತ್ತಿರುವವರೆಂದು ಅವರನ್ನು ನೋಡಲಿಲ್ಲ. ಮತ್ತು ಅವರಿಗೆ ಯಾವುದೇ ರೀತಿಯ ತೊಂದರೆಯನ್ನು ಕೊಡಲು ಕನಸು ಮನಸಿನಲ್ಲಿಯೂ ಯೋಚಿಸಲಿಲ್ಲ. ಬದಲಿಗೆ, ‘ಮಲ್ಲಪ್ಪನೋರೆ, ಅವರು ನಮ್ಮ ಅತಿಥಿಗಳು, ಚೆನ್ನಾಗಿ ನೋಡಿಕೋಬೇಕು, ಯಾವ ಕೊರತೆಯೂ ಆಗಬಾರದು’ ಎಂದು ಮನೆಗೆ ಕರೆಸಿಕೊಂಡು ಮಗುವಿಗೆ ಹೇಳುವಂತೆ ಹೇಳಿದ್ದರು. ಸಾಲದೆಂದು ಬಿಡುವಾದಾಗಲೆಲ್ಲ, ಎಷ್ಟೋ ದಿನ ರಾತ್ರಿ ಹೊತ್ತಿನಲ್ಲೂ ಜೈಲಿಗೆ ಬಂದು ಅವರ ಯೋಗಕ್ಷೇಮ ವಿಚಾರಿಸಿಕೊಂಡು ಹೋಗುತ್ತಿದ್ದರು.
ನಾನು ವಾಜಪೇಯಿಯವರನ್ನು ಇಲ್ಲಿಟ್ಟುಕೊಂಡು ಅಡ್ವಾಣಿಯವರನ್ನು ಬೆಳಗಾವಿ ಜೈಲಿಗೆ ಹಾಕಿದೆ. ಹೀಗೆ ಅವರನ್ನೆಲ್ಲ ರಾಜ್ಯದ ಅಷ್ಟೂ ಜೈಲುಗಳಿಗೂ ಹಂಚಿದೆ. ಪ್ರತಿದಿನ ಪ್ರವಾಸ-ಬೀದರ್‌ನಿಂದ ಬೆಂಗಳೂರವರೆಗೆ. ಒಂದೇ ಒಂದು ದೂರು ಬರದಂತೆ ನೋಡಿಕೊಂಡೆ. ಇದೆಲ್ಲವೂ ದೇವರಾಜ ಅರಸರಿಗೆ ಗೊತ್ತಿತ್ತು.
(ಜೈಲ್ ಸೂಪರಿಂಟೆಂಡೆಂಟ್)
ಅಗ್ರಹಾರ ಕೃಷ್ಣಮೂರ್ತಿ
ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಕರ್ನಾಟಕದ ಬುದ್ಧಿಜೀವಿ ವಲಯ ಕಾಂಗ್ರೆಸ್ ವಿರೋಧಿ ನಿಲುವನ್ನು ತಳೆದಿತ್ತು. ನೆಹರೂ, ಇಂದಿರಾ, ಸಂಜಯ್‌ರ ಪರಂಪರಾಗತ ರಾಜಕಾರಣವನ್ನು ಖಂಡಿಸುತ್ತಿತ್ತು. ಅದೇ ಸಮಯದಲ್ಲಿ ಜಿಎಸ್‌ಎಸ್ ನೇತೃತ್ವದಲ್ಲಿ ಬುದ್ಧಿಜೀವಿಗಳ ಮೌನ ಪ್ರತಿಭಟನೆ ನಡೆದಿತ್ತು. ಅದರಲ್ಲಿ ಕನ್ನಡದ ಘಟಾನುಘಟಿಗಳೆಲ್ಲ ಪಾಲ್ಗೊಂಡಿದ್ದರು. ಆ ಮೆರವಣಿಗೆಯ ಜೊತೆ ಕಾಲು ಹಾಕುವುದೇ ನಮ್ಮ ಭಾಗ್ಯ ಎಂಬ ಭಾವನೆ ಇತ್ತು. ಅದೇ ಸಮಯದಲ್ಲಿ ಚಂದ್ರಶೇಖರ ಪಾಟೀಲರು ‘ಗಾಂಧಿ ಸ್ಮರಣೆ’ ಕೃತಿ ಪ್ರಕಟಿಸಿದರು. ಈ ಪುಸ್ತಕದ ಮುನ್ನುಡಿಯಲ್ಲಿ ಕುಮಾರವ್ಯಾಸನ ಕಾವ್ಯವನ್ನು ಬಳಸಿಕೊಳ್ಳಲಾಗಿತ್ತು. ಅದರಲ್ಲಿ ‘ಅರಸು ರಾಕ್ಷಸ’ ಎಂಬ ಸಾಲುಗಳು ನೇರವಾಗಿ ಅರಸರಿಗೇ ಹೇಳಿದಂತಿದ್ದವು. ಅದಕ್ಕಿಂತಲೂ ಮುಖ್ಯವಾಗಿ ಗಾಂಧಿ ಎನ್ನುವುದು ಇಂದಿರಾ, ಸಂಜಯ ಅಥವಾ ಮಹಾತ್ಮಾ ಗಾಂಧಿ- ಯಾರು ಬೇಕಾದರೂ ಆಗಬಹುದಾದ ರೀತಿಯಲ್ಲಿ ಅರ್ಥೈಸಿದ ರೂಪಕ ನಮ್ಮ ಅರಿವಿನ ವ್ಯಾಪ್ತಿಯನ್ನು ಹಿಗ್ಗಿಸಿತ್ತು.
ಇದು ಏನನ್ನು ತೋರಿಸುತ್ತದೆಂದರೆ ಪ್ರಭುತ್ವದ ವಿರುದ್ಧ ಸಮರ್ಥವಾದ ರಚನಾತ್ಮಕವಾದ ಪ್ರತಿಕ್ರಿಯೆಯನ್ನು ನಾಗರಿಕರು ಕಾಲಕಾಲಕ್ಕೆ ವ್ಯಕ್ತಪಡಿಸುತ್ತಾರೆ. ನಗದು ಬಹುಮಾನಗಳನ್ನು, ಪ್ರಶಸ್ತಿ ಫಲಕಗಳನ್ನು ಹಿಂದಿರುಗಿಸುತ್ತಾರೆ. ಪ್ರತಿಭಟಿಸುತ್ತಾರೆ. ಅನಾಗರಿಕರು…
(ಸಾಹಿತಿಗಳು)

ಚಿರಂಜೀವಿ ಸಿಂಗ್
ನಾನು ಗಮನಿಸಿದಂತೆ, ಆ ಸಂದರ್ಭದಲ್ಲಿ 2-3 ಜಿಲ್ಲೆಗಳು ವಿವಿಧ ಕಾರಣಗಳಿಗಾಗಿ ಸುದ್ದಿಯಾದವು. ಅದಕ್ಕೆ ಕಾರಣ ಆ ಜಿಲ್ಲೆಗಳ ಜಿಲ್ಲಾಧಿಕಾರಿಗಳೇ ಹೊರತು ಅರಸು ಅವರಲ್ಲ. ತುರ್ತುಪರಿಸ್ಥಿತಿಯನ್ನು ಅರಸು ಅವರು ಸಮರ್ಥವಾಗಿಯೇ ನಿಭಾಯಿಸಿದರು. ವಿರೋಧಿಗಳನ್ನು ವಿರೋಧಿಗಳೆಂದು ಪರಿಗಣಿಸದೆ, ಎಲ್ಲರನ್ನು ಸಮಾನವಾಗಿ ನೋಡಿಕೊಂಡರು.
ಇದನ್ನು ಓದಿದ್ದೀರಾ?: ತುರ್ತುಪರಿಸ್ಥಿತಿ | ಕತ್ತಲೆಯ ಕಾಲದಲ್ಲಿ ವ್ಯಂಗ್ಯದ ಬೆಳಕು
ಬುದ್ಧಿಜೀವಿಗಳ ದೃಷ್ಟಿಯೆಲ್ಲ ಇಂದಿರಾ ಮತ್ತು ಕಾಂಗ್ರೆಸ್ ವಿರುದ್ಧವಿತ್ತು. ತುರ್ತು ಪರಿಸ್ಥಿತಿ ಹೇರಿಕೆ ಅದಕ್ಕೆ ಪೂರಕವಾಗಿ ಕೆಲಸ ಮಾಡಿತ್ತು. ಆ ಸಂದರ್ಭದಲ್ಲಿ, ನಾನು ವಾರ್ತಾ ಇಲಾಖೆಯ ನಿರ್ದೇಶಕ(ಅಡಿಷನಲ್ ಇನ್‌ಚಾರ್ಜ್)ನಾಗಿದ್ದಾಗ, ಪತ್ರಿಕಾ ಸಂಪಾದಕರು, ಹಿರಿಯ ಪತ್ರಕರ್ತರು ಮತ್ತು ಕೆಲ ಬುದ್ಧಿಜೀವಿಗಳ ಜೊತೆ ಅರಸು ಅವರನ್ನು ಒನ್ ಟು ಒನ್ ಡಿಸ್ಕಷನ್‌ಗೆ, ಡಿನ್ನರ್‌ಗೆ ಅರೇಂಜ್ ಮಾಡಿದ್ದೆ. ಆಗ ಅರಸು ಅವರ ಮೇಲಿದ್ದ ಬುದ್ಧಿಜೀವಿಗಳ ಅಭಿಪ್ರಾಯ ಕೊಂಚ ಬದಲಾಗಿತ್ತು.
ನನ್ನ ಪ್ರಕಾರ ತುರ್ತು ಪರಿಸ್ಥಿತಿಯಿಂದ ಅರಸು ಅವರ ಸರಕಾರಕ್ಕೆ ಯಾವ ಅನುಕೂಲವೂ ಆಗಲಿಲ್ಲ. ಅರಸು ಅಂದುಕೊಂಡದ್ದು ತುರ್ತು ಪರಿಸ್ಥಿತಿಯಲ್ಲಿ ನೆರವೇರಲಿಲ್ಲ.
(ಐಎಎಸ್ ಅಧಿಕಾರಿ)
ಗರುಡನಗಿರಿ ನಾಗರಾಜ
ತುರ್ತುಪರಿಸ್ಥಿತಿ ಸಮಯದಲ್ಲಿ ನಮ್ಮ ಪತ್ರಿಕೆ- ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್- ಇಂದಿರಾ ಗಾಂಧಿಗೆ ವಿರುದ್ಧವಾಗಿತ್ತು. ಬಹಳ ಉಗ್ರ ಲೇಖನಗಳನ್ನು ಪ್ರಕಟಿಸಿ ಇಂದಿರಾರ ಕೆಂಗಣ್ಣಿಗೆ ಗುರಿಯಾಗಿತ್ತು.
ಆ ಸಂದರ್ಭದಲ್ಲಿ ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ಲಂಕೇಶ್, ಮಾಸ್ಟರ್ ಹಿರಣ್ಣಯ್ಯ ಸರಕಾರವನ್ನು ಖಂಡಿಸಿ ಊರೂರಲ್ಲಿ ಭಾಷಣ ಮಾಡಿದ್ದರು. ಆದರೆ ಅರಸು ಅವರಾರನ್ನೂ ಬಂಧಿಸಲಿಲ್ಲ. ಕೇಂದ್ರದಿಂದ ಸೂಚನೆ ಬಂದರೆ ಮಾತ್ರ ಬಂಧಿಸಲಾಗುತ್ತಿತ್ತು. ಬಂಧಿತರನ್ನೂ ಕೂಡ ಅತಿಥಿಗಳಂತೆ ನೋಡಿಕೊಳ್ಳಲಾಗುತ್ತಿತ್ತು. ಬಿಹಾರದಿಂದ ಕರೆತಂದಿದ್ದ ಒಬ್ಬನಿಗೆ ಕಾಲಿಗೆ ಸರಪಣಿ ಹಾಕಿದ್ದನ್ನು ಕಂಡ ಅರಸು, ಜೈಲ್ ಐಜಿ ಮಲ್ಲಯ್ಯನವರನ್ನು ಕರೆದು, ‘ಮೊದಲು ಬಿಚ್ಚಿ, ಆತ ಖೈದಿಯಲ್ಲ, ಚೆನ್ನಾಗಿ ನೋಡಿಕೊಳ್ಳಿ’ ಎಂದಿದ್ದರು.
ಅದೇ ಸಮಯದಲ್ಲಿ ಕವಿ ಎಂ.ಗೋಪಾಲಕೃಷ್ಣ ಅಡಿಗರು ಜನಸಂಘದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ, ಸೋತು, ಕೈಯಲ್ಲಿದ್ದ ಕೆಲಸ ಕಳೆದುಕೊಂಡು ಕೂತಿದ್ದರು. ಅವರ ಮನೆಯ ಪರಿಸ್ಥಿತಿಯನ್ನು ಹತ್ತಿರದಿಂದ ಕಂಡಿದ್ದ ನಾನು, ಅವರ ಮನವೊಲಿಸಿ, ಕಷ್ಟದಲ್ಲಿರುವವರನ್ನು ಕಂಡರೆ ಕರಗುವ ಅರಸು ಅವರ ಬಳಿ ಕರೆದುಕೊಂಡು ಹೋಗಿದ್ದೆ. ಅರಸು ಕಂಡರಾಗದ ಅಡಿಗರು ಒಲ್ಲದ ಮನಸ್ಸಿನಿಂದಲೇ ವಿಧಾನಸೌಧದ ಮೆಟ್ಟಿಲು ಹತ್ತಿ ಬಂದರು. ಅಡಿಗರು ಬರುತ್ತಾರೆಂದು ತಿಳಿದಿದ್ದ ಅರಸು ಗಂಧದ ಹಾರ ಹಿಡಿದು ನಿಂತಿದ್ದರು. ಹಾರ ಹಾಕಿ, ‘ನಿಮ್ಮ ವಿಷಯವನ್ನೆಲ್ಲ ಗರುಡನಗಿರಿಯವರು ಹೇಳಿದ್ದಾರೆ, ನೀವು ಹೇಳಿದ್ದನ್ನು ಮಾಡಲು ನಾವು ಸಿದ್ಧರಿದ್ದೇವೆ, ಅಪ್ಪಣೆ ಕೊಡಿ ದೇವರು’ ಎಂದರು. ಅಡಿಗರು ಒಂದು ಕ್ಷಣ ಪೆಚ್ಚಾದರು.
ಇದನ್ನು ಓದಿದ್ದೀರಾ?: ತುರ್ತುಪರಿಸ್ಥಿತಿಯ ಭೂಕಂಪಕ್ಕೆ ಕಾರಣವಾದ ಆ ನಿಷ್ಠುರ ತೀರ್ಪು!
ಆದರೂ ಬಿಡದೆ, ತುರ್ತು ಪರಿಸ್ಥಿತಿ, ಇಂದಿರಾ ಸರ್ವಾಧಿಕಾರತ್ವವನ್ನು ಟೀಕಿಸಿದರು. ಅದಕ್ಕೂ ಸಿಟ್ಟಾಗದ ಅರಸು, ‘ಇದು ನಿಮ್ಮ ಅಭಿಪ್ರಾಯ, ನಮ್ಮ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಅತಿರೇಕವಾಗಿಲ್ಲ, ನಿಮ್ಮ ನಾಯಕ ಅಡ್ವಾಣಿ ಇಲ್ಲಿಯೇ ಸೆಂಟ್ರಲ್ ಜೈಲಿನಲ್ಲಿದ್ದಾರೆ, ಭೇಟಿ ಮಾಡಿ, ನಾವು ಹೇಗೆ ನಡೆಸಿಕೊಂಡಿದ್ದೇವೆ ಎಂಬುದು ತಿಳಿಯುತ್ತದೆ. ನೀವು ಕವಿಗಳು ಹೇಗೆ ಬೇಕಾದರೂ ವ್ಯಾಖ್ಯಾನ ಮಾಡಬಹುದು, ಇರಲಿ’ ಎಂದರು.
(ಪತ್ರಕರ್ತರು)
ಕೆ.ಎಚ್. ಶ್ರೀನಿವಾಸ್
ತುರ್ತುಪರಿಸ್ಥಿತಿ ಸಮಯದಲ್ಲಿ ರಾಮಕೃಷ್ಣ ಹೆಗಡೆಯವರನ್ನು ಬಂಧಿಸಿ, ಬೆಳಗಾಂ ಜೈಲಿಗೆ ಹಾಕಿದರು. ಅದೂ ಕೂಡ ಕೇಂದ್ರದಿಂದ ಬಂದ ಸೂಚನೆಯ ಮೇರೆಗೆ ಮಾತ್ರ. ಹೆಗಡೆಯವರ ಆರೋಗ್ಯ ಸರಿ ಇರಲಿಲ್ಲ. ಬೆನ್ನು ನೋವು ಜಾಸ್ತಿಯಾಗಿತ್ತು. ಅವರ ಮನೆಯವರು ನನ್ನ ಬಳಿ ಬಂದು, ‘ಏನಾದ್ರು ಮಾಡಿ ಬೆಂಗಳೂರಿಗೆ ಹಾಕಿಸಿ, ಅಲ್ಲಿ ಚಿಕಿತ್ಸೆಗೆ, ನಾವು ಹೋಗಿಬರಲು ಅನುಕೂಲವಾಗುತ್ತದೆ’ ಎಂದು ಕೇಳಿಕೊಂಡರು. ನಾನು ಅರಸು ಅವರಿಗೆ ತಿಳಿಸಿದೆ. ಅದಕ್ಕೆ ಅವರು ಒಪ್ಪಿ ಬೆಂಗಳೂರಿಗೆ ಹಾಕಿಸಿಕೊಟ್ಟರು. ಇಷ್ಟಕ್ಕೇ ಸುಮ್ಮನಾಗದ ಅರಸು, ನನ್ನ ಗಮನಕ್ಕೆ ತರದೆ ಹೆಗಡೆಯವರನ್ನು ಪೆರೋಲ್ ಮೇಲೆ ಬಿಡುವಂತೆ ಜೈಲರ್‌ಗೆ ಪತ್ರ ಬರೆದಿದ್ದರು. ಆದರೆ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಗಳ ಪತ್ರಕ್ಕೆ ಪ್ರತಿಯಾಗಿ ಪೆರೋಲ್ ಬೇಡ ಎಂದು ಪತ್ರ ಬರೆದಿದ್ದರು.
ಒಂದು ದಿನ ಅರಸು ಫೈಲ್ ಹಿಡಿದುಕೊಂಡು ನನ್ನ ಬಳಿ ಬಂದರು, ಹೆಗಡೆಯವರ ಪತ್ರ ತೋರಿಸಿದರು, ‘ನೋಡಪ್ಪ ನಿನ್ನ ಹೆಗಡೆ’ ಎಂದರು. ಇದಾವುದೂ ಹೆಗಡೆಗೂ ಗೊತ್ತಿಲ್ಲ, ಅರಸು ವಿರೋಧಿಗಳಿಗೂ ಗೊತ್ತಾಗಲಿಲ್ಲ. ಮಾಡಿದ್ದನ್ನು ಹೇಳಿಕೊಳ್ಳದ ಗುಣ ಅರಸು ಅವರಲ್ಲಿತ್ತು. ಆದರೆ ಜಗತ್ತು ಅದಕ್ಕೆ ವಿರುದ್ಧವಾಗಿ ಯೋಚಿಸುತ್ತಿತ್ತು.
(ರಾಜಕಾರಣಿ)
ಎಂ. ರಘುಪತಿ
ತುರ್ತುಪರಿಸ್ಥಿತಿ- ಇದು ದೇವರಾಜ ಅರಸು ಅವರಿಗೆ ಸಿಕ್ಕ ಸುವರ್ಣ ಅವಕಾಶ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟರು. ಶತ್ರುಗಳನ್ನು ಸದೆಬಡಿಯಲು, ಬಹುಸಂಖ್ಯಾತರಾದ ಒಕ್ಕಲಿಗರು ಮತ್ತು ಲಿಂಗಾಯತರನ್ನು ಮಟ್ಟಹಾಕಲು, ನನೆಗುದಿಗೆ ಬಿದ್ದ ಯೋಜನೆಗಳನ್ನು ಕಾರ್ಯಗತಗೊಳಿಸಲು ಇದು ಸಕಾಲ ಎಂದೇ ಎಲ್ಲರೂ ಭಾವಿಸಿದ್ದರು.
ಆದರೆ ಅರಸು ಅವರ ಯೋಚನೆಯೇ ಬೇರೆ ಇತ್ತು. ನಿಭಾಯಿಸಿದ ರೀತಿಯೂ ಭಿನ್ನವಾಗಿತ್ತು. ತುರ್ತು ಪರಿಸ್ಥಿತಿ ಘೋಷಣೆಯಾದ ಸಂದರ್ಭದಲ್ಲಿ ರಾಷ್ಟ್ರೀಯ ನಾಯಕರಾದ ವಾಜಪೇಯಿ, ಅಡ್ವಾಣಿ, ಪೀಲೂ ಮೋದಿ ಯಾವುದೋ ಕಾರ್ಯನಿಮಿತ್ತ ಬೆಂಗಳೂರಿನಲ್ಲಿದ್ದರು. ಅವರನ್ನು ಬಂಧಿಸಲಾಯಿತು. ಆನಂತರ ಸ್ಥಳೀಯ ನಾಯಕರಾದ ರಾಮಕೃಷ್ಣ ಹೆಗಡೆ ಮತ್ತು ಎ.ಕೆ.ಸುಬ್ಬಯ್ಯನವರನ್ನು ಬಂಧಿಸಲಾಯಿತು. ಆದರೆ ಈ ಬಂಧನಗಳಾವುವೂ ಅರಸು ಅವರ ಆಜ್ಞೆ ಆದೇಶದ ಮೇರೆಗೆ ನಡೆದ ಬಂಧನಗಳಲ್ಲ, ಕೇಂದ್ರದ ಸೂಚನೆಯ ಮೇರೆಗೆ ನಡೆದಂಥವು.
ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ದೇವೇಗೌಡ, ಕುವೆಂಪು, ಜಿ.ಎಸ್.ಶಿವರುದ್ರಪ್ಪ, ಶಿಮರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ಲಂಕೇಶ್, ಕಡಿದಾಳು ಮಂಜಪ್ಪ, ಹಿರಣ್ಣಯ್ಯರಂತಹ ಸಾಹಿತಿ-ಕಲಾವಿದರೂ ತುರ್ತು ಪರಿಸ್ಥಿತಿಯ ವಿರುದ್ಧವಿದ್ದರು. ಕರಪತ್ರ ಹಂಚುವ, ಕವನ-ಲೇಖನಗಳ ಮೂಲಕ ಟೀಕಿಸುವ, ಬೀದಿ ನಾಟಕಗಳ ಮೂಲಕ ವಿಮರ್ಶೆಗೊಳಪಡಿಸುವ ಮಾರ್ಗಗಳಲ್ಲಿ ನಿರತರಾಗಿದ್ದರು. ಆದರೆ ಅರಸು ಅವರಾರನ್ನೂ ಬಂಧಿಸಲಿಲ್ಲ. ಸೇಡಿನ ರಾಜಕಾರಣಕ್ಕೆ ಅರಸು ಎಂದೂ ಕೈ ಹಾಕಲಿಲ್ಲ.
ಆ ನಂತರ, 2ನೇ ಕಂತಿನಲ್ಲಿ ಹೈಕಮಾಂಡಿನ ಸೂಚನೆ ಮೇರೆಗೆ ದೇವೇಗೌಡ ಮತ್ತಿತರನ್ನು ಬಂಧಿಸಿದರು. ಬಂಧನವೇನೊ ಆಯಿತು, ಅರಸು ಸುಮ್ಮನಿರಬೇಕಲ್ಲ. ‘ರೀ ರಘು ಬನ್ರಿ ಇಲ್ಲೇ ಹೋಗಿಬರೋಣ’ ಎಂದು ಸೆಂಟ್ರಲ್ ಜೈಲಿಗೆ ಕರೆದುಕೊಂಡುಹೋದರು. ಜೈಲ್ ಐಜಿ ಮಲ್ಲಯ್ಯನವರನ್ನು ಕರೆದು, ‘ಇವರಾರು ಖೈದಿಗಳಲ್ಲ, ನಮ್ಮ ಅತಿಥಿಗಳು, ಅವರಿಗೆ ಯಾವ ಕೊರತೆಯೂ ಆಗದಂತೆ ನೋಡಿಕೊಳ್ಳಬೇಕು’ ಎಂದು ಆರ್ಡರ್ ಮಾಡಿದರು. ಅಷ್ಟೇ ಅಲ್ಲ, ತುರ್ತು ಪರಿಸ್ಥಿತಿಯಲ್ಲಿ ಬಂಧಿತರಾದವರನ್ನು ಬೇರೆಯೇ ಇರಿಸಿ, ಅಲ್ಲಿಗೆ ಪೇಪರ್, ಮ್ಯಾಗಜಿನ್, ಬುಕ್ಸ್‌ಗಳನ್ನು ಸರಬರಾಜು ಮಾಡುವಂತೆ, ಕೆಲವರನ್ನು ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಹಾಗೂ ಅವರಿಗೆ ಕುರುಬರ ಹಾಸ್ಟೆಲ್ ಕಡೆಯ ಬಾಗಿಲಿನಿಂದ ಹೊರಹೋಗಲು ಅವಕಾಶ ಮಾಡಿಕೊಡುವಂತೆ ವ್ಯವಸ್ಥೆ ಮಾಡಿಸಿದ್ದರು.
ಇದನ್ನು ಓದಿದ್ದೀರಾ?: ಬಿಜೆಪಿ ಏಕೆ ಸಂವಿಧಾನದ ಬಗ್ಗೆ ಮಾತನಾಡಬಾರದು?
ತುರ್ತು ಪರಿಸ್ಥಿತಿ ಹೇರಿಕೆಯ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕೆಟ್ಟದ್ದೇನು ಘಟಿಸಲಿಲ್ಲ. ಬೇರೆ ರಾಜ್ಯಕ್ಕೆ ಹೋಲಿಸಿಕೊಂಡರೆ ಕರ್ನಾಟಕ ಶಾಂತವಾಗಿತ್ತು. ಅದರ ಕೀರ್ತಿ ಅರಸರಿಗೆ ಸಲ್ಲಲೇಬೇಕು.
(ರಾಜಕಾರಣಿ)

ಬಿ.ಎನ್. ಗರುಡಾಚಾರ್
1975ರಲ್ಲಿ, ಅಲಹಾಬಾದ್ ಹೈಕೋರ್ಟ್, ರಾಯ್‌ಬರೇಲಿ ಲೋಕಸಭಾ ಕ್ಷೇತ್ರದಿಂದ ಗೆದ್ದ ಇಂದಿರಾ ಗಾಂಧಿಯವರ ಗೆಲುವನ್ನು ಅಸಿಂಧು ಎಂದು ಘೋಷಿಸಿತು. ಇಂದಿರಾ ಗಾಂಧಿ ಆಗ ಪ್ರಧಾನಮಂತ್ರಿ, ಕಾಂಗ್ರೆಸ್ಸಿನ ಅಧಿನಾಯಕಿ. ದೇಶದಲ್ಲಿ ರಾಜಕೀಯ ಬೆಳವಣಿಗೆಗಳು ಕ್ಷಿಪ್ರಗತಿಯಲ್ಲಿ ಜರುಗತೊಡಗಿದ್ದ ಕಾಲವದು. ಪ್ರಧಾನಿ ಇಂದಿರಾ ಗಾಂಧಿಯವರು ಕಾಂಗ್ರೆಸ್ ಆಡಳಿತವಿದ್ದ ರಾಜ್ಯಗಳ ಮುಖ್ಯಮಂತ್ರಿಗಳ ತುರ್ತು ಸಭೆಯನ್ನು ಕರೆದಿದ್ದರು. ಆ ಸಭೆಯ ಸುದ್ದಿ ಇಂಟಲಿಜೆನ್ಸ್ ಮೂಲಕ ನಮಗೆ ತಲುಪಿತ್ತು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು, ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದರು. ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಈ ವಿಷಯ ಮುಟ್ಟಿಸಬೇಕಿತ್ತು. ನನ್ನ ಮೇಲಧಿಕಾರಿ ರಾಮಲಿಂಗಂ ಆ ಜವಾಬ್ದಾರಿಯನ್ನು ನನಗೆ ವಹಿಸಿದರು. ಅರಸು ಅವರನ್ನು ಕಂಡು, ಅವರಿಗೆ ವಿಷಯ ಮುಟ್ಟಿಸಬೇಕಾಗಿತ್ತು. ಅವರು ಹೇಗೆ ರಿಸೀವ್ ಮಾಡುತ್ತಾರೋ ಎಂದು ಭಯ, ಆತಂಕದಲ್ಲಿದ್ದೆವು. ಆದರೆ ಅವರು ಅಷ್ಟೇ ಕೂಲಾಗಿ, ನೋಡೋಣ, ಹೋಗೋಣ ಎಂದರು. ಅಷ್ಟೇ ಅಲ್ಲ, ನನಗಾಗಿಯೇ ಇಂಟಲಿಜೆನ್ಸ್ ಡಿಐಜಿ ಎಂಬ ಹೊಸ ಹುದ್ದೆ ಸೃಷ್ಟಿಸಿ, ಮೊದಲ ಬಾರಿಗೆ ನನ್ನನ್ನು ನೇಮಿಸಿ, ಆ ತಕ್ಷಣವೇ ಕೆಲಸಕ್ಕೆ ಹಾಜರಾಗಿ ಎಂದರು.
ಇದನ್ನು ಓದಿದ್ದೀರಾ?: ಸಿದ್ದಲಿಂಗಯ್ಯ ರಚಿಸಿದ ತುರ್ತುಪರಿಸ್ಥಿತಿ ಸಂದರ್ಭದ ಕವಿತೆಗಳು ಇಂದಿಗೂ ಪ್ರಸ್ತುತ: ಅರದೇಶಹಳ್ಳಿ ವೆಂಕಟೇಶ್
ಆನಂತರ ನನಗೆ ತಿಳಿಯಿತು, ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ ಎಂದು. ಕೇಂದ್ರ ಸರಕಾರದ ವಿರುದ್ಧವಿರುವ ರಾಜಕೀಯ ನಾಯಕರಿಗೆ ಸುಳಿವು ನೀಡದೆ, ಬಂಧಿಸುವ ಸಿಕ್ರೆಟ್ ಕೆಲಸವಾಗಿತ್ತು. ಅದೇ ಸಮಯಕ್ಕೆ ಸರಿಯಾಗಿ ದೆಹಲಿಯ ರಾಜಕೀಯ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾಣಿ, ಎಸ್.ಎನ್.ಮಿಶ್ರಾ ಇನ್ನು ಮುಂತಾದವರು ಬೆಂಗಳೂರಿನಲ್ಲಿದ್ದರು. ಅವರು ಉಳಿದುಕೊಂಡಿರುವ ಸ್ಥಳ ಕಂಡುಕೊಂಡ ನಂತರ, ಯಾರ ಗಮನಕ್ಕೂ ಬಾರದ ಹಾಗೆ ವಾರೆಂಟ್ ಹಿಡಿದು ಹೋಗಿ ಅವರನ್ನು ಬಂಧಿಸಿದ್ದಾಯಿತು. ಜೈಲಿನಲ್ಲಿಟ್ಟಿದ್ದೂ ಆಯಿತು.
ಆಗ ದೇವರಾಜ ಅರಸು ಮತ್ತೆ ಬಂದರು. ‘ಅವರು ರಾಜಕೀಯ ಖೈದಿಗಳು. ನಮ್ಮ ಅತಿಥಿಗಳು. ಅವರನ್ನು ಚೆನ್ನಾಗಿ ನೋಡಿಕೊಳ್ಳಿ. ನಮ್ಮನ್ನು ಹೇಗೆ ನೋಡ್ಕೋತೀರೋ ಹಾಗೆ ಅವರನ್ನು ನೋಡ್ಕೋಬೇಕು’ ಎಂದು ತಾಕೀತು ಮಾಡಿದರು. ದ್ವೇಷಾಸೂಯೆಗಳೇ ಇಲ್ಲದ ನಿರ್ಮಲ ಮನಸ್ಸಿನ ಅಪ್ಪಟ ಮನುಷ್ಯ ಅರಸು.
(ಪೊಲೀಸ್ ಅಧಿಕಾರಿ)
ಈ ಎಲ್ಲ ಕಾರಣಕ್ಕಾಗಿಯೇ ತುರ್ತುಪರಿಸ್ಥಿತಿಯನ್ನು ಹಿಂತೆಗೆದುಕೊಂಡ ನಂತರ ದೇಶದಲ್ಲಿ ನಡೆದ ಚುನಾವಣೆಗಳಲ್ಲಿ ಇತರ ರಾಜ್ಯಗಳಲ್ಲಿ ಇಂದಿರಾ ಗಾಂಧಿ ಮತ್ತು ಅವರ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲುಂಡರೂ ಕರ್ನಾಟಕದಲ್ಲಿ ಪ್ರಚಂಡ ಬಹುಮತದಿಂದ ಗೆದ್ದು ಬಂದಿತ್ತು. ದೇವರಾಜ ಅರಸು ಮತ್ತೊಮ್ಮೆ ಮುಖ್ಯಮಂತ್ರಿಯಾಗಿದ್ದರು.
ದೇವರಾಜ ಅರಸರ ಅಂದಿನ ಈ ನಡೆ ಮತ್ತು ನುಡಿ ಇಂದಿನ ಕಾಂಗ್ರೆಸ್ ನಾಯಕರಿಗೆ ಗೊತ್ತಿದೆಯೇ, ಅದನ್ನು ಅವರು ಅಳವಡಿಸಿಕೊಂಡಿದ್ದಾರೆಯೇ, ಪಾಲಿಸುತ್ತಿದ್ದಾರೆಯೇ?

ಲೇಖಕ, ಪತ್ರಕರ್ತ