ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂತಿಡಲಾಗಿದೆ ಎಂದು ದೂರು ಕೊಟ್ಟಿದ್ದ ಸಾಕ್ಷಿ ದೂರುದಾರನನ್ನು ಎಸ್‌ಐಟಿ ಬಂಧಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, “ದೂರು ಕೊಟ್ಟಿದ್ದವನ ಹಿನ್ನೆಲೆ ತಿಳಿದುಕೊಂಡಿದ್ದಿದ್ದರೆ ಸರ್ಕಾರದ ದುಡ್ಡಾದರೂ ಉಳಿಯುತ್ತಿತ್ತು. ಆದರೆ ಸರ್ಕಾರ ಇದಕ್ಕೆ ಆಸ್ಪದ ಕೊಡಲಿಲ್ಲ. ಇಂದು ಸತ್ಯ ಹೊರ ಬಂದಿದೆ. ತನಿಖೆ ನೆಪದಲ್ಲಿ ರಾಜ್ಯದ ಜನರ ತೆರಿಗೆ ಹಣ ಪೋಲು ಮಾಡಲಾಗಿದೆ” ಎಂದು ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ, “ಧರ್ಮಸ್ಥಳ ಕುರಿತಾಗಿ ಎಸ್ಐಟಿ ತನಿಖೆಯನ್ನು ನಾವು ಸ್ವಾಗತಿಸಿದ್ದೆವು. ಆದರೆ ದೂರುದಾರನ ಹಿನ್ನೆಲೆ ಮತ್ತು ದೂರಿನ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ಆಗ್ರಹಿಸಿದ್ದೆವು. ಆದರೆ ಸರ್ಕಾರ ಇದಕ್ಕೆ ಆಸ್ಪದ ಕೊಡಲಿಲ್ಲ. ಇಂದು ಸತ್ಯ ಹೊರ ಬಂದಿದೆ, ತನಿಖೆ ನೆಪದಲ್ಲಿ ರಾಜ್ಯದ ಜನರ ತೆರಿಗೆ ಹಣ ಪೋಲು ಮಾಡಲಾಗಿದೆ. ಧರ್ಮಸ್ಥಳ ಕ್ಷೇತ್ರಕ್ಕೆ ಅಪಚಾರ ಎಸಗಲಾಗಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಯಲ್ಲಿ ಕ್ಷಮೆಯಾಚಿಸಬೇಕು” ಎಂದು ಆಗ್ರಹಿಸಿದ್ದಾರೆ.
“ಧರ್ಮಸ್ಥಳದ ವಿಚಾರ ಆರಂಭವಾದಾಗಿನಿಂದ ಇದರಲ್ಲಿ ಷಡ್ಯಂತ್ರ ಇದೆ ಎಂದು ಮೊದಲೇ ಹೇಳಿದ್ದೆವು. ಬರೀ ಬುರುಡೆಯನ್ನೇ ಬಿಟ್ಟಿದ್ದಾರೆ. ಆದರೆ ರಾಜ್ಯದ ಜನರು ನೋವನ್ನು ಅನುಭವಿಸಿದರು. ಧರ್ಮಸ್ಥಳದ ಬಗ್ಗೆ ಇದ್ದಂತಹ ಭಕ್ತಿ ಭಾವನೆ ಹಾಳು ಮಾಡಿದರು. ಎಸ್ಐಟಿ ರಚನೆ ಮಾಡುವಂತೆ ಸಿಎಂಗೆ ನಿತ್ಯ ಸಾವಿರಾರು ಪತ್ರಗಳು ಬರುತ್ತಿದ್ದವು. ಆದರೆ ಇವರು ಮೊದಲು ಎಸ್ಐಟಿ ಮಾಡಿದ್ದೇ ತಪ್ಪು. ದೂರು ಕೊಟ್ಟವನು ಏನು ಅಂತ ಮೊದಲೇ ತಿಳಿಯಬೇಕಿತ್ತು. ಮಾಸ್ಕ್ಮ್ಯಾನ್ನ ಹೆಂಡತಿಯೇ ಅವನ ಬಗ್ಗೆ ಆರೋಪ ಮಾಡಿದ್ದಾಳೆ” ಎಂದು ಹೇಳಿದ್ದಾರೆ.
“ಇಷ್ಟೊಂದು ಪೊಲೀಸ್ ಅಧಿಕಾರಿಗಳು ತಮ್ಮ ದಿನನಿತ್ಯದ ಕೆಲಸ ಬಿಟ್ಟು ಇದರ ತನಿಖೆಗೆ ಹೋಗಿದ್ದಾರೆ. ಬೆಟ್ಟ ಅಗೆದು, ಇಲಿ ಹಿಡಿದಿದ್ದಾರೆ. ಇಂತ ತಪ್ಪನ್ನ ಯಾವ ಸರ್ಕಾರ ಕೂಡ ಮಾಡಿಲ್ಲ. ಯಾರೋ ದಾರಿಹೋಕ ಹೇಳಿದ ಅಂತೆ ಮಾಡಿದ್ದಾರೆ. ಕಾಂಗ್ರೆಸ್ನವರು ರಾಜ್ಯದ ಜನರ ಕ್ಷಮೆ ಕೇಳಬೇಕು” ಎಂದು ಆರ್ ಅಶೋಕ್ ಒತ್ತಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರಕರಣ | 10 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ಸಾಕ್ಷಿ ದೂರುದಾರ
“ಮುಸುಕುಧಾರಿ ಮನುಷ್ಯನಿಗೆ ಮನೆ ಕೊಡುತ್ತೇವೆ, ಹಣ ಕೊಡುತ್ತೇವೆ ಎಂದು ಆಸೆ ತೋರಿಸಿದ್ದಾರೆ. ಅವನನ್ನ ಈಗ ಜೈಲಿಗೆ ಕಳಿಸಿದ್ದಾರೆ. ಮುಸುಕುಧಾರಿ ಮುಖ್ಯ ಅಲ್ಲ, ಆತನ ಹಿಂದೆ ಇರುವವರನ್ನು ಪತ್ತೆ ಮಾಡಬೇಕು. ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಸರ್ಕಾರಕ್ಕೆ ಗೌರವ ಇದ್ದರೆ, ಮುಸುಕುಧಾರಿ ಹಿಂದೆ ಯಾರಿದ್ದಾರೆ ಅಂತ ಪತ್ತೆ ಹಚ್ಚಲು ಎಸ್ಐಟಿ ರಚಿಸಬೇಕು. ಆಗುವುದಿಲ್ಲ ಎಂದರೆ ಎನ್ಐಎ ತನಿಖೆಗೆ ಕೊಡಿ” ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ.

https://shorturl.fm/7smVQ