ಎರಡು ತಿಂಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕವಾಗಿಯೇ ಧಾರವಾಡ ಎಎಸ್‌ಪಿ ಅವರಿಗೆ ಅವಮಾನಿಸಿದ್ದರು. ಇದರಿಂದ ನೊಂದಿದ್ದ ಎಎಸ್‌ಪಿ ನಾರಾಯಣ ಭರಮನಿ ಅವರು ಇದೀಗ ಸ್ವಯಂ ನಿವೃತ್ತಿ ಪಡೆಯಲು ಮುಂದಾಗಿದ್ದಾರೆ.
ಭರಮನಿ ಅವರು ಸ್ವಯಂ ನಿವೃತ್ತಿ ಕೋರಿ ಸರ್ಕಾರಕ್ಕೆ ಪತ್ರ ಬರೆದ್ದಾರೆ. ಆದರೆ, ಅವರ ಪತ್ರವನ್ನು ಅಂಗೀಕರಿಸಲಾಗಿಲ್ಲ. ಹಿರಿಯ ಅಧಿಕಾರಿಗಳು ಭರಮನಿ ಅವರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಇದೇ ವರ್ಷದ ಏಪ್ರಿಲ್‌ನಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡುವ ವೇಳೆ ಬಿಜೆಪಿ ಕಾರ್ಯಕರ್ತರು ವೇದಿಕೆಯತ್ತ ನುಗ್ಗಿ, ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದರು. ಘಟನೆಯಿಂದ ಆಕ್ರೋಶಗೊಂಡ ಸಿದ್ದರಾಮಯ್ಯ, ‘ಏಯ್.. ಯಾರಿಲ್ಲಿ ಎಸ್‌ಪಿ? ಬಾರಯ್ಯ ಇಲ್ಲಿ’ ಎಂದು ವೇದಿಕೆ ಮೇಲೆ ಕರೆದು, ಧಾರವಾಡ ಎಎಸ್‍ಪಿ ನಾರಾಯಣ ಭರಮನಿ ಅವರತ್ತ ಹೊಡೆಯುವ ರೀತಿಯಲ್ಲಿ ಕೈ ಎತ್ತಿದ್ದರು.
ಸಿದ್ದರಾಮಯ್ಯ ಅವರ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಸೇವೆಯಲ್ಲಿರುವ ಅಧಿಕಾರಿಯನ್ನು ಆಳುವವರು ಅವಮಾನಿಸುವುದು, ಅವಹೇಳನ ಮಾಡುವುದು ಥರವಲ್ಲ ಎಂದು ಆಕ್ರೋಶ ವ್ಯಕ್ತವಾಗಿತ್ತು.
ಇದೆಲ್ಲದರ ನಡುವೆ, ಭರಮನಿ ಅವರು ಸ್ವಯಂ ನಿವೃತ್ತಿಗೆ ಮುಂದಾಗಿದ್ದಾರೆ. ಆದಾಗ್ಯೂ, ಸರ್ಕಾರವು ಅವರ ಮನವೊಲಿಸುವುದೇ ಕಾದು ನೋಡಬೇಕಿದೆ.