”ಇತ್ತೀಚಿನ ದಿನಗಳಲ್ಲಿ ಕನ್ನಡಕ್ಕೆ ಕಂಟಕಗಳು ಹೆಚ್ಚಾಗುತ್ತಿರುವ ವಾತಾವರಣ ಸೃಷ್ಟಿಯಾಗುತ್ತಿದೆ. ಬರಗಾಲದ ಕಾರಣದಿಂದ ಮಂಡ್ಯ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗಿತ್ತು. ಆದರೆ ಕೆಲವು ಕಿಡಿಗೇಡಿಗಳ ಮಾತುಗಳಿಂದ ಕನ್ನಡ ಸಾಹಿತ್ಯ ಪರಿಷತ್ತಿಗೆ ಕೆಟ್ಟ ಹೆಸರು ಬರುವಂತಾಗಿದೆ” ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಹೇಳಿದರು.
ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕಸಾಪ ಸಭಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
“ಬರಗಾಲದಲ್ಲೂ ಸರ್ಕಾರವು ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಿರುವುದಕ್ಕಿಂತ ಸರಳವಾಗಿ ಆಚರಿಸಬೇಕಿತ್ತು. ಆದರೆ ಸರ್ಕಾರವೂ ಕನ್ನಡ ಸಾಹಿತ್ಯ ಪರಿಷತ್ತನ್ನು ಕಡೆಗಣಿಸುತ್ತಿದೆ” ಎಂದು ಆರೋಪಿಸಿದರು.
“ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂಬಂತೆ ಕಡ್ಡಾಯ ಕನ್ನಡ ಕಾನೂನು ಸರ್ಕಾರದಿಂದ ಅಧಿಕೃತ ಜಾರಿಯಾಗಬೇಕು. ನಾನು ಹಲವು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ತಿಳಿಸಿದರೂ ಪ್ರಯೋಜನವಾಗಿಲ್ಲ. ಹಿಂದೆ ನಡೆದ ಹಾವೇರಿ ಸಾಹಿತ್ಯ ಸಮ್ಮೇಳನದ ಕುರಿತು ಕೆಲವರು ಪರಿಷತ್ತಿನ ಹೆಸರು ಕೆಡಿಸುವ ಕಾರ್ಯಕ್ಕೆ ಬಂದಿಳಿದಿದ್ದರು. ಮುಖ್ಯಮಂತ್ರಿಯವರು ಬೇರೆ ಸಾಹಿತಿಗಳನ್ನು ಭೇಟಿಮಾಡಿ ನನ್ನನ್ನು ಕಡೆಗಣಿಸಿದ್ದಾರೆ. ಇದರಿಂದ ಇಂದಿನ ಸರ್ಕಾರವು ಪರಿಷತ್ತಿನ ಬಗ್ಗೆ ತಾತ್ಸಾರ ಮತ್ತು ಪೂರ್ವಗ್ರಹ ಪೀಡಿತದಂತೆ ಕಾಣಿಸುತ್ತಿದೆ” ಎಂದರು.
“ನಾವು ಮಡಿವಂತಿಕೆಯನ್ನು ಆಚರಿಸುತ್ತಿದ್ದೆವು. ಆದರೆ ಮಡಿವಂತಿಕೆಯನ್ನು ದಾಟಿ ಕನ್ನಡದ ಪರ ನಿಲ್ಲುತ್ತೇವೆ. ಮರಾಠಿಗರು ಕನ್ನಡಿಗರ ಪರ ನಿಲ್ಲಬೇಕು. ಪರಿಷತ್ತಿಗೆ ನ್ಯಾಯಾಂಗದಲ್ಲೂ ಅನ್ಯಾಯವಾಗುತ್ತಿದೆ. ಹೀಗಾಗಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆದ್ಯತೆಯನ್ನು ನೀಡಬೇಕು. ನನಗೂ ಬಿಜೆಪಿಗೂ ಸಂಬಂಧವಿಲ್ಲ, ನಾನು ಬಿಜೆಪಿಯ ಸದಸ್ಯನೂ ಅಲ್ಲ. ನಾನು ಎಡಪಂಥೀಯನೂ ಅಲ್ಲ, ಬಲಪಂಥೀಯನೂ ಅಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಪೂರೈಕೆಯಲ್ಲಿ ಅಕ್ರಮ ಆರೋಪ; ತನಿಖೆಗೆ ಆಗ್ರಹ
“ಬಹುತೇಕ ರೈಲು ನಿಲ್ದಾಣಗಳಲ್ಲಿಯ ಪ್ರಧಾನಿ ಮೋದಿ ಕಟೌಟ್‌ಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್ ಬಿಟ್ಟರೆ ಒಂದೇ ಒಂದು ಕನ್ನಡ ಶಬ್ಧಕ್ಕೆ ಅವಕಾಶವಿಲ್ಲದಿರುವ ಪ್ರಶ್ನೆಗೆ ನಾವು ಹಿಂದಿ ಹೇರಿಕೆಯನ್ನು ಒಪ್ಪುವುದಿಲ್ಲ” ಎಂದು ಹೇಳಿದರು.
ಪತ್ರಿಕಾಗೋಷ್ಠಿ ವೇಳೆ ಧಾರವಾಡ ಜಿಲ್ಲೆ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಇದ್ದರು.