- ಸಿದ್ದರಾಮಯ್ಯ – ಶಿವಕುಮಾರ್ ಬಣಗಳ ಜಗ್ಗಾಟ ತಾರಕಕ್ಕೇರಿದೆ
- ಡಿಸೆಂಬರ್ ಅಧಿವೇಶನದೊಳಗೆ ಪ್ರತಿಪಕ್ಷ ನಾಯಕ ಆಯ್ಕೆ ಆಗಲಿದೆ
ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಹೊರಗಿಟ್ಟು ಗೃಹ ಸಚಿವ ಡಾ. ಜಿ ಪರಮೇಶ್ವರ್ ಮನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಲವು ಶಾಸಕರು ಡಿನ್ನರ್ ಮೀಟಿಂಗ್ ಮಾಡಿದ್ದು
ಅವರ ಉಪಟಳಕ್ಕೆ ಕಡಿವಾಣ ಹಾಕಲು ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದರು.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಐಟಿ ದಾಳಿಯಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಬಯಲಾಗಿದೆ. ಇದು ಲೂಟಿ ಸರ್ಕಾರ ಎಂಬುವುದು ಸಾಬೀತಾಗಿದೆ. ಡಿಕೆ ಶಿವಕುಮಾರ್ ಅವರ ಉಪಟಳಕ್ಕೆ ಕಡಿವಾಣ ಹಾಕಲು ಡಿನ್ನರ್ ಮೀಟಿಂಗ್ ಶುರುವಾಗಿದೆ. ಈ ಮೂಲಕ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಬಣಗಳ ನಡುವೆ ನಾಯಕತ್ವ ಜಗ್ಗಾಟ ತಾರಕಕ್ಕೇರಿದೆ” ಎಂದರು.
ಬರ ಪರಿಹಾರ ಕೈಗೊಳ್ಳದೇ ಕಾಂಗ್ರೆಸ್‌ನವರು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರವನ್ನು ದೂರುತ್ತಿದ್ದಾರೆ. ರಾಜ್ಯ ಸರ್ಕಾರ ಎಟಿಎಂ ಆಗಿರುವುದಕ್ಕೇ ರಾಜ್ಯಕ್ಕೆ ವರಿಷ್ಠರು ಪದೇ ಪದೇ ಭೇಟಿ ನೀಡುತ್ತಿದ್ದಾರೆ. ಎಲೆಕ್ಷನ್ ಟಾರ್ಗೆಟ್ ನೀಡಲು ವೇಣುಗೋಪಾಲ್ ಮತ್ತು ಸುರ್ಜೇವಾಲ ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಎಲ್ಲದಕ್ಕೂ ಕೇಂದ್ರದ ಕಡೆ ನೋಡುತ್ತಿದ್ದಾರೆ. ಅನಗತ್ಯವಾಗಿ ಪ್ರಧಾನಿಯವರನ್ನ ಟೀಕೆ ಮಾಡುವುದು ಸಿದ್ದರಾಮಯ್ಯನವರ ಚಾಳಿಯಾಗಿದೆ. ರಾಜಕೀಯ ಕಾರಣಕ್ಕಾಗಿ ಸಿದ್ದರಾಮಯ್ಯ ಬೆಳಗ್ಗೆ ಎದ್ದರೆ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಈ ಸುದ್ದಿ ಓದಿದ್ದೀರಾ? ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲಿ: ನಿಜಗುಣಾನಂದ ಶ್ರೀ
ಕೇದ್ರ ಸರ್ಕಾರ ಭೇಟಿಗೆ ಅವಕಾಶ ಕೊಡುತ್ತಿಲ್ಲ ಎಂಬ ಸಿದ್ದರಾಮಯ್ಯ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ದಿನ ಬೆಳಗಾದರೆ ಪ್ರಧಾನಿಗಳ ಬಗ್ಗೆ ಹಗುರವಾಗಿ ಮಾತನಾಡುವ ಸಿದ್ದರಾಮಯ್ಯ ಅವರನ್ನು ಯಾರು ಹತ್ತಿರಕ್ಕೆ ಸೇರಿಸುತ್ತಾರೆ? ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹೀಗೆ ನಡೆದುಕೊಳ್ಳಬಾರದು ಎಂದು ತಿರುಗೇಟು ನೀಡಿದರು.
ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಮತ್ತು ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಮಾತನಾಡಿ, “ಯಾರನ್ನಾದರೂ ಮಾಡಲಿ, ಆದಷ್ಟು ಬೇಗ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಆಗಬೇಕು. ಆದಷ್ಟು ಬೇಗ ವಿಪಕ್ಷ ನಾಯಕರ ಆಯ್ಕೆ ಮಾಡಿ ಅಂತ ಒತ್ತಾಯ ಮಾಡಿದ್ದೇವೆ. ಡಿಸೆಂಬರ್ ಅಧಿವೇಶನದೊಳಗೆ ನೇಮಕ ಮಾಡಿಸಲು ಪ್ರಯತ್ನ ಮಾಡುವೆ” ಎಂದು ತಿಳಿಸಿದರು.
“ಝೆಡ್ ಪ್ಲಸ್ ಭದ್ರತೆ ನನಗೆ ಬೇಡ ಅಂತ ಕೇಂದ್ರ ಗೃಹ ಸಚಿವರಿಗೆ ತಿಳಿಸಿದ್ದೇನೆ. ಈ ಹಿಂದೆ ಇದ್ದ ಭದ್ರತೆ ಕೊಡಿ ಅಂತ ಮನವಿ ಮಾಡಿದ್ದೇನೆ. ಝೆಡ್ ಪ್ಲಸ್ ಭದ್ರತೆ ಇದ್ದರೆ ಜನ ಸಾಮಾನ್ಯರು, ಮುಖಂಡರನ್ನು ಭೇಟಿ ಮಾಡಲು ಕಷ್ಟ ಆಗುತ್ತದೆ. ನಾನು ಜನರ ನಡುವೆ ಇರುವವನು. ಕೇಂದ್ರ ಗೃಹ ಇಲಾಖೆಗೆ ಆ ಭದ್ರತೆ ವಾಪಸ್ ಪಡೆಯುವಂತೆ ಮನವಿ ಮಾಡಿಕೊಂಡಿದ್ದೇನೆ” ಎಂದು ಇದೇ ವೇಳೆ ಹೇಳಿದರು.