ಮಂಡ್ಯ | ಕಾಂಗ್ರೆಸ್‌ನಲ್ಲಿ ಭಿನ್ನಮತ; ಕೆಪಿಸಿಸಿ ಕಾರ್ಯದರ್ಶಿ ಹುದ್ದೆಗೆ ರವೀಂದ್ರ ರಾಜೀನಾಮೆ

Date:

Advertisements

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಮಂಡ್ಯ ಲೋಕಸಭಾ ಕ್ಷೇತ್ರ ತಮಗೇ ಬೇಕೆಂದು ಬಿಜೆಪಿ-ಜೆಡಿಎಸ್‌ ಮೈತ್ರಿಯಲ್ಲಿ ಎರಡೂ ಪಕ್ಷಗಳು ತಿಕ್ಕಾಟ ನಡೆಸುತ್ತಿವೆ. ಮೈತ್ರಿಯೊಳಗಿನ ತಿಕ್ಕಾಟ, ಸಂಸದೆ ಸುಮಲತಾ ಮುಂದಿನ ನಡೆ ಇದೆಲ್ಲವೂ ಕಾಂಗ್ರೆಸ್‌ಗೆ ಲಾಭ ತಂದುಕೊಡಬಹುದು ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ, ಇದೀಗ, ಮಂಡ್ಯ ಜಿಲ್ಲಾ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತ ಕಾಣಿಸಿಕೊಂಡಿದೆ. ಹೀಗಾಗಿ, ಕಾಂಗ್ರೆಸ್‌ಗೂ ತಲೆನೋವು ಎದುರಾಗಿದೆ. ಭಿನ್ನಮತಗಳ ಕಾರಣದಿಂದಾಗಿ ಜಿಲ್ಲೆಯ ಕಾಂಗ್ರೆಸ್‌ ನಾಯಕ ಡಾ. ಹೆಚ್.ಎನ್ ರವೀಂದ್ರ ಅವರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಉದ್ಯಮಿ ವೆಂಕಟರಮಣೇಗೌಡ ಕಾಂಗ್ರೆಸ್ ಅಭ್ಯರ್ಥಿ ಯಾಗಲಿದ್ದಾರೆಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಸೇರಿದಂತೆ ಹಲವರು ಹೇಳುತ್ತಿದ್ದಾರೆ. ವೆಂಕಟರಮಣೇಗೌಡಗೆ ಟಿಕೆಟ್‌ ನೀಡುವುದು ಬಹುತೇಕ ಖಚಿತ ಎನ್ನಲಾಗಿದೆ. ಅವರಿಗೆ ಟಿಕೆಟ್‌ ನೀಡುವುದನ್ನು ವಿರೋಧಿಸಿರುವ ರವೀಂದ್ರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಮಂಡ್ಯದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ರವೀಂದ್ರ, “ಹತ್ತಾರು ವರ್ಷಗಳಿಂದ ಬೂತ್ ಮಟ್ಟದಿಂದ ಕಾಂಗ್ರೆಸ್ ಪಕ್ಷದ ಒಳಿತಿಗಾಗಿ ದುಡಿಯುತ್ತಿರುವ ಪಕ್ಷ ನಿಷ್ಟರಿಗೆ ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ಗೌರವ ಸಿಗುತ್ತಿಲ್ಲ. ಹಣವಿದೆ ಎಂಬ ಕಾರಣಕ್ಕೆ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೇ ಪಡೆಯದವರನ್ನು ಕರೆತಂದು ಚುನಾವಣೆ ನಿಲ್ಲಿಸುತ್ತಿದ್ಧಾರೆ. ಇಂತಹ ವ್ಯವಸ್ಥೆಯಲ್ಲಿ ನಾನು ಪಕ್ಷದಲ್ಲಿ ನಾನು ಮುಂದುವರಿಯಲು ಇಷ್ಟಪಡುವುದಿಲ್ಲ” ಎಂದಿದ್ದಾರೆ.

Advertisements

:ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೇಲುಕೋಟೆ, ಕೆ.ಆರ್.ಪೇಟೆ, ಆರ್.ಆರ್.ನಗರ ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿ ವಹಿಸಿ ನನ್ನ ಶಕ್ತಿ ಮೀರಿ ಶ್ರಮಿಸಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದೇನೆ. ಜಿಲ್ಲೆಯಲ್ಲಿ ಸ್ಥಳೀಯರು ಚುನಾವಣೆಗೆ ಸ್ಪರ್ಧಿಸುವ ಅರ್ಹತೆ ಹೊಂದಿದ್ದಾರೆ. ಆದರೂ ಹೊರಗಿನವರಿಗೆ ಮನ್ನಣೆ ನೀಡಲಾಗುತ್ತಿದೆ. ಚುನಾವಣೆಗೆ ಸ್ಪರ್ಧಿಸಲು ಹಣವೇ ಮಾನದಂಡವಾ? ಜಿಲ್ಲೆಯ ಸಾಮಾನ್ಯ ಕುಟುಂಬ ವರ್ಗದವರು ಪ್ರತಿ ವರ್ಷ ದೇವರ ಸೇವೆ ಮಾಡಿ ನೂರಾರು ಜನಕ್ಕೆ ಊಟ ಹಾಕುತ್ತಾರೆ, ಆದರೆ ಕಾಂಗ್ರೆಸ್ ನಾಯಕರು ಅನ್ನ ಹಾಕುವ ಜನರನ್ನು ದುಡ್ಡಿನಲ್ಲಿ ಅಳೆಯಲು ಮುಂದಾಗಿದ್ದಾರೆ, ದುಡ್ಡು ಕೊಡದಿದ್ದರೆ ಜಿಲ್ಲೆಯ ಜನತೆ ಮತ ಹಾಕೊಲ್ಲ ಎಂದು ಜಿಲ್ಲೆಯ ಜನರನ್ನು ಅವಮಾನಿಸಲು ಮುಂದಾಗಿದ್ದಾರೆ” ಎಂದು ಕಿಡಿಕಾರಿದರು.

“ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ಜಾತ್ಯತೀತ ಜನತಾದಳದ ಏಳು ಶಾಸಕರು, ವಿಧಾನ ಪರಿಷತ್‌ನ  ಮೂವರು ಸದಸ್ಯರುವ ಮಂಡ್ಯದಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದರು. ಆದರೆ, ಜಿಲ್ಲೆಯ ಜನತೆ ತಿರಸ್ಕಾರ ಮಾಡಿದ್ದರು. ಇದೀಗ, ಮಂಡ್ಯದ 7 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ ಶಾಸಕರಿದ್ದಾರೆ ಎಂದು ಬೀಗುತ್ತಿರುವ ಕಾಂಗ್ರೆಸ್‌ ನಾಯಕರು ಇದನ್ನು ಅರಿತುಕೊಳ್ಳಬೇಕು. ಇತಿಹಾಸದಿಂದ ಪಾಠ ಕಲಿಯಲು ಮುಂದಾಗಬೇಕು. ಇಲ್ಲದಿದ್ದರೆ ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ. ಸಾಹುಕಾರ್ ಚೆನ್ನಯ್ಯ ಮುಖ್ಯಮಂತ್ರಿ ಯಾಗುವ ಅವಕಾಶ ಬಂದಾಗ ಸೋತರು. ಎಸ್.ಎಂ ಕೃಷ್ಣ ಕೇಂದ್ರ ಕ್ಯಾಬಿನೆಟ್ ನಲ್ಲಿ ಸಚಿವರಾಗುವ ಸಂದರ್ಭ ಇತ್ತು. ಆಗಲೂ, ಜಿಲ್ಲೆಯ ಜನತೆ ಅವರಿಗೆ ಮಣ್ಣು ಮುಕ್ಕಿಸಿದರು ಎಂಬುದನ್ನು ತಿಳಿಯಬೇಕು” ಎಂದರು.

ಹುದ್ದೆಗಷ್ಟೇ ರಾಜೀನಾಮೆ ಪಕ್ಷಕ್ಕಲ್ಲ

ಕಾಂಗ್ರೆಸ್ ಪಕ್ಷದ ಹುದ್ದೆಗೆ ಮಾತ್ರ ರಾಜೀನಾಮೆ ನೀಡಿದ್ದೇನೆಯೆ ಹೊರತು ಪಕ್ಷಕ್ಕಲ್ಲ, ಪಕ್ಷವನ್ನು ತೊರೆಯುವ ಪ್ರಶ್ನೆಯೇ ಇಲ್ಲ, ಆದರೆ ಕಾಂಗ್ರೆಸ್ ಪಕ್ಷದ ಉಳಿವಿಗಾಗಿ ಹೋರಾಟ ಮುಂದುವರೆಯಲಿದೆ, ಮಂಡ್ಯ ಕಾಂಗ್ರೆಸ್ ನ ಹೆಬ್ಬಟ್ಟಿಗೆ ಗ್ಯಾಂಗ್ರಿನ್ ಬಂದಿದೆ. ಇದಕ್ಕಾಗಿ ತುರ್ತು ಆಪರೇಷನ್ ಅಗತ್ಯವಾಗಿದೆ, ಅದಕ್ಕಾಗಿ ಆಸ್ಪತ್ರೆ ಹುಡುಕಾಟದಲ್ಲಿದ್ದೇನೆ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಯಾರೊಬ್ಬರಿಗೂ ಸದಾಭಿಪ್ರಾಯ ಇಲ್ಲ, ಎಲ್ಲಾ ಅಸಮಾಧಾನಿತರ ಪ್ರತಿನಿಧಿಯಾಗಿ ನಾನು ಧ್ವನಿ ಎತ್ತಿದ್ದೇನೆ, ರಾಜಕಾರಣ ಮುಂದಿಟ್ಟು ವ್ಯಕ್ತಿಗತ ದ್ವೇಷ ಮಾಡುವ ಮನಸ್ಥಿತಿ ನಮ್ಮದಲ್ಲ, ಲೋಕಸಭಾ ಚುನಾವಣೆಯಲ್ಲಿ ಸ್ಟಾರ್ ಚಂದ್ರು, ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಿದರೆ ನಾನು ನೇರವಾಗಿ ವಿರೋಧ ಮಾಡಲಿದ್ದೇನೆ, ಇದಕ್ಕಾಗಿ ಪರ್ಯಾಯ ಹಾದಿ ಹಿಡಿಯಲಿದ್ದೇನೆ ಎಂದರು.

ಅಹಂಕಾರಕ್ಕೆ ಸೆಡ್ಡು ಹೊಡೆದು ಹೋರಾಡುತ್ತೇನೆ

ಮಂಡ್ಯ ಜಿಲ್ಲೆಯ ಜನತೆ ಪ್ರೀತಿ ವಿಶ್ವಾಸಕ್ಕೆ ಬಗ್ಗುತ್ತಾರೆ, ನಾನು ಸಹ ಪ್ರೀತಿ ವಿಶ್ವಾಸಕ್ಕೆ ತಲೆಬಾಗುತ್ತೇನೆ, ಅಹಂಕಾರಕ್ಕೆ ಸೆಡ್ಡು ಹೊಡೆದು ಹೋರಾಡುತ್ತೇನೆ,ಇದಕ್ಕೆ ಲೋಕಸಭಾ ಚುನಾವಣೆ ಜನರಿಗೆ ವೇದಿಕೆ ಆಗಬೇಕು, ಜಿಲ್ಲೆಯ ಜನರ ಒಳಿತಿಗಾಗಿ ನಾನು ಸದಾಕಾಲ ಸಿದ್ಧನಿದ್ದೇನೆ ಎಂದರು.

ಈ ಸುದ್ದಿ ಓದಿದ್ದೀರಾ?: ಆಪರೇಶನ್ ಕಮಲ‌ | ಬಿಜೆಪಿಯ ಪ್ರಭಾವಿಯೊಬ್ಬರಿಂದ ದೊಡ್ಡ ಆಫರ್: ಬಿ ಆರ್‌ ಪಾಟೀಲ್‌ ಸ್ಫೋಟಕ ಹೇಳಿಕೆ

ಮಂಡ್ಯ ಜಿಲ್ಲೆಯ ಜನ ಸ್ವಾಭಿಮಾನಿಗಳಾಗಿದ್ದು, ಹಣ ಹಾಗೂ ಅಧಿಕಾರದ ಥೈಲಿಗೆ ಮಾರು ಹೋಗುವುದಿಲ್ಲ, ಇದಕ್ಕೆ ಹಲವು ಉದಾಹರಣೆಗಳಿವೆ, 1957ರಲ್ಲಿ ಸಾಹುಕಾರ್ ಚೆನ್ನಯ್ಯ ಅವರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಸ್ಥಳೀಯರಲ್ಲ ಎಂಬ ಕಾರಣಕ್ಕೆ ಜಿ.ಎಸ್. ಬೊಮ್ಮೇಗೌಡರ ಎದುರು ಸೋಲು ಕಾಣಬೇಕಾಯಿತು. 1984ರಲ್ಲಿ ನಡೆದ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 27 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇಟಿ ಭಾರಿಸಿದಾಗ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅಂದಿನ ಪ್ರಭಾವಿ ರಾಜಕಾರಣಿ ಎಸ್.ಎಂ.ಕೃಷ್ಣ ಅವರು ಕೆ.ವಿ.ಶಂಕರಗೌಡರ ಎದುರು 1.25 ಲಕ್ಷ ಮತಗಳ ಅಂತರದಿಂದ ಪರಾಭವ ಹೊಂದಿದರು ಎಂದರು.

2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದಾಗ ಜಿಲ್ಲೆಯ 8 ವಿಧಾನಸಭೆ ಹಾಗೂ 3 ವಿಧಾನ ಪರಿಷತ್ ಸ್ಥಾನಗಳಲ್ಲಿ ಜೆಡಿಎಸ್ ಶಾಸಕರಿದ್ದು, ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಅಚ್ಚರಿ ಗೆಲುವು ಕಾಣುತ್ತಾರೆ. ಮೇಲಿನ ವಿದ್ಯಮಾನಗಳನ್ನು ಗಮನಿಸಿ ಜಿಲ್ಲೆಯ ಲೋಕಸಭಾ ಕ್ಷೇತ್ರದಲ್ಲಿ ಜನಸಾಮಾನ್ಯರ ಒಡನಾಡಿಯಾಗಿರುವ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು, ಇಲ್ಲದಿದ್ದರೆ ಪ್ರಸ್ತುತ ಬಿಂಬಿಸುತ್ತಿರುವ ಸ್ಟಾರ್ ಚಂದ್ರು ಕಣಕ್ಕಿಳಿದರೆ ನನ್ನ ವಿರೋಧ ಇದ್ದೇ ಇರುತ್ತದೆ ಎಂದು ಸ್ಪಷ್ಟಪಡಿಸಿದರು.

 

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X