ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದು ತಿಂಗಳುಗಳೇ ಕಳೆಯುತ್ತಿದ್ದರೂ ಬಿಜೆಪಿಯೊಳಗೆ ಉಂಟಾಗಿರುವ ಭಿನ್ನಮತದ ಕಿಡಿ ಇನ್ನೂ ಶಮನವಾಗುತ್ತಿರುವಂತೆ ಕಾಣುತ್ತಿಲ್ಲ. ಪಕ್ಷದ ವಿರುದ್ಧ ಮತ್ತೆ ಕಿಡಿಕಾರಿರುವ ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಮಾಜಿ ಶಾಸಕ ರೇಣುಕಾಚಾರ್ಯ, ‘ರಾಜ್ಯ ಬಿಜೆಪಿಯನ್ನು ವಿಸರ್ಜನೆ ಮಾಡಿಬಿಡಿ’ ಎಂದು ಆಕ್ರೋಶ ಹೊರಹಾಕಿದ್ದಾರೆ.
ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಕಡೆಗಣಿಸುತ್ತಿರುವ ಬಗ್ಗೆ ಆಕ್ರೋಶದ ಮಾತುಗಳನ್ನಾಡಿದ ಎಂಪಿ ರೇಣುಕಾಚಾರ್ಯ, ಕೋರ್ ಕಮಿಟಿ ಯಾಕೆ ಬೇಕು? ರಾಜ್ಯ ಬಿಜೆಪಿ ವಿಸರ್ಜನೆ ಮಾಡಿಬಿಡಿ. ಯಡಿಯೂರಪ್ಪ ಬಿಟ್ಟು ಬಿಜೆಪಿ ನಿಯಂತ್ರಣ ಮಾಡಿದರೆ ಆಗುತ್ತಾ? ನಿಮ್ಮ ನಿಯಂತ್ರಣದಲ್ಲಿ ಬಿಜೆಪಿ ಬೇಕಾ? ಯಡಿಯೂರಪ್ಪ ಅವರನ್ನು ಮುಗಿಸಿದರಲ್ವ, ಈಗ ನಾಯಕತ್ವ ಎಲ್ಲಿದೆ? ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಬಹಿರಂಗವಾಗಿಯೇ ಪಕ್ಷದ ಮುಖಂಡರ ವಿರುದ್ಧವೇ ಹರಿಹಾಯ್ದಿದ್ದಾರೆ.
ರಾಜಕಾರಣದಲ್ಲಿ ಸರ್ವಾಧಿಕಾರಿ ಧೋರಣೆ ಮಾಡಬೇಡಿ. ರಾಜ್ಯಸಭೆ, ವಿಧಾನಪರಿಷತ್ ನೇಮಕ ಆದವರು ಯಾರಿಗೋ ಮಂಡಿಯೂರಿದ್ದಾರೆ. ಹೋರಾಟ ಹಿನ್ನೆಲೆಯಿಂದ ಯಡಿಯೂರಪ್ಪ ಬಂದವರು. ನಾನು ಕೂಡ ಪಾದಯಾತ್ರೆ ಮಾಡಿ ಬಂದವನು. ರಾಜ್ಯದಲ್ಲಿ ಯಡಿಯೂರಪ್ಪ ನಿರ್ಲಕ್ಷಿಸಿದರೆ ಬಿಜೆಪಿ ಇನ್ನಷ್ಟು ನೆಲಕಚ್ಚುತ್ತದೆ. ಯಡಿಯೂರಪ್ಪ ಒಬ್ಬ ಶಿಲ್ಪಿ ಇದ್ದಂತೆ. ನಾನೊಬ್ಬ ಕಾಡುಗಲ್ಲು ರೀತಿ ಆಗಿದ್ದೆ. ನನ್ನನ್ನು ಪರಿವರ್ತನೆ ಮಾಡಿದವರು ಯಡಿಯೂರಪ್ಪ. ಇಲ್ಲವೆಂದರೆ ಬೀಡಿ ಸೇದುತ್ತ, ಎಣ್ಣೆ ಹೊಡ್ಕೊಂಡು ಇರುತ್ತಿದ್ದೆ ಎಂದು ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.