ಆದಾಯ ಮೀರಿದ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ವಿರುದ್ಧ 2019ರಲ್ಲಿ ಸಿಬಿಐ ತನಿಖೆಗೆ ಬಿಎಸ್ ಯಡಿಯೂರಪ್ಪ ನೇತೃತ್ವದ ಅಂದಿನ ಬಿಜೆಪಿ ಸರ್ಕಾರ ನೀಡಿದ್ದ ಆದೇಶವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಾಪಸ್ ಪಡೆದಿರುವುದಕ್ಕೆ ವಿಪಕ್ಷಗಳು ಕಿಡಿಕಾರಿದೆ.
ಈ ಬಗ್ಗೆ ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ತೀರ್ಮಾನ ಅಕ್ರಮ. ಇದರ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇನೆ’ ಎಂದು ತಿಳಿಸಿದ್ದಾರೆ.
Advocate General (AG) Shashikiran Shetty was D K Shivakumar’s personal counsel defending him in various Corruption cases. Now, Mr.Shashikiran as the AG has recommended to the Karnataka cabinet to withdraw CBI consent to investigate DKS in the disproportionate assets case. This is… pic.twitter.com/8ywPW3x2jX
— Basanagouda R Patil (Yatnal) (@BasanagoudaBJP) November 24, 2023
‘ಈಗಾಗಲೇ ಶೇ.90ರಷ್ಟು ಸಿಬಿಐ ತನಿಖೆ ಆಗಿದೆ. ಅವತ್ತಿನ ಕ್ಯಾಬಿನೆಟ್‌ನಲ್ಲಿದ್ದ ಮುಖ್ಯಸ್ಥರಿಗೆ ಮನಸ್ಸು ಇರಲಿಲ್ಲ. ಆದರೂ ನಮ್ಮ ಪಕ್ಷದ ಹಾಗೂ ಕೇಂದ್ರ ಸರ್ಕಾರದ ಒತ್ತಾಯದ ಮೇರೆಗೆ ಸಿಬಿಐ ತನಿಖೆಗೆ ಕೊಡಲು ನಿರ್ಣಯವಾಗಿತ್ತು. ಅದಾದ ಮೇಲೆ, ಜನಪ್ರತಿನಿಧಿ ನ್ಯಾಯಾಲಯದಲ್ಲಿ ಸಂಪೂರ್ಣವಾಗಿ ವಜಾಗೊಳಿಸಲಾಯಿತು. ಆ ಬಳಿಕ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟಿಗೂ ಹೋಯ್ತು. ಅಂತಿಮವಾಗಿ ತಡೆ ಆದೇಶ ತೆರವಾದ ಬಳಿಕ ಸಿಬಿಐ ತನಿಖೆ ಕೂಡ ಚುರುಕಾಗಿದೆ. ಈ ಮಧ್ಯೆ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದ ತೀರ್ಮಾನ ಅಕ್ರಮ’ ಎಂದು ಕಿಡಿಕಾರಿದರು.
ಇದನ್ನು ಓದಿದ್ದೀರಾ? ಡಿಕೆಶಿ ಪ್ರಕರಣ ವಾಪಸ್ | ಎಫ್‌ಐಆರ್ ಇಲ್ಲದೆಯೇ ಸಿಬಿಐಗೆ ವಹಿಸಿದ್ದ ಬಿಜೆಪಿ: ದಾಖಲೆ ತೋರಿದ ಪ್ರಿಯಾಂಕ್ ಖರ್ಗೆ
‘ಈಗಿನ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ವಕೀಲರಾಗಿ ಅವರ ಹಲವು ಭ್ರಷ್ಟಾಚಾರದ ಪ್ರಕರಣವನ್ನು ಕೈಗೆತ್ತುಕೊಂಡು ವಾದ ಮಂಡಿಸಿದ್ದರು. ಸರ್ಕಾರದ ಪ್ರಭಾವಿ ರಾಜಕಾರಣಿಯ ಖಾಸಗಿ ವಕೀಲರು ಅಡ್ವೋಕೇಟ್ ಜನರಲ್ ಆಗಿ ಡಿ.ಕೆ.ಶಿವಕುಮಾರ್ ಮೇಲೆ ನಡೆಯುತ್ತಿದ್ದ ಸಿಬಿಐ ತನಿಖೆಗೆ ಸರ್ಕಾರದ ಅನುಮತಿ ಹಿಂಪಡೆಯಬೇಕೆಂದು ಸಂಪುಟಕ್ಕೆ ಶಿಫಾರಸು ಮಾಡಿರಬಹುದು’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದೂರಿದರು.
“ಒಂದು ವೇಳೆ ಸರ್ಕಾರ ಕ್ಯಾಬಿನೆಟ್ ತೀರ್ಮಾನವನ್ನು ವಾಪಸ್ ಪಡೆಯದಿದ್ದರೆ ನಾನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇನೆ. ಭ್ರಷ್ಟಾಚಾರ ಪ್ರಕರಣದಲ್ಲಿ ಯಾರೇ ಆರೋಪಿ ಇರಲಿ, ಅವರಿಗೆ ಕಠಿಣವಾದ ಶಿಕ್ಷೆ ಆಗಬೇಕು. ನಿಮ್ಮ ಸರ್ಕಾರವಿದೆ ಅಂದ ಮಾತ್ರಕ್ಕೆ ಭ್ರಷ್ಟಾಚಾರ ಪ್ರಕರಣವನ್ನು ಬೇಕಾಬಿಟ್ಟಿಯಾಗಿ ಹಿಂಪಡೆಯುವ ಅಧಿಕಾರ ಸರ್ಕಾರಕ್ಕೆ ಇಲ್ಲ. ಡಿಕೆ ಶಿವಕುಮಾರ್ ಪ್ರಕರಣದ ಎಲ್ಲ ಬೆಳವಣಿಗೆಯನ್ನು ಗಮನಿಸಿಕೊಂಡು, ನ್ಯಾಯವಾದಿಗಳ ಸಲಹೆ ಪಡೆದುಕೊಂಡು, ಸರ್ಕಾರದ ನಡೆಯನ್ನೂ ಕೂಡ ಗಮನಿಸಿಕೊಂಡು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುತ್ತೇನೆ” ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.