ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ತನಿಖೆಗೆ ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆದಿರುವ ಕಾಂಗ್ರೆಸ್ ಸರ್ಕಾರದ ಆದೇಶಕ್ಕೆ ಆಕ್ಷೇಪಿಸಿ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಸಲ್ಲಿಸಿರುವ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠವು, “ಉಭಯ ಪಕ್ಷಕಾರರ ವಾದ ಆಲಿಸಿದ್ದು, ಅಡ್ವೊಕೇಟ್ ಜನರಲ್ ವಾದವನ್ನು ಆಲಿಸಲಾಗಿದೆ. ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಅವರ ಮುಂದೆ ಮಂಡಿಸಬೇಕು. ಅವರು ತಮ್ಮ ಇಚ್ಛೆಯಂತೆ ಪೀಠ ರಚಿಸಬಹುದು. ಪ್ರತಿವಾದಿಗಳಿಗೆ ನೋಟಿಸ್‌ಗೆ ಆದೇಶಿಸಲಾಗಿದೆ” ಎಂದು ತಿಳಿಸಿದರು.
ಅಲ್ಲದೇ ಇದೇ ವೇಳೆ, “ಪ್ರಕರಣದ ಬಗ್ಗೆ ವಿಸ್ತೃತ ಪೀಠ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವವರೆಗೆ ಲೋಕಾಯುಕ್ತ ಪೊಲೀಸರು ಅಥವಾ ಸಿಬಿಐ ಯಾವುದೇ ಕ್ರಮಕ್ಕೆ ಮುಂದಾಗುವಂತಿಲ್ಲ” ಎಂದು ನಿರ್ದೇಶನ ನೀಡಿದೆ.
ಇದನ್ನು ಓದಿದ್ದೀರಾ? ದ್ವೇಷ ಭಾಷಣ | ಕಲ್ಕಡ್ಕ ಪ್ರಭಾಕರ್ ಭಟ್ ವಿರುದ್ದ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆ: ಜ.10ಕ್ಕೆ ವಿಚಾರಣೆ ಮುಂದೂಡಿಕೆ
ಸಿಬಿಐ ವಕೀಲ ಪ್ರಸನ್ನಕುಮಾರ್ ಅವರು, “ಡಿಕೆಶಿ ಪ್ರಕರಣವನ್ನು ಲೋಕಾಯುಕ್ತ ಪೊಲೀಸರು ತನಿಖೆ ನಡೆಸುವುದಕ್ಕೆ ತಡೆಯೊಡ್ಡಬೇಕು” ಎಂದು ಕೋರಿದರು. ಆದರೆ ನ್ಯಾಯಾಲಯವು ಇದನ್ನು ಪರಿಗಣಿಸಿಲ್ಲ. ಬದಲಾಗಿ, “ವಿಸ್ತೃತ ಪೀಠಕ್ಕೆ ಪ್ರಕರಣವನ್ನು ರೆಫರ್ ಮಾಡುತ್ತೇನೆ” ಎಂದು ತಿಳಿಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಿದರು. ಯತ್ನಾಳ್ ಪರವಾಗಿ ವಕೀಲ ವೆಂಕಟೇಶ ದಳವಾಯಿ ವಾದಿಸಿದ್ದರು.
ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.22 ರಂದು ಲೋಕಾಯುಕ್ತ ತನಿಖೆಗೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದೇಶ ಪ್ರತಿ ಪಡೆದು ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಸಿಬಿಐ ಹೈಕೋರ್ಟ್ ಮೆಟ್ಟಿಲೇರಿತ್ತು.