ಡಿ ಕೆ ಶಿವಕುಮಾರ್ ಸಿಎಂ ಆಗ್ತಾರೆ, ಧಾರವಾಡ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ಮಂತ್ರಿಯಾಗ್ತಾರೆ… ಹೀಗಂತ ಭವಿಷ್ಯ ನುಡಿದವರು ಯಾವುದೇ ರಾಜಕೀಯ ಧುರೀಣರಲ್ಲ, ಬದಲಾಗಿ ಬೆಳಗಾವಿಯ ಜೈನ ಮುನಿಯೋರ್ವರು.
ಬೆಳಗಾವಿಯ ಹಲಗಾದ ಜೈನ್ ಬಸದಿಯ ಪ.ಪೂ ಬಾಲಾಚಾರ್ಯ ಶ್ರೀ 108 ಸಿದ್ದಸೇನ ಮುನಿ ಮಹಾರಾಜರು ಈ ರೀತಿಯ ಹೇಳಿಕೆ ನೀಡಿದ್ದಾರೆ.
ಶಾಸಕ ವಿನಯ್ ಕುಲಕರ್ಣಿ ಅವರು ಬೆಳಗಾವಿ ತಾಲೂಕಿನ ಹಲಗಾದ ಗ್ರಾಮದಲ್ಲಿರುವ ಜೈನ ಬಸದಿಗೆ ಭೇಟಿ ನೀಡಿದ್ದು, ಈ ವೇಳೆ ಜೈನ ಮುನಿ ಸಿದ್ದಸೇನ ಮಹಾರಾಜರು, ‘ನೀವು ಸಚಿವರಾಗುತ್ತೀರಿ, ಧಾರವಾಡ ಜಿಲ್ಲಾ ಉಸ್ತುವಾರಿ ಆಗುತ್ತೀರಿ’ ಎಂದು ಹೇಳಿ ಆಶೀರ್ವಾದ ಮಾಡಿದ್ದಾರೆ.
ಶಾಸಕ ವಿನಯ್ ಕುಲಕರ್ಣಿಗೆ ಆಶೀರ್ವಾದ ಮಾಡಿದ ಬಳಿಕ ಜೈನ ಮುನಿಗಳು, ‘ಡಿಕೆ ಶಿವಕುಮಾರ್ ಅವರಿಗೂ ಆಶೀರ್ವಾದ ಕೊಟ್ಟಿದ್ದೇನೆ. ಅವರೂ ಕೂಡ ಮುಖ್ಯಮಂತ್ರಿಯಾಗುತ್ತಾರೆ. ಡಿಕೆ ಶಿವಕುಮಾರ್ ಅವರು ಒಂದು ವರ್ಷ ಮೊದಲು ಇಲ್ಲಿಗೆ ಬಂದಿದ್ದರು. ಬರುವ ಸಮಯದಲ್ಲಿ ಸಿಎಂ ಆಗುತ್ತೀರಿ ಎಂದು ಆಶೀರ್ವಾದ ಕೊಟ್ಟಿದ್ದೆ. ಏನೋ ಒಂದು ಅವಕಾಶ ಇತ್ತು. ಆದರೆ, ಅದು ನಡೆದಿಲ್ಲ. ಈಗಲೂ ನನಗೆ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ’ ಎಂದು ಹೇಳಿಕೆ ನೀಡಿದ್ದಾರೆ.
ವಿನಯ್ ಕುಲಕರ್ಣಿಯವರು ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಎಲ್ಲ ಸಮುದಾಯಕ್ಕೆ ಬೇಕಾದ ವ್ಯಕ್ತಿ. ಈಗ ಶಾಸಕರಿದ್ದೀರಿ, ಬರುವ ದಿನಗಳಲ್ಲಿ ಸಚಿವರಾಗಿ ಎಂದು ಆಶೀರ್ವಾದ ಕೊಟ್ಟಿದ್ದೇನೆ.
ನಾಳೆ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ. ಒಂದಲ್ಲ ನೂರು ಪರ್ಸಂಟ್ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಆಶೀರ್ವಾದ ಕೊಟ್ಟಿದ್ದೇನೆ. ಇದರ ಅರ್ಥ ಸಿದ್ದರಾಮಯ್ಯನವರನ್ನು ಕುರ್ಚಿ ಕೆಳಗೆ ಇಳಿಸಿ ಅಂತೇನಲ್ಲ. ಸಿದ್ದರಾಮಯ್ಯನವರಿಗೂ ನನ್ನ ಆಶೀರ್ವಾದ ಇದೆ. 2013ರಲ್ಲಿ ಸಿದ್ದರಾಮಯ್ಯನವರಿಗೆ ನಾನು ಆಶೀರ್ವಾದ ಮಾಡಿದ್ದೆ. ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಇಬ್ಬರೂ ಕೂಡಿ ತಾವೇ ಅಡ್ಜಸ್ಟ್‌ಮೆಂಟ್ ಮಾಡಿ, ಅರ್ಧ ಅರ್ಧ ಅಧಿಕಾರ ಮಾಡುತ್ತಾರೆ ಎಂದು ತಿಳಿಸಿದರು.
ಸಿಎಂ ಕುರ್ಚಿಗೆ ಸಂಬಂಧಿಸಿ ಮಾಧ್ಯಮ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಜನರು ದಿನಕ್ಕೊಂದು ಅಭಿಪ್ರಾಯ ವ್ಯಕ್ತವಾಗುತ್ತಿದ್ದಾರೆ. ಈ ನಡುವೆಯೇ ಜೈನ ಮುನಿಗಳು, ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿಕೆ ನೀಡಿದ್ದು, ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.