ತಮಿಳು ಚಿತ್ರಗಳನ್ನು ಹಿಂದಿ ಭಾಷೆಗೆ ಡಬ್ ಮಾಡಲು ತಮಿಳುನಾಡು ಸರ್ಕಾರ, ರಾಜಕಾರಣಿಗಳು ಅವಕಾಶ ನೀಡಿದ್ದಾರೆ. ಆದರೆ, ಹಿಂದಿ ಹೇರಿಕೆಯನ್ನು ಮಾತ್ರ ವಿರೋಧಿಸುತ್ತಿದ್ದಾರೆ. ಹಿಂದಿಯಿಂದ ಅವರಿಗೆ ಹಣ ಬೇಕು. ಆದರೆ, ಆ ಭಾಷೆ ಬೇಡ. ಇದು ಯಾವ ತರ್ಕ ಎಂದು ನಟ, ರಾಜಕಾರಣಿ, ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಪ್ರಶ್ನಿಸಿದ್ದಾರೆ.
ಅವರ ಪ್ರಶ್ನೆಗೆ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪ್ರತಿಕ್ರಿಯಿಸಿದ್ದು, “ತಮಿಳುನಾಡು ಹಿಂದಿ ಅಥವಾ ಯಾವುದೇ ಇತರ ಭಾಷೆಯನ್ನು ಯಾವುದೇ ವ್ಯಕ್ತಿ ಕಲಿಯುವುದನ್ನು ಎಂದಿಗೂ ವಿರೋಧಿಸಿಲ್ಲ. ಆದರೆ, ನಮ್ಮ ರಾಜ್ಯ ಮತ್ತು ಜನರ ಮೇಲೆ ಹಿಂದಿ ಅಥವಾ ಯಾವುದೇ ಭಾಷೆಯನ್ನು ಒತ್ತಾಯಪೂರ್ವಕವಾಗಿ ಹೇರುವುದನ್ನು ಸಹಿಸುವುದಿಲ್ಲ” ಎಂದು ಹೇಳಿದೆ.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ‘ಜನಸೇನಾ ಪಕ್ಷ’ದ ಸಂಸ್ಥಾಪಕ ಪವನ್ ಕಲ್ಯಾಣ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, “ತಮಿಳು ಸಿನಿಮಾಗಳನ್ನು ನಿರಂತರವಾಗಿ ಹಿಂದಿಗೆ ಡಬ್ ಮಾಡಲಾಗುತ್ತಿದೆ. ಆದರೆ, ತಮಿಳುನಾಡು ನಾಯಕರು ಹಿಂದಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ತರ್ಕ ನನಗೆ ಅರ್ಥವಾಗುತ್ತಿಲ್ಲ. ಹಣಕಾಸು ಲಾಭಕ್ಕಾಗಿ ತಮಿಳು ಚಿತ್ರಗಳನ್ನು ಹಿಂದಿಗೆ ಡಬ್ ಮಾಡಲು ಅವಕಾಶ ನೀಡುವ ತಮಿಳುನಾಡಿನ ನಾಯಕರಿಗೆ ಬಾಲಿವುಡ್‌ನಿಂದ ಆರ್ಥಿಕ ಲಾಭ ಬೇಕು. ಆದರೆ, ಹಿಂದಿ ಭಾಷೆ ಬೇಡ” ಎಂದಿದ್ದಾರೆ.
ಪವನ್ ಕಲ್ಯಾಣ್ ಹೇಳಿಕೆಯನ್ನು ಡಿಎಂಕೆ ವಕ್ತಾರ ಡಾ. ಸೈಯದ್ ಹಫೀಜುಲ್ಲಾ ತೀಕ್ಷ್ಣವಾಗಿ ಅಲ್ಲಗಳೆದಿದ್ದಾರೆ. “ಪವನ್ ಕಲ್ಯಾಣ್ ಅವರಿಗೆ ಭಾಷಾ ನೀತಿಗಳ ಕುರಿತು ಸರಿಯಾದ ತಿಳಿವಳಿಕೆ ಇಲ್ಲ. ಭಾಷೆ ಬಗ್ಗೆ ತಮಿಳುನಾಡಿನ ನಿಲುವು ಅವರಿಗೆ ಗೊತ್ತಿಲ್ಲ. ನಾವು ಯಾವುದೇ ಭಾಷೆಯ ಕಲಿಕೆಯನ್ನು ವಿರೋಧಿಸುವುದಿಲ್ಲ. ಆದರೆ, ನಮ್ಮ ಮೇಲೆ ಒತ್ತಾಯವಾಗಿ ಯಾವುದೇ ಭಾಷೆಯನ್ನು ಹೇರುವುದನ್ನು ಸಹಿಸುವುದಿಲ್ಲ” ಎಂದು ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಮುಸ್ಲಿಂ ಸಮುದಾಯದ ವಿರುದ್ಧ ಮುಂದುವರೆದ ಬಿಜೆಪಿ ನಾಯಕರ ದ್ವೇಷ: ನಿರ್ಲಕ್ಷ್ಯವೊಂದೆ ಪರಿಹಾರ
“ಭಾಷಾ ನೀತಿಯನ್ನು ವ್ಯಾವಹಾರಿಕ ನಿರ್ಧಾರಗಳೊಂದಿಗೆ (ಸಿನಿಮಾ ಡಬ್ಬಿಂಗ್) ಸಮೀಕರಿಸಲು ಸಾಧ್ಯವಿಲ್ಲ. ಜನರು ಹಿಂದಿ ಕಲಿಯಲು ಬಯಸಿದರೆ, ಅವರು ಕಲಿಯುತ್ತಾರೆ. ಅದನ್ನು ನಾವು ಸ್ವಾಗತಿಸುತ್ತೇವೆ. ಆದಾಗ್ಯೂ, ಕೇಂದ್ರ ಸರ್ಕಾರವು ಎನ್‌ಇಪಿ ಅಥವಾ ಪಿಎಂಶ್ರೀ ಶಾಲೆ ರೀತಿಯ ನೀತಿಗಳ ಮೂಲಕ ಹಿಂದಿ ಕಲಿಕೆಯನ್ನು ಕಡ್ಡಾಯಗೊಳಿಸಿದರೆ, ಅದು ಹೇರಿಕೆಯಾಗುತ್ತದೆ. ಸಮಸ್ಯೆಯನ್ನು ಹುಟ್ಟುಹಾಕುತ್ತದೆ” ಎಂದು ಹಫೀಜುಲ್ಲಾ ಹೇಳಿದ್ದಾರೆ.
ಹಿರಿಯ ಡಿಎಂಕೆ ನಾಯಕ ಟಿಕೆಎಸ್ ಎಳಂಗೋವನ್ ಕೂಡ ಪ್ರತಿಕ್ರಿಯಿಸಿದ್ದು, “ನಾವು 1938ರಿಂದ ಹಿಂದಿಯನ್ನು ವಿರೋಧಿಸುತ್ತಿದ್ದೇವೆ. ಶಿಕ್ಷಣ ತಜ್ಞರ ಸಲಹೆ ಮತ್ತು ಅಭಿಪ್ರಾಯಗಳೊಂದಿಗೆ ತಮಿಳುನಾಡು ಯಾವಾಗಲೂ ದ್ವಿಭಾಷಾ ಸೂತ್ರವನ್ನು ಅನುಸರಿಸುತ್ತದೆ. ಅದನ್ನು ನಾವು ರಾಜ್ಯ ವಿಧಾನಸಭೆಯಲ್ಲಿ ಕಾನೂನು ಅಂಗೀಕರಿಸಿದ್ದೇವೆ. ಪವನ್ ಕಲ್ಯಾಣ್ ಹುಟ್ಟುವ ಮೊದಲೇ 1968ರಲ್ಲಿ ದ್ವಿಭಾಷಾ ಸೂತ್ರದ ಕಾನೂನನ್ನು ತಮಿಳುನಾಡು ಅಂಗೀಕರಿಸಿತ್ತು. ಅವರಿಗೆ ತಮಿಳುನಾಡಿನ ರಾಜಕೀಯ ತಿಳಿದಿಲ್ಲ. ಜನರಿಗೆ ತರಬೇತಿ ನೀಡಲು ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದು ಅತ್ಯುತ್ತಮ ಮಾರ್ಗವೆಂದು ಭಾವಿಸಿದ್ದೇವೆ. ಶಿಕ್ಷಣದಲ್ಲಿ ಹಿಂದಿ ಏರಿಕೆಯನ್ನು ವಿರೋಧಿಸುತ್ತೇವೆ. ಪವನ್ ಅವರು ಬಿಜೆಪಿ ಸರ್ಕಾರದಿಂದ ಏನನ್ನೋ ಪಡೆಯುವ ಅಪೇಕ್ಷೆಯಿಂದ ಹೀಗೆ ಮಾತನಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.