ಕರ್ನಾಟಕದಲ್ಲಿ ಕಾಂಗ್ರೆಸ್ ಜಾರಿಗೆ ತಂದ ಐದು ಗ್ಯಾರಂಟಿಗಳು ಸದ್ಯ ದೇಶದಾದ್ಯಂತ ವಿವಿಧ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಯಲ್ಲಿ ಕಂಡೂ ಕಾಣದಂತೆ ತೂರಿಕೊಳ್ಳುತ್ತಿವೆ. ಅದರಲ್ಲೂ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕರ್ನಾಟಕದ ಗ್ಯಾರಂಟಿಯ ಪ್ರೇರಣೆ ಹೆಚ್ಚಾಗಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಐದು ಗ್ಯಾರಂಟಿಗಳನ್ನು, ಆರಂಭದಿಂದಲೂ ಟೀಕಿಸುತ್ತಾ ಬಂದಿರುವ ಬಿಜೆಪಿಗರು ಜಾರ್ಖಂಡ್‌ನ ಚುನಾವಣಾ ಪ್ರಣಾಳಿಕೆಯಲ್ಲಿ ಇದೇ ಗ್ಯಾರಂಟಿಗಳ ನಕಲು ಮಾಡಿ 25 ಭರವಸೆಗಳನ್ನು ನೀಡಿರುವುದು ವಿಪರ್ಯಾಸಕರ ಸಂಗತಿ.
ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಕಾಂಗ್ರೆಸ್ ನೀಡಿದ ಭರವಸೆಯಂತೆ ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಮತ್ತು ಯುವನಿಧಿ ಎಂಬ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಸಂಪೂರ್ಣವಾಗಿ ಅಲ್ಲದಿದ್ದರೂ ಈ ಯೋಜನೆಯ ಲಾಭ ಬಹುತೇಕರಿಗೆ ತಲುಪುತ್ತಿದೆ. ಆದರೆ ಮಹಿಳೆಯರಿಗೆ ಮಾಸಿಕ ಎರಡು ಸಾವಿರ ರೂಪಾಯಿ, 200 ಯುನಿಟ್‌ವರೆಗೆ ಉಚಿತ ವಿದ್ಯುತ್, ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ, ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆ ನೀಡುವಂತಹ ಈ ಯೋಜನೆಗಳನ್ನು ಅಭಿವೃದ್ಧಿಗೆ ಮಾರಕ, ಖಜಾನೆ ಖಾಲಿ, ದಿವಾಳಿ ಸರ್ಕಾರ, ಸಂಬಳಕ್ಕೆ ಕಾಸಿಲ್ಲ ಎಂದು ಬಿಜೆಪಿಗರು ಆರಂಭದಿಂದಲೂ ಟೀಕಿಸುತ್ತಲೇ ಬಂದರು.
ಅಷ್ಟೆ ಅಲ್ಲ, ಪ್ರಧಾನಿ ನರೇಂದ್ರ ಮೋದಿಯವರು ಸಂದರ್ಭ ಸಿಕ್ಕಾಗಲೆಲ್ಲ ಕರ್ನಾಟಕದ ಗ್ಯಾರಂಟಿಗಳ ಬಗ್ಗೆ ಕಟುವಾದ ಶಬ್ದ ಪ್ರಯೋಗಿಸಿ ಲೇವಡಿ ಮಾಡಿದರು. ಫ್ರೀ ಕೊಟ್ಟರೆ ಜನ ಸೋಮಾರಿಗಳಾಗುತ್ತಾರೆ ಎಂದು ಮೂಗು ಮುರಿದರು. ಮುಂದುವರೆದು, “ಭಾರತದ ಆರ್ಥಿಕತೆಯನ್ನು ಮುಳುಗಿಸುವ ಗ್ಯಾರಂಟಿಯನ್ನು ಕಾಂಗ್ರೆಸ್ ನೀಡುತ್ತಿದೆ” ಎಂದು ಸಂಸತ್ತಿನ ಕಲಾಪದಲ್ಲಿ ಭಾಷಣ ಮಾಡುತ್ತಾ ಹೇಳಿದ್ದರು.
ಇದನ್ನು ಓದಿದ್ದೀರಾ? ಉಡುಪಿ | ಗ್ಯಾರಂಟಿ ಯೋಜನೆ ದೇಶಕ್ಕೆ ಮಾದರಿ; ಶಕ್ತಿ ಯೋಜನೆ ನಿಲ್ಲಲ್ಲ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿಯವರಂತೂ, ಮಾಧ್ಯಮಗಳ ಸುದ್ದಿಗಾರರು ಎದುರಾದಾಗಲೆಲ್ಲ, ‘ರಾಜ್ಯದಲ್ಲಿ ಗ್ಯಾರಂಟಿಗಳಿಂದಾಗಿ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ’ ಎಂದು ಹೇಳುವುದನ್ನು ಮರೆಯುತ್ತಿರಲಿಲ್ಲ. ಅದಷ್ಟೇ ಅಲ್ಲ, ‘ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಗ್ಯಾರಂಟಿಗಳನ್ನು ಸಂಪೂರ್ಣವಾಗಿ ಈಡೇರಿಸಲಾಗಿಲ್ಲ, ಇತ್ತ ಆರ್ಥಿಕತೆಯೂ ಹದಗೆಟ್ಟಿದೆ’ ಎಂದು ಪ್ರಧಾನಿ ಮೋದಿ ನಾಲ್ಕು ದಿನಗಳ ಹಿಂದೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದಾದ ಎರಡು ಮೂರು ದಿನದಲ್ಲೇ ಬಿಜೆಪಿ, ಕಾಂಗ್ರೆಸ್ಸಿನ ಯಾವ ಗ್ಯಾರಂಟಿಗಳನ್ನು ಟೀಕಿಸಿ ಲೇವಡಿ ಮಾಡಿತ್ತೋ ಅದೇ ಗ್ಯಾರಂಟಿ ಯೋಜನೆಗಳನ್ನು ಜಾರ್ಖಂಡ್‌ನಲ್ಲಿ ಘೋಷಿಸಿದೆ.
ಜಾರ್ಖಂಡ್‌ನಲ್ಲಿ ಬಿಜೆಪಿಯ 25 ಭರವಸೆಗಳು
ವಿದ್ಯುತ್ ಬೆಲೆ ಏರಿಕೆ, ಅರ್ಜಿ ಹಾಕುವಾಗ ತಾಂತ್ರಿಕ ಸಮಸ್ಯೆ, ಮದ್ಯದ ಬೆಲೆ ಏರಿಕೆ, ಒಂದು ವರ್ಷದವರೆಗೆ ಬಿಪಿಎಲ್ ಕಾರ್ಡ್‌ಗೆ ಅರ್ಜಿ ಹಾಕಲು ಅವಕಾಶ ನೀಡದಿರುವುದು- ಹೀಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಗ್ಯಾರಂಟಿ ಒಂದು ಕೈಯಲ್ಲಿ ಪಡೆದು ಇನ್ನೊಂದು ಕೈಯಲ್ಲಿ ಕಸಿಯುವಂತೆಯೂ ಭಾಸವಾಗುತ್ತದೆ. ಆದರೆ ಉಚಿತ ಪ್ರಯಾಣದಂತಹ ಯೋಜನೆಗಳು ಸರ್ಕಾರಿ ಬಸ್‌ಗಳು ಇರುವೆಡೆ ಮಹಿಳೆಯರಿಗೆ ಉಪಯೋಗ ಆಗಿರುವುದನ್ನು ನಾವು ಬದಿಗೊತ್ತುವಂತಿಲ್ಲ.
ಆದರೆ ಈ ಎಲ್ಲಾ ಯೋಜನೆಗಳು ಅಭಿವೃದ್ಧಿಗೆ ಕಡಿವಾಣ ಹಾಕುತ್ತಿದೆ ಎಂದು ನಿರಂತರವಾಗಿ ಟೀಕಿಸುತ್ತಾ ಬಂದಿರುವ ಬಿಜೆಪಿ ಇತರೆ ರಾಜ್ಯಗಳಲ್ಲಿ ಕಾಂಗ್ರೆಸ್‌ನ ಗ್ಯಾರಂಟಿಗಳಿಗೇ ಜೋತು ಬಿದ್ದಿದೆ. ಐದು ಗ್ಯಾರಂಟಿಗಳನ್ನು ಟೀಕಿಸಿದ್ದ ಬಿಜೆಪಿ ಜಾರ್ಖಂಡ್‌ನಲ್ಲಿ 25 ಗ್ಯಾರಂಟಿಗಳನ್ನು ತನ್ನ ಪ್ರಣಾಳಿಕೆಯಲ್ಲಿ ನೀಡಿದೆ. ಅದಕ್ಕೆ ಎಂದಿನಂತೆ ಸಂಕಲ್ಪ ಪತ್ರ ಎಂದು ಹೆಸರು ಕೊಟ್ಟಿದೆ.
ಖಾಲಿಯಿರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದು, ಐದು ಲಕ್ಷ ಯುವಕರಿಗೆ ಉದ್ಯೋಗ ನೀಡುವುದು, ಮಹಿಳೆಯರಿಗೆ ಮಾಸಿಕ 2100 ರೂಪಾಯಿ ನೀಡುವುದು, ಗ್ರಾಮ ಪಂಚಾಯತ್ ಮುಖ್ಯಸ್ಥರಿಗೆ ಮಾಸಿಕ ಐದು ಸಾವಿರ ಭತ್ಯೆ, ಎಲ್ಲಾ ಬಡ ಕುಟುಂಬಕ್ಕೆ ಐದು ವರ್ಷದೊಳಗೆ ನಿವೇಶನ, 500 ರೂಪಾಯಿ ಗ್ಯಾಸ್ ಸಿಲಿಂಡರ್, ದೀಪಾವಳಿ ಮತ್ತು ರಕ್ಷಾ ಬಂಧನಕ್ಕೆ ಎರಡು ಉಚಿತ ಸಿಲಿಂಡರ್, ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ದ ಸಿಬಿಐ ತನಿಖೆ- ಹೀಗೆ ಒಟ್ಟು 25 ಭರವಸೆಗಳನ್ನು ಬಿಜೆಪಿ ನೀಡಿದೆ. ಇವುಗಳನ್ನು ಬಿಟ್ಟು ಪ್ರಧಾನಿ ನರೇಂದ್ರ ಮೋದಿ ಇಂದು (ನವೆಂಬರ್ 5) ಜಾರ್ಖಂಡ್‌ನಲ್ಲಿ ಸಾರ್ವಜನಿಕ ಭಾಷಣವನ್ನು ಮಾಡುತ್ತಾ ಮತ್ತೊಂದು ಗ್ಯಾರಂಟಿ ಘೋಷಿಸಿದ್ದಾರೆ. ನಿರುದ್ಯೋಗಿಗಳಿಗೆ ಮಾಸಿಕ ಎರಡು ಸಾವಿರ ರೂಪಾಯಿ ಭತ್ಯೆ ನೀಡಲಾಗುವುದು ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ.
ಇದನ್ನು ಓದಿದ್ದೀರಾ? ಮರುಪರಿಶೀಲನೆ ಎನ್ನುವುದು ನಾಟಕ, ಗ್ಯಾರಂಟಿ ಯೋಜನೆ ನಿಲ್ಲಿಸಲು ಈ ತಂತ್ರ: ಕುಮಾರಸ್ವಾಮಿ ಕಿಡಿ
ಇಲ್ಲಿ ಮಹಿಳೆಯರಿಗೆ ಮಾಸಿಕವಾಗಿ ಧನಸಹಾಯ ನೀಡುವುದು, ನಿರುದ್ಯೋಗಿಗಳಿಗೆ ಭತ್ಯೆ ನೀಡುವುದು ಸೇರಿದಂತೆ ಕೆಲವು ಗ್ಯಾರಂಟಿಗಳು ಕರ್ನಾಟಕದಲ್ಲಿ ಬಿಜೆಪಿ ಟೀಕಿಸುತ್ತಾ ಬಂದಿರುವ ಗ್ಯಾರಂಟಿಗಳು. ಆದರೆ ಈಗ ಜಾರ್ಖಂಡ್‌ನಲ್ಲಿ ಅದೇ ಗ್ಯಾರಂಟಿಯನ್ನು ತನ್ನ ಸಂಕಲ್ಪ ಪತ್ರದಲ್ಲಿ ಸೇರಿಸಿಕೊಂಡಿದೆ.
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವುದಕ್ಕೂ ಮುನ್ನ ನೀಡಿದ ಭರವಸೆಗಳನ್ನು ಈವರೆಗೂ ಈಡೇರಿಸಿಲ್ಲ. ಅಚ್ಛೇ ದಿನ ಬರಲೇ ಇಲ್ಲ. ಆದರೂ ಈಗ ಜಾರ್ಖಂಡ್‌ನಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿ ಗ್ಯಾರಂಟಿಗಳ ಮೊರೆ ಹೋಗಿದೆ. ಬಿಜೆಪಿ ಹೇಳುವಂತೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳು ರಾಜ್ಯದ ಅಭಿವೃದ್ಧಿಯನ್ನು ಕುಗ್ಗಿಸಿರುವುದಾದರೆ ಬಿಜೆಪಿಯ ಈ 25 ಭರವಸೆಗಳು ಜಾರ್ಖಂಡ್ ಆರ್ಥಿಕತೆಗಳು ಯಾವ ಸ್ಥಿತಿಗೆ ಕೊಂಡೊಯ್ಯಬಹುದು!

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.