ಮೂರನೇ ಮೈತ್ರಿಕೂಟ ಮಹಾಯುತಿಗೂ ಹೆಚ್ಚಾಗಿ ಮಹಾ ವಿಕಾಸ್ ಅಘಾಡಿಗೆ ಹೆಚ್ಚಿನ ಏಟು ನೀಡುವ ಸಾಧ್ಯತೆಯಿದೆ ಎನ್ನುತ್ತಾರೆ ರಾಜಕೀಯ ತಜ್ಞರು. ದೇವೇಗೌಡ ಪ್ರಧಾನಿಯಾದಾಗ ಜೆಡಿಎಸ್‌ಗೆ ಸಂಖ್ಯಾಬಲವಿತ್ತೆ? ಹಾಗೆಯೇ ನಾವು ಕೂಡ 'ಗೇಮ್ ಚೇಂಜರ್'ಗಳಾಗುತ್ತೇವೆ. ನಾವು ಸರ್ಕಾರವನ್ನು ರಚಿಸಬಲ್ಲೆವು ಎಂಬ ವಿಶ್ವಾಸವನ್ನು 'ಪರಿವರ್ತನ್ ಮಹಾಶಕ್ತಿ' ನಾಯಕರು ಹೊಂದಿದ್ದಾರೆ.
ಇತರೆ ರಾಜ್ಯಗಳಿಗೆ ಹೋಲಿಸಿ ನೋಡಿದರೆ ಮಹಾರಾಷ್ಟ್ರದ ರಾಜಕೀಯವೇ ಕುತೂಹಲಕಾರಿ. ಮುಖ್ಯ ಕಾರಣ ಕಳೆದ ಐದು ವರ್ಷದಲ್ಲಿ ಮಹಾರಾಷ್ಟ್ರದಲ್ಲಾದ ಬದಲಾವಣೆಗಳು. ಐದು ವರ್ಷದಲ್ಲಿ ಎರಡು ಸರ್ಕಾರ ಪತನ, ಮೂರು ಸರ್ಕಾರ ರಚನೆ ಕಂಡ ರಾಜ್ಯವದು. ಎನ್‌ಸಿಪಿ, ಶಿವಸೇನೆ ಇಬ್ಭಾಗವಾಗಿ ನಾಲ್ಕು ಪಕ್ಷಗಳು ರಚನೆಯಾಗಿದೆ. ಪಕ್ಷಗಳು ತುಂಡಾಗಿ ಅಲ್ಲಿ ಇಲ್ಲಿ ಹಂಚಿಕೆಯಾಗಿ ಕೊನೆಗೆ ಮಹಾಯುತಿ ಎಂಬ ಮೈತ್ರಿಕೂಟ ಸರ್ಕಾರ ರಚಿಸಿದರೆ ಮಹಾ ವಿಕಾಸ್ ಅಘಾಡಿ (ಎಂವಿಎ) ಎಂಬ ವಿಪಕ್ಷವಿದೆ. ಇವೆರಡಕ್ಕೂ ತಲೆ ನೋವು ಹುಟ್ಟಿಸಲು ಹೊಸ ಮೈತ್ರಿಕೂಟವೊಂದು ಈಗ ನಿರ್ಮಾಣವಾಗಿದೆ.
ಮಹಾರಾಷ್ಟ್ರದಲ್ಲಿ ಎರಡೂ ಮೈತ್ರಿಕೂಟದಿಂದ ದೂರ ಸರಿದಿರುವ ಸ್ಥಳೀಯ ಸಂಘಟನೆಗಳು, ಪಕ್ಷಗಳೆಲ್ಲವೂ ಸೇರಿ ‘ಪರಿವರ್ತನ್ ಮಹಾಶಕ್ತಿ’ ಎಂಬ ಮೈತ್ರಿಕೂಟವನ್ನು ನಿರ್ಮಿಸಿದೆ. ಈ ಮೈತ್ರಿಕೂಟವು ನವೆಂಬರ್ 20ರಂದು ನಡೆಯಲಿರುವ ಚುನಾವಣೆಯಲ್ಲಿ 121 ಕ್ಷೇತ್ರಗಳಲ್ಲಿ ತಮ್ಮ ಮಿತ್ರ ಪಕ್ಷಗಳ ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ಘೋಷಿಸಿದೆ.
ಬಿಜೆಪಿ-ಶಿವಸೇನೆ-ಎನ್‌ಸಿಪಿ ಮೈತ್ರಿಯ ಮಹಾಯುತಿ ಮತ್ತು ಕಾಂಗ್ರೆಸ್-ಎನ್‌ಸಿಪಿ-ಶಿವಸೇನೆ ಯುಬಿಟಿ ಮೈತ್ರಿಯ ಮಹಾ ವಿಕಾಸ್ ಅಘಾಡಿ ಎರಡೂ ಕೂಡ ಜಾತಿ ಮತ್ತು ಧರ್ಮದ ಆಧಾರದಲ್ಲಿ ಮತದಾರರನ್ನು ವಿಭಜಿಸುತ್ತಿದೆ ಎಂಬುದು ಈ ‘ಮೂರನೇ ರಂಗದ’ ವಾದ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ | ಬಂಡಾಯ ಎದ್ದಿದ್ದ 40 ಮುಖಂಡರನ್ನು ಪಕ್ಷದಿಂದ ಹೊರದಬ್ಬಿದ ಬಿಜೆಪಿ
ಮಹಾರಾಷ್ಟ್ರ ಸ್ವರಾಜ್ಯ ಪಕ್ಷದ ಸಂಭಾಜಿ ರಾಜೆ ಛತ್ರಪತಿ, ಪ್ರಹಾರ್ ಜನಶಕ್ತಿ ಪಕ್ಷದ ಬಚ್ಚು ಕಡು, ಸ್ವಾಭಿಮಾನಿ ಶೆಟ್ಕಾರಿ ಸಂಘಟನೆಯ ರಾಜು ಶೆಟ್ಟಿ, ಜೈ ವಿದರ್ಭ ಪಕ್ಷದ ಅರುಣ್ ಖೇದರ್ ಮತ್ತು ಸ್ವತಂತ್ರ ಭಾರತ ಪಕ್ಷದ ಮಾಜಿ ಶಾಸಕ ವಾಮನರಾವ್ ಛತಪ್ ಸೇರಿಕೊಂಡು ಮಹಾರಾಷ್ಟ್ರದ ಈ ಮೂರನೇ ಮೈತ್ರಿಕೂಟವನ್ನು ಮುನ್ನಡೆಸುತ್ತಿದ್ದಾರೆ. ದಲಿತ ಪ್ಯಾಂಥರ್, ವಿದರ್ಭ ವಿಕಾಸ್ ಪಕ್ಷ ಸೇರಿದಂತೆ ಸುಮಾರು 40 ಸಣ್ಣ ಸಂಘಟನೆಗಳು ಪರಿವರ್ತನ್ ಮಹಾಶಕ್ತಿಗೆ ಸಾಥ್ ನೀಡಿದೆ.
ಶಿವಸೇನೆ vs ಶಿವಸೇನೆ; ಮೊದಲ ವಿಧಾನಸಭೆ ಚುನಾವಣೆ
ಶಿವಸೇನೆ ಮತ್ತು ಎನ್‌ಸಿಪಿ ವಿಭಜನೆಯಾದ ಪರಸ್ಪರ ಕಾದಾಡುವ ಮೊದಲ ಕಣ ಇದಾಗಿದೆ. ಈ ನಡುವೆ ಮೂರನೇ ಮೈತ್ರಿಕೂಟ ಸ್ಥಳೀಯವಾಗಿ ಜನರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡುತ್ತಿದೆ. ರಾಜ್ಯ ರಾಜಕಾರಣದಲ್ಲಿ ಪಕ್ಷಪಾತ ನೋಡಿ ಬೇಸತ್ತ ಜನರು ಪರಿವರ್ತನ ಮಹಾಶಕ್ತಿಯೆಡೆ ಮುಖ ಮಾಡುವ ಸಾಧ್ಯತೆಯಿದೆ.
ಶಿವಸೇನೆಯಾಗಲಿ ಅಥವಾ ಎನ್‌ಸಿಪಿಯಾಗಲಿ ಇಬ್ಭಾಗವಾದ ಬಳಿಕ ಇದೇ ಮೊದಲ ಬಾರಿಗೆ ಪ್ರತ್ಯೇಕವಾಗಿ ವಿಧಾನಸಭೆ ಚುನಾವಣೆಯನ್ನು ಎದುರಿಸುತ್ತಿದೆ. ಉಭಯ ಪಕ್ಷಗಳಿಗೂ ತಮ್ಮ ಗುರುತನ್ನು ಪರಿಚಯಿಸುವುದೇ ದೊಡ್ಡ ಸವಾಲು. ಇವೆಲ್ಲವುದರ ನಡುವೆ ಮೂರನೇ ರಂಗವೊಂದು ತಲೆ ಎತ್ತಿ ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಂದು ಮಹತ್ತರ ಆಟಕ್ಕೆ ಸಾಕ್ಷಿಯಾಗಲು ಅಣಿಯಾಗಿದೆ.
ಮನೋಜ್ ಜಾರಂಗೆಯನ್ನು ಸೆಳೆಯುವ ತಂತ್ರ
ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯದ ಮೀಸಲಾತಿಗೆ ಆಗ್ರಹಿಸಿ ನಿರಂತರವಾಗಿ ಹೋರಾಟ, ಉಪವಾಸ ಸತ್ಯಾಗ್ರಹಗಳನ್ನು ಮಾಡುತ್ತಾ ಬಂದಿರುವ ಮರಾಠ ನಾಯಕ ಮನೋಜ್ ಜಾರಂಗೆ ಪಾಟೀಲ್ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಸುಮಾರು 10ರಿಂದ 15 ಅಭ್ಯರ್ಥಿಗಳನ್ನು ಘೋಷಿಸಿದ ಮರುದಿನವೇ ತಮ್ಮ ಅಭ್ಯರ್ಥಿಗಳಲ್ಲಿ ನಾಮಪತ್ರ ವಾಪಾಸ್ ಪಡೆಯುವಂತೆ ಮನವಿ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ ಚುನಾವಣೆ | ಫೋನ್ ಕದ್ದಾಲಿಕೆ ಆರೋಪ; ಡಿಜಿಪಿ ರಶ್ಮಿ ಶುಕ್ಲಾ ವರ್ಗಾವಣೆ
ತನ್ನ ನಿರ್ಧಾರದಲ್ಲಿ ಯಾವುದೇ ಒತ್ತಡ ಇಲ್ಲ ಎಂದು ಸ್ಪಷ್ಟಪಡಿಸಿರುವ ಜಾರಂಗೆ ಯಾವುದೇ ಜಾತಿ ಬಲದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಹಿಂದೆ ಸರಿದಿರುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ಯಾವ ಅಭ್ಯರ್ಥಿಯನ್ನು ಕೂಡಾ ನಾವು ಬೆಂಬಲಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ ಈಗ ‘ಪರಿವರ್ತನ್ ಮಹಾಶಕ್ತಿ’ ಜಾರಂಗೆಯನ್ನು ತನ್ನ ಮೈತ್ರಿಕೂಟಕ್ಕೆ ಸೆಳೆಯುವ ಪ್ರಯತ್ನದಲ್ಲಿ ತೊಡಗಿದೆ. ಮರಾಠ ನಾಯಕ ಸಂಭಾಜಿರಾಜೇ ಛತ್ರಪತಿ ಅವರೀಗ ಮರಾಠ ನಾಯಕ ಜಾರಂಗೆಯನ್ನು ತನ್ನ ಮೈತ್ರಿಕೂಟಕ್ಕೆ ಆಹ್ವಾನಿಸಿದ್ದಾರೆ. ಚುನಾವಣಾ ಕಣದಿಂದ ಹಿಂದೆ ಸರಿಯುವ ಜಾರಂಗೆ ನಿರ್ಧಾರವು ತನ್ನ ಸಮುದಾಯದ ಹಿತದೃಷ್ಟಿಯಿಂದ ಮಾಡಲಾಗಿದೆ ಎಂಬ ನಂಬಿಕೆಯನ್ನು ಸಂಭಾಜಿ ವ್ಯಕ್ತಪಡಿಸಿದ್ದಾರೆ.
ಜತೆಗೆ “ಜಾರಂಗೆ ಯಾವುದೆ ರಾಜಕೀಯ ಒತ್ತಡಕ್ಕೆ ಒಳಗಾಗಿಲ್ಲ ಎಂದು ನಾನು ನಂಬುತ್ತೇನೆ. ಏಕೆಂದರೆ ಜಾರಂಗೆ ಯಾವಾಗಲೂ ತನ್ನ ನಂಬಿಕೆಗೆ ದೃಢವಾಗಿರುತ್ತಾನೆ” ಎಂದು ಜಾರಂಗೆಯ ಗುಣಗಾನವನ್ನೂ ಮಾಡಿದ್ದಾರೆ. ಇನ್ನು ಜಾರಂಗೆಯನ್ನು ಇತ್ತೀಚೆಗೆ ಭೇಟಿಯಾದ ಸ್ವಾಭಿಮಾನಿ ಶೆಟ್ಕಾರಿ ಸಂಘಟನೆಯ ರಾಜು ಶೆಟ್ಟಿ ಜಾರಂಗೆ ತಮ್ಮ ಮೂರನೇ ಮೈತ್ರಿಕೂಟಕ್ಕೆ ಬೆಂಬಲ ನೀಡುವ ನಂಬಿಕೆ ವ್ಯಕ್ತಪಡಿಸಿದ್ದಾರೆ.
ಈ ಮೂರನೇ ಮೈತ್ರಿಕೂಟ ಮಹಾಯುತಿಗೂ ಹೆಚ್ಚಾಗಿ ಮಹಾ ವಿಕಾಸ್ ಅಘಾಡಿಗೆ ಹೆಚ್ಚಿನ ಏಟು ನೀಡುವ ಸಾಧ್ಯತೆಯಿದೆ ಎನ್ನುತ್ತಾರೆ ರಾಜಕೀಯ ತಜ್ಞರು. ದೇವೇಗೌಡ ಪ್ರಧಾನಿಯಾದಾಗ ಜೆಡಿಎಸ್‌ಗೆ ಸಂಖ್ಯಾಬಲವಿತ್ತೆ? ಹಾಗೆಯೇ ನಾವು ಕೂಡ ‘ಗೇಮ್ ಚೇಂಜರ್’ಗಳಾಗುತ್ತೇವೆ. ನಾವು ಸರ್ಕಾರವನ್ನು ರಚಿಸಬಲ್ಲೆವು ಎಂಬ ವಿಶ್ವಾಸವನ್ನು ‘ಪರಿವರ್ತನ್ ಮಹಾಶಕ್ತಿ’ ನಾಯಕರು ಹೊಂದಿದ್ದಾರೆ. ಸದಾ ರಾಜಕೀಯ ಬದಲಾವಣೆಗೆ ಸಾಕ್ಷಿಯಾಗಿರುವ ಮಹಾರಾಷ್ಟ್ರದ ಜನತೆ ಮೂರನೇ ಮೈತ್ರಿಕೂಟದ ಕೈ ಹಿಡಿಯುತ್ತಾರಾ ಎಂಬುದು ನವೆಂಬರ್ 23ರಂದು ಬಹಿರಂಗವಾಗಲಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.