- ಪೂರ್ಣಿಮಾ ತಂದೆ ಕೃಷ್ಣಪ್ಪಗೆ ಟಿಕೆಟ್ ತಪ್ಪಿಸಿದ್ದು ನಾನೇ ಎಂದು ಒಪ್ಪಿಕೊಂಡ ಸಿಎಂ
- ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಪೂರ್ಣಿಮಾ, ಟಿ ಡಿ ಶ್ರೀನಿವಾಸ್ ಹಾಗೂ ಬೆಂಬಲಿಗರು
ಮಾಜಿ ಶಾಸಕಿ ಪೂರ್ಣಿಮಾ ಮತ್ತು ಟಿ ಡಿ ಶ್ರೀನಿವಾಸ್ ಹಾಗೂ ಕೆ.ನರಸಿಂಹನಾಯಕ್ ಅವರು ಬಿಜೆಪಿ ತೊರೆದು ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಮಾಜಿ ಶಾಸಕಿ ಪೂರ್ಣಿಮಾ ಅವರನ್ನು ಬರಮಾಡಿಕೊಂಡು ಮಾತನಾಡಿದ ಡಿಕೆ ಶಿವಕುಮಾರ್, “ರಾಜಕಾರಣದಲ್ಲಿ ಎ ಕೃಷ್ಣಪ್ಪ ಅವರು ನಾವೆಲ್ಲ ಒಟ್ಟಿಗೆ ಸೇರಿ ರಾಜಕಾರಣ ಮಾಡಿದವರು. ವೀರಪ್ಪ ಮೊಯಿಲಿ ಅವರು ಸದಾ ಅವರನ್ನು ಪ್ರೋತ್ಸಾಹಿಸಿದರು. ಕೆಲವು ಕಾರಣಗಳಿಂದ ಅವರ ಕೊಂಡಿ ಕಳಚಿತ್ತು. ಆ ಕೊಂಡಿ ಈಗ ಮಗಳ ಮೂಲಕ ಬೆಸುಗೆ ಆಗಿದೆ” ಎಂದು ತಿಳಿಸಿದರು.
“ಪೂರ್ಣಿಮಾ ಜೊತೆ ಗೊಲ್ಲ-ಯಾದವ ಸಂಘದ ಎಲ್ಲ ಪದಾಧಿಕಾರಿಗಳು ಸುಮಾರು ನಾಲ್ಕೈದು ಸಾವಿರ ಕಾರ್ಯಕರ್ತರು ಕಾಂಗ್ರೆಸ್ ಸೇರಿದ್ದಾರೆ. ಪ್ರತಿ ಬೂತ್‌ನಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆ ಕಾರ್ಯಕ್ರಮ ಆಯೋಜಿಸಿ. ಯಾರು ಸೇರುತ್ತಾರೋ ಒಂದು ಫೋಟೋ ಕಳುಹಿಸಿ, ಅವರಿಗೆ ಸದಸ್ಯತ್ವ ನೀಡಿ” ಎಂದು ಸೂಚಿಸಿದರು.
“ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ರಾಜ್ಯದ ಜನತೆ ನಮಗೆ ಆಶೀರ್ವಾದ ಮಾಡಿದ್ದಾರೆ. ಐದು ಗ್ಯಾರಂಟಿ ಜಾರಿಗೆ ತಂದು ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಎಲ್ಲ ವರ್ಗದವರಿಗೂ ಜಾರಿ ಮಾಡಿದ್ದೇವೆ” ಎಂದು ಡಿಕೆ ಶಿವಕುಮಾರ್ ಹೇಳಿದರು.
ಟಿಕೆಟ್ ತಪ್ಪಿಸಿದ್ದು ನಾನೇ: ಸಿಎಂ
ಸಿಎಂ ಸಿದ್ದರಾಮಯ್ಯ ಮಾತನಾಡಿ, “2013ರಲ್ಲಿ ಕೃಷ್ಣಪ್ಪ ಅವರಿಗೆ ಟಿಕೆಟ್ ತಪ್ಪಿಸಲು ನಾನೇ ಕಾರಣ. ಭೈರತಿ ಬಸವರಾಜ್‌ಗೆ ಟಿಕೆಟ್ ನೀಡಿದೆ. ಆದ್ರೆ ಅವರು ಕಾಂಗ್ರೆಸ್‌ಗೆ ದ್ರೋಹ ಮಾಡಿದರು. ಆದ್ರೂ ಪೂರ್ಣಿಮಾ ಮತ್ತು ಶ್ರೀನಿವಾಸ್ ಅವರು ನನ್ನ ಮೇಲೆ ಕೋಪ ಮಾಡಿಕೊಳ್ಳಲಿಲ್ಲ. ಸಾಮಾಜಿಕ ನ್ಯಾಯದಿಂದ ವಂಚಿತರಾದವರ ಪರವಾಗಿ ಕೆಲಸ ಮಾಡುವ ಈ ಕುಟುಂಬ ಇಂದು ಮತ್ತೆ ಕಾಂಗ್ರೆಸ್‌ಗೆ ಬಂದಿರುವುದು ಸಂತಸ ತಂದಿದೆ” ಎಂದು ಹೇಳಿದರು.
“ಸಂವಿಧಾನದ ಆಶಯಗಳನ್ನು ಉಳಿಸುವಲ್ಲಿ ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ದೇಶದಲ್ಲಿ ಯಾವಾಗಲೂ ಅಸಮಾನತೆ ಜೀವಂತವಾಗಿರಬೇಕು ಎಂದು ಬಿಜೆಪಿ ಬಯಸುತ್ತದೆ. ಹೀಗಾಗಿ ಇದನ್ನು ತಿರಸ್ಕರಿಸಿ ಪೂರ್ಣಿಮಾ ಮತ್ತು ಶ್ರೀನಿವಾಸ್ ಅವರು ಕಾಂಗ್ರೆಸ್ ಸೇರಿದ್ದಾರೆ. ಶ್ರೀನಿವಾಸ್ ಅವರು ಜನಪರವಾಗಿ ಯೋಚಿಸುವ ನಾಯಕರು. ಅವರು ಇಷ್ಟು ದಿನ ಒಲ್ಲದ ಮನಸ್ಸಿನಿಂದ ಬಿಜೆಪಿಯಲ್ಲಿ ಇದ್ದರು” ಎಂದರು.
“ಇನ್ಮುಂದೆ ಶ್ರೀನಿವಾಸ್‌ಗಾಗಿ ಮತ್ತು ಪೂರ್ಣಿಮಾಗೆ ರಾಜಕೀಯವಾಗಿ ಅನ್ಯಾಯವಾಗಲು ಬಿಡಲ್ಲ. ಅವರನ್ನು ನಂಬಿಕೊಂಡು ಬಂದ ಎಲ್ಲರಿಗೂ ಕಾಂಗ್ರೆಸ್ ರಕ್ಷಣೆ ನೀಡಲಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ” ಎಂದು ಭರವಸೆ ನೀಡಿದರು.
ಪೂರ್ಣಿಮಾ ಮಾತನಾಡಿ, “ಕೆಲವು ಕಾರಣಾಂತರಗಳಿಂದ ನಮ್ಮ ಕುಟುಂಬ ಕಾಂಗ್ರೆಸ್‌ನಿಂದ ದೂರವಾಗಿತ್ತು. ನಮ್ಮ ದೇಹದಲ್ಲಿ ಹರಿಯುತ್ತಿರುವುದು ಕಾಂಗ್ರೆಸ್ ಸಿದ್ಧಾಂತದ ರಕ್ತ. ಹೀಗಾಗಿ ಮತ್ತೆ ನಮ್ಮನ್ನು ಕಾಂಗ್ರೆಸ್‌ಗೆ ಸೆಳೆದುಕೊಂಡು ಬಂದಿದೆ. ಪ್ರಾಮಾಣಿಕವಾಗಿ ಕಾಂಗ್ರೆಸ್‌ನಲ್ಲಿ ಕೆಲಸ ಮಾಡುವೆ” ಎಂದು ತಿಳಿಸಿದರು.
ಈ ವೇಳೆ ಸಚಿವ ಡಿ.ಸುಧಾಕರ್, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಶಾಸಕ ಟಿ ಬಿ ಜಯಚಂದ್ರ ಸೇರಿದಂತೆ ಇತರರು ಇದ್ದರು.