ಮಹಾರಾಷ್ಟ್ರದಲ್ಲಿ ಕಳೆದ ಒಂದು ವರ್ಷದಿಂದ ನಿರಂತರವಾಗಿ ಆಗುತ್ತಿರುವ ರಾಜಕೀಯ ಬದಲಾವಣೆಗಳನ್ನು ಕಟುವಾಗಿ ಟೀಕಿಸಿದ ನಟ ನಾನಾ ಪಾಟೇಕರ್, ಇದೇ ಸಂದರ್ಭದಲ್ಲಿ ರೈತರಿಗೆ ಕರೆ ಕೊಟ್ಟಿದ್ದಾರೆ. “ನೀವು ಅಚ್ಚೇ ದಿನ್‌ಗಾಗಿ (ಉತ್ತಮ ದಿನಕ್ಕಾಗಿ) ಕಾಯಬಾರದು, ನಿಮಗೆ ಬೇಕಾದ ಸರ್ಕಾರವನ್ನು ನೀವೇ ಆಯ್ಕೆ ಮಾಡಿಕೊಳ್ಳಬೇಕು” ಎಂದು ಹೇಳಿದ್ದಾರೆ.
ನಾಸಿಕ್‌ನಲ್ಲಿ ನಡೆದ ‘ಶೇಟ್ಕರಿ ಸಮ್ಮೇಳನ’ದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ನಟ ನಾನಾ ಪಾಟೇಕರ್, “ರೈತರು ಎಂದಿಗೂ ಇಂದಲ್ಲ ನಾಳೆ ಒಳ್ಳೆಯ ದಿನ ಬರುತ್ತದೆ ಎಂದು ಕಾದು ಕೂರಬಾರದು. ನಾವಾಗಿಯೇ ನಮಗೆ ಉತ್ತಮ ದಿನಗಳನ್ನು ತಂದುಕೊಳ್ಳಬೇಕು. ಮುಂದಿನ ಬಾರಿ ಯಾವ ಸರ್ಕಾರ ಬರಬೇಕು ಎಂಬುದನ್ನು ನೀವು ತೀರ್ಮಾನ ಮಾಡಬೇಕು,” ಎಂದು ಹೇಳಿದರು.
“ನಮ್ಮ ದೇಶದಲ್ಲಿ ಚಿನ್ನದ ಬೆಲೆ ಹೆಚ್ಚಳವಾಗುತ್ತಿರುವಾಗ ಅಕ್ಕಿಯ ಬೆಂಬಲ ಬೆಲೆ ಮಾತ್ರ ಯಾಕೆ ಹೆಚ್ಚಾಗುವುದಿಲ್ಲ? ರೈತರು ಇಡೀ ದೇಶಕ್ಕೆ ಆಹಾರ ನೀಡುವವರು. ಆದರೆ, ರೈತರ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರಕ್ಕೆ ಸಮಯವೇ ಇಲ್ಲ. ಇಂತಹ ಸರ್ಕಾರದಿಂದ ರೈತರು ಏನೂ ಕೇಳಬಾರದು. ನೀವೇ ಮುಂದಿನ ಸರ್ಕಾರ ಆಯ್ಕೆ ಮಾಡಬೇಕು,” ಎಂದರು.
“ನಾವು ಇಂದಿನ ಸ್ಥಿತಿಯನ್ನು ಬದಲಾವಣೆ ಮಾಡಲು ಜೊತೆಯಾಗಬೇಕು. ನಾವೆಂದಿಗೂ ಆತ್ಮಹತ್ಯೆಯ ದಾರಿಯನ್ನು ತುಳಿಯಬಾರದು,” ಎಂದು ರೈತರಿಗೆ ಹೇಳಿದರು.
ರಾಜಕೀಯ ಪಕ್ಷಗಳ ವಿರುದ್ಧ ಹರಿಹಾಯ್ದ ಪಾಟೇಕರ್, “ರಾಜಕೀಯ ನಾಯಕರೇ ನಮ್ಮ ಯುವಜನರಿಗೆ ಯಾವ ನಿದರ್ಶನವನ್ನು ನೀವು ನೀಡುತ್ತಿದ್ದೀರಿ,” ಎಂದು ಪ್ರಶ್ನಿಸಿದರು. ”ನಾನು ಎಂದಿಗೂ ಕಟುವಾಗಿ, ನೇರವಾಗಿ ಟೀಕೆ ಮಾಡುವ ವ್ಯಕ್ತಿ. ಆದ್ದರಿಂದಾಗಿ ನಾನು ರಾಜಕೀಯಕ್ಕೆ ಸೇರಿಕೊಳ್ಳಲು ಸಾಧ್ಯವಿಲ್ಲ” ಎಂದು ಈ ವೇಳೆ ತಿಳಿಸಿದರು.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.