“ಸರ್ಕಾರ ರೈತರಿಗೆ ನೀಡುವ ಬರ ಪರಿಹಾರ ಹಣ ದುರ್ಬಳಕೆಯಾಗುವುದನ್ನು ತಡೆಯುವ ಸಲುವಾಗಿ ಈ ವರ್ಷಪರಿಹಾರದ ಹಣವನ್ನು ‘ಫ್ರೂಟ್ಸ್’ ತಂತ್ರಾಂಶದ ಮೂಲಕ ನೇರವಾಗಿ ರೈತರಿಗೆ ತಲುಪಿಸಲು ಸರ್ಕಾರ ನಿರ್ಧರಿಸಿದೆ” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ರಾಯಚೂರಿನಲ್ಲಿ ಮಂಗಳವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, “ಸರ್ಕಾರ ಈ ಹಿಂದೆ ರೈತರ ಬರ ಪರಿಹಾರ ಹಣವನ್ನು ಅಧಿಕಾರಿಗಳ ಮೂಲಕ ತಲುಪಿಸುತ್ತಿತ್ತು. ಆದರೆ, ಈ ವೇಳೆ ಸಾಕಷ್ಟು ಹಣ ದುರ್ಬಳಕೆ ಪ್ರಕರಣಗಳೂ ಕಂಡು ಬರುತ್ತಿತ್ತು. ಪರಿಹಾರದ ಹಣವೂ ಸಿಗದೆ ರೈತರು ಪರಿತಪಿಸುವ ಸ್ಥಿತಿ ಇತ್ತು. ಹೀಗಾಗಿ ಈ ಎಲ್ಲ ಅಕ್ರಮಗಳಿಗೆ ತಡೆಯೊಡ್ಡುವ ಸಲುವಾಗಿ ಫ್ರೂಟ್ಸ್ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ ಎಂದರು.
ರಾಜ್ಯಾದ್ಯಂತ ಎಲ್ಲ ರೈತರ ಒಟ್ಟು ಜಮೀನಿನ ವಿಸ್ತೀರ್ಣ ಹಾಗೂ ಬೆಳೆ ಹಾನಿ ಕುರಿತ ಮಾಹಿತಿಯನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಲಾಗಿದೆ. ಮೊದಲ ಕಂತಿನ ಪರಿಹಾರವನ್ನು ಯಾವುದೇ ತಾಂತ್ರಿಕ ದೋಷವಿಲ್ಲದೆ, ಹಣ ದುರುಪಯೋಗವಾಗದೆ ನೇರವಾಗಿ ರೈತರಿಗೆ ತಲುಪಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಇನ್ನೂ ಒಂದು ವಾರದೊಳಗೆ ರಾಜ್ಯದ 25 ಲಕ್ಷ ರೈತರು ಪರಿಹಾರ ಹಣ ಪಡೆಯಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ರೈತರ ಆರ್‌ಟಿಸಿ ಜೊತೆಗೆ ಆಧಾರ್ ಲಿಂಕ್ ಜೋಡಣೆ ನಮ್ಮ ಮುಂದಿನ ಆದ್ಯತೆಯಾಗಬೇಕು ಎಂದು ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.
Our officers have been working through the weekend and Sankranthi holiday to update our database and resolve payment issues to push first instalment of drought relief through automated direct benefit transfer.
I sat with them to understand the process and thank them for their… pic.twitter.com/TTeNvQtJBM— Krishna Byre Gowda (@krishnabgowda) January 16, 2024
ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆ ಎಂದು ಸರ್ವೆ ನಡೆಸಿ ನೀರಿನ ಸಮಸ್ಯೆ ಕಂಡುಬರುವ ಕಡೆಗಳಲ್ಲಿ ಖಾಸಗಿ ಟ್ಯಾಂಕರ್ ಮೂಲಕ ನೀರನ್ನು ಪೂರೈಸಬೇಕು. ಈಗಾಗಲೇ 59 ಖಾಸಗಿ ಬೋರ್ ವೆಲ್‌ಗಳನ್ನು ಗುರುತಿಸಲಾಗಿರುವುದು ಉತ್ತಮ ಬೆಳವಣಿಗೆ. ಅಧಿಕಾರಿಗಳು ಯಾವ ಭಾಗದಲ್ಲೂ ಸಾರ್ವಜನಿಕರು ನೀರಿನ ಸಮಸ್ಯೆ ಎದುರಿಸದಂತೆ ನೋಡಿಕೊಳ್ಳಿ. ಈ ಖರ್ಚಿಗೆ ಜಿಲ್ಲಾಧಿಕಾರಿಗಳ ಖಾತೆಯಿಂದ ಎಸ್‌ಡಿಆರ್‌ಎಫ್ ಅನುದಾನವನ್ನು ಬಳಸಿಕೊಳ್ಳಿ ಎಂದು ಸಚಿವರು ಸಲಹೆ ನೀಡಿದರು.
ಈ ವೇಳೆ ಮಾತನಾಡಿದ ಮಾನಪ್ಪ ವಜ್ಜಲ್ ಮತ್ತು ಬಸನಗೌಡ ದದ್ದಲ್ ಮಾತನಾಡಿ, “ಪ್ರತಿಯೊಂದು ಕ್ಷೇತ್ರಕ್ಕೂ ಸರ್ಕಾರ ಸ್ವಂತ ಟ್ಯಾಂಕರ್ ಖರೀದಿಸಬೇಕು. ಇದಕ್ಕೆ ಕೆಕೆಆರ್‌ಡಿಬಿ ಹಣ ಬಳಸಿಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು” ಎಂದು ಸಚಿವರಿಗೆ ಮನವಿ ಮಾಡಿದರು.
ಜನವರಿ, ಫೆಬ್ರುವರಿ ಮತ್ತು ಮಾರ್ಚ್ನಲ್ಲಿ ಜಾನುವಾರುಗಳಿಗೆ ಮೇವಿನ ಪೂರೈಕೆಗೆ ಅನುಕೂಲವಾಗುವಂತೆ ರಾಜ್ಯಾದ್ಯಂತ 7,63,000 ಮೇವಿನ ಬೀಜದ ಕಿಟ್‌ಗಳನ್ನು ವಿತರಿಸಲಾಗಿದೆ. ಈ ಕಿಟ್‌ಗಳನ್ನು ಗ್ರಾಮಪಂಚಾಯತಿ ಮಟ್ಟದಲ್ಲಿ ಪಾರದರ್ಶಕವಾಗಿ ವಿತರಿಸಬೇಕು. ಈ ಕೆಲಸಕ್ಕೆ ಹಾಲು ಉತ್ಪಾಕರ ಸಹಕಾರ ಸಂಘದ ಸಹಾಯ ಪಡೆದುಕೊಳ್ಳಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯದ ಮೇವನ್ನು ಬೇರೆಡೆ ಸಾಗಿಸದಂತೆ ನವೆಂಬರ್ 22ರಂದೇ ನಿರ್ಬಂಧ ಆದೇಶ ಹೊರಡಿಸಲಾಗಿದೆ. ನೀರು ಸರಬರಾಜು, ಮೇವು ಖರೀದಿ ಸೇರಿದಂತೆ ಬರ ನಿರ್ವಹಣೆಗಾಗಿ ಜಿಲ್ಲಾ ಹಂತದಲ್ಲಿ ಈಗಾಗಲೇ 895 ಕೋಟಿ ರೂ.ಗಳನ್ನು ಇಟ್ಟಿದ್ದೇವೆ. ಜಿಲ್ಲಾಧಿಕಾರಿಯ ಖಾತೆಯಲ್ಲೂ 35 ಕೋಟಿ ರೂ. ಹಣ ಇದೆ ಎಂದು ಅವರು ಮಾಹಿತಿ ನೀಡಿದರು.
ಇ-ಆಫೀಸ್ ಶೇ.100ರಷ್ಟು ಬಳಕೆಗೆ ತಾಕೀತು!
ಸಭೆಯ ವೇಳೆ ಇ-ಆಫೀಸ್ ಬಳಕೆಯ ಬಗ್ಗೆಯೂ ಚರ್ಚೆ ನಡೆಸಿದ ಸಚಿವರು, ಕಡ್ಡಾಯ ಇ-ಆಫೀಸ್ ಬಳಕೆಗೆ ಸೂಚಿಸಿ ಆರು ತಿಂಗಳಾಗಿದೆ. ಆದರೆ, ರಾಯಚೂರಿನ ಲಿಂಗಸಗೂರು, ಮಸ್ಕಿ ಹಾಗೂ ಸಿರವಾರ ತಾಲೂಕುಗಳಲ್ಲಿ ಈವರೆಗೆ ಇ-ಆಫೀಸ್ ಅನುಷ್ಠಾನವೇ ಆಗಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕಳೆದ ಆರು ತಿಂಗಳಿಂದ ಇ-ಆಫೀಸ್ ಗೆ ಚಾಲನೆ ನೀಡದೆ ಸಬೂಬು ಹೇಳುತ್ತಿದ್ದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಕಂದಾಯ ಸಚಿವ ಕೃಷ್ಣ ಬೈರೇಗೌಡ
ರಾಯಚೂರಿನಲ್ಲಿ ಮಂಗಳವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ @krishnabgowda @BJP4Karnataka @INCKarnataka @CMofKarnataka @DKShivakumar pic.twitter.com/NMeiIzAuJu
— eedina.com (@eedinanews) January 16, 2024
ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ಸಚಿವ ಕೃಷ್ಣ ಬೈರೇಗೌಡ ಅವರು ರಾಯಚೂರು ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ಜಿಲ್ಲಾಭವನ ಕಟ್ಟಡಕ್ಕೆ ಅಧಿಕಾರಿಗಳ ಜೊತೆ ಭೇಟಿ ನೀಡಿ ನಿರ್ಮಾಣ ಕಾರ್ಯದ ಪ್ರಗತಿಯನ್ನು ಪರಿಶೀಲಿಸಿದರು. ಮುಂದಿನ ನಾಲ್ಕು ತಿಂಗಳಲ್ಲಿ ಕಟ್ಟಡ ಕಾಮಗಾರಿ ಮುಗಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಶಾಸಕರಾದ ಮಾನಪ್ಪ ವಜ್ಜಲ್, ಬಸನಗೌಡ ದದ್ದಲ್ ಸಚಿವರಾದ ಭೋಸರಾಜು ಹಾಗೂ ಇಲಾಖೆಯ ಎಲ್ಲಾ ಅಧಿಕಾರಿಗಳೂ ಉಪಸ್ಥಿತರಿದ್ದರು.