ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಕುರಿತು ಕಾಂಗ್ರೆಸ್ ನಾಯಕ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಎತ್ತಿರುವ ಅನುಮಾನಗಳ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕು, ಈ ಆರೋಪಗಳ ಬಗ್ಗೆ ಆಯೋಗ ಉತ್ತರಿಸಬೇಕು ಎಂದು ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ವಿಧಾನಸಭಾ ಚುನಾವಣೆಗೆ ಮುನ್ನ ತಮ್ಮ ಜನ ಸುರಾಜ್ ಪಕ್ಷಕ್ಕೆ ಸಾರ್ವಜನಿಕ ಬೆಂಬಲವನ್ನು ಹೆಚ್ಚಿಸಲು ಬಿಹಾರ ಪ್ರವಾಸದಲ್ಲಿರುವ ಐಪಿಎಸಿ ಸಂಸ್ಥಾಪಕ, ಮಾಜಿ ಚುನಾವಣಾ ತಂತ್ರಜ್ಞ ಭಾನುವಾರ ಸಂಜೆ ಬೇಗುಸರಾಯ್‌ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಇದನ್ನು ಓದಿದ್ದೀರಾ? ಅಂತ್ಯಗೊಳ್ಳುತ್ತಿದೆ ಮೋದಿ-ಶಾ ‘ಬ್ರಾಂಡ್’ ರಾಜಕಾರಣ; ಅದಕ್ಕೆ ಮಹಾರಾಷ್ಟ್ರವೇ ಸಾಕ್ಷಿ
“ಈ ವಿಚಾರದಲ್ಲಿ ನಾನು ತಜ್ಞನಲ್ಲ. ಆದರೂ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಅವರು ಲಿಖಿತವಾಗಿ ಮಾಡಿರುವ ಆರೋಪಗಳಿಗೆ ಚುನಾವಣಾ ಆಯೋಗ ಪ್ರತಿಕ್ರಿಯಿಸಬೇಕು” ಎಂದು ಮಾಜಿ ಚುನಾವಣಾ ತಂತ್ರಜ್ಞ ಹೇಳಿದ್ದಾರೆ.
“ಕಾಂಗ್ರೆಸ್ ದೇಶದ ಪ್ರಮುಖ ವಿರೋಧ ಪಕ್ಷ. ರಾಹುಲ್ ಗಾಂಧಿ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ. ಆದ್ದರಿಂದ, ಚುನಾವಣಾ ಆಯೋಗ ಅವರು ಎತ್ತುವ ಯಾವುದೇ ಅನುಮಾನಗಳನ್ನು ಹೋಗಲಾಡಿಸಬೇಕು” ಎಂದು ಪ್ರಶಾಂತ್ ಕಿಶೋರ್ ತಿಳಿಸಿದ್ದಾರೆ.
ಕಳೆದ ವಾರ ರಾಷ್ಟ್ರೀಯ ಇಂಗ್ಲಿಷ್ ದಿನಪತ್ರಿಕೆಯೊಂದರಲ್ಲಿ ರಾಹುಲ್ ಗಾಂಧಿ ಒಂದು ಲೇಖನ ಬರೆದಿದ್ದರು. ಅದರಲ್ಲಿ ಅವರು ಕಳೆದ ವರ್ಷ ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭಾ ಚುನಾವಣೆಗಳು ಮುಕ್ತ ಮತ್ತು ನ್ಯಾಯಯುತವಾಗಿರಲಿಲ್ಲ ಎಂದು ಆರೋಪಿಸಿದ್ದರು.
