ಅಂತ್ಯಗೊಳ್ಳುತ್ತಿದೆ ಮೋದಿ-ಶಾ ‘ಬ್ರಾಂಡ್’ ರಾಜಕಾರಣ; ಅದಕ್ಕೆ ಮಹಾರಾಷ್ಟ್ರವೇ ಸಾಕ್ಷಿ

Date:

ನರೇಂದ್ರ ಮೋದಿ ಮತ್ತು ಅಮಿತ್ ಶಾ – ಇಬ್ಬರಿಗೂ ದಿನನಿತ್ಯ ಒಂದಲ್ಲೊಂದು ನಿರೂಪಣೆಯನ್ನು ಪ್ರತಿಪಾದಿಸುವುದು ವ್ಯಸನವಾಗಿದೆ. ಆರಂಭದಲ್ಲಿ ‘ಚಾರ್‌ ಸವ್ ಪಾರ್’ ಎಂದರು. ನಂತರದಲ್ಲಿ, ‘ಕಾಂಗ್ರೆಸ್‌ ಹಿಂದು ವಿರೋಧಿ’ ಎಂದರು. ಬಳಿಕ, ‘ನುಸುಳುಕೋರರು-ಹೆಚ್ಚು ಮಕ್ಕಳನ್ನು ಹೆರುವವರ ಪರವಾಗಿದೆ ಕಾಂಗ್ರೆಸ್‌’ ಎಂದು ಪ್ರತಿಪಾದಿಸಿದರು. ಹೀಗೆ, ನಾನಾ ರೀತಿಯ ನಿರೂಪಣೆಗಳನ್ನು ಮೋದಿ-ಶಾ ಪ್ರತಿಪಾದಿಸುತ್ತಲೇ ಇದ್ದಾರೆ.

ಇದೇ ಹೊತ್ತಿನಲ್ಲಿ, ಚುನಾವಣಾ ಆಯೋಗವು ಮತದಾರರ ಮತದಾನದ ಬಗ್ಗೆ ಮೂಲಭೂತ ಮತ್ತು ಸಂಪೂರ್ಣ ಮಾಹಿತಿಯನ್ನು ನೀಡುವುದನ್ನು ಹಠಾತ್ತನೆ ತಡೆಹಿಡಿದಿದೆ. ಚುನಾವಣಾ ಆಯೋಗವು ಯಾಕೆ ಅನಗತ್ಯವಾಗಿ ಅಂಕಿಅಂಶವನ್ನು ರಹಸ್ಯವಾಗಿ ಇರಿಸುತ್ತಿದೆ ಎಂಬ ಪ್ರಶ್ನೆಗಳು ವ್ಯಕ್ತವಾಗುತ್ತಿವೆ. ಇದಕ್ಕೆ ಉತ್ತರವಿಷ್ಟೇ, ಅಂಕಿಅಂಶವು ಕಡಿಮೆ ಮತದಾನವನ್ನು ಸೂಚಿಸಿದರೆ, ಮೋದಿಯವರು ತಮ್ಮ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದ್ದಾರೆ. 2014 ಮತ್ತು 2019ರಲ್ಲಿ ಮೋದಿ ಅಲೆಯಲ್ಲಿ ಬಿಜೆಪಿಗೆ ಮತ ಹಾಕಿದ ಮತದಾರರನ್ನು ಈ ಬಾರಿ ಆಕರ್ಷಿಸುವಲ್ಲಿ ಮೋದಿ ವಿಫಲರಾಗಿದ್ದಾರೆ ಎಂಬುದನ್ನು ಅರಗಿಸಿಕೊಳ್ಳಲು ಅಥವಾ ಎದುರಿಸಲು ಸಿದ್ದರಿಲ್ಲ, ಅಷ್ಟೇ.

ವಾಸ್ತವದಲ್ಲಿ, ಈ ಬಾರಿ ನಿರುದ್ಯೋಗ, ಬೆಲೆ ಏರಿಕೆ ಹಾಗೂ ಗ್ರಾಮೀಣ ಸಂಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಮತದಾನಗಳು ನಡೆದಿವೆ. ಹೀಗಾಗಿ, 2014 ಮತ್ತು 2019ರಂತೆ ಈ ಬಾರಿ ದೇಶಾದ್ಯಂತ ಮೋದಿ ಮ್ಯಾಜಿಕ್‌ಗೆ ಯಾವುದೇ ನೆಲೆಯೂ ಇಲ್ಲ – ಬೆಲೆಯೂ ಇಲ್ಲ ಎಂಬುದು ನಿಚ್ಚಳವಾಗಿದೆ. ಅದನ್ನು ಮಾಧ್ಯಮಗಳು ವರದಿ ಮಾಡುತ್ತಿಲ್ಲ, ಸಾಮಾಜಿಕ ಮಾಧ್ಯಮಗಳು ಬಹಿರಂಗಗೊಳಿಸುತ್ತಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮೊದಲ ಹಂತದ ಮತದಾನದ ನಂತರ ಒಂದೆರಡು ವಾರಗಳವರೆಗೆ ಷೇರುಪೇಟೆಯಲ್ಲಿ ಇಳಿಮುಖ ಕಂಡಿತ್ತು. ಪೂರ್ಣಗೊಳ್ಳದ ರಾಮಮಂದಿರದ ಉದ್ಘಾಟನೆಯ ನಂತರ ಮೋದಿ ಮತ್ತು ಷಾ ಪ್ರಚಾರ ಮಾಡಿದ್ದ ‘ಚಾರ್‌ ಸವ್ ಪಾರ್’ ಕೂಡ ಹಳ್ಳ ಹಿಡಿಯಿತು. ಎರಡನೇ ಹಂತದ ಬಳಿಕ, ಬಿಜೆಪಿಗೆ 335 ಸ್ಥಾನಗಳು ದೊರೆಯುತ್ತವೆ ಎಂಬ ಅಭಿಪ್ರಾಯದೊಂದಿಗೆ ಸಟ್ಟಾ ಬಜಾರ್ ಪ್ರಾರಂಭವಾಯಿತು. ಆದರೆ, ಮೂರನೇ ಹಂತದ ಬಳಿಕ, ಬಿಜೆಪಿ ನೆಲೆ 290ಕ್ಕೆ ಕುಸಿದಿದೆ.

ಐದನೇ ಹಂತದ ನಂತರ ಇದ್ದಕ್ಕಿದ್ದಂತೆ ಪ್ರಶಾಂತ್ ಕಿಶೋರ್ ಅವರಂತಹ ಚುನಾವಣಾ ತಂತ್ರಜ್ಞರು ಮಾಧ್ಯಮಗಳೊಂದಿಗೆ ಮಾತನಾಡಲು ಪ್ರಾರಂಭಿಸಿದರು. ಬಿಜೆಪಿ ಏಕಾಂಗಿಯಾಗಿ 2019ರಲ್ಲಿ ಪಡೆದಿದ್ದ 303 ಸ್ಥಾನಗಳಿಗಿಂತ ಈ ಬಾರಿ 315 ರಿಂದ 320 ಸ್ಥಾನಗಳನ್ನು ಗೆಲ್ಲಬಹುದು ಎಂಬ ನಿರೂಪಣೆಗಳನ್ನು ಮುಂದಿಟ್ಟರು.

ಉತ್ತರ, ಪಶ್ಚಿಮ ಹಾಗೂ ದಕ್ಷಿಣ ಭಾರತದಲ್ಲಿ ಬಿಜೆಪಿ 50 ಸ್ಥಾನಗಳನ್ನು ಕಳೆದುಕೊಳ್ಳಬಹುದು. ಅದಾಗ್ಯೂ, ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ಈ ನಷ್ಟವನ್ನು ಬಿಜೆಪಿ ತುಂಬಿಕೊಳ್ಳುತ್ತದೆ ಎಂದು ಕಿಶೋರ್ ವಾದಿಸಿದ್ದಾರೆ. ಆದರೆ, ಪೂರ್ವ ಮತ್ತು ದಕ್ಷಿಣ ಭಾರತದ ಚುನಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಬಿಜೆಪಿ 50 ಹೆಚ್ಚುವರಿ ಸ್ಥಾನಗಳನ್ನು ಗೆಲ್ಲಲು ಸಾಧ್ಯವೇ ಇಲ್ಲ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ.

ಏತನ್ಮಧ್ಯೆ, ರಾಜಕೀಯ ವಿಶ್ಲೇಷಕರ ಇಂತಹ ಪ್ರತಿಪಾದನೆಗಳ ನಡುವೆ, ಬಿಜೆಪಿ ನಾಯಕರು ಮತ್ತಷ್ಟು ಹುರುಪಿನಿಂದ ಮಾತನಾಡಲು ಆರಂಭಿಸಿದ್ದಾರೆ. ಆರನೇ ಹಂತದ ಮತದಾನದ ಅಂತ್ಯದಲ್ಲಿ ಬಿಜೆಪಿ ಈಗಾಗಲೇ 310 ಸ್ಥಾನಗಳನ್ನು ದಾಟಿದೆ ಎಂದು ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ವಿಶ್ವಾಸದಿಂದ ಹೇಳುತ್ತಿದ್ದಾರೆ. ಮಾತ್ರವಲ್ಲದೆ, ಜೂನ್ 4ರ ನಂತರ ಸ್ಟಾಕ್ ಮಾರುಕಟ್ಟೆಗಳು ಗಗನಕ್ಕೇರುತ್ತವೆ. ಷೇರುಗಳನ್ನು ಖರೀದಿಸಿ ಎಂದು ಅಮಿತ್ ಶಾ ಹೂಡಿಕೆದಾರರನ್ನು ಒತ್ತಾಯಿಸುತ್ತಿದ್ದಾರೆ. ಇದೆಲ್ಲವೂ, ಏಳನೇ ಹಂತದ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಆಡಬೇಕಾದ ‘ಮೈಂಡ್‌ ಗೇಮ್‌’ಗಳ ಭಾಗವಾಗಿವೆ.

ಎರಡುಮೂರು ಹಂತಗಳಲ್ಲಿ ಮತದಾನ ನಡೆದು 15ರಿಂದ 20 ದಿನಗಳಲ್ಲಿ ಚುನಾವಣೆ ಪೂರ್ಣಗೊಂಡರೆ ಇದ್ಯಾವುದೂ ನಡೆಯುವುದಿಲ್ಲ. ಆದರೆ, ದೀರ್ಘಕಾಲದ ಚುನಾವಣೆಯು ಬಿಜೆಪಿಗೆ ನಾನಾ ನಿರೂಪಣೆಗಳನ್ನು ಹೆಣೆಯಲು ಅವಕಾಶ ಮಾಡಿಕೊಡುತ್ತಿದೆ.

ವಿಪಕ್ಷಗಳೂ ಕೂಡ ಬಿಜೆಪಿ ಸರಿಸಮನಾಗಿ ನಿರೂಪಣೆಗಳನ್ನು ಮುಂದಿಡುತ್ತಿವೆ. ಅಲ್ಲದೆ, ಬಿಜೆಪಿಯ ಪ್ರತಿಪಾದನೆಗಳನ್ನು ಒಡೆಯುತ್ತಿವೆ. ಅದೇನೇ ಇರಲಿ, 2024ರ ಚುನಾವಣೆಯಲ್ಲಿ ಕೆಲವು ಸತ್ಯಗಳನ್ನು ದೂರವಿಡಲು ಸಾಧ್ಯವಿಲ್ಲ. ಜೀವನೋಪಾಯದ ಸಮಸ್ಯೆಗಳು, ನಿರುದ್ಯೋಗ ಮತ್ತು ಹಣದುಬ್ಬರದ ಕಾರಣದಿಂದ ಅನೇಕ ರಾಜ್ಯಗಳಲ್ಲಿ ಬೃಹತ್ ಆಡಳಿತ ವಿರೋಧಿ ಅಲೆಯಿದೆ. ವಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ಹೋಲಿಸಿದರೆ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಆಡಳಿತ ವಿರೋಧಿ ಅಲೆ ವ್ಯಾಪಕವಾಗಿ ಹೆಚ್ಚಾಗಿದೆ.

ಉದಾಹರಣೆಗೆ, ಅತೀ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ (ಇಲ್ಲಿ 48 ಸ್ಥಾನಗಳಿವೆ) ಮೋದಿ ಮತ್ತು ಬಿಜೆಪಿ ಅತ್ಯಂತ ತೀವ್ರವಾದ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿವೆ. ಮಹಾರಾಷ್ಟ್ರವು ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟಕ್ಕೆ ಹೆಚ್ಚು ಮತಗಳನ್ನು ಹೊತ್ತೊಯ್ಯುವ ರಾಜ್ಯವೆಂದು ಪರಿಗಣಿಸಲಾಗುತ್ತಿದೆ.

ಮಹಾರಾಷ್ಟ್ರದ ಸಿಟ್ಟು ಹೆಚ್ಚಾಗಿ ಕೇಂದ್ರದಲ್ಲಿರುವ ಬಿಜೆಪಿ ವಿರುದ್ಧವೇ ಇದೆ. ಬಿಜೆಪಿ ಮೈತ್ರಿಯ ವಿರುದ್ಧ ಮಹಾರಾಷ್ಟ್ರದ ಅಸಮಾಧಾನವನ್ನು ಮೋದಿ ಮತ್ತು ಶಾ ಚೆನ್ನಾಗಿ ತಿಳಿದಿದ್ದಾರೆ. ಹೀಗಾಗಿಯೇ, ಚುನಾವಣೆ ಘೋಷಣೆಯಾದ ಬಳಿಕ, ಮಹಾರಾಷ್ಟ್ರಕ್ಕೆ ಮೋದಿ 18 ಬಾರಿ ಭೇಟಿ ಮಾಡಿದ್ದಾರೆ.

ಈ ವರದಿ ಓದಿದ್ದೀರಾ?: ದಲಿತ ಸಹೋದರ, ಚಿಕ್ಕಪ್ಪನ ಹತ್ಯೆ; ಆ್ಯಂಬುಲೆನ್ಸ್‌ನಿಂದ ಬಿದ್ದು ಅತ್ಯಾಚಾರ ಸಂತ್ರಸ್ತೆ ಸಾವು

ಏಷ್ಯಾದ ಅತಿದೊಡ್ಡ ಈರುಳ್ಳಿ ಮಂಡಿ ಎಂದು ಗುರುತಿಸಿಕೊಂಡಿರುವ ಮಹಾರಾಷ್ಟ್ರದ ಶೋಲಾಪುರ್, ಔರಂಗಾಬಾದ್ ಮತ್ತು ನಾಸಿಕ್ ಜಿಲ್ಲೆಗಳಲ್ಲಿ ಮೋದಿ ಮತ್ತು ಬಿಜೆಪಿ ವಿರುದ್ಧದ ಕೋಪ ಸ್ಪಷ್ಟವಾಗಿ ಕಾಣಿಸುತ್ತಿದೆ. ಆರು ತಿಂಗಳ ಹಿಂದೆ ಈರುಳ್ಳಿ ರಫ್ತು ಮಾಡುವುದನ್ನು ಕೇಂದ್ರ ನಿಷೇಧಿಸಿತ್ತು. ಇದರಿಂದ, ಈರುಳ್ಳಿ ಬೆಲೆ 75%ಕ್ಕಿಂತ ಹೆಚ್ಚು ಕುಸಿತ ಕಂಡಿತ್ತು. ಇದು ಅಲ್ಲಿನ ರೈತರ ಆದಾಯ, ಜೀವನೋಪಾಯದ ಮೇಲೆ ಪರಿಣಾಮ ಬೀರಿದೆ. ಅವರು ಕೇಂದ್ರದ ವಿರುದ್ಧ ಅಸಮಾಧಾನಗೊಂಡಿದ್ದಾರೆ.

“ಮೋದಿ ಸರ್ಕಾರವು ಭಾರತೀಯ ಈರುಳ್ಳಿ ರಫ್ತಿನ ಮೇಲಿನ ಹೆಚ್ಚಿನ ಸುಂಕ ಹೇರಿದೆ. ಇದರಿಂದ, ಜಾಗತಿಕವಾಗಿ ಈರುಳ್ಳಿ ಮಾರುಕಟ್ಟೆಯನ್ನು ಪಾಕಿಸ್ತಾನ ವಶಪಡಿಸಿಕೊಳ್ಳಲು ಅವಕಾಶ ದೊರೆಯುತ್ತದೆ. ಮೋದಿ ಸರ್ಕಾರವು ಪಾಕಿಸ್ತಾನಕ್ಕೆ ವಿದೇಶದಲ್ಲಿ ತನ್ನ ಮಾರುಕಟ್ಟೆಯನ್ನು ಬೆಳೆಸಲು ಸಹಾಯ ಮಾಡಿದೆ ಎಂದು ಲಾಸಲಗಾಂವ್‌ ಈರುಳ್ಳಿ ಮಂಡಿ ಅಧ್ಯಕ್ಷ ಬಾಳಾಸಾಹೇಬ ರಾಮನಾಥ ಶಿರಸಾಗರ ಆರೋಪಿಸಿದ್ದಾರೆ.

ಇನ್ನು, ಮರಾಠ ಮೀಸಲಾತಿ ಹೋರಾಟವು ಮೋದಿ ಸರ್ಕರದ ವಿರುದ್ಧ ಆಕ್ರೋಶವನ್ನು ಹೆಚ್ಚಿಸಿದೆ. ಮರಾಠಾ ಯುವಜನರು ಬಿಜೆಪಿ ಮೈತ್ರಿ ವಿರುದ್ಧ ಸಾಮೂಹಿಕವಾಗಿ ಮತ ಚಲಾಯಿಸುತ್ತಾರೆ. ಮಾತ್ರವಲ್ಲದೆ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಮೇಲೂ ಪ್ರಭಾವ ಬೀರಲು ಲೋಕಸಭಾ ಚುನಾವಣೆಯ ನಂತರವೂ ಮೀಸಲಾತಿ ಆಂದೋಲನವನ್ನು ಮುನ್ನಡೆಸುತ್ತೇವೆ ಎಂದು ಮರಾಠ ಮೀಸಲಾತಿ ಹೋರಾಟ ಸಂಘಟನೆಗಳು ಹೇಳುತ್ತಿವೆ.

ಮಾತ್ರವಲ್ಲದೆ, ಕೇಂದ್ರ ಸರ್ಕಾರವು ಕೆಲವು ಆರ್ಥಿಕ ಯೋಜನೆಗಳನ್ನು ಮಹಾರಾಷ್ಟ್ರದಿಂದ ಗುಜರಾತ್‌ಗೆ ಸ್ಥಳಾಂತರಿಸಿರುವ ಬಗ್ಗೆಯೂ ರಾಜ್ಯದ ಜನರು ಅಸಮಾಧಾನ ಹೊಂದಿದ್ದಾರೆ.

ಇದೆಲ್ಲದರ ಜೊತೆಗೆ, ಸ್ಥಳೀಯ ಪಕ್ಷಗಳಾದ ಶಿವಸೇನೆ ಮತ್ತು ಎನ್‌ಸಿಪಿ ಪಕ್ಷಗಳನ್ನ ಬಿಜೆಪಿ ಒಡೆದು, ಎರಡೂ ಪಕ್ಷಗಳನ್ನು ಇಬ್ಭಾಗ ಮಾಡಿದೆ. ಪರಿಣಾಮ, ಶಿವಸೇನೆಯ ಉದ್ದವ್ ಠಾಕ್ರೆ ಮತ್ತು ಎನ್‌ಸಿಪಿಯ ಶರದ್ ಪವಾರ್ ಮೇಲೆ ರಾಜ್ಯದಲ್ಲಿ ಸಹಾನುಭೂತಿ ಹೆಚ್ಚಾಗಿದೆ.

ಈ ಎಲ್ಲ ಭಾವನೆಗಳು ಒಗ್ಗೂಡಿದ್ದು, ಮಹಾರಾಷ್ಟ್ರದಲ್ಲಿ ಮೋದಿ-ಶಾಗೆ ಗಂಭೀರವಾದ ಅಸ್ತಿತ್ವದ ಸವಾಲು ಎದುರಾಗಿದೆ. ರಾಜ್ಯದ 48 ಸ್ಥಾನಗಳಲ್ಲಿ ಎನ್‌ಡಿಎ ಮೈತ್ರಿಕೂಟವು 2019ರಲ್ಲಿ 41 ಸ್ಥಾನಗಳನ್ನು ಗೆದ್ದಿತ್ತು. ಆದರೆ, ಈ ಬಾರಿ, 20ಕ್ಕಿಂತ ಕಡಿಮೆ ಸ್ಥಾನಗಳಿಗೆ ಕುಸಿಯಬಹುದು. ಅಲ್ಲದೆ, 2019ರಲ್ಲಿ ಬಿಜೆಪಿ ಗೆದಿದ್ದ 23 ಸ್ಥಾನಗಳಲ್ಲಿ ಈ ಬಾರಿ 8-10 ಸ್ಥಾನಗಳನ್ನು ಕಳೆದುಕೊಳ್ಳಬಹುದು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಇನ್ನು, ಇತರ ರಾಜ್ಯಗಳಾದ ಹರಿಯಾಣ, ದೆಹಲಿ, ಬಿಹಾರ, ಜಾರ್ಖಂಡ್, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳಲ್ಲಿ ಆಡಳಿತ ವಿರೋಧಿ ಅಲೆ ಇದೆ. ಈ ರಾಜ್ಯಗಳಲ್ಲಿ ಬಿಜೆಪಿ ಹಿಂದೆ ಗೆದ್ದಿದ್ದರಲ್ಲಿ ಕನಿಷ್ಠ 50 ಸ್ಥಾನಗಳನ್ನು ಕಳೆದುಕೊಳ್ಳಬಹುದು. ಮೋದಿ ಅವರು ರೋಮಾಂಚನಕಾರಿ ಭಾಷಣದ ಮೂಲಕ ತಟಸ್ಥ ಮತದಾರರನ್ನು ಬಿಜೆಪಿಯತ್ತ ಸೆಳೆಯುವ ಸಮಯ ಕಳೆದುಹೋಗಿದೆ. ಅವರ ಇತ್ತೀಚಿನ ಭಾಷಣಗಳು ಜನರ ಮೇಲೆ ಪ್ರಭಾವ ಬೀರುತ್ತಿಲ್ಲ. ವಿಪಕ್ಷಗಳ ವಿರುದ್ಧದ ಕೀಳುಮಟ್ಟದ ಭಾಷಣಗಳಿಂದ ಅವರು ಮತ್ತಷ್ಟು ಜನಪ್ರಿಯತೆ ಕಳೆದುಕೊಂಡಿದ್ದಾರೆ.

ಇದೆಲ್ಲದರ ನಡುವೆಯೂ, ಒಂದು ವೇಳೆ, 2024ರ ಫಲಿತಾಂಶಗಳು ಎನ್‌ಡಿಎಗೆ ಅಧಿಕಾರ ನೀಡಿದರೂ, ಮೋದಿ ಪಾಲಿಗೆ ಮತ್ತೊಂದು ಅಲೆಯಂತೂ ಹುಟ್ಟುವುದಿಲ್ಲ. ಹಾಗಾಗಿ… ಮೋದಿ ಕಾಲ ಮುಗಿದಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

FACT CHECK | ತಾಯಿಯೋರ್ವಳು ತನ್ನ ಮಗನಿಗೆ ನಿರ್ದಯವಾಗಿ ಹೊಡೆಯುತ್ತಿರುವ ವಿಡಿಯೋ ಕರ್ನಾಟಕದ್ದಲ್ಲ; ಏನಿದು ಪ್ರಕರಣ?

ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ತಾಯಿಯೋರ್ವಳು ತನ್ನ ಮಗನಿಗೆ ನಿರ್ದಯವಾಗಿ...

ಉತ್ತರ ಪ್ರದೇಶದ ಕನ್ವರ್ ಯಾತ್ರೆಯಲ್ಲಿ ಅಂಗಡಿ ಮಾಲೀಕರ ಹೆಸರು ಪ್ರದರ್ಶಿಸಲು ಆದೇಶ: ಸುಪ್ರೀಂನಲ್ಲಿ ಅರ್ಜಿ

ಕನ್ವರ್‌ ಯಾತ್ರೆ ಯುದ್ದಕ್ಕೂ ಇರುವ ಅಂಗಡಿ ಮಾಲೀಕರು ತಮ್ಮ ಹೆಸರುಗಳನ್ನು ಕಡ್ಡಾಯವಾಗಿ...

ಬಿಜೆಪಿ ನೇತೃತ್ವದ ಸರ್ಕಾರ ಹೆಚ್ಚು ಕಾಲ ಉಳಿಯದು: ಟಿಎಂಸಿ ರ್‍ಯಾಲಿಯಲ್ಲಿ ಅಖಿಲೇಶ್, ಮಮತಾ

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು...