ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಚುನಾವಣಾ ಪ್ರಚಾರದಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡ ಕಾರಣ ಶಾಲೆಯೊಂದರ ನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿ ನಾಗಪುರ ಶಿಕ್ಷಣ ಅಧಿಕಾರಿಗೆ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಏಪ್ರಿಲ್ 4ರಂದು ಕಾಂಗ್ರೆಸ್ ಸಲ್ಲಿಸಿದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ನಾಗ್ಪುರದ ಎನ್‌ಎಸ್‌ವಿಎಂ ಫುಲ್ವಾರಿ ಶಾಲೆಯು ಗಡ್ಕರಿ ಅವರನ್ನು ಸ್ವಾಗತಿಸಲು ವಿದ್ಯಾರ್ಥಿಗಳನ್ನು ಬಳಸಲಾಗಿದೆ. ಈ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯ ವಕ್ತಾರ ಅತುಲ್ ಲೋಂಡೆ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ನೀಡಿದ್ದರು.
ಏಪ್ರಿಲ್ 1ರಂದು ತಾಲೂಕು ಪಂಚಾಯತ್ ಮತ್ತು ಶಾಲಾ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಶಾಲಾ ನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳುವ ಮುಖ್ಯ ಚುನಾವಣಾಧಿಕಾರಿಯ ನಿರ್ಧಾರವನ್ನು ಲೋಂಡೆ ಸ್ವಾಗತಿಸಿದರು. ಆದರೆ ನಿತಿನ್ ಗಡ್ಕರಿ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ತಮಿಳುನಾಡು | ಪ್ರಧಾನಿ ಮೋದಿ ರೋಡ್ ಶೋ ವೇಳೆ ಶಾಲಾ ಮಕ್ಕಳನ್ನು ಬಳಸಿಕೊಂಡ ಬಿಜೆಪಿ: ತನಿಖೆಗೆ ಆದೇಶ
ಎನ್‌ಎಸ್‌ವಿಎಂ ಫುಲ್ವಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ವೈಶಾಲಿ ನಗರ ಪ್ರದೇಶದಲ್ಲಿ ಬಿಜೆಪಿಯ ನಾಗಪುರದ ಅಭ್ಯರ್ಥಿ ನಿತಿನ್ ಗಡ್ಕರಿ ಅವರ ಪ್ರಚಾರ ಸಭೆಯಲ್ಲಿ ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಭಾಗವಹಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರು ಸ್ವೀಕರಿಸಿದ ನಂತರ ಮುಖ್ಯ ಚುನಾವಣಾಧಿಕಾರಿಗಳು ವಿಚಾರಣೆ ನಡೆಸಿ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಆಡಳಿತಾಧಿಕಾರಿಯನ್ನು ಕರೆಸಿದರು. ವಿಚಾರಣೆಯ ನಂತರ, ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ಶಾಲಾ ನಿರ್ದೇಶಕರೇ ಹೊಣೆ ಎಂದು ತೀರ್ಮಾನಿಸಲಾಯಿತು.
ಇದನ್ನು ಓದಿದ್ದೀರಾ? ಶಕ್ತಿ ಯೋಜನೆ : ‘ಫ್ರೀ ಬಸ್ ಟಿಕೆಟ್’ನ ವಿಶೇಷ ಹಾರ ಸಿಎಂ ಸಿದ್ದರಾಮಯ್ಯರಿಗೆ ಅರ್ಪಿಸಿದ ಕಾನೂನು ವಿದ್ಯಾರ್ಥಿನಿ!
ಶಾಲಾ ಮಕ್ಕಳನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳುವುದು ತಪ್ಪು ಮತ್ತು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಚುನಾವಣಾ ಸಂಬಂಧಿತ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಬಳಸದಂತೆ ಚುನಾವಣಾ ಆಯೋಗದ ಸ್ಪಷ್ಟ ನಿರ್ದೇಶನಗಳನ್ನು ಬಿಜೆಪಿ ಮತ್ತು ಅದರ ಅಭ್ಯರ್ಥಿಗಳು ನಿರ್ಲಕ್ಷಿಸಿದ್ದಾರೆ ಎಂದು ಲೋಂಡೆ ಹೇಳಿದರು.
“ಈ ದೂರಿನ ಆಧಾರದಲ್ಲಿ ಶಾಲಾ ನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಆದರೆ ನಿತಿನ್ ಗಡ್ಕರಿ ಮತ್ತು ಬಿಜೆಪಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಪ್ರಕರಣದಲ್ಲಿ ಗಡ್ಕರಿ ಮತ್ತು ಶಾಲೆಯ ನಿರ್ದೇಶಕರು ಇಬ್ಬರೂ ತಪ್ಪಿತಸ್ಥರು” ಎಂದು ಹೇಳಿದರು.