ಈ ದಿನ ವಿಶೇಷ | ವೀರಪ್ಪ ಮೊಯ್ಲಿಯವರ ಪ್ರಬುದ್ಧ ನಡೆ ಮತ್ತು ಕಾಂಗ್ರೆಸ್ ನಾಯಕರ ಅಸಮಾಧಾನ

Date:

Advertisements
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರು ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದಾರೆ. ಟಿಕೆಟ್ ಸಿಗದಿದ್ದರೂ ಬೇಸರಿಸದೆ, ರಕ್ಷಾ ರಾಮಯ್ಯರ ಪರ ಪ್ರಚಾರ ಕೈಗೊಂಡಿದ್ದಾರೆ. ಸೆಟಗೊಂಡಿರುವ ಹಿರಿಯ ಕಾಂಗ್ರೆಸ್ ನಾಯಕರಿಗೆ ಮೊಯ್ಲಿಯವರ ಈ ನಡೆ ಮಾದರಿಯಾಗಬೇಕಾಗಿದೆ. ದೇಶಕ್ಕೆ ವಕ್ಕರಿಸಿರುವ ಸಂಘ ಪರಿವಾರ, ಬಿಜೆಪಿ ಮತ್ತು ಮೋದಿಯಿಂದ ದೇಶವನ್ನು ಮುಕ್ತ ಮಾಡಬೇಕಿದೆ. ಅದರ ಮುಂದೆ ನಿಮ್ಮ ಅಸಮಾಧಾನ ತೀರಾ ಸಣ್ಣದು ಎಂದು ತಿಳಿಯಬೇಕಾಗಿದೆ…

ಎಂಬತ್ನಾಲ್ಕರ ಹರೆಯದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿಯವರು ಈ ಬಾರಿಯೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಉತ್ಸುಕರಾಗಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನಿರಾಕರಿಸಿ, ಎಂ.ಆರ್. ಸೀತಾರಾಂ ಅವರ ಪುತ್ರ ರಕ್ಷಾ ರಾಮಯ್ಯರನ್ನು ಕಣಕ್ಕಿಳಿಸಿದೆ.

ಟಿಕೆಟ್ ನಿರಾಕರಿಸಿದಾಗ ವೀರಪ್ಪ ಮೊಯ್ಲಿಯವರಿಗೆ ಸಹಜವಾಗಿಯೇ ಬೇಸರವಾಗಿತ್ತು. ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಹತ್ತಿರದಿಂದ ಬಲ್ಲ ಮೊಯ್ಲಿಯವರು, ಭವಿಷ್ಯದ ಬಗ್ಗೆ ಯೋಚಿಸಬೇಕಾಗಿರಲಿಲ್ಲ. ಕಂಡದ್ದು-ಕೇಳಿದ್ದನ್ನೆಲ್ಲ ಎತ್ತಾಡಬಹುದಿತ್ತು. ಆದರೆ ಮೊಯ್ಲಿಯವರು ಅದಾವುದನ್ನೂ ಮಾಡಲಿಲ್ಲ. ಬದಲಿಗೆ, ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗುವುದಾಗಿ ಘೋಷಿಸಿದರು.

ಅಷ್ಟೇ ಅಲ್ಲ, ಅವತ್ತಿನಿಂದಲೇ ಚಿಕ್ಕಬಳ್ಳಾಪುರ ಕ್ಷೇತ್ರದಾದ್ಯಂತ ಓಡಾಟ ಆರಂಭಿಸಿದರು. ಅಭ್ಯರ್ಥಿ ರಕ್ಷಾ ರಾಮಯ್ಯರನ್ನು ಜೊತೆಗಿಟ್ಟುಕೊಂಡು, ಮತಯಾಚನೆ ಮಾಡತೊಡಗಿದರು. ಕಾಂಗ್ರೆಸ್ ವಲಯದಲ್ಲಿ ಹೊಸ ಹುಮ್ಮಸ್ಸಿಗೆ ಕಾರಣರಾದರು.

Advertisements

ವೀರಪ್ಪ ಮೊಯ್ಲಿಯವರು ದಕ್ಷಿಣ ಕನ್ನಡದ ಅತ್ಯಂತ ಸಣ್ಣ ದೇವಾಡಿಗ ಸಮುದಾಯಕ್ಕೆ ಸೇರಿದವರು. ತಂದೆ ತಮ್ಮಯ್ಯ ಮೊಯ್ಲಿ, ತಾಯಿ ಪೂವಮ್ಮರ ಮಗನಾಗಿ ಜನವರಿ 12, 1940ರಲ್ಲಿ ಜನಿಸಿದ ಮೊಯ್ಲಿಯವರು, ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣಗಳನ್ನು ಮೂಡಬಿದಿರೆಯಲ್ಲಿ ಪೂರೈಸಿದರು. ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಪದವಿ ಪಡೆದರು. ಮೀನುಗಾರಿಕೆ ಇಲಾಖೆಯಲ್ಲಿ, ಭಾರತೀಯ ಜೀವವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಲೇ, ಬೆಂಗಳೂರಿನ ಸರಕಾರಿ ಕಾನೂನು ಕಾಲೇಜಿನಿಂದ ಬಿಎಲ್ ಪದವಿ ಪಡೆದರು. ನಂತರ ಕಾರ್ಕಳದಲ್ಲಿ ವಕೀಲಿ ವೃತ್ತಿಯನ್ನಾರಂಭಿಸಿದರು.

1971ರಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ(ಅಡ್‌ಹಾಕ್) ದೇವರಾಜ ಅರಸು ಮತ್ತು ಯೂತ್ ಕಾಂಗ್ರೆಸ್ ಅಧ್ಯಕ್ಷ ಡಿ.ಬಿ. ಚಂದ್ರೇಗೌಡರು ಪಕ್ಷ ಸಂಘಟನೆಗಾಗಿ ರಾಜ್ಯದಾದ್ಯಂತ ಪ್ರವಾಸದಲ್ಲಿದ್ದಾಗ, ಕಾರ್ಕಳದಲ್ಲಿ ಅವರ ಕಣ್ಣಿಗೆ ಬಿದ್ದವರು ವೀರಪ್ಪ ಮೊಯ್ಲಿಯವರು. ಆ ಕಾಲದಲ್ಲಿಯೇ ಬಡವರ, ಅಸಹಾಯಕರ ಪರವಾಗಿ ಕೆಲಸ ಮಾಡುತ್ತಿದ್ದ ಮೊಯ್ಲಿಯವರನ್ನು ಮಾತನಾಡಿಸಿದ ಅರಸು, ‘ಇವರ ಹೆಸರು ಬರೆದುಕೊಳ್ಳಿ’ ಎಂದು ಚಂದ್ರೇಗೌಡರಿಗೆ ಹೇಳಿದರು.

ಅಷ್ಟೇ, ಮುಂದಿನದ್ದು ಚರಿತ್ರೆಯ ಪುಟಗಳಲ್ಲಿ ದಾಖಲಾಯಿತು.

ದೇವರಾಜ ಅರಸು ಅವರ ಸಾಮಾಜಿಕ ನ್ಯಾಯ, 1972ರ ಚುನಾವಣೆಯಲ್ಲಿ ವೀರಪ್ಪ ಮೊಯ್ಲಿಯವರನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿಸಿತ್ತು. ಅಷ್ಟೇ ಅಲ್ಲ, ಮೊದಲ ಬಾರಿಗೆ ಗೆದ್ದು ಶಾಸಕರಾಗಿದ್ದ ಅವಧಿಯಲ್ಲಿಯೇ, 1974ರಲ್ಲಿ ಮುಖ್ಯಮಂತ್ರಿ ದೇವರಾಜ ಅರಸು, ವೀರಪ್ಪ ಮೊಯ್ಲಿಯವರನ್ನು ಸಣ್ಣ ಕೈಗಾರಿಕೆ ಸಚಿವರನ್ನಾಗಿ ಮಾಡಿದ್ದರು.

ಮೊಯ್ಲಿಯವರು ಸಚಿವರಾಗಿದ್ದಾಗ ಅಮೆರಿಕದ ಐಟಿ ಕಂಪನಿಗಳ ಕೇಂದ್ರವೆಂದು ಹೆಸರಾಗಿದ್ದ ಸಿಲಿಕಾನ್ ವ್ಯಾಲಿಗೆ ಭೇಟಿ ನೀಡಿದ್ದರು. ಕರ್ನಾಟಕದಲ್ಲಿಯೂ ಮಾಹಿತಿ ತಂತ್ರಜ್ಞಾನಕ್ಕೆ ಒತ್ತು ಕೊಡಬೇಕೆಂದು ಮನಸ್ಸು ಮಾಡಿದ ಮೊಯ್ಲಿಯವರು, ಎಲೆಕ್ಟ್ರಾನಿಕ್ ಸಿಟಿ ನಿರ್ಮಾಣಕ್ಕಾಗಿ ಆನೇಕಲ್ ಮತ್ತು ಜಿಗಣಿ ಸುತ್ತಮುತ್ತ ಭೂ ಸ್ವಾಧೀನಕ್ಕೆ ಚಾಲನೆ ನೀಡಿದರು. ಕೈಯಲ್ಲಿ ಕಾಸಿಲ್ಲದೆ ಕೂತಿದ್ದ ಎನ್.ಆರ್. ನಾರಾಯಣಮೂರ್ತಿಯವರಿಗೆ, ಇನ್ಫೋಸಿಸ್ ಸ್ಥಾಪಿಸಲು ಭೂಮಿ, ಸಾಲ, ಸವಲತ್ತುಗಳ ವ್ಯವಸ್ಥೆ ಮಾಡಿಸಿದರು. ಅಜೀಮ್ ಪ್ರೇಮ್ ಜಿ ಅವರಿಗೆ ಅನೇಕ ಸವಲತ್ತುಗಳನ್ನು ನೀಡುವ ಮೂಲಕ ವಿಪ್ರೋ ಕಂಪನಿ ಬೆಂಗಳೂರಿನಲ್ಲಿಯೇ ಉಳಿಯುವಂತೆ ನೋಡಿಕೊಂಡರು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬೆಲೆ ಏರಿಕೆ, ನಿರುದ್ಯೋಗವೇ ಚುನಾವಣೆ ವಿಷಯ; ಎಚ್ಚೆತ್ತ ಮತದಾರರು

ಮೊಯ್ಲಿಯವರು ಇದನ್ನೆಲ್ಲ ಮಾಡಿದ್ದು, ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದಾಗ, ಸಚಿವರಾಗಿದ್ದಾಗ. 1972ರಿಂದ 1999ರವರೆಗೆ, ನಿರಂತರವಾಗಿ ಗೆದ್ದು, ಸೋಲಿಲ್ಲದ ಸರದಾರ ಎನಿಸಿಕೊಂಡ ವೀರಪ್ಪ ಮೊಯ್ಲಿಯವರು, ಹಲವು ಇಲಾಖೆಗಳ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ವಿರೋಧ ಪಕ್ಷದ ನಾಯಕರಾದರು. 1992ರಿಂದ 1994ರವರೆಗೆ ಕರ್ನಾಟಕದ 13ನೇ ಮುಖ್ಯಮಂತ್ರಿಯಾಗುವ ಮೂಲಕ, ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿಯಾಗಬಹುದು ಎಂಬುದನ್ನು ಸಾಬೀತು ಮಾಡಿದರು. ಆ ಮೂಲಕ ದೇವರಾಜ ಅರಸು ಅವರ ಕನಸನ್ನು ನನಸು ಮಾಡಿದರು.

ಇಲ್ಲಿ ಹೇಳಲೇಬೇಕಾದ ಮತ್ತೊಂದು ಮಹತ್ವದ ಸಂಗತಿಯೊಂದಿದೆ. ವೀರಪ್ಪ ಮೊಯ್ಲಿಯವರು ಮುಖ್ಯಮಂತ್ರಿಯಾಗಿದ್ದಾಗ ಸಿಇಟಿ(ಕಾಮನ್ ಎಂಟ್ರೇನ್ಸ್ ಟೆಸ್ಟ್) ಜಾರಿಗೆ ತಂದರು. ಇದರಿಂದ ಬಡವರ ಮಕ್ಕಳು ಕನಸಿನಲ್ಲಿ ಮಾತ್ರ ಕಾಣುತ್ತಿದ್ದ ಡಾಕ್ಟರ್, ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಮಾಡುವಂತಾದರು. ಕೈ ತುಂಬಾ ಕಾಸು ಎಣಿಸುವ, ತಮ್ಮ ಕುಟುಂಬಗಳನ್ನು ಸುಸ್ಥಿತಿಯಲ್ಲಿಡುವ, ಆರ್ಥಿಕ-ಸಾಮಾಜಿಕ ಚಲನೆಗೆ ಮೊಯ್ಲಿ ಕಾರಣಕರ್ತರಾದರು. ಅಷ್ಟೇ ಅಲ್ಲ, ಬೆಂಗಳೂರಿನ ವೈಟ್ ಫೀಲ್ಡ್‌ನಲ್ಲಿ ಸಿಂಗಾಪುರ ಸರ್ಕಾರದ ಸಹಯೋಗದೊಂದಿಗೆ ಟೆಕ್ನಾಲಜಿ ಪಾರ್ಕ್ ಸ್ಥಾಪನೆಗೆ ಚಾಲನೆ ನೀಡಿದರು.

ಏತನ್ಮಧ್ಯೆ, ರಾಜಕಾರಣದ ನಡುವೆ ಬಿಡುವು ಸಿಕ್ಕಾಗ, ಸಾಹಿತ್ಯ ಕ್ಷೇತ್ರದತ್ತ ನೋಡಿದರು. ಹಲವಾರು ಕೃತಿಗಳನ್ನು ರಚಿಸಿದರು, ಹಲವು ಪ್ರಶಸ್ತಿ-ಪುರಸ್ಕಾರಗಳಿಗೂ ಭಾಜನರಾದರು. ತಮ್ಮಿಷ್ಟದ ವಕೀಲಿಕೆಯನ್ನೂ ಮುಂದುವರೆಸಿದರು. ಆ ನಂತರ ರಾಜ್ಯ ರಾಜಕಾರಣ ಸಾಕೆನಿಸಿದಾಗ, ಕರಾವಳಿಯ ಕಾರ್ಕಳ ಬಿಟ್ಟು 2009ರಲ್ಲಿ ಚಿಕ್ಕಬಳ್ಳಾಪುರದತ್ತ ಹೆಜ್ಜೆ ಹಾಕಿದರು. ಲೋಕಸಭಾ ಅಭ್ಯರ್ಥಿಯಾದರು. ಮೂರು ಬಾರಿ ಸ್ಪರ್ಧಿಸಿ ಒಂದು ಸಲ ಸೋತು, ಎರಡು ಸಲ ಗೆದ್ದು, ಕೇಂದ್ರದಲ್ಲಿ ಕಾರ್ಪೊರೇಟ್ ವ್ಯವಹಾರ, ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ವಿದ್ಯುತ್ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು.

ವೀರಪ್ಪ ಮೊಯ್ಲಿಯವರು ಕೂಡ ವೃತ್ತಿ ರಾಜಕಾರಣಿಯೇ. ಭ್ರಷ್ಟಾಚಾರದಿಂದ ಮುಕ್ತರಾದವರಲ್ಲ. 1983ರಲ್ಲಿ, ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ, ಸಚಿವ ಸಿ. ಭೈರೇಗೌಡರಿಗೆ ಎರಡು ಲಕ್ಷ ರೂಪಾಯಿ ನೀಡಿ, ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲು ಮೊಯಿಲಿ ಆಮಿಷ ಒಡ್ಡಿದರು ಎಂಬುದು ದೊಡ್ಡ ಸುದ್ದಿಯಾಗಿತ್ತು. ‘ಮೊಯ್ಲಿ ಟೇಪ್’ ಎಂದೇ ಪ್ರಚಾರ ಪಡೆದಿತ್ತು. ಹಾಗೆಯೇ ಅವರ ಸಾಹಿತ್ಯ ರಚನೆಯನ್ನು ಅನುಮಾನದಿಂದ ನೋಡುವುದೂ ಇದೆ, ಇರಲಿ.

ವೀರಪ್ಪ ಮೊಯ್ಲಿ
ವೀರಪ್ಪ ಮೊಯ್ಲಿ

2019ರಲ್ಲಿ ಬಿಜೆಪಿಯ ಬಿ.ಎನ್. ಬಚ್ಚೇಗೌಡರಿಂದ ಪರಾಭವಗೊಂಡ ವೀರಪ್ಪ ಮೊಯ್ಲಿಯವರು, ರಾಜಕೀಯ ವನವಾಸಕ್ಕೆ ತೆರಳಿದರು. 2024ರ ಚುನಾವಣೆ ಎದುರಾದಾಗ, ನಾನೂ ಸ್ಪರ್ಧಿ ಎಂದರು. ದೆಹಲಿ ಮಟ್ಟದಲ್ಲಿ ಟಿಕೆಟ್‌ಗಾಗಿ ಲಾಬಿ ಮಾಡಿದರು. ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನಿರಾಕರಿಸಿತು. ಆದರೆ, ಮೊಯ್ಲಿಯವರು ಬೇಸರ ವ್ಯಕ್ತಪಡಿಸಲಿಲ್ಲ, ಅಭ್ಯರ್ಥಿ ರಕ್ಷಾ ರಾಮಯ್ಯರ ವಿರುದ್ಧ ಬಂಡಾಯವೇಳಲಿಲ್ಲ. ಬದಲಿಗೆ ಬೆಂಬಲಕ್ಕೆ ನಿಂತು ಮತಯಾಚಿಸತೊಡಗಿದರು.

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಕರ್ನಾಟಕದ ರಾಜಕಾರಣದಲ್ಲಿ ಜಾತಿಗಳದೇ ಮೇಲುಗೈ. ಅದರಲ್ಲೂ ಬಹುಸಂಖ್ಯಾತರಾದ ಲಿಂಗಾಯತರು ಮತ್ತು ಒಕ್ಕಲಿಗರದೇ ಕಾರು-ಬಾರು. ಅಕಸ್ಮಾತ್ ವೀರಪ್ಪ ಮೊಯ್ಲಿಯವರು ಈ ಬಲಾಢ್ಯ ಜಾತಿಗೆ ಸೇರಿದ್ದರೆ, ಅವರ ಬೆನ್ನಹಿಂದೆ ಆ ಜಾತಿಯ ಜನರಿದ್ದರೆ, ಮೊಯ್ಲಿಯವರೂ ಕೂಡ ಕಾಂಗ್ರೆಸ್ಸಿನ ಇತರೆ ನಾಯಕರಂತೆ ವರ್ತಿಸುತ್ತಿದ್ದರೇನೋ!

ಆದರೆ, ಅವರು ಬೆಳೆದುಬಂದ ಸಣ್ಣ ಸಮುದಾಯ ಹಾಗೂ ಸಾಹಿತ್ಯ, ಸಂಗೀತದ ಒಲವು ವೀರಪ್ಪ ಮೊಯ್ಲಿಯವರನ್ನು ಬೇರೆಯದೇ ವ್ಯಕ್ತಿಯಾಗಿಸಿದೆ. ಹತ್ತು ಹಲವು ಪ್ರತಿಷ್ಠಿತ ಸ್ಥಾನಗಳನ್ನು ಅಲಂಕರಿಸುವ ಅವಕಾಶವನ್ನು ಕಾಂಗ್ರೆಸ್ ಪಕ್ಷ ಕಲ್ಪಿಸಿಕೊಟ್ಟಿದೆ, ವಯಸ್ಸಾಗಿದೆ, ಹೊಸಬರಿಗೆ ಅವಕಾಶ ಕಲ್ಪಿಸಿಕೊಡಬೇಕೆಂಬ ನಿರ್ಧಾರಕ್ಕೆ ಬರುವಂತೆ ಪ್ರೇರೇಪಿಸಿದೆ. ರಕ್ಷಾ ರಾಮಯ್ಯನವರ ಬೆಂಬಲಕ್ಕೆ ನಿಂತು, ಚುನಾವಣಾ ಪ್ರಚಾರಕ್ಕೂ ಹೋಗುತ್ತಿರುವುದು ಪ್ರಬುದ್ಧ ನಡೆಯಾಗಿದೆ.

ಇದನ್ನು ಓದಿದ್ದೀರಾ?: ಈ ದಿನ ವಿಶೇಷ | ದೇವೇಗೌಡರೇ, ನರೇಂದ್ರ ಮೋದಿಯವರಂಥ ಪ್ರಧಾನ ಮಂತ್ರಿಯನ್ನು ಭಾರತ ಕಂಡಿಲ್ಲವೇ?

ವೀರಪ್ಪ ಮೊಯ್ಲಿಯವರ ಈ ನಡೆ ಕಾಂಗ್ರೆಸ್ ವಲಯದಲ್ಲಿ ಚರ್ಚೆಯ ವಸ್ತುವಾಗಿದೆ. ಹಾಗೆಯೇ ಹೈಕಮಾಂಡ್ ಮತ್ತು ರಾಜ್ಯ ನಾಯಕರಿಂದ ಯಾವುದಾವುದೋ ಕಾರಣಕ್ಕೆ ದೂರವಿರುವ, ಟಿಕೆಟ್ ಸಿಗದೆ ಮುನಿಸಿಕೊಂಡಿರುವ, ಮೌನವಾಗಿರುವ, ಬಂಡಾಯದ ಬಾವುಟ ಹಾರಿಸುತ್ತಿರುವ, ಪಕ್ಷದ ಅಭ್ಯರ್ಥಿ ವಿರುದ್ಧ ಒಳಗೊಳಗೇ ಕತ್ತಿ ಮಸೆಯುತ್ತಿರುವವರಿಗೆ ಭಿನ್ನವಾಗಿ ಕಾಣುತ್ತಿದೆ. ಹಾಗೆಯೇ ಸಂಪೂರ್ಣವಾಗಿ ತೊಡಗಿಸಿಕೊಳ್ಳದೆ ಗೊಂದಲದಲ್ಲಿರುವ, ಕೆ.ಎಚ್. ಮುನಿಯಪ್ಪ, ಕೆ.ಆರ್. ರಮೇಶಕುಮಾರ್, ಬಿ.ಕೆ. ಹರಿಪ್ರಸಾದ್, ಆರ್.ವಿ. ದೇಶಪಾಂಡೆ, ಮಾರ್ಗರೆಟ್ ಆಳ್ವ, ಪ್ರಕಾಶ್ ಹುಕ್ಕೇರಿ, ಎಸ್.ಆರ್. ಪಾಟೀಲ್, ಶಿವಶಂಕರ ರೆಡ್ಡಿ, ಬಿ. ಶಿವರಾಂ, ಟಿ.ಬಿ. ಜಯಚಂದ್ರರಂತಹ ಹಿರಿಯ ಕಾಂಗ್ರೆಸ್ ನಾಯಕರಿಗೆ ಮೊಯ್ಲಿಯವರ ನಡೆ, ಮನ ಪರಿವರ್ತನೆಗೆ ಕಾರಣವಾಗಬೇಕಿದೆ.

ಪಕ್ಷದೊಳಗಿನ ಅಸಮಾಧಾನ ಎಷ್ಟೇ ಇರಲಿ, ಹೊಸ ನೀರು ಬಂದಾಗ ಹಳೇ ನೀರು ಕೊಚ್ಚಿ ಹೋಗಲೇಬೇಕು. ಅದು ನಿಸರ್ಗ ನಿಯಮ. ಹಾಗೆಯೇ ನೀವು ರಾಜಕಾರಣಕ್ಕೆ ಬಂದಾಗ, ನಿಮಗಿಂತ ಹಿಂದಿದ್ದವರು ಹಿನ್ನೆಲೆಗೆ ಸರಿದು ನಿಮಗೆ ದಾರಿ ಮಾಡಿಕೊಡದಿದ್ದರೆ, ಇಂದು ನೀವು ಈ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಅದನ್ನು ಒಮ್ಮೆ ನೆನಪು ಮಾಡಿಕೊಂಡು, ಹೊಸಬರಿಗೆ ದಾರಿ ಮಾಡಿಕೊಡಬೇಕಾಗಿದೆ. ಅದಕ್ಕಿಂತಲೂ ಹೆಚ್ಚಾಗಿ, ದೇಶಕ್ಕೆ ವಕ್ಕರಿಸಿರುವ ಸಂಘ ಪರಿವಾರ, ಬಿಜೆಪಿ ಮತ್ತು ಮೋದಿಯಿಂದ ದೇಶವನ್ನು ಮುಕ್ತ ಮಾಡಬೇಕಿದೆ. ಅದರ ಮುಂದೆ ನಿಮ್ಮ ಅಸಮಾಧಾನ ತೀರಾ ಸಣ್ಣದು ಎಂದು ತಿಳಿದು, ಮನಸ್ಸು ಮಾಡಬೇಕಿದೆ. ದೊಡ್ಡ ಮನುಷ್ಯ ಎನಿಸಿಕೊಳ್ಳಬೇಕಾಗಿದೆ.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

Download Eedina App Android / iOS

X