ಈ ದಿನ.ಕಾಮ್ ನಡೆಸಿದ ಅಂತಿಮ ಹಂತದ ಈ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ 9, ಬಿಜೆಪಿ -ಜೆಡಿಎಸ್ 7 ಸ್ಥಾನ ಗಳಿಸುವುದು ನಿಶ್ಚಿತ. ಉಳಿದ 12 ಕ್ಷೇತ್ರಗಳಲ್ಲಿ ತೀವ್ರ ಹಣಾಹಣಿಯಿದೆ. ಆದರೆ ಅದರಲ್ಲೂ 5-7 ಸ್ಥಾನಗಳಲ್ಲಿ ಕಾಂಗ್ರೆಸ್ ಮುಂದೆ ಇದೆ. ಒಟ್ಟಾರೆ ಕಾಂಗ್ರೆಸ್ 13-18ಕ್ಕೂ ಹೆಚ್ಚು ಮತ್ತು ಬಿಜೆಪಿ-ಜೆ.ಡಿ.(ಎಸ್) ಮೈತ್ರಿಯು 10-13 ಸ್ಥಾನಗಳ ಸಮೀಪಕ್ಕೆ ಹೋಗಲಿವೆ ಎಂಬುದು ಸಮೀಕ್ಷೆಯ ಅಂದಾಜು.
ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕಿನ್ನು ಹತ್ತೇ ದಿನಗಳು ಉಳಿದಿರುವ ಈ ಹಂತದಲ್ಲಿ ರಾಜ್ಯದ ಮತದಾರರ ಒಲವು ದಿನಗಳೆದಂತೆ ಕಾಂಗ್ರೆಸ್ ಕಡೆಗೆ ಹೆಚ್ಚತೊಡಗಿದೆ ಎಂಬ ಚಿತ್ರಣ ಈ ದಿನ.ಕಾಮ್ ನಡೆಸಿದ ಅಂತಿಮ ಹಂತದ ಸಮೀಕ್ಷೆಯಿಂದ ಹೊರಹೊಮ್ಮಿದೆ.
ಆದರೆ ಮತದಾರರ ಒಟ್ಟಾರೆ ಒಲವು ನಿಲುವು (ಟ್ರೆಂಡ್) ಕಾಂಗ್ರೆಸ್ ಕಡೆಗಿದ್ದು, ಇಳಿಯದೆ ಹೀಗೆಯೇ ಮುಂದುವರೆದಲ್ಲಿ ಹಸ್ತ ಪಕ್ಷಕ್ಕೆ 20ಕ್ಕೂ ಹೆಚ್ಚು ಸ್ಥಾನಗಳು ಲಭಿಸುವುದೇ ಅಲ್ಲದೆ, ಕೆಲವು ಕ್ಷೇತ್ರಗಳಲ್ಲಿ ಅಚ್ಚರಿಯ ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ.
ಇದೇ ಸಂದರ್ಭದಲ್ಲಿ ತನ್ನ ಜನಪರ ಪ್ರಣಾಳಿಕೆಯನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಕಾಂಗ್ರೆಸ್ ವಿಫಲವಾದರೆ, ಸುಸಜ್ಜಿತ ಚುನಾವಣಾ ಯಂತ್ರಾಂಗ ಹೊಂದಿರುವ ಬಿಜೆಪಿಯು ಮುನ್ನಡೆ ಕಾಣುವಲ್ಲಿ ಅನುಮಾನವಿಲ್ಲ.
(ಕಳೆದ ವರ್ಷ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸೀಟು ಹಂಚಿಕೆಯ ಬಗ್ಗೆ ನಿಖರವಾಗಿ ಹೇಳಿದ್ದ ಚುನಾವಣಾಪೂರ್ವ ಸಮೀಕ್ಷೆ)

ಕಳೆದ ವರ್ಷ ರಾಜ್ಯ ವಿಧಾನಸಭಾ ಚುನಾವಣೆ ಮತದಾನಕ್ಕೆ 20 ದಿನಗಳಷ್ಟು ಮುಂಚಿತವಾಗಿಯೇ ಪ್ರಕಟಗೊಂಡಿದ್ದ ಈ ದಿನ ಮತದಾನಪೂರ್ವ ಸಮೀಕ್ಷೆಯ ಫಲಿತಾಂಶ ಕನ್ನಡಿ ಬಿಂಬದಷ್ಟೇ ಖಚಿತವಾಗಿತ್ತು. ಇದಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಪ್ರಸಕ್ತ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಹತ್ತು ದಿನಗಳಷ್ಟೇ ಬಾಕಿ ಇವೆ. ಈ ಹಂತದಲ್ಲೂ ರಾಜ್ಯದ ಮತದಾರರು ಇಂತಹ ಪಕ್ಷವನ್ನೇ ಹೆಚ್ಚು ನೆಚ್ಚುತ್ತೇವೆಂದು ಮನದಾಳದ ನಿರ್ಧಾರ ಮಾಡಿಲ್ಲ. ಹೀಗಾಗಿ ಕಡೆಯ ದಿನಗಳಲ್ಲಿ ನಡೆಯುವ ‘ಚುನಾವಣಾ ನಿರ್ವಹಣೆ’ಯು ಫಲಿತಾಂಶದ ಏರು ಮತ್ತು ಇಳಿತಗಳನ್ನು ನಿರ್ಧರಿಸುವ ಚುನಾವಣೆ ಇದಾಗಿದೆ.
ಕಳೆದ ಒಂದೇ ತಿಂಗಳಲ್ಲಿ ಕಾಂಗ್ರೆಸ್‌ನ ವೋಟ್ ಶೇರ್ 2.64%ರಷ್ಟು ಹೆಚ್ಚಳ ಕಂಡಿದೆ. ಬಿಜೆಪಿ–ಜೆಡಿಎಸ್ ಮೈತ್ರಿಯ ವೋಟ್ ಶೇರ್ 1.92% ಹೆಚ್ಚಾಗಿದೆ. ಆದರೆ ನರೇಂದ್ರ ಮೋದಿ ಸರ್ಕಾರದ ಹತ್ತು ವರ್ಷಗಳ ಆಡಳಿತ ತೃಪ್ತಿ ತಂದಿದೆಯೆಂದು ಶೇ.50ರಷ್ಟು ಮತದಾರರು, ತೃಪ್ತಿಕರವಾಗಿಲ್ಲ ಎಂದು ಶೇ.39ರಷ್ಟು ಮತದಾರರು ಹಾಗೂ ಗೊತ್ತಿಲ್ಲ ಎಂದು ಶೇ.11ರಷ್ಟು ಮತದಾರರು ಹೇಳಿದ್ದಾರೆ.
ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ–ದಳ ಮೈತ್ರಿಯ ನಡುವಣ ಹಣಾಹಣಿ ಎಷ್ಟು ನಿಕಟ ಮತ್ತು ಎಷ್ಟು ತೀವ್ರವಿದೆ ಎಂದರೆ ನಿರ್ದಿಷ್ಟವಾಗಿ ಯಾರು ಗೆಲ್ಲಬಹುದು ಎಂದು ಕರಾರುವಾಕ್ಕಾಗಿ ಹೇಳುವ ಅಖೈರು ಚಿತ್ರಣ ಎರಡು ದಿನಗಳ ಹಿಂದಿನವರೆಗೂ ರೂಪು ತಳೆದಿರಲಿಲ್ಲ. ಸಮೀಕ್ಷೆಯ ಅಂಕಿ–ಅಂಶಗಳು ಇಂತಹ ಸ್ಥಿತಿಯತ್ತ ಸ್ಪಷ್ಟವಾಗಿ ಬೆರಳು ತೋರಿವೆ.
ಅಷ್ಟೇ ಅಲ್ಲ ಬಿಜೆಪಿಗಿಂತ13-14% ನಷ್ಟು ಮತ ಪ್ರಮಾಣ ಕಡಿಮೆ ಇದ್ದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಈ ಬಾರಿ ಉತ್ತಮ ಸ್ಥಿತಿಯಲ್ಲಿದೆ.
ಅಂತಿಮ ಹಂತದ ಈ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ 9, ಬಿಜೆಪಿ –ಜೆಡಿಎಸ್ 7 ಸ್ಥಾನ ಗಳಿಸುವುದು ನಿಶ್ಚಿತ. ಉಳಿದ 12 ಕ್ಷೇತ್ರಗಳಲ್ಲಿ ತೀವ್ರ ಹಣಾಹಣಿಯಿದೆ. ಆದರೆ ಅದರಲ್ಲೂ 5-7 ಸ್ಥಾನಗಳಲ್ಲಿ ಕಾಂಗ್ರೆಸ್ ಮುಂದೆ ಇದೆ. ಒಟ್ಟಾರೆ ಕಾಂಗ್ರೆಸ್ 13-18ಕ್ಕೂ ಹೆಚ್ಚು ಮತ್ತು ಬಿಜೆಪಿ–ಜೆ.ಡಿ.(ಎಸ್) ಮೈತ್ರಿಯು 10-13 ಸ್ಥಾನಗಳ ಸಮೀಪಕ್ಕೆ ಹೋಗಲಿವೆ ಎಂಬುದು ಸಮೀಕ್ಷೆಯ ಅಂದಾಜು.
ಆದರೆ ಇಲ್ಲಿಯವರೆಗೆ ತನ್ನ ವೋಟ್ ಶೇರನ್ನು ಹೆಚ್ಚಿಸಿಕೊಳ್ಳುತ್ತಲೇ ನಡೆದಿರುವ ಕಾಂಗ್ರೆಸ್ ನ ಮೇಲುಗೈ ಹೀಗೆಯೇ ಮುಂದುವರೆದದ್ದೇ ಆದಲ್ಲಿ ಹಸ್ತದ ಪಕ್ಷ 18 ಸೀಟುಗಳನ್ನು ಗೆಲ್ಲುವುದರಲ್ಲಿ ಯಾವ ಶಂಕೆಯೂ ಇಲ್ಲ ಎಂದು ಸಮೀಕ್ಷೆಯ ಅಂಕಿ–ಅಂಶಗಳು ಸೂಚಿಸಿವೆ.
1996ರಿಂದ ಕರ್ನಾಟಕದಲ್ಲಿನ ಪ್ರತಿ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿ ಮತಗಳ ಪ್ರಮಾಣ ಸತತ ಹೆಚ್ಚುತ್ತಲೇ ಸಾಗಿತ್ತು. ಆದರೆ ಕಳೆದ 28 ವರ್ಷಗಳಲ್ಲಿ ಈ ಬಾರಿ ಮೊದಲ ಸಲ ಬಿಜೆಪಿ ವೋಟ್ ಶೇರನ್ನು ಕಳೆದುಕೊಂಡಿದೆ ಎಂಬುದು ಈ ಸಮೀಕ್ಷೆಯಲ್ಲಿ ಕಂಡು ಬಂದಿರುವ ವಿಶೇಷ ಸಂಗತಿ.
ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ನಿಖರವಾದ ಚುನಾವಣಾ ಪೂರ್ವ ಸಮೀಕ್ಷೆ ವರದಿ ನೀಡಿದ್ದ ಕರ್ನಾಟಕದ ಏಕೈಕ ಮಾಧ್ಯಮ ಈ ದಿನ.ಕಾಮ್ ಈ ಸಲದ ಲೋಕಸಭಾ ಚುನಾವಣೆಯಲ್ಲಿ ಮತದಾರರ ಒಲವು ಯಾರ ಕಡೆಗಿದೆ, ಈ ಬಾರಿ ಯಾವ ಪಕ್ಷಕ್ಕೆ ಹೆಚ್ಚು ಸ್ಥಾನ ಲಭಿಸಬಹುದು ಎಂಬ ಬಗ್ಗೆ ಎರಡು ಬಾರಿ ಸಮೀಕ್ಷೆ ನಡೆಸಿದೆ.
ಅಭ್ಯರ್ಥಿಗಳ ಘೋಷಣೆಯ ಮುನ್ನ ನಡೆಸಿದ ಮೊದಲ ಸಮೀಕ್ಷೆಯಲ್ಲಿ ಕಾಂಗ್ರೆಸ್ 43.77%, ಬಿಜೆಪಿ–ಜೆಡಿಎಸ್ 42.35% ವೋಟ್ ಶೇರ್ ಪಡೆದಿದ್ದವು. 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ಮತ್ತು ಬಿಜೆಪಿ–ಜೆಡಿಎಸ್ ಮೈತ್ರಿಯು 10 ಕ್ಷೇತ್ರಗಳನ್ನು ವಶಪಡಿಸಿಕೊಳ್ಳುವ ಸಾಧ್ಯತೆಗಳನ್ನು ಮೊದಲ ಸಮೀಕ್ಷೆ ಸಾರಿತ್ತು. 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ–ದಳ ಮೈತ್ರಿಯ ನಡುವೆ ತೀವ್ರ ಹಣಾಹಣಿ ಇದೆಯೆಂದೂ, ಈ ಏಳು ಕ್ಷೇತ್ರಗಳ ತೀವ್ರ ಪೈಪೋಟಿಯಲ್ಲೂ, 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೇಲುಗೈ ಹೊಂದಿದೆಯೆಂದೂ ಹೇಳಿತ್ತು. ಒಟ್ಟಾರೆಯಾಗಿ ಕಾಂಗ್ರೆಸ್ ಪರ ಮತಗಳ ಪ್ರಮಾಣದಲ್ಲಿ ಕೊಂಚ ಜಾಸ್ತಿಯಾದರೂ ಕಾಂಗ್ರೆಸ್ 17 ಮತ್ತು ಬಿಜೆಪಿ –ಜೆಡಿಎಸ್ ಮೈತ್ರಿ 11 ಸ್ಥಾನಗಳಲ್ಲಿ ಮೇಲುಗೈ ಹೊಂದಿರುವುದಾಗಿ ಎಂದು ಈ ದಿನದ ಮೊದಲ ಸುತ್ತಿನ ಸಮೀಕ್ಷೆ ಹೇಳಿತ್ತು.
ಇದೀಗ ಅಂತಿಮ ಹಂತದ ಸಮೀಕ್ಷೆಯ ವರದಿಯನ್ನು ‘ಈ ದಿನ.ಕಾಮ್’ ಇಂದು ಪ್ರಕಟಿಸುತ್ತಿದೆ. ಎಲ್ಲ ಪಕ್ಷಗಳ ಅಧಿಕೃತ ಅಭ್ಯರ್ಥಿಗಳ ಘೋಷಣೆಯಾದ ನಂತರ, ಅಂದರೆ ಇದೇ ಮಾರ್ಚ್ 28ರಿಂದ ಏಪ್ರಿಲ್ 14ರವರೆಗೆ 42,674 ಮತದಾರರನ್ನು ಈ ಸಮೀಕ್ಷೆಗಾಗಿ ಸಂದರ್ಶನ ಮಾಡಲಾಗಿದೆ. ಈ ಸಮೀಕ್ಷಾ ವರದಿಯ ಪ್ರಕಾರ ಕಾಂಗ್ರೆಸ್ ಕಡೆಗೆ ಮತದಾರರ ಒಲವು ಹೆಚ್ಚಾಗಿದೆ. ಒಂದು ತಿಂಗಳ ಅಂತರದಲ್ಲಿ ಕಾಂಗ್ರೆಸ್ ವೋಟ್ ಶೇರ್ 2.64% ಹೆಚ್ಚಾಗಿದೆ. ಬಿಜೆಪಿ–ಜೆಡಿಎಸ್ ವೋಟ್ ಶೇರ್ ನಲ್ಲಿ 1.92% ಏರಿಕೆಯಾಗಿದೆ.
ಮೋದಿಯವರ ಹತ್ತು ವರ್ಷಗಳ ಅವಧಿಯಲ್ಲಿ ಬೆಲೆಯೇರಿಕೆ, ನಿರುದ್ಯೋಗ ಹೆಚ್ಚಳ, ಭ್ರಷ್ಟಾಚಾರ ಹೆಚ್ಚಳ ಆಗಿದೆ ಎಂದು ಮತದಾರರು ಒಪ್ಪಿಕೊಂಡಿದ್ದಾರೆ. ಆದರೆ ಮೋದಿ ಭ್ರಷ್ಟಾಚಾರ ಮಾಡಿಲ್ಲ ಎಂದು ಹೇಳುವ ಮೂಲಕ ಪ್ರಧಾನಿ ಕುರಿತು ತಾವು ಹೊಂದಿರುವ ‘ಶುದ್ಧ ಹಸ್ತ ವ್ಯಕ್ತಿ’ ಎಂಬ ವರ್ಚಸ್ಸನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ ಎಂದು ಈ ಸಮೀಕ್ಷೆಯಲ್ಲಿ ಕಂಡು ಬಂದಿದೆ.
ಸಮೀಕ್ಷೆಯಲ್ಲಿ ಬೆಲೆಯೇರಿಕೆ, ನಿರುದ್ಯೋಗ, ಭ್ರಷ್ಟಾಚಾರ, ತೆರಿಗೆ ಅನ್ಯಾಯ, ಚುನಾವಣಾ ಬಾಂಡ್ ಹಗರಣ, ಕರ್ನಾಟಕದ ಪಂಚ ಗ್ಯಾರಂಟಿ, ಹತ್ತು ವರ್ಷಗಳ ಮೋದಿ ಆಡಳಿತ ಈ ಎಲ್ಲ ವಿಚಾರಗಳ ಬಗ್ಗೆ ಮತದಾರರು ಉತ್ತರಿಸಿದ್ದಾರೆ.
ಮೋದಿಯವರ ಹತ್ತು ವರ್ಷಗಳ ಆಡಳಿತದಲ್ಲಿ ಬೆಲೆಯೇರಿಕೆ, ನಿರುದ್ಯೋಗ, ಭ್ರಷ್ಟಾಚಾರ ಹೆಚ್ಚಿರುವುದು ನಿಜ ಎಂದು ಒಪ್ಪಿಕೊಂಡರೂ ಆ ಹೊಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ತಲೆಗೆ ಹೊರಿಸಲು ಜನ ಸಿದ್ಧರಿಲ್ಲ. ಬಿಜೆಪಿ ಭ್ರಷ್ಟಾಚಾರ ಮಾಡಿದೆ ಎಂದು ಒಪ್ಪಿಕೊಂಡರೂ ಮೋದಿ ಭ್ರಷ್ಟ ಅಲ್ಲ ಎನ್ನುವವರ ಸಂಖ್ಯೆ ಹೆಚ್ಚು.
ಆದರೆ ಕರ್ನಾಟಕದಲ್ಲಿ ಸಿದ್ಧರಾಮಯ್ಯ ಅವರೇ ಮೋದಿಯವರಿಗಿಂತ ಹೆಚ್ಚು ಜನಪ್ರಿಯ ನಾಯಕ. 42.27% ಜನ ಸಿದ್ದುಗೆ ಜೈ ಎಂದರೆ, ಮೋದಿಯವರಿಗೆ 40.81% ರಷ್ಟು ಮತದಾರರು ಸೈ ಎಂದಿದ್ದಾರೆ. ಮೋದಿಗಿಂತ ಒಂದು ಮುಕ್ಕಾಲು ಪರ್ಸೆಂಟ್ ಹೆಚ್ಚು ಜನ ಸಿದ್ದರಾಮಯ್ಯ ಅವರನ್ನು ಮೆಚ್ಚಿದ್ದಾರೆ.
ನಿಮ್ಮ ಪ್ರಕಾರ ಈ ಬೆಲೆಯೇರಿಕೆಗೆ ಯಾರು ಹೆಚ್ಚು ಕಾರಣ?
ಬೆಲೆಯೇರಿಕೆ ಆಗಿದೆ ಎಂದು 85% ಜನ ಹೇಳಿದ್ದಾರೆ (ಮೊದಲ ಸಮೀಕ್ಷೆ 76.55%.) 44.17% ಜನ ಬೆಲೆಯೇರಿಕೆಗೆ ಬಿಜೆಪಿಯೇ ಕಾರಣ ಅಂದಿದ್ದಾರೆ. 23.07% ಕಾಂಗ್ರೆಸ್ ಕಾರಣ ಎಂದಿದ್ದಾರೆ. 21% ಮಂದಿ ಎಲ್ಲರೂ ಕಾರಣ ಎಂದರೆ, ಗೊತ್ತಿಲ್ಲ ಎಂದವರು 8.71%.
ಕಳೆದ ಹತ್ತು ವರ್ಷಗಳಲ್ಲಿ ನಿರುದ್ಯೋಗ ಹೆಚ್ಚಾಗಿದೆಯಾ?ಕಡಿಮೆಯಾಗಿದೆಯಾ? ಹೆಚ್ಚಾಗಿದ್ದರೆ ಯಾರು ಹೊಣೆ?
ಜಾಸ್ತಿಯಾಗಿದೆ. ಅದಕ್ಕೆ ಬಿಜೆಪಿಯೇ ಕಾರಣ ಎಂದು 37.89% ಮಂದಿ ಹೇಳಿದ್ದಾರೆ. 19.88%ರಷ್ಟು ಮತದಾರರು ಕಾಂಗ್ರೆಸ್ ಕಾರಣ ಎಂದಿದ್ದಾರೆ. ಎಲ್ಲರೂ ಕಾರಣ ಎಂದು 18.26% ಮತ್ತು ಗೊತ್ತಿಲ್ಲ ಎಂದು 11.29% ಮಂದಿ ಹೇಳಿದ್ದಾರೆ. ಜೆಡಿಎಸ್ ಕಾರಣ ಎಂದು 1.64%, ಕಡಿಮೆಯಾಗಿದೆ ಎಂದು 11.03% ಜನ ಹೇಳಿದ್ದಾರೆ.
ಹತ್ತು ವರ್ಷಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆಯೋ ಅಥವಾ ಕಡಿಮೆಯಾಗಿದೆಯೋ? ಹೆಚ್ಚಾಗಿದ್ದರೆ ಯಾರು ಕಾರಣ?
ಜಾಸ್ತಿಯಾಗಿದ್ದು, ಅದಕ್ಕೆ ಬಿಜೆಪಿ ಕಾರಣ ಎಂದು 36.4% ರಷ್ಟು ಮಂದಿ, 21.45% ಮಂದಿ ಕಾಂಗ್ರೆಸ್ ಕಾರಣ, 18.08%ರಷ್ಟು ಮಂದಿ ಎಲ್ಲರೂ ಕಾರಣವೆಂದೂ ಹೇಳಿದ್ದಾರೆ. 11.16% ಗೊತ್ತಿಲ್ಲ ಎಂದವರು. 11.36% ಮತದಾರರ ಪ್ರಕಾರ ಭ್ರಷ್ಟಾಚಾರ ಕಡಿಮೆ ಆಗಿದೆ.
ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯದ ತೆರಿಗೆ ಪಾಲಿನ ಹಣ ಕಡಿತಗೊಳಿಸಿದೆ ಎಂದು ಭಾವಿಸುತ್ತೀರಾ?
ಅನ್ಯಾಯ ಆಗಿದೆ ಎಂದವರು 39.32%. ಇಲ್ಲ ಎಂದವರು 25.32%, ಗೊತ್ತಿಲ್ಲ ಎಂದವರು 35.36%
ಕೇಂದ್ರ ಬಿಜೆಪಿ ಸರ್ಕಾರದ ಈ ಹತ್ತು ವರ್ಷಗಳ ಆಡಳಿತ ನರೇಂದ್ರ ಮೋದಿ ಆಡಳಿತ ನಿಮಗೆ ತೃಪ್ತಿ ತಂದಿದೆಯೇ ? ಇಲ್ಲವೇ?
49.99% ತೃಪ್ತಿ ತಂದಿದೆ, 38.64% ತೃಪ್ತಿಕರವಾಗಿಲ್ಲ, 11.36% ಗೊತ್ತಿಲ್ಲ ಎಂದಿದ್ದಾರೆ.
ಈ ಮಧ್ಯೆ ಕಾಂಗ್ರೆಸ್ ಪಕ್ಷದ 25 ಗ್ಯಾರಂಟಿಗಳ “ನ್ಯಾಯ ಪತ್ರ” (ಚುನಾವಣಾ ಪ್ರಣಾಳಿಕೆ) ಜನರ ಬಳಿ ಇನ್ನೂ ತಲುಪಿಲ್ಲ. ಮಹಾಲಕ್ಷ್ಮಿ ಯೋಜನೆಯಡಿ ವರ್ಷಕ್ಕೆ ಒಂದು ಕುಟುಂಬಕ್ಕೆ 1 ಲಕ್ಷ ರೂಪಾಯಿ ಸಹಾಯ ಧನ ಮತ್ತು ರೈತರ ಸಂಪೂರ್ಣ ಸಾಲ ಮನ್ನಾ ಘೋಷಣೆ ಮನೆ ಮನೆಗೂ ತಲುಪಿದರೆ ಕಾಂಗ್ರೆಸ್ ಮತ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಹಾಗಾದರೆ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಇಪ್ಪತ್ತಕ್ಕೂ ಹೆಚ್ಚಿನ ಸ್ಥಾನ ಲಭಿಸಿ ಅಚ್ಚರಿಯ ಫಲಿತಾಂಶ ಬರಬಹುದು.
