2024ರ ಲೋಕಸಭಾ ಚುನಾವಣೆ ಬಗಿರಂಗ ಪ್ರಚಾರಕ್ಕೆ ಗುರುವಾರ ಸಂಜೆ ತೆರೆಬಿದ್ದಿದೆ. ಕೊನೆಯ ಹಂತದ ಮತದಾನ ನಡೆಯಲಿದೆ. ಚುನಾವಣೆಯಲ್ಲಿ ಗೆದ್ದು ಬಿಜೆಪಿ ಮತ್ತೆ ಅಧಿಕಾರ ಹಿಡಿಯಲು ಹವಣಿಸುತ್ತಿದೆ. ಅದಕ್ಕಾಗಿ, ದೇಶಾದ್ಯಂತ ಪ್ರಧಾನಿ ಮೋದಿ 155 ರ್‍ಯಾಲಿಗಳನ್ನು ನಡೆಸಿದ್ದಾರೆ. ಅಷ್ಟೇ ಭಾಷಣಗಳನ್ನು ಮಾಡಿದ್ದಾರೆ. ತಮ್ಮ ಭಾಷಣಗಳಲ್ಲಿ ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ವಿಪಕ್ಷಗಳನ್ನು ದೂರಿದ್ದಾರೆ. ಅವರು ತಮ್ಮ 155 ಭಾಷಣಗಳಲ್ಲಿ ಬರೋಬ್ಬರಿ 2,942 ಬಾರಿ ಕಾಂಗ್ರೆಸ್ ಹೆಸರನ್ನು ಉಲ್ಲೇಖಿಸಿದ್ದಾರೆ. ಆದರೆ, ಜನರ ಸಮಸ್ಯೆ, ಬಡತನ, ಉದ್ಯೋಗದ ಬಗ್ಗೆ ಅವರು ಉಲ್ಲೇಖಿಸಿರುವುದು ತೀರಾ ಕಡಿಮೆ. ಅದರಲ್ಲೂ ಅವರೇ ಹೇಳುವ ‘ಅಮೃತಕಾಲ’ವಂತೂ ಅವರ ಭಾಷಣದಲ್ಲಿ ಕಾಣೆಯಾಗಿದೆ.
ಇಂಗ್ಲಿಷ್ ಸುದ್ದಿ ತಾಣ ‘ದಿ ಕ್ವಿಂಟ್’ ಮೋದಿ ಅವರು ತಮ್ಮ ಭಾಷಣದಲ್ಲಿ ಹೆಚ್ಚಾಗಿ ಉಲ್ಲೇಖಿಸಿದ ಅಂಶಗಳು ಅಥವಾ ಪದಗಳ ಬಗ್ಗೆ ವಿಶ್ಲೇಷಣೆ ನಡೆಸಿದೆ. ಅವರು ಯಾವ ಪದಗಳನ್ನು ಹೆಚ್ಚಾಗಿ ಬಳಸಿದ್ದಾರೆ. ಯಾವ ಅಂಶಗಳ ಬಗ್ಗೆ ಹೆಚ್ಚಾಗಿ ಗಮನ ಹರಿಸಿದ್ದಾರೆ ಎಂಬುದನ್ನು ಅಂಕಿಗಳಲ್ಲಿ ನೀಡಿದೆ.
ಉದಾಹರಣೆಗೆ, ಮೋದಿ ಅವರು ಮೊದಲ ಮತ್ತು ಎರಡನೇ ಹಂತದ ಮತದಾನದ ಪ್ರಚಾರಗಳಲ್ಲಿ ‘ಮುಸ್ಲಿಮರು’ ಎಂಬ ಪದವನ್ನು ಪ್ರತಿ ಭಾಷಣದಲ್ಲಿ ಸರಾಸರಿ ಒಂದಕ್ಕಿಂತ ಕಡಿಮೆ ಬಾರಿ ಬಳಸಿದ್ದಾರೆ. ಆದರೆ, 3ನೇ ಮತ್ತು ನಂತರದ ಮತದಾನಗಳ ಪ್ರಚಾರದಲ್ಲಿ ಮುಸ್ಲಿಮರು ಪದದ ಬಳಕೆ ದುಪ್ಪಟ್ಟುಗೊಂಡಿದೆ.
ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಪದವನ್ನು ಮೋದಿ ಅವರು ಅತ್ಯಂತ ಹೆಚ್ಚು ಬಾರಿ ಬಳಸಿದ್ದಾರೆ. ಆದರೆ, ಯುವಜನರಿಗೆ ಸಂಬಂಧಿಸಿದ ಉದ್ಯೋಗದ ಬಗ್ಗೆ ಕೇವಲ 53 ಬಾರಿ ಮಾತ್ರವೇ ಮಾತನಾಡಿದ್ದಾರೆ. ಹಿಂದೆ, ಮಹಿಳೆಯರ ರಕ್ಷಣೆಯ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದ ಮೋದಿ ಅವರು ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ, ಮಣಿಪುರ ಹಿಂಸಾಚಾರ, ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ ನಡೆದಿರುವ ಇಂತಹ ಸಮಯದಲ್ಲಿ ಮಹಿಳೆಯರ ಬಗೆಗಿನ ಉಲ್ಲೇಖಗಳೂ ತೀರಾ ಕಡಿಮೆ ಇವೆ. ಅವರು ಮಹಿಳೆ ಪದವನ್ನು 244 ಬಾರಿ ಮಾತ್ರವೇ ಉಲ್ಲೇಖಿಸಿದ್ದಾರೆ.
ಭಾರತದ ರಾಜಕಾರಣದಲ್ಲಿ ಪ್ರಮುಖವಾಗಿರುವ ಪದಗಳನ್ನು ಮೋದಿ ಎಷ್ಟು ಬಾರಿ ಬಳಸಿದ್ದಾರೆ ಎಂಬುದರ ಸಂಖ್ಯೆಗಳು ಇಲ್ಲಿವೆ;
ಕಾಂಗ್ರೆಸ್: 2942
ಮೋದಿ*: 2862
ಬಡವರು: 949
SC/ST/OBC: 780
ಅಭಿವೃದ್ಧಿ: 633
ಇಂಡಿಯಾ ಮೈತ್ರಿಕೂಟ: 518
ಮೋದಿ ಕಿ ಗ್ಯಾರಂಟಿ: 342
ಭ್ರಷ್ಟಾಚಾರ: 341
ಮುಸ್ಲಿಮರು: 286
ಮಹಿಳೆಯರು: 244
ರಾಮಮಂದಿರ: 244
ವಿಕ್ಷಿತ್ ಭಾರತ್: 119
ಪಾಕಿಸ್ತಾನ: 104
ಪರಿವಾರವಾದ: 91
ಉದ್ಯೋಗ: 53
ವಿರೋಧ ಪಕ್ಷಗಳು: 35
ಆತ್ಮನಿರ್ಭರ ಭಾರತ: 23
ಅಮೃತಕಾಲ: 4
ವಿಶೇಷವೆಂದರೆ, ಮೋದಿ ಅವರು ತಮ್ಮ ಹೆಸರನ್ನೇ 2862 ಬಾರಿ ಬಳಸಿದ್ದಾರೆ. ಈ ಸಂಖ್ಯೆಯಲ್ಲಿ ‘ಮೋದಿ ಕಿ ಗ್ಯಾರಂಟಿ’ (342) ಪದಗುಚ್ಛದ ಅಂಕಿಅಂಶವೂ ಒಳಗೊಂಡಿದೆ.