ಚುನಾವಣಾ ಬಾಂಡ್‌ಗಳ ಮಾಹಿತಿ ಹೊರಬಿದ್ದ ಬಳಿಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬೃಹತ್ ಹಗರಣ ಬಯಲಾಗಿದೆ. ಅಲ್ಲದೆ, ಈ ಹಗರಣದಲ್ಲಿ ನಾನಾ ರೀತಿಯ ಅಚ್ಚರಿಯ ಸಂಗತಿಗಳು ಬೆಳಕಿಗೆ ಬರುತ್ತವೆ. ಐಟಿ ರೈಡ್‌ಗಳಿಗೆ ಹೆದರಿ ಹಲವು ಕಂಪನಿಗಳು ಬಿಜೆಪಿಗೆ ದೇಣಿಗೆ ನೀಡಿವೆ. ಇನ್ನು, ಕೆಲ ಕಂಪನಿಗಳು ದೇಣಿಗೆ ನೀಡಿ, ಗುತ್ತಿಗೆ ಪಡೆದಿವೆ. ಇದೀಗ, ದಲಿತ ಕುಟುಂಬವೊಂದು ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ ದೇಣಿಗೆ ನೀಡಿರುವುದು ಕಂಡುಬಂದಿದೆ.
ಚುನಾವಣಾ ಆಯೋಗವು ಬಿಡುಗಡೆ ಮಾಡಿದ ಎಸ್‌ಬಿಐ ಅಂಕಿಅಂಶಗಳ ಪ್ರಕಾರ, ಗುಜರಾತ್‌ನ ಕಚ್ ಜಿಲ್ಲೆಯ ಅನ್‌ಜಾರ್‌ನ ದಲಿತ ಕುಟುಂಬದ ಆರು ಸದಸ್ಯರ ಹೆಸರಿನಲ್ಲಿ 2023ರ ಅಕ್ಟೋಬರ್ 11ರಂದು ಬರೋಬ್ಬರಿ 11,00,14,000 ರೂ. (11 ಕೋಟಿ 14 ಸಾವಿರ) ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಲಾಗಿದೆ. ಅವುಗಳಲ್ಲಿ 10 ಕೋಟಿ ರೂ.ಗಳನ್ನು 2023ರ ಅಕ್ಟೋಬರ್ 16ರಂದು ಬಿಜೆಪಿ ನಗದೀಕರಿಸಿಕೊಂಡಿದೆ. ಇನ್ನುಳಿದ 1 ಕೋಟಿ 14 ಸಾವಿರ ರೂ,ಗಳನ್ನು ಅದೇ ತಿಂಗಳ 18ರಂದು ಶಿವಸೇನೆ ನಗದೀಕರಿಸಿಕೊಂಡಿದೆ.
ಆದಾಗ್ಯೂ, ಗುಜರಾತ್‌ನ ವೆಲ್‌ಸ್ಪನ್ ಗ್ರೂಪ್‌ನ ಭಾಗವಾಗಿರುವ ‘ವೆಲ್‌ಸ್ಪನ್ ಅಂಜಾರ್ ಎಸ್‌ಇಜೆಡ್ ಲಿಮಿಟೆಡ್’ನ ಅಧಿಕಾರಿಯೊಬ್ಬರು ಚುನಾವಣಾ ಬಾಂಡ್‌ಗಳನ್ನು ಖರೀದಿಸಿ ನಮಗೆ ‘ಮೋಸ’ ಮಾಡಿದ್ದಾರೆ ಎಂದು ಆ ದಲಿತ ಕುಟುಂಬ ಈಗ ಆರೋಪಿಸಿದೆ.
“ವೇಲ್ಸ್‌ಪನ್ ಅವರು ಅಂಜಾರ್ ಪ್ರದೇಶದಲ್ಲಿ ನಮ್ಮ ಕೃಷಿ ಭೂಮಿಯ ಸುಮಾರು 43,000 ಚದರ ಮೀಟರ್ ಅನ್ನು ಕೈಗಾರಿಕಾ ಯೋಜನೆಗಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ. ಭೂಸ್ವಾಧೀನ ಮಾಡಿಕೊಂಡಿದ್ದಕ್ಕೆ ಪರಿಹಾರವಾಗಿ ಆ ಹಣವನ್ನು ಕಾನೂನಿನ ಪ್ರಕಾರ ಪರಿಹಾರವಾಗಿ ನೀಡಿಲಾಗಿದೆ. ಅದರೆ, ಈ ಹಣವನ್ನು ನಮ್ಮ ಖಾತೆಗೆ ಠೇವಣಿ ಮಾಡುವ ಸಮಯದಲ್ಲಿ ಕಂಪನಿಯ ಹಿರಿಯ ಜನರಲ್ ಮ್ಯಾನೇಜರ್ ಮಹೇಂದ್ರ ಸಿನ್ಹ ಸೋಧಾ ಅವರು ‘ಇಷ್ಟು ದೊಡ್ಡ ಮೊತ್ತವನ್ನು ಬ್ಯಾಂಕ್ ಖಾತೆಗೆ ಠೇವಣಿ ಮಾಡುವುದರಿಂದ ಆದಾಯ ತೆರಿಗೆ ಇಲಾಖೆಯಲ್ಲಿ ತೊಂದರೆಯಾಗಬಹುದು’ ಎಂದು ಹೇಳಿದರು. ಅಲ್ಲದೆ, ಚುನಾವಣಾ ಬಾಂಡ್‌ಗಳನ್ನು ಖರೀದಿಸಿ, ಇದರಿಂದ ಕೆಲವೇ ವರ್ಷಗಳಲ್ಲಿ ಹಣವು 1.5 ಪಟ್ಟು ಹೆಚ್ಚಾಗುತ್ತದೆ ಎಂದು ನಂಬಿಸಿದರು. ನಾವು ಅನಕ್ಷರಸ್ಥರು, ನಮಗೆ ಚುನಾವಣಾ ಬಾಂಡ್ ಯೋಜನೆ ಬಗ್ಗೆ ಗೊತ್ತಿರಲಿಲ್ಲ. ಆ ಸಮಯದಲ್ಲಿ ಅವರು ಹೇಳಿದ್ದು, ನಂಬಿಕೆ ಹುಟ್ಟಿಸಿತ್ತು. ನಾವು ಮೋಸ ಹೋಗಿದ್ದೇವೆಂದು ಈಗ ಗೊತ್ತಾಯಿತು” ಎಂದು ದಲಿತ ಕುಟುಂಬದಲ್ಲಿ ಒಬ್ಬರಾದ 41 ವರ್ಷದ ಹರೇಶ್ ಸಾವಕಾರ್ ಹೇಳಿರುವುದಾಗಿ ‘ದಿ ಕ್ವಿಂಟ್’ ವರದಿ ಮಾಡಿದೆ.
ಹರೇಶ್ ಮತ್ತು ಅವರ ತಂದೆ ಸಾವಕಾರ್ ಮನ್ವರ್ ಅವರು 2024ರ ಮಾರ್ಚ್ 18ರಂದು ಅಂಜಾರ್ ಪೊಲೀಸ್ ಠಾಣೆಯಲ್ಲಿ ಚುನಾವಣಾ ಬಾಂಡ್‌ಗಳಲ್ಲಿ ತಮಗೆ ಮೋಸ ಮಾಡಿರುವ ಬಗ್ಗೆ ದೂರು ದಾಖಲಿಸಿದ್ದಾರೆ.
ದೂರಿನ ಪ್ರತಿಯನ್ನು ‘ದಿ ಕ್ವಿಂಟ್’ ಪಡೆದುಕೊಂಡಿದೆ. ದೂರಿನಲ್ಲಿ, ವೆಲ್‌ಸ್ಪನ್ ನಿರ್ದೇಶಕರಾದ ವಿಶ್ವನಾಥನ್ ಕೊಲ್ಲೆಂಗೋಡ್, ಸಂಜಯ್ ಗುಪ್ತಾ, ಚಿಂತನ್ ಠಾಕರ್ ಮತ್ತು ಪ್ರವೀಣ್ ಬನ್ಸಾಲಿ, ವೇಲ್ಸ್‌ಪನ್‌ನಲ್ಲಿ ಹಿರಿಯ ಜನರಲ್ ಮ್ಯಾನೇಜರ್ ಮಹೇಂದ್ರಸಿನ್ಹ್ ಸೋಧಾ, ಅಂಜರ್ ಭೂ ಸ್ವಾಧೀನ ಅಧಿಕಾರಿ ವಿಮಲ್ ಕಿಶೋರ್ ಜೋಶಿ ಹಾಗೂ ಬಿಜೆಪಿಯ ಅಂಜಾರ್ ಸಿಟಿ ಅಧ್ಯಕ್ಷ ಹೇಮಂತ್ ಅಲಿಯಾಸ್ ಡ್ಯಾನಿ ರಜನಿಕಾಂತ್ ಶಾ ಅವರನ್ನು ಪ್ರಕರಣದ ಆರೋಪಿಗಳೆಂದು ಹೆಸರಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನೂ ಎಫ್‌ಐಆರ್ ದಾಖಲಿಸಿಲ್ಲ. ಪ್ರಕರಣದ ತನಿಖಾಧಿಕಾರಿ ಶೈಲೇಂದ್ರ ಸಿಸೋಡಿಯಾ, “ದಲಿತ ಕುಟುಂಬವು ನಮಗೆ ದೂರು ನೀಡಿದೆ. ನಾವು ಅದನ್ನು ಇನ್ನೂ ಪರಿಶೀಲಿಸುತ್ತಿದ್ದೇವೆ. ಒಮ್ಮೆ ತನಿಖೆ ಪೂರ್ಣಗೊಂಡರೆ, ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸುತ್ತೇವೆ” ಎಂದು ಹೇಳಿದ್ದಾರೆ.
ದೂರು ಏನು ಹೇಳುತ್ತದೆ?
ಅಂಜಾರ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ದಲಿತ ಕುಟುಂಬ ನೀಡಿರುವ ದೂರಿನ ಪ್ರಕಾರ, ದೂರುದಾರರು 2023ರ ಆಗಸ್ಟ್‌ನಲ್ಲಿ ತಮ್ಮ ಕೃಷಿ ಭೂಮಿಯನ್ನು ವೆಲ್ಸ್‌ಪನ್‌ಗೆ 16,61,21,877 ರೂ.ಗೆ ಮಾರಾಟ ಮಾಡಲು ಒಪ್ಪಿಕೊಂಡಿತ್ತು. ಅದರಲ್ಲಿ, 2,80,15,000 ರೂ.ಗಳನ್ನು ಮುಂಗಡವಾಗಿ ಪಾವತಿ ಮಾಡಲಾಗಿತ್ತು. ಉಳಿದ 13,81,09,877 ರೂ.ಅನ್ನು ಸ್ವಾಧೀನವಾದ ಭೂಮಿಯ ಏಳು ಜಂಟಿ ಹಿಡುವಳಿದಾರರಿಗೆ ವರ್ಗಾಯಿಸಲಾಗಿದೆ.
2023ರ ಅಕ್ಟೋಬರ್ 1 ಮತ್ತು 2023ರ ಅಕ್ಟೋಬರ್ 8ರ ನಡುವೆ, ಸ್ವಾಧೀನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ವೆಲ್ಸ್‌ಪನ್ ಉದ್ಯೋಗಿ ಮಹೇಂದ್ರಸಿಂಹ ಸೋಧಾ, ಕಂಪನಿಯ ಕಾಂಪೌಂಡ್‌ನಲ್ಲಿರುವ ವೆಲ್‌ಸ್ಪನ್‌ನ ಅತಿಥಿ ಗೃಹದಲ್ಲಿ ಸಾವಕಾರ ಮತ್ತು ಅವರ ಮಗ ಹರೇಶ್ ಅವರೊಂದಿಗೆ ನಾಲ್ಕು ಸಭೆಗಳನ್ನು ನಡೆಸಿದ್ದಾರೆ. ಆ ಸಭೆಯಗಳಲ್ಲಿ ಆದಾಯ ತೆರಿಗೆಯ ಸಮಸ್ಯೆಗಳಾಗುವುದಿಲ್ಲ ಮತ್ತು ಉತ್ತಮ ಆದಾಯ ಬರುತ್ತದೆಂದು ಚುನಾವಣಾ ಬಾಂಡ್ ಮೇಲೆ ಹಣ ಹೂಡಿಕೆ ಮಾಡಲು ಮನವರಿಕೆ ಮಾಡಿದ್ದಾರೆ. ಈ ಸಭೆಗಳಲ್ಲಿ ಬಿಜೆಪಿ ಅಂಜಾರ್ ನಗರ ಅಧ್ಯಕ್ಷ ಹೇಮಂತ್ ರಜನಿಕಾಂತ್ ಶಾ ಕೂಡ ಭಾಗಿಯಾಗಿದ್ದರು ಎಂದುನ್ನು ದೂರಿನಲ್ಲಿ ಸಾವಕಾರ ಉಲ್ಲೇಖಿಸಿದ್ದಾರೆ.
ತಮ್ಮ ಖಾತೆಗೆ ಮೊದಲು ಹಣ ಜಮಾ ಮಾಡಿದ ದಿನಾಂಕಗಳ ವಿವರ ಮತ್ತು ಬ್ಯಾಂಕ್ ರಸೀದಿಗಳನ್ನು ಮತ್ತು ಖರೀದಿಸಿದ ಬಾಂಡ್‌ಗಳ ಪ್ರತಿಗಳನ್ನು ಕುಟುಂಬವು ಹೊಂದಿದೆ.
ಭೂಮಿ ನೀಡಿದ ಕುಟುಂಬ ಮತ್ತು ವೆಲ್ಸ್‌ಪನ್ ಅಧಿಕಾರಿಗಳ ಸಭೆಗಳು ಅಥವಾ ಪ್ರಕರಣದ ಬಗ್ಗೆ ತನಗೆ ತಿಳಿದೇ ಇಲ್ಲ. ಈ ಪ್ರಕರಣ ಏನೆಂಬುದು ನನಗೆ ಗೊತ್ತಿಲ್ಲವೆಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾ ಹೇಳಿದ್ದಾರೆ.
ಭೂ ವ್ಯವಹಾರ – ವಿವಾದ?
ಸಾವಕರ್ ಕುಟುಂಬದ ಪರ ಪ್ರಕರಣ ನಡೆಸುತ್ತಿರುವ ವಕೀಲ ಗೋವಿಂದ್ ದಫಡಾ ಅವರ ಪ್ರಕಾರ, ಸಾವಕರ್ ಕುಟುಂಬದವರು ಸಾಗುವಳಿ ಮಾಡುತ್ತಿದ್ದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯು 2022 ಅಕ್ಟೋಬರ್‌ನಲ್ಲಿ ಪ್ರಾರಂಭವಾಯಿತು. ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಮಟ್ಟದ ಭೂ ಸ್ವಾಧೀನ ಸಮಿತಿಯು ಪ್ರತಿ ಚದರ ಮೀಟರ್‌ಗೆ 17,500 ರೂ.ನಂತೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ದರ ನಿಗದಿ ಮಾಡಿತ್ತು.
“ಗುಜರಾತ್‌ನ ಕೃಷಿ ಭೂಸ್ವಾಧೀನ ಕಾನೂನುಗಳಿಗೆ ಅನುಗುಣವಾಗಿ, ಜಿಲ್ಲಾಧಿಕಾರಿ ನೇತೃತ್ವದ ಭೂ ಮೌಲ್ಯಮಾಪನ ಸಮಿತಿಯು ಸಾವಕರ್ ಕುಟುಂಬ ಹೊಂದಿರುವ ಭೂಮಿಗೆ ಪ್ರತಿ ಚದರ ಮೀಟರ್‌ಗೆ 17,500 ರೂ. ಮೌಲ್ಯವನ್ನು ನಿಗದಿಪಡಿಸಿದೆ. ಈ ಮೊತ್ತದಂತೆ, ಸಾವಕರ್ ಕುಟುಂಬ ಜಮೀನಿನ ಒಟ್ಟು ಮೌಲ್ಯ 76 ಕೋಟಿ ರೂ. ಆಗಿತ್ತು. ಇಷ್ಟು ಬೃಹತ್ ಮೊತ್ತವನ್ನು ಪಾವತಿಸಲು ವೆಲ್‌ಸ್ಪನ್ ಕಂಪನಿ ಸಿದ್ಧರಿರಲಿಲ್ಲ. ಹೀಗಾಗಿ, ಒಂದು ವರ್ಷದವರೆಗೆ ಪ್ರಕ್ರಿಯೆ ಸ್ಥಗಿತಗೊಂಡಿತ್ತು” ಎಂದು ದಫಡಾ ತಿಳಿಸಿದ್ದಾರೆ.
“ಸಮಿತಿಯು ಸ್ವಾಧೀನ ದರವನ್ನು ನಿರ್ಧರಿಸಿದ ಒಂದು ವರ್ಷದೊಳಗೆ ಸ್ವಾಧೀನ ಪ್ರಕ್ರಿಯೆಯು ಪೂರ್ಣಗೊಳ್ಳದಿದ್ದರೆ, ಪ್ರಕ್ರಿಯೆಯು ರದ್ದಾಗುತ್ತದೆ. ಆ ಪ್ರಕ್ರಿಯೆಯನ್ನು ಹೊಸದಾಗಿ ಮತ್ತೆ ಪ್ರಾರಂಭಿಸಬೇಕಾಗುತ್ತದೆ. ಆದರೆ, ಈ ಪ್ರಕ್ರಿಯೆಯು ಅಂತ್ಯಗೊಳ್ಳುವ ಮುನ್ನವೇ, ಕಚ್‌ನ ಅಪರ ಜಿಲ್ಲಾಧಿಕಾರಿ ಮೆಹುಲ್ ದೇಸಾಯಿ ಮಧ್ಯಪ್ರವೇಶಿಸಿ, ಜಮೀನಿನ ಮೌಲ್ಯವನ್ನು 16,61,21,877 ರೂ.ಗೆ ಇಳಿಸುವ ಹೊಸ ಒಪ್ಪಂದ ಮಾಡಿದರು” ಎಂದು ದಫಡಾ ಆರೋಪಿಸಿದ್ದಾರೆ.
ಭೂಸ್ವಾಧೀನ ಸಮಿತಿಯ ಮುಖ್ಯಸ್ಥರಾಗಲು ಅಪರ ಜಿಲ್ಲಾಧಿ ಡೆಪ್ಯೂಟಿ ಕಲೆಕ್ಟರ್‌ಗೆ ಅಧಿಕಾರವಿಲ್ಲ, ಅವರು ಇದನ್ನು ಹೇಗೆ ಮಾಡಿದರು? ಎಂದು ದಫಡಾ ಪ್ರಶ್ನಿಸಿದರು.
“ನನಗೆ ಆರೋಪಗಳು ಅಥವಾ ವಿಷಯದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಎಲ್ಲವು ಕಾನೂನುಬದ್ಧವಾಗಿದ್ದು, ಯಾವುದೇ ಆರೋಪಗಳು ನಿಜವಲ್ಲ ಎಂದು ನಿಮಗೆ ಭರವಸೆ ನೀಡುತ್ತೇನೆ. ಭೂಸ್ವಾಧೀನ ಕಾಯಿದೆಯ ನಿಬಂಧನೆಗಳನ್ನು ಅನುಸರಿಸಲಾಗಿದೆ. ಪ್ರಸ್ತಾಪಿತ ಸಮಿತಿಗೂ ಸಂಬಂಧಿಸಿದ ಸ್ವಾಧೀನ ಪ್ರಕ್ರಿಯೆಯೂ ಸಂಬಂಧವಿಲ್ಲ. ಆದ್ದರಿಂದ, ರೈತರಿಗೆ ಕಡಿಮೆ ಪರಿಹಾರವನ್ನು ನೀಡಲು ಅವಕಾಶವೂ ಇಲ್ಲ. ಅಲ್ಲದೆ, ಸರಿಯಾದ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ರೈತ ಕುಟುಂಬಕ್ಕೆ ಖುದ್ದಾಗಿ ನಾನು ಚೆಕ್‌ಗಳನ್ನು ಹಸ್ತಾಂತರಿಸಿದ್ದೇನೆ” ಎಂದು ಅಪರ ಜಿಲ್ಲಾಧಿಕಾರಿ ದೇಸಾಯಿ ಹೇಳಿರುವುದಾಗಿ ಕ್ವಿಂಟ್ ವರದಿ ಮಾಡಿದೆ.
ಗುಜರಾತ್ ಕಾನೂನು ಹೇಳುವುದೇನು?
ಭೂರಹಿತರಿಗೆ ಭೂಮಿ ಹಂಚುವ ಗುಜರಾತ್‌ನ ಸೀಲಿಂಗ್ ಕಾನೂನುಗಳ ಪ್ರಕಾರ, ಭೂರಹಿತರಿಗೆ ಹಂಚಿಕೆಯಾದ ಹೆಚ್ಚುವರಿ ಭೂಮಿಯನ್ನು ಸಾರ್ವಜನಿಕ ಸಂಸ್ಥೆಗಳು ಸ್ವಾಧೀನಪಡಿಸಿಕೊಂಡಾಗ, ಸರ್ಕಾರಕ್ಕೆ 40%ರಷ್ಟು ಪ್ರೀಮಿಯಂ ದರ ಪಾವತಿಸಬೇಕೆಂದು ನಿಗದಿಪಡಿಸಲಾಗಿದೆ.
ಅದರಂತೆ, ಸ್ವಾಧೀನ ಸಮಿತಿಯು ನಿಗದಿಪಡಿಸಿದ ಆರಂಭಿಕ ಮೌಲ್ಯ – 76 ಕೋಟಿ ರೂ.ಗಳಿಗೆ ಭೂಮಿಯನ್ನು ಮಾರಾಟ ಮಾಡಿದ್ದರೆ, ಗುಜರಾತ್ ಸರ್ಕಾರಕ್ಕೆ 30.4 ಕೋಟಿ ರೂ.ಗಳನ್ನು ಪಾವತಿಸಬೇಕು. 45.6 ಕೋಟಿ ರೂ.ಗಳು ಭೂ ಸಾಗುವಳಿ ಮಾಡುತ್ತಿದ್ದ ಕುಟುಂಬಕ್ಕೆ ( ಸಾವಕರ ಕುಟುಂಬ) ಸೇರುತ್ತದೆ.
ಒಟ್ಟಿನಲ್ಲಿ, 76 ಕೋಟಿ ರೂ. ಇದ್ದ ಭೂಮಿಯ ಬೆಲೆಯನ್ನು 16 ಕೋಟಿ ರೂ.ಗೆ ಇಳಿಸಲಾಗಿದೆ. ಅಲ್ಲದೆ, ಅದರಲ್ಲಿಯೂ 11 ಕೋಟಿ ರೂ.ಗಳಿಗೆ ಚುನಾವಣಾ ಬಾಂಡ್‌ಗಳನ್ನು ಖರೀದಿಸುವಂತೆ ಬಿಜೆಪಿ ಮತ್ತು ಕಂಪನಿ ಅಧಿಕಾರಿಗಳು ಒತ್ತಾಯಿಸಿ, ಬಾಂಡ್‌ಗಳನ್ನು ಖರೀದಿಸುವಂತೆ ಮಾಡಿದ್ದಾರೆ ಎಂಬುದು ಕಂಡುಬಂದಿದೆ.
ಮೂಲ: ದಿ ಕ್ವಿಂಟ್