ಉತ್ತರಾಖಂಡ್‌ನಲ್ಲಿ ನಿರ್ಮಣ ಹಂತದಲ್ಲಿದ್ದ ಸಿಲ್ಕ್ಯಾರಾ-ಬಾರ್ಕೋಟ್ ಸುರಂಗದ ಒಂದು ಭಾಗ ಕಳೆದ ವರ್ಷ ಕುಸಿದು ಬಿದ್ದಿತ್ತು. ಆ ಸುರಂಗ ನಿರ್ಮಾಣ ಕಾಮಗಾರಿ ನಡೆಸುತ್ತಿರುವ ಹೈದರಾಬಾದ್ ಮೂಲದ ನವಯುಗ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್ (ಎನ್‌ಇಸಿ) ಎಂಬುದು ಇದೀಗ ಬಹಿರಂಗವಾಗಿದೆ. ಚುನಾವಣಾ ಆಯೋಗ ಪ್ರಕಟಿಸಿರುವ ಹೊಸ ಮಾಹಿತಿಯಲ್ಲಿ ಕಂಪನಿ ಮತ್ತು ಬಿಜೆಪಿ ನಡುವಿನ ಸಂಬಂಧ ಬಯಲಾಗಿದೆ.
2023ರ ನವೆಂಬರ್ 12ರಂದು ನಿರ್ಮಾಣ ಹಂತದಲ್ಲಿದ್ದ ಸಿಲ್ಕ್ಯಾರಾ-ಬಾರ್ಕೋಟ್ ಸುರಂಗದ ಒಂದು ಭಾಗವು ಕುಸಿದು ಬಿದ್ದಿತ್ತು. ಸುರಂಗದ ಅವಶೇಷಗಳಡಿ ಒಟ್ಟು 41 ಕಾರ್ಮಿಕರು ಸಿಕ್ಕಿಬಿದ್ದರು. ಅವರನ್ನು ನವೆಂಬರ್ 28 ರಂದು ರಕ್ಷಿಸಲಾಗಿತ್ತು.
ಸಿಲ್ಕ್ಯಾರಾ-ಬಾರ್ಕೋಟ್ ಸುರಂಗ ಯೋಜನೆಯು 2018ರಲ್ಲಿ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯಿಂದ ಅನುಮೋದನೆ ಪಡೆದಿತ್ತು. 2022ರ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಆದರೆ, ಕಾಮಗಾರಿಯ ಅವಧಿಯನ್ನು ವಿಸ್ತರಿಸಲಾಗಿದೆ.
ಈ ಕಾಮಗಾರಿಯ ಗುತ್ತಿಗೆ ಪಡೆದ ಬಳಿಕ, ನವಯುಗ ಕಂಪನಿಯು 2019ರ ಏಪ್ರಿಲ್ 19 ಮತ್ತು 2022ರ ಅಕ್ಟೋಬರ್ 10ರ ನಡುವೆ ತಲಾ 1 ಕೋಟಿ ರೂ. ಮೌಲ್ಯದ 55 ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ. ಆ ಎಲ್ಲ ಬಾಂಡ್‌ಗಳನ್ನು ಬಿಜೆಪಿಗೆ ನೀಡಿದೆ.
ನವಯುಗ ಗ್ರೂಪ್‌ನಲ್ಲಿ ನವಯುಗ ಇಂಜಿನಿಯರಿಂಗ್ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಕಂಪನಿಯು ಪ್ರಮುಖ ಕಂಪನಿಯಾಗಿದೆ. ಈ ಕಂಪನಿಯು ಬ್ರಹ್ಮಪುತ್ರ ನದಿಯ ಮೇಲೆ ದೇಶದ ಅತಿ ಉದ್ದದ (ಒಟ್ಟು 9.15 ಕಿ.ಮೀ.) ನದಿ ಸೇತುವೆಯಾದ ಧೋಲಾ-ಸಾಡಿಯಾ ಸೇತುವೆಯನ್ನು ನಿರ್ಮಿಸಿದೆ ಎಂದು ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದೆ.
ಆಂಧ್ರಪ್ರದೇಶ ಸರ್ಕಾರವು ಪೋಲವರಂ ಯೋಜನೆಯನ್ನು ನಿರ್ಮಿಸುವ ಜವಾಬ್ದಾರಿಯನ್ನು ತನಗೆ ನೀಡಿದೆ ಎಂದೂ ಕಂಪನಿ ಹೇಳಿಕೊಂಡಿದೆ.
ಕಂಪನಿಯ ವೆಬ್‌ಸೈಟ್‌ನ ಪ್ರಕಾರ, ಗಂಗಾನದಿಯ ಮೇಲಿನ ಸೇತುವೆಗಳು, ಕ್ವಾಜಿಗುಂಡ್‌ನಿಂದ ಬನಿಹಾಲ್ ಹೆದ್ದಾರಿ ಯೋಜನೆ ಹಾಗೂ ಪಿರ್ ಪಂಜಾಲ್ ಪಾಸ್ ಯೋಜನೆ ಸೇರಿದಂತೆ ಅನೇಕ ಐಕಾನಿಕ್ ಯೋಜನೆಗಳನ್ನು ಪಡೆದಿರುವುದಾಗಿ ಹೇಳಿಕೊಂಡಿದೆ.
ಸಿಲ್ಕ್ಯಾರಾ-ಬಾರ್ಕೋಟ್ ಸುರಂಗವು ಏಕ-ಟ್ಯೂಬ್ ಸುರಂಗವಾಗಿದೆ. 900 ಕಿ.ಮೀ. ಉದ್ದದ ಚಾರ್ ಧಾಮ್ ಯಾತ್ರಾ ಆಲ್ ವೆದರ್ ರಸ್ತೆಯ ಭಾಗವಾಗಿರುವ 45 ಕಿ.ಮೀ ಉದ್ದದ ಈ ಸುರಂಗವು ನಾಲ್ಕು ಯಾತ್ರಾ ಸ್ಥಳಗಳಿಗೆ ಸಂಪರ್ಕ ಸಾಧಿಸುವ ಗುರಿಯನ್ನು ಹೊಂದಿದೆ.
ಹಲವಾರು ಕಂಪನಿಗಳು ಚುನಾವಣಾ ಬಾಂಡ್‌ಗಳನ್ನು ‘ಕ್ವಿಡ್ ಪ್ರೊ ಕ್ವೊ’ (ಕೊಡು-ತೆಗೆದುಕೊ) ಉದ್ದೇಶಕ್ಕೆ ಬಳಸಿಕೊಂಡಿವೆ ಎಂಬುದು ಈಗಲಾಗಲೇ ಬಹಿರಂಗವಾಗಿದೆ. ಹೆಚ್ಚಿನ ಮೊತ್ತದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿ, ಅವುಗಳನ್ನು ಆಡಳಿತರೂಢ ಬಿಜೆಪಿಗೆ ನೀಡಿ, ತಮಗೆ ಬೇಕಾದ ಯೋಜನೆಗಳ ಗುತ್ತಿಗೆಯನ್ನು ಪಡೆದುಕೊಂಡಿವೆ ಎಂಬುದು ಇತ್ತೀಚಿನ ಚುನಾವಣಾ ಬಾಂಡ್ ಮಾಹಿತಿಯನ್ನು ವಿಶ್ಲೇಷಿಸಿದಾಗ ಬಹಿರಂಗವಾಗಿದೆ. ಅಂತಹ ಕಂಪನಿಗಳಲ್ಲಿ ಈ ನವಯುಗ ಕಂಪನಿಯೂ ಒಂದಾಗಿದೆ.