ಚುನಾವಣಾ ಬಾಂಡ್ ಕುರಿತು ಎಸ್‌ಬಿಐ ನೀಡಿದ್ದ ಮಾಹಿತಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಅತೀ ಹೆಚ್ಚು ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ ಕಂಪನಿಗಳ ಪಟ್ಟಿಯಲ್ಲಿ ‘ಮೇಘಾ ಇಂಜಿನಿಯರಿಂಗ್ ಅಂಡ್ ಇನ್‍ಫ್ರಾಸ್ಟ್ರಕ್ಚರ್ ಲಿಮಿಟೆಡ್’ ಎರಡನೇ ಸ್ಥಾನದಲ್ಲಿದೆ. ಈ ಕಂಪನಿ 966 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿ, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದೆ.
ವಿಶೇಷ ಅಂದ್ರೆ, ಈ ಕಂಪನಿ ಸರ್ಕಾರಗಳಿಂದ ಲಕ್ಷ ಕೋಟಿ ರೂ. ಮೌಲ್ಯದ ಕಾಮಗಾರಿಗಳನ್ನು ಗುತ್ತಿಗೆ ಪಡೆದುಕೊಂಡಿದೆ. ಹೈದರಾಬಾದ್ ಮೂಲದ ಈ ಕಂಪನಿ ಹಲವು ಸರ್ಕಾರಿ ಯೋಜನೆಗಳ ಗುತ್ತಿಗೆ ಪಡೆದಿದೆ. ಗಮನಾರ್ಹ ಸಂಗತಿ ಅಂದ್ರೆ, 2023ರ ಏಪ್ರಿಲ್‌ನಲ್ಲಿ ಕಂಪನಿಯು 140 ಕೋಟಿ ರೂ. ದೇಣಿಗೆ ನೀಡಿದೆ. ಇದಾಗಿ ಒಂದು ತಿಂಗಳ ಬಳಿಕ ಕಂಪನಿಯು ಕೇಂದ್ರ ಸರ್ಕಾರದಿಂದ 14,400 ಕೋಟಿ ರೂ. ವೆಚ್ಚದ ಥಾಣೆ-ಬೊರಿವಲಿ ಅವಳಿ ಸುರಂಗ ಯೋಜನೆಯ ಗುತ್ತಿಗೆ ಪಡೆದಿದೆ.
ಅಂತೆಯೇ, 1.15 ಲಕ್ಷ ಕೋಟಿ ರೂ. ಮೌಲ್ಯದ ತೆಲಂಗಾಣ ಕಾಳೇಶ್ವರಂ ಏತ ನೀರಾವರಿ ಯೋಜನೆ ಸೇರಿದಂತೆ ನಾನಾ ಯೋಜನೆಗಳ ಕಾಮಗಾರಿಗಳನ್ನು ಗುತ್ತಿಗೆ ಪಡೆದುಕೊಂಡಿದೆ.
ಅಂದಹಾಗೆ, ಮೇಘಾ ಇಂಜಿನಿಯರಿಂಗ್ ಅಂಡ್ ಇನ್‍ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿಯು ಎಸ್‌ಬಿಐನಲ್ಲಿ ತಲಾ ಒಂದು ಕೋಟಿ ರೂ. ಮೌಲ್ಯದ 966 ಬಾಂಡ್‍ಗಳನ್ನು ಖರೀದಿಸಿ, ರಾಜಕೀಯ ಪಕ್ಷಗಳಿಗೆ ನೀಡಿದೆ. ಆದರೆ, ಎಸ್‌ಬಿಐ ಸರಿಯಾದ ಮಾಹಿತಿಯನ್ನು ಒದಗಿಸದ ಕಾರಣ, ಯಾವ ಪಕ್ಷಕ್ಕೆ ಎಷ್ಟು ಬಾಂಡ್‌ಗಳನ್ನು ನೀಡಿದೆ ಎಂಬುದು ಗೊತ್ತಾಗಿಲ್ಲ.
ಸದ್ಯ, ಸರಿಯಾದ ಮಾಹಿತಿ ಒದಗಿಸದ ಎಸ್‌ಬಿಐಅನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ಯಾವ ಕಂಪನಿ, ಯಾವ ಪಕ್ಷಕ್ಕೆ ಬಾಂಡ್ ನೀಡಿದೆ ಎಂಬ ಮಾಹಿತಿಯನ್ನು ಮಾರ್ಚ್ 16ರ ಶನಿವಾರ ಒದಗಿಸಬೇಕು ಎಂದು ತಾಕೀತು ಮಾಡಿದೆ. ಹೀಗಾಗಿ, ಶನಿವಾರ ಯಾವೆಲ್ಲ ಕಂಪನಿಗಳು ಯಾವ ಪಕ್ಷಗಳಿಗೆ ದೇಣಿಗೆ ನೀಡಿವೆ ಎಂಬುದು ಗೊತ್ತಾಗುವ ಸಾಧ್ಯತೆ ಇದೆ.