ಉತ್ತರ ಪ್ರದೇಶದ ಫೈಜಾಬಾದ್ ಲೋಕಸಭಾ ಕ್ಷೇತ್ರದ ಹೆಸರನ್ನು 2018ರಲ್ಲಿ ಅಯೋಧ್ಯೆ ಎಂದು ಬದಲಿಸಲಾಗಿತ್ತು. 2024ರ ಜನವರಿ 22ರಂದು ಇನ್ನೂ ಪೂರ್ಣಗೊಳ್ಳದ ಅಯೋಧ್ಯಾ ರಾಮ ಮಂದಿರವನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡ್ತಾರೆ.
ಪ್ರಧಾನಿ ಮೋದಿ ಮೇ 17ರಂದು ಉತ್ತರ ಪ್ರದೇಶದ ಬರ್ಬಂಕಿ ಹಾಗೂ ಹಮೀರ್ ಪುರ್‌ನಲ್ಲಿ ಬಿಜೆಪಿಯ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಉಗ್ರವಾಗಿ ಮಾತನಾಡುತ್ತಾರೆ. ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ ಗೆದ್ದರೆ ಅಯೋಧ್ಯೆ ರಾಮಮಂದಿರದ ಮೇಲೆ ಬುಲ್ಡೋಜರ್ ಹತ್ತಿಸುತ್ತಾರೆ ಎಂಬ ಭಯ ಹುಟ್ಟಿಸುತ್ತಾರೆ ಪ್ರಧಾನಿ ಮೋದಿ.
ಈ ಎಲ್ಲ ಸರಣಿ ವಿದ್ಯಾಮಾನಗಳು ಅಯೋಧ್ಯಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಹ್ಯಾಟ್ರಿಕ್ ಗೆಲುವು ತಂದು ಕೊಡಲಿದೆ ಎಂದು ಲೆಕ್ಕಹಾಕಲಾಗಿತ್ತು. ಹಾಲಿ ಸಂಸದರಾಗಿದ್ದ ಬಿಜೆಪಿಯ ಲಲ್ಲು ಸಿಂಗ್ 2014 ಹಾಗೂ 2019 ರಲ್ಲಿ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು.
ಕಳೆದ ಚುನಾವಣೆಯಲ್ಲಿ 65,000 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದ ಲಲ್ಲು ಸಿಂಗ್ , 2014ರಲ್ಲಿ 2.82 ಲಕ್ಷದ ಬೃಹತ್ ಅಂತರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿ ಎದುರು ಗೆಲುವು ದಾಖಲಿಸಿದ್ದರು. ಈ ಬಾರಿ ಯೋಗಿ ಮತ್ತು ಮೋದಿಯ ಬುಲ್ಡೋಜರ್ ತನಗೆ 3 ಲಕ್ಷಕ್ಕಿಂತ ದೊಡ್ಡ ಅಂತರದಲ್ಲಿ ಗೆಲುವು ತಂದು ಕೊಡಲಿದೆ ಎಂದು ಲಲ್ಲು ಸಿಂಗ್ ನಿರೀಕ್ಷೆ ಮಾಡಿದ್ದರು.
ಇನ್ನೂ ಮೋದಿ ಪ್ರಚಾರಕ್ಕೆ ಹೋದಲ್ಲಲ್ಲೆ ಅಯೋಧ್ಯೆ ಮತ್ತು ರಾಮ ಮಂದಿರವನ್ನು ಉಲ್ಲೇಖಿಸುತ್ತಿದ್ದರು . ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿ ಕೂಟವು ರಾಮ ಮಂದಿರ ಉದ್ಘಾಟನೆಯ ಆಹ್ವಾನ ತಿರಸ್ಕರಿಸಿ ಹಿಂದು ಧರ್ಮವಿರೋಧಿ ನಿಲುವು ತಾಳಿದೆ ಎಂದು ಉಗ್ರವಾಗಿ ಟೀಕಿಸುತ್ತಿದ್ದರು.
ಅಯೋಧ್ಯೆ ರಾಮಮಂದಿರ ಹಾಗೂ ಶ್ರೀರಾಮನನ್ನು ಚುನಾವಣಾ ದಾಳವಾಗಿ ಬಳಸಿಕೊಂಡ ಮೋದಿಯ ಅನೈತಿಕ ರಾಜಕೀಯಕ್ಕೆ ರಾಮ ಮಂದಿರದ ಬುಡದಲ್ಲೇ ಸರಿಯಾದ ಉತ್ತರ ಲಭಿಸಿದೆ. ಹ್ಯಾಟ್ರಿಕ್ ಕನಸು ಕಾಣುತ್ತಿದ ಅಯೋಧ್ಯೆಯ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ಸಮಾಜವಾದಿ ಪಕ್ಷದ ಅಭ್ಯರ್ಥಿ ಅವಧೀಶ್ ಪ್ರಸಾದ್ ಎದುರು 54,352 ಮತಗಳ ದೊಡ್ಡ ಅಂತರದ ಸೋಲು ಕಂಡಿದ್ದಾರೆ.
ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಎಸ್.ಪಿ. ಅಭ್ಯರ್ಥಿ ಅವಧೀಶ್ ಪ್ರಸಾದ್ 5,52,177 ಮತ ಪಡೆದಿದ್ದಾರೆ. ಬಿಜೆಪಿಯ ಲಲ್ಲು ಸಿಂಗ್ 4,97,825 ಮತ ಪಡೆದರು. ಬಿಎಸ್ಪಿ ಅಭ್ಯರ್ಥಿ ಸಚಿದಾನಂದ ಪಾಂಡೆ 45,993 ಮತ ಪಡೆದಿದ್ದಾರೆ. ಸಿ.ಪಿ.ಐ ಅಭ್ಯರ್ಥಿ ಅರವಿಂದ ಸೇನ್ 15,347 ಮತ ಪಡೆದಿದ್ದಾರೆ. ಇನ್ನೂ ಹತ್ತು ಮಂದಿ ಸಣ್ಣ ಪುಟ್ಟ ಪಕ್ಷಗಳ ಹಾಗೂ ಸ್ವತಂತ್ರ ಅಭ್ಯರ್ಥಿಗಳು ಕಣದಲ್ಲಿದ್ದರು , ಈ ಹತ್ತು ಮಂದಿ ಅಭ್ಯರ್ಥಿಗಳು ಒಟ್ಟಾಗಿ ಹದಿನೆಂಟು ಸಾವಿರದಷ್ಟು ಮತ ಪಡೆದಿದ್ದಾರೆ, ವಿಶೇಷ ಅಂದರೆ 7511 ನೋಟಾ ಮತಗಳು ಈ ಕ್ಷೇತ್ರದಲ್ಲಿ ಬಿದ್ದಿವೆ.
ಒಟ್ಟಾರೆಯಾಗಿ ಈ ಕ್ಷೇತ್ರದ ಚುನಾವಣೆಯ ಮತ ಹಂಚಿಕೆಯನ್ನು ಗಮನಿಸಿದಾಗ ಬಿಜೆಪಿಗೆ ನೇರ ಎದುರಾಳಿಯಾಗಿದ್ದ ಸಮಾಜವಾದಿ ಪಕ್ಷವನ್ನು ಹೊರತುಪಡಿಸಿಯೂ ಸುಮಾರು 85 ಸಾವಿರದಷ್ಟು ಮತಗಳು ಬಿಜೆಪಿಗೆ ವಿರುದ್ದವಾಗಿ ಚಲಾವಣೆಯಾಗಿದೆ. ಬಹುಶಃ ಬಿಜೆಪಿ ಮತ್ತು ಮೋದಿಯ ಹುಸಿ ಭಕ್ತಿಯು ರಾಮನಿಗೆ ಅರ್ಥವಾಗಿರಬೇಕು , ಅದಕ್ಕೆ ಎಲ್ಲ ಕೋನಗಳಿಂದ ಬಾಣ ಬಿಟ್ಟಿರಬೇಕು.