ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಧ್ಯಸ್ಥಗಾರರೊಂದಿಗೆ ಸರಿಯಾದ ಸಮಾಲೋಚನೆಯ ನಂತರ ಚುನಾವಣಾ ಬಾಂಡ್ ಯೋಜನೆಯನ್ನು ಮರಳಿ ತರುವ ಸಾಧ್ಯತೆಯ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುಳಿವು ನೀಡಿದ್ದಾರೆ.
ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್ನೊಂದಿಗೆ ಮಾತನಾಡಿದ ಅವರು, “ನಾವು ಇನ್ನೂ ಮಧ್ಯಸ್ಥಗಾರರೊಂದಿಗೆ ಸಮಾಲೋಚನೆ ಮಾಡಬೇಕಿದೆ. ಎಲ್ಲರಿಗೂ ಸ್ವೀಕಾರಾರ್ಹವಾದ ಯೋಜನೆ ತಯಾರಿಗೆ ನಾವು ಏನು ಮಾಡಬೇಕು ನೋಡೋಣ. ಪ್ರಾಥಮಿಕವಾಗಿ ಪಾರದರ್ಶಕತೆ ಉಳಿಸಿಕೊಳ್ಳಬೇಕು” ಎಂದು ಹೇಳಿದರು.
“ಕಪ್ಪುಹಣದ ಸಾಧ್ಯತೆಯನ್ನು ಇದು (ಚುನಾವಣಾ ಬಾಂಡ್) ಸಂಪೂರ್ಣವಾಗಿ ತೆಗೆದುಹಾಕುತ್ತದೆ. ಆದರೆ ಸುಪ್ರೀಂ ಕೋರ್ಟ್ (ಎಸ್ಸಿ) ನೀಡಿದ ತೀರ್ಪನ್ನು ಮರುಪರಿಶೀಲಿಸಬೇಕೆ ಎಂದು ಕೇಂದ್ರ ಸರ್ಕಾರ ಇನ್ನೂ ನಿರ್ಧರಿಸಿಲ್ಲ. ಸುಪ್ರೀಂಕೋರ್ಟ್ ರದ್ದು ಮಾಡಿದ ಪ್ರಸ್ತುತ ಯೋಜನೆಯು ಪಾರದರ್ಶಕತೆ ಹೊಂದಿದೆ” ಎಂದೂ ತಿಳಿಸಿದರು.
ಇದನ್ನು ಓದಿದ್ದೀರಾ? ಚುನಾವಣಾ ಬಾಂಡ್ ಯೋಜನೆ ರದ್ದುಗೊಳಿಸಿದ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ!
ಇನ್ನು ಈ ಸಂದರ್ಭದಲ್ಲೇ ಯೋಜನೆಯ ಕೆಲವು ಅಂಶಗಳು ಸುಧಾರಣೆಯ ಅಗತ್ಯವಿದೆ ಎಂದು ಹೇಳಿದ ಸಚಿವೆ ಸೀತಾರಾಮನ್ ಅವರು “ಉತ್ತಮ ಸಮಾಲೋಚನೆಯ” ನಂತರ ಚುನಾವಣಾ ಬಾಂಡ್ ಯೋಜನೆಯನ್ನು ಯಾವುದಾದರೂ ರೂಪದಲ್ಲಿ ಮತ್ತೆ ಆರಂಭಿಸಬಹುದು ಎಂದು ಹೇಳಿದ್ದಾರೆ.
ಇನ್ನು ಚುನಾವಣಾ ಬಾಂಡ್ಗಳ ಯೋಜನೆಯನ್ನು ಹಣಕಾಸು ಸಚಿವರು ಸಮರ್ಥಿಸಿಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆ “ಈ ಯೋಜನೆಯು ಹಿಂದಿದ್ದ ಯೋಜನೆಗಿಂತ ಒಂದು ಹೆಜ್ಜೆ ಉತ್ತಮವಾಗಿದೆ, ಪಾರದರ್ಶಕತೆಯಿದೆ” ಎಂದಿದ್ದರು.
ಇದನ್ನು ಓದಿದ್ದೀರಾ? ಚುನಾವಣಾ ಬಾಂಡ್ ಹಗರಣ | ದೇಣಿಗೆ ನೀಡಿ -ಗುತ್ತಿಗೆ ಪಡಿ; ಬಿಜೆಪಿಯ ದಂಧೆ ಜಗಜ್ಜಾಹೀರು
ಬಾಂಡ್ ಮೂಲಕ ದೇಣಿಗೆ ನೀಡಿದವರ ಮತ್ತು ಬಾಂಡ್ ಮೂಲಕ ದೇಣಿಗೆ ಪಡೆದ ಪಕ್ಷದ ಮಾಹಿತಿಯನ್ನು ಗೌಪ್ಯವಾಗಿ ಉಳಿಸಿಕೊಳ್ಳುವ ಚುನಾವಣಾ ಬಾಂಡ್ ಯೋಜನೆಯನ್ನು ಕೇಂದ್ರ ಸರ್ಕಾರವು ಜನವರಿ 2, 2018 ರಂದು ಆರಂಭಿಸಿದೆ. ಆದರೆ ಇದು ಪಾರದರ್ಶಕತೆ ಹೊಂದಿಲ್ಲ ಎಂದು ಫೆಬ್ರವರಿ 2024 ರಲ್ಲಿ, ಐದು ನ್ಯಾಯಾಧೀಶರ ಸಂವಿಧಾನ ಪೀಠವು ಈ ಯೋಜನೆಯನ್ನು ಅಸಂವಿಧಾನಿಕ ಎಂದು ಘೋಷಿಸಿದೆ.