ಮನೆಯ ದೀಪಾಲಂಕಾರಕ್ಕೆ ವಿದ್ಯುತ್ ಕಳ್ಳತನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಬೆಸ್ಕಾಂ ಅಧಿಕಾರಿಯೊಬ್ಬರ ದೂರಿನ ಆಧಾರದ ಹಿನ್ನೆಲೆಯಲ್ಲಿ ಜಯನಗರ ಬೆಸ್ಕಾಂ ಜಾಗೃತ ದಳದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಜೆಪಿ ನಗರ ನಿವಾಸಕ್ಕೆ ವಿದ್ಯುತ್ ಅಲಂಕಾರ ಮಾಡಿಸಿದ್ದರು. ಇದಕ್ಕೆ ಕಂಬದಿಂದ ನೇರವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದರು.
ಜಗತ್ತಿನ ಏಕೈಕ ಮಹಾಪ್ರಾಮಾಣಿಕ ಹೆಚ್.ಡಿ ಕುಮಾರಸ್ವಾಮಿಯವರ ಜೆ ಪಿ ನಗರದ ನಿವಾಸದ ದೀಪಾವಳಿಯ ದೀಪಾಲಂಕಾರಕ್ಕೆ ನೇರವಾಗಿ ವಿದ್ಯುತ್ ಕಂಬದಿಂದ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದಾರೆ.
ಒಬ್ಬ ಮಾಜಿ ಸಿಎಂ ಆಗಿ ವಿದ್ಯುತ್ ಕಳ್ಳತನ ಮಾಡುವ ದಾರಿದ್ರ್ಯ ಬಂದಿದ್ದು ದುರಂತ!@hd_kumaraswamy ಅವರೇ ನಮ್ಮ ಸರ್ಕಾರ ಗೃಹಜ್ಯೋತಿಯಲ್ಲಿ 200 ಯೂನಿಟ್… pic.twitter.com/7GKHeRyQuS
— Karnataka Congress (@INCKarnataka) November 14, 2023
ದೀಪಾವಳಿಯ ದೀಪಾಲಂಕಾರಕ್ಕೆ ನೇರವಾಗಿ ವಿದ್ಯುತ್ ಕಂಬದಿಂದ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಒಬ್ಬ ಮಾಜಿ ಸಿಎಂ ಆಗಿ ವಿದ್ಯುತ್ ಕಳ್ಳತನ ಮಾಡುವ ದಾರಿದ್ರ್ಯ ಬಂದಿದ್ದು ದುರಂತ ಎಂದು ಟೀಕಿಸಿ, ಕಾಂಗ್ರೆಸ್ ವಿಡಿಯೋ ದಾಖಲೆಯೊಂದಿಗೆ ಟ್ವೀಟ್ ಮಾಡಿತ್ತು. ಇದರ ಬೆನ್ನಲ್ಲೇ ಎಚ್ ಡಿ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿ, ‘ಅಚಾತುರ್ಯ ನಡೆದಿದೆ. ದಂಡ ಕಟ್ಟಲು ಸಿದ್ಧ’ ಎನ್ನುವ ಮೂಲಕ ಕಳ್ಳತನ ನಡೆದಿರುವುದನ್ನು ಒಪ್ಪಿಕೊಂಡಿದ್ದರು.
ಇದು ರಾಜಕೀಯ ಚರ್ಚೆಗೆ ವೇದಿಕೆಯೊದಗಿಸಿದ ಬೆನ್ನಲ್ಲೇ ಬೆಸ್ಕಾಂ ಎಇಇ ನೇತೃತ್ವದ ಅಧಿಕಾರಿಗಳ ತಂಡ ಮನೆಗೆ ಆಗಮಿಸಿ, ಪರಿಶೀಲನೆ ನಡೆಸಿತ್ತು. ಮನೆಯ ಯಜಮಾನನಾಗಿರುವ ಎಚ್ ಡಿ ಕುಮಾರಸ್ವಾಮಿ ಅವರು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಬೆಸ್ಕಾಂ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.
ದೀಪಾವಳಿ ಹಬ್ಬಕ್ಕೆ ನನ್ನ ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಲು ಖಾಸಗಿ ಡೆಕೋರೇಟರ್ ಒಬ್ಬರಿಗೆ ಹೇಳಲಾಗಿತ್ತು. ಅವರು ಮನೆಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಿದ ಮೇಲೆ ಪಕ್ಕದಲ್ಲಿಯೇ ಇದ್ದ ಕಂಬದಿಂದ ವಿದ್ಯುತ್ ಸಂಪರ್ಕ ಪಡೆದು ಪರೀಕ್ಷೆ ಮಾಡಿದ್ದಾರೆ. ಆಗ ನಾನು ಬಿಡದಿಯ ತೋಟದಲ್ಲಿದ್ದೆ. ನಿನ್ನೆ ರಾತ್ರಿ ಮನೆಗೆ ವಾಪಸ್ ಬಂದಾಗ ಈ ವಿಷಯ ನನ್ನ…
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) November 14, 2023
ಅಕ್ರಮವಾಗಿ ಕಂಬದಿಂದಲೇ ವಿದ್ಯುತ್ ಸಂಪರ್ಕವನ್ನು ಪಡೆದುಕೊಳ್ಳುವುದು ಕಾನೂನು ಬಾಹಿರವಾಗಿದೆ. ಈ ಹಿನ್ನೆಲೆಯಲ್ಲಿ 2003ರ ವಿದ್ಯುತ್ ಕಾಯ್ದೆಯ ಸೆಕ್ಷನ್ 135ರ ಅಡಿಯಲ್ಲಿ ಕುಮಾರಸ್ವಾಮಿಯವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಈ ಕಾಯ್ದೆಯ ಪ್ರಕಾರ ಮೂರು ದಿನಗಳಲ್ಲಿ ಬೆಸ್ಕಾಂ ಅಧಿಕಾರಿಗಳು ದಂಡ ವಿಧಿಸಲಿದ್ದಾರೆ ಎಂದು ತಿಳಿದುಬಂದಿದೆ. ಎಷ್ಟು ಮೊತ್ತದ ದಂಡ ಎಂದು ಇನ್ನೂ ವರದಿಯಾಗಿಲ್ಲ. ಅಧಿಕಾರಿಗಳು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ ಬಳಿಕವಷ್ಟೇ ತಿಳಿದುಬರಲಿದೆ.
ಸರ್ಕಾರದ ಗೃಹ ಜ್ಯೋತಿ ಗ್ಯಾರಂಟಿಯ ಬಗ್ಗೆ ‘ಕತ್ತಲೆ ಭಾಗ್ಯ’ ಎನ್ನುವ ಮೂಲಕ ಕುಮಾರಸ್ವಾಮಿ ಟೀಕಿಸಿದ್ದ ಬೆನ್ನಲ್ಲೇ, ಈ ರೀತಿಯ ಬೆಳವಣಿಗೆ ನಡೆದಿರುವುದು ಮುಜುಗರ ಸೃಷ್ಟಿಸಿತ್ತು. ಅಲ್ಲದೇ, ಇದು ಸೋಷಿಯಲ್ ಮೀಡಿಯಾಗಳಲ್ಲಿ ಕುಮಾರಸ್ವಾಮಿಯವರನ್ನು ಟ್ರೋಲ್ ಮಾಡುವವರಿಗೆ ಸರಕಾಗಿಯೂ ಲಭಿಸಿತ್ತು.