ಚಿತ್ರದುರ್ಗದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಮನೆ, ಕಚೇರಿ ಸೇರಿದಂತೆ 31 ಕಡೆ ಶುಕ್ರವಾರ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಇಂದು ಶಾಸಕ ವೀರೇಂದ್ರ ಪಪ್ಪಿಯನ್ನು ಸಿಕ್ಕಿಂ ರಾಜ್ಯದ ಗ್ಯಾಂಗ್ಟಕ್‌ನಲ್ಲೇ ಬಂಧಿಸಿರುವುದಾಗಿ ವರದಿಯಾಗಿದೆ.
ಗ್ಯಾಂಗ್ಟಕ್‌ನಲ್ಲಿಂದಲೇ ಟ್ರಾನ್ಸಿಟ್ ರಿಮ್ಯಾಂಡ್ ಪಡೆದು, ಬೆಂಗಳೂರು ಕೋರ್ಟ್‌ಗೆ ಹಾಜರುಪಡಿಸಲು ಕರೆ ತರುತ್ತಿರುವುದಾಗಿ ತಿಳಿದುಬಂದಿದೆ. ಶಾಸಕ ಕೆ ಸಿ ವೀರೇಂದ್ರ ಪಪ್ಪಿಯ ಬೆಂಗಳೂರು, ಚಿತ್ರದುರ್ಗದ ಮನೆ ಮೇಲೆ ದಾಳಿ ನಡೆಸಿದಾಗ ಅಪಾರ ಪ್ರಮಾಣದ ನಗದು ಹಣ ಪತ್ತೆಯಾಗಿದ್ದು, ಅವುಗಳೆಲ್ಲವನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.
ವೀರೇಂದ್ರ ಪಪ್ಪಿ ಮನೆಯಲ್ಲಿ ಬರೋಬ್ಬರಿ 12 ಕೋಟಿ ರೂಪಾಯಿ ನಗದು ಹಣ ಪತ್ತೆಯಾಗಿದೆ. ಇದರಲ್ಲಿ 1 ಕೋಟಿ ರೂಪಾಯಿ ವಿದೇಶಿ ಕರೆನ್ಸಿ ಕೂಡ ಸೇರಿದೆ. 6 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ಜೊತೆಗೆ 10 ಕೆಜಿ ಬೆಳ್ಳಿ ಕೂಡ ಪತ್ತೆಯಾಗಿದೆ. ಇವೆಲ್ಲವನ್ನೂ ಜಪ್ತಿ ಮಾಡಿಕೊಂಡಿರುವುದಾಗಿ ಇಡಿ ಮಾಹಿತಿ ನೀಡಿದೆ.

ಪಿಎಂಎಲ್‌ಎ ಕಾಯಿದೆ 2002 ರಡಿ ಶಾಸಕರಿಗೆ ಸೇರಿದ್ದ ನಾಲ್ಕು ವಾಹನಗಳನ್ನು ಜಫ್ತಿ ಮಾಡಲಾಗಿದೆ. ವೀರೇಂದ್ರ ಪಪ್ಪಿ ಹಾಗೂ ಸೋದರರಿಗೆ ಸೇರಿದ 17 ಬ್ಯಾಂಕ್ ಖಾತೆ, 2 ಬ್ಯಾಂಕ್ ಲಾಕರ್‌ಗಳನ್ನು ಜಪ್ತಿ ಮಾಡಲಾಗಿದೆ.
ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರಕರಣ | 10 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ಸಾಕ್ಷಿ ದೂರುದಾರ
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹಾಗೂ ಸೋದರ ಕೆ.ಸಿ.ನಾಗರಾಜ್, ಸೋದರನ ಮಗ ಪೃಥ್ವಿ ದುಬೈನಲ್ಲಿ ಆನ್ ಲೈನ್ ಗೇಮಿಂಗ್ ಬ್ಯುಸಿನೆಸ್ ಅನ್ನು ನಿರ್ವಹಿಸುತ್ತಿದ್ದರು ಎಂದು ಇ.ಡಿ. ಹೇಳಿದೆ. ಸಿಕ್ಕಿಂನ ಗ್ಯಾಂಗ್ಟಕ್‌ನಲ್ಲಿ ಕ್ಯಾಸಿನೋಗಾಗಿ ಜಾಗ ಲೀಸ್ ಗೆ ಪಡೆಯಲು ವೀರೇಂದ್ರ ಪಪ್ಪಿ ಸಿಕ್ಕಿಂಗೆ ಹೋಗಿದ್ದರು. ಇದೇ ವೇಳೆ ಅಲ್ಲಿಯೇ ಬಂಧಿಸಿದ್ದು, ತನಿಖೆ ನಡೆಸಲು ಬೆಂಗಳೂರಿಗೆ ತರೆತರುತ್ತಿದ್ದಾರೆ.

