- ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು
- ಕ್ರಿಮಿನಲ್, ಮಾನಹಾನಿ ಪ್ರಕರಣ ದಾಖಲಿಸಲು ಅರ್ಜಿ
ತನ್ನ ವಿರುದ್ಧ ಮಾನಹಾನಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಮಾಜಿ ಸಚಿವ ಡಾ. ಕೆ. ಸುಧಾಕರ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ತನ್ನ ವಿರುದ್ಧ ಸಾರ್ವಜನಿಕವಾಗಿ ಇಲ್ಲಸಲ್ಲದ, ಪ್ರಚೋದನಾಕಾರಿ ಹೇಳಿಕೆ ನೀಡುವ ಮೂಲಕ ಮಾನಹಾನಿ ಮಾಡುತ್ತಿರುವ ಬಗ್ಗೆ ಪ್ರದೀಪ್ ಈಶ್ವರ್ ವಿರುದ್ದ ಕ್ರಿಮಿನಲ್ ಮಾನಹಾನಿ ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿಬೇಕು ಎಂದು ಕೋರಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿರುವುದಾಗಿ ವರದಿಯಾಗಿದೆ. ಅರ್ಜಿಯ ವಿಚಾರಣೆ ಇನ್ನಷ್ಟೇ ನಿಗದಿಯಾಗಬೇಕಿದೆ.
ಚಿಕ್ಕಬಳ್ಳಾಪುರದ ಶಾಸಕರು, ಪದೇಪದೇ ಸಾರ್ವಜನಿಕವಾಗಿ ತನ್ನ ವಿರುದ್ಧ ಹಗೆತನದಿಂದ ಕೂಡಿದ, ನಿರಾಧಾರ ಆರೋಪಗಳನ್ನು ಮಾಡುತ್ತಿದ್ದಾರೆ. ಆ ಮೂಲಕ ದಂಗೆ ಎಬ್ಬಿಸಿ ತನ್ನ ಬದುಕು, ವ್ಯಕ್ತಿತ್ವಕ್ಕೆ ಹಾನಿ ಮಾಡುವ ಉದ್ದೇಶ ಹೊಂದಿದ್ದಾರೆ. ಇದು ಕಾನೂನಿನ ಪ್ರಕಾರ ಅಪರಾಧ ಎಂದು ಸುಧಾಕರ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಆಧಾರರಹಿತ ಮತ್ತು ದೋಷಪೂರಿತ ಆರೋಪಗಳನ್ನು ಮಾಡಿ, ದುರುದ್ದೇಶಪೂರ್ವಕವಾಗಿ ತಮ್ಮ ವ್ಯಕ್ತಿತ್ವವನ್ನು ಧ್ವಂಸ ಮಾಡುತ್ತಿದ್ದಾರೆ. ತಮ್ಮ ಶೈಕ್ಷಣಿಕ ಅರ್ಹತೆ, ಬೌದ್ಧಿಕ ಸಾಮರ್ಥ್ಯದ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿದ್ದಾರೆ. ತನ್ನನ್ನು ಭ್ರಷ್ಟ ಎಂದು ಸಾರ್ವಜನಿಕರೆದುರೇ ಜರೆದಿದ್ದಾರೆ. ಇದು ಸತ್ಯಕ್ಕೆ ದೂರವಾಗಿದೆ ಎಂದು ಪ್ರದೀಪ್ ಈಶ್ವರ್ ಅವರ ಹಲವು ಆರೋಪಗಳನ್ನು ಉಲ್ಲೇಖಿಸಿ ದೂರು ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ಈ ದಿನ’ ಸಂಪಾದಕೀಯ | ಅರಣ್ಯ ಮತ್ತು ಕಂದಾಯ ಇಲಾಖೆಗಳ ಜಟಾಪಟಿ ಬಡ ರೈತರ ಬೆನ್ನಿಗೆ ಚೂರಿಯಾಗದಿರಲಿ
ಪ್ರದೀಪ್ ಈಶ್ವರ್ ಅವರು ತಮ್ಮ ವಿರುದ್ಧ ದ್ವೇಷಕಾರುತ್ತಿರುವುದಲ್ಲದೇ, ಯುವಜನರ ಮನಸ್ಸನ್ನು ಹಾಳು ಮಾಡುತ್ತಿದ್ದಾರೆ. ಇದು ದುರುದ್ದೇಶಪೂರ್ವಕ ಮತ್ತು ಇದರ ಹಿಂದೆ ತನ್ನ ವರ್ಚಸ್ಸಿಗೆ ಧಕ್ಕೆ ಮಾಡಿ, ರಾಜಕೀಯ ಲಾಭ ಪಡೆಯುವ ಉದ್ದೇಶ ಇದೆ ಎಂದು ಆಕ್ಷೇಪಿಸಿದ್ದಾರೆ.
ಪ್ರದೀಪ್ ಈಶ್ವರ್ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 36, 37, 109, 112, 113, 114, 117, 120ಬಿ, 388, 500, 501. 504, 505, 506 ಅಡಿ ಪ್ರಕರಣ ದಾಖಲಿಸಲು ಆದೇಶಿಸಬೇಕು ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಮಾಜಿ ಸಚಿವ ಡಾ.ಕೆ. ಸುಧಾಕರ್ ಕೋರಿದ್ದಾರೆ.