ಭಾರತದ ಪ್ರಧಾನಿಯೊಬ್ಬರು ‘ಕೊನೆಯ ಪತ್ರಿಕಾಗೋಷ್ಠಿ’ ನಡೆಸಿ ಇಂದಿಗೆ ಸರಿಯಾಗಿ ಒಂದು ದಶಕ ಕಳೆದಿದೆ. ಅಂದರೆ, 10 ವರ್ಷಗಳ ಹಿಂದೆ ಜನವರಿ 3ರಂದು ಪ್ರಧಾನಿ ಕಡೆಯ ಪ್ರೆಸ್‌ಮೀಟ್ ನಡೆಸಿದ್ದರು. ಅದು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಎಂದು ಪತ್ರಕರ್ತ ಪಂಕಜ್ ಪಚೌರಿ ಟ್ವಿಟರ್‌ನಲ್ಲಿ ಗಮನ ಸೆಳೆದಿದ್ದಾರೆ.
“ಭಾರತದ ಪ್ರಧಾನಿಯ ಕೊನೆಯ ಪತ್ರಿಕಾಗೋಷ್ಠಿ ಸರಿಯಾಗಿ 10 ವರ್ಷಗಳ ಹಿಂದೆ ನಡೆದಿದೆ. ಅಂದು, 100ಕ್ಕೂ ಹೆಚ್ಚು ಪತ್ರಕರ್ತರಿದ್ದ ಪ್ರೆಸ್‌ಮೀಟ್‌ನಲ್ಲಿ 62 ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದರು” ಎಂದು ಟ್ವೀಟ್‌ನಲ್ಲಿ ಬರೆದಿದ್ದಾರೆ.
ಪಚೌರಿ ಪ್ರಸ್ತಾಪಿಸಿದಂತೆ, ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು 100ಕ್ಕೂ ಹೆಚ್ಚು ಪತ್ರಕರ್ತರಿಗೆ ಆತಿಥ್ಯ ನೀಡಿದ್ದರು. ಪತ್ರಕರ್ತರು ಸುಮಾರು 62 ಪ್ರಶ್ನೆಗಳನ್ನು ಕೇಳಿದ್ದರು. ಆಗ, ಪಚೌರಿ ಸಿಂಗ್ ಅವರು ಮನಮೋಹನ್ ಸಿಂಗ್ ಅವರ ಮಾಹಿತಿ ಮತ್ತು ಸಂವಹನ ಸಲಹೆಗಾರರಾಗಿದ್ದರು.
The last press conference by an Indian PM was held exactly 10 years ago today.
62 unscripted questions answered with 100+ journalists present.
– https://t.co/kxm4o2Wyc0 pic.twitter.com/R7vfBHNzWg— Pankaj Pachauri (@PankajPachauri) January 3, 2024
2014ರಲ್ಲಿ ಸರ್ಕಾರ ಬದಲಾಯಿತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಇದೂವರೆಗೂ ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ಕರೆದಿಲ್ಲ. ಅಮಿತ್ ಶಾ ಅವರು ಕರೆದಿದ್ದ ಪತ್ರಿಕಾಗೋಷ್ಠಿಯೊಂದರಲ್ಲಿ, ಮೋದಿ ಅವರು ಮೂಕ ಪ್ರೇಕ್ಷಕರಂತೆ ಕುಳಿತುಹೋಗಿದ್ದರು ಅಷ್ಟೇ. ಅದು ಬಿಟ್ಟರೆ, ಮೋದಿ ಅವರು 2023ರ ಅಮೆರಿಕಾ ಪ್ರವಾಸಕ್ಕೆ ತೆರಳಿದ್ದಾಗ, ಶ್ವೇತಭವನದಲ್ಲಿ ಪತ್ರಕರ್ತರ ಎರಡು ಪ್ರಶ್ನೆಗಳಿಗೆ ಉತ್ತರಿಸಿದ್ದರು.
ಈ ಸುದ್ದಿ ಓದಿದ್ದೀರಾ?: ಉತ್ತರ ಪ್ರದೇಶ | ದಲಿತ ಮಹಿಳೆಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ ಪೊಲೀಸ್
ಆ ಸಂದರ್ಭದಲ್ಲಿ ವರದಿ ಮಾಡಿದ್ದ ನ್ಯೂಯಾರ್ಕ್ ಟೈಮ್ಸ್, “ಮೋದಿ ಅವರು ಸಾರ್ವಜನಿಕ ಸಮಾರಂಭಗಳಲ್ಲಿ ಭಾಷಣ ಮಾಡುವುದನ್ನು ಇಷ್ಟಪಡುತ್ತಾರೆ. ರಾಷ್ಟ್ರಕ್ಕೆ ತಮ್ಮ ಸಂದೇಶಗಳನ್ನು ನೀಡಲು ಮಾಸಿಕ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮವನ್ನು ಆಯ್ಕೆ ಮಾಡಿಕೊಂಡಿದ್ದಾರೆ” ಎಂದು ಹೇಳಿತ್ತು.
ಭಾರತದಲ್ಲಿ ಪ್ರಧಾನಿಯಾಗಿ ಕೊನೆಯ ಪತ್ರಿಕಾಗೋಷ್ಠಿ ನಡೆಸಿದ್ದ ಮನ್‌ಮೋಹನ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಗಳಿಗೂ ಮುನ್ನ ಭಾಷಣ ಮಾಡಿದ್ದರು. ಅವರು ತಮ್ಮ ಸರ್ಕಾರದ ಸಾಧನೆಗಳು ಮತ್ತು ವೈಫಲ್ಯಗಳ ಕುರಿತು ಪ್ರಾಮಾಣಿಕ ಮಾತುಗಳನ್ನಾಡಿದ್ದರು. ಉತ್ಪಾದನಾ ವಲಯದಲ್ಲಿ ಉದ್ಯೋಗ ಸೃಷ್ಟಿಯು ಸರ್ಕಾರದ ಗುರಿಗಳಿಗಿಂತ ಹೇಗೆ ಕಡಿಮೆಯಾಯಿತು ಎಂಬುದರ ಕುರಿತು ಅವರು ಗಮನ ಹರಿಸಿದ್ದರು.
ಪಚೌರಿ ಅವರ ಪೋಸ್ಟ್ಅನ್ನು ಹಂಚಿಕೊಂಡಿರುವ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ, “ಮನಮೋಹನ್ ಸಿಂಗ್ ಅವರು ತಮ್ಮ 10 ವರ್ಷಗಳ ಅಧಿಕಾರಾವಧಿಯಲ್ಲಿ 117 ಬಾರಿ ಪತ್ರಿಕಾಗೋಷ್ಠಿ ನಡೆಸಿದ್ದರು” ಎಂದು ಬರೆದಿದ್ದಾರೆ.