ಉತ್ತರ ಪ್ರದೇಶದ ಅಮೇಥಿ ಮತ್ತು ರಾಯ್ಬರೇಲಿ ಲೋಕಸಭಾ ಕ್ಷೇತ್ರಗಳು ಯಾವ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ ಪ್ರತಿ ಚುನಾವಣೆಯಲ್ಲೂ ಸದಾ ಗಮನಸೆಳೆಯುತ್ತವೆ. ಈ ಬಾರಿ, ನಾಮಪತ್ರ ಸಲ್ಲಿಸುವ ಕೊನೆಯ ದಿನದವರೆಗೂ ತೀವ್ರ ಕುತೂಹಲ ಮತ್ತು ಊಹಾಪೋಹಗಳ ನಂತರ, ರಾಹುಲ್ ಗಾಂಧಿ ರಾಯ್ಬರೇಲಿಯಲ್ಲಿ ಕಣಕ್ಕಿಳಿದಿದ್ದಾರೆ. ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಪಕ್ಷದ ಹಿರಿಯ ಕಾರ್ಯಕರ್ತ ಕೆಎಲ್ ಶರ್ಮಾ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಈಗ ಎಲ್ಲರ ಮನಸ್ಸಿನಲ್ಲಿರುವ ಪ್ರಶ್ನೆ: ಈ ಎರಡೂ ಕ್ಷೇತ್ರಗಳಲ್ಲಿ – ಕುಟುಂಬ, ಜಾತಿ ಅಥವಾ ಪಕ್ಷದ ಮೇಲಿನ ನಿಷ್ಠೆ – ಯಾವುದು ಗೆಲುವಿಗೆ ಕಾರಣವಾಗುತ್ತದೆ?
2019ರ ಚುನಾವಣೆಯ ಮೊದಲು, ಬಹುತೇಕ ಎಲ್ಲ ಅವಧಿಯಲ್ಲಿ ಎರಡು ಸ್ಥಾನಗಳನ್ನು ನೆಹರು-ಇಂದಿರಾ ಕುಟುಂಬದ ಸದಸ್ಯರು ಪ್ರತಿನಿಧಿಸುತ್ತಿದ್ದರು. ಕೆಲವು ಸಮಯದಲ್ಲಿ ಮಾತ್ರ ಕ್ಷೇತ್ರಗಳ ಕುಟುಂಬದ ಕೈ ಜಾರಿದ್ದವು. ಈ ಎರಡೂ ಸ್ಥಾನಗಳು ಬಿಜೆಪಿಗೆ ಎಂದಿಗೂ ಸವಾಲಾಗಿ ಉಳಿದಿವೆ. ಅದಾಗ್ಯೂ, ಅಂತಿಮವಾಗಿ, ಕಳೆದ ಚುನಾವಣೆಯಲ್ಲಿ (2019) ಸ್ಮೃತಿ ಇರಾನಿ ಅಮೇಥಿಯನ್ನು ಗೆದ್ದಿದ್ದರು. ಈಗ, ಎರಡೂ ಗೆಲುವಿಗಾಗಿ ಹೋರಾಟ ನಡೆಸುಸುತ್ತಿದ್ದಾರೆ.
ಕಳೆದ ಬಾರಿ ಅಮೇಥಿಯಲ್ಲಿ ಸೋಲನುಭವಿಸಿದ್ದ ರಾಹುಲ್, ಈ ಬಾರಿಯೂ ಅಮೇಥಿಯಲ್ಲೇ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಸ್ಮೃತಿ ಇರಾನಿ ಕೂಡ ಪಂಥಾಹ್ವಾನ ನೀಡಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಹೊಸ ತಂತ್ರ ಎಣೆದು ಅವರನ್ನು ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದ ರಾಯ್ಬರೇಲಿಯಲ್ಲಿ ಕಣಕ್ಕಿಳಿಸಿದೆ. ಈ ವರ್ಷದ ಫೆಬ್ರವರಿಯಲ್ಲಿ ಸೋನಿಯಾ ಗಾಂಧಿ ರಾಜ್ಯಸಭೆಗೆ ಆಯ್ಕೆಯಾಗುವ ಮೂಲಕ, ಲೋಕಸಭಾ ಚುನಾವಣೆ ಸ್ಪರ್ಧೆಯಿಂದ ಹೊರಗುಳಿದರು. ಅಲ್ಲದೆ, ತಮ್ಮ ಕ್ಷೇತ್ರದ ಜನರಿಗೆ ಭಾವನಾತ್ಮಕ ಪತ್ರ ಬರೆದು, ‘ನಾನು 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಹಿಂದಿನಂತೆ ಮುಂದೆಯೂ ನೀವು ನನ್ನ ಹಾಗೂ ನನ್ನ ಕುಟುಂಬದ ಬೆಂಬಲಕ್ಕೆ ನಿಲ್ಲುತ್ತೀರಿ ಎಂದು ನನಗೆ ಗೊತ್ತು’ ಎಂದು ಹೇಳಿದ್ದರು.
ಇಂದಿನ ಪರಿಸ್ಥಿತಿಯಂತೆ, ರಾಯ್ಬರೇಲಿಯಲ್ಲಿ ರಾಹುಲ್ ವಿರುದ್ಧ ಪ್ರಭಾವಿ ಠಾಕೂರ್ ನಾಯಕ, ಬಹುಕಾಲ ಕಾಂಗ್ರೆಸ್ನಲ್ಲಿದ್ದ ದಿನೇಶ್ ಪ್ರತಾಪ್ ಸಿಂಗ್ ಅವರು ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಮತದಾರರಲ್ಲಿ ಸೋನಿಯಾ ಅವರ ಮನವಿಯನ್ನು ನೆನಪಿಸಲು ಪ್ರಿಯಾಂಕಾ ಗಾಂಧಿ ಎರಡೂ ಕ್ಷೇತ್ರಗಳಲ್ಲಿ ಭಾರೀ ಪ್ರಚಾರ ನಡೆಸುತ್ತಿದ್ದಾರೆ. ಸೋನಿಯಾ ಕೂಡ ತಮ್ಮ ಮತದಾರರಿಗೆ ಮತ್ತೊಮ್ಮೆ ಭಾವನಾತ್ಮಕ ಸಂದೇಶ ನೀಡಲು ಕ್ಷೇತ್ರದಲ್ಲಿ ಕೆಲ ಗಂಟೆಗಳ ಕಾಲ ಪ್ರಚಾರ ನಡೆಸುವ ಸಾಧ್ಯತೆಗಳಿವೆ.
ಈ ಎರಡೂ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ನಿರ್ಧರಿಸಲು ಕಾಂಗ್ರೆಸ್ ನಾಯಕರು ಚರ್ಚೆ ನಡೆಸುತ್ತಿದ್ದಾಗಲೇ, ಅಮೇಥಿಗೆ ಪ್ರಿಯಾಂಕಾ ಅವರ ರಾಬರ್ಟ್ ವಾದ್ರಾ ಅವರನ್ನು ಕಣಕ್ಕಿಳಿಸಬೇಕೆಂದು ಏಪ್ರಿಲ್ 24ರಂದು ಪೋಸ್ಟರ್ ಅಭಿಯಾನ ನಡೆದಿತ್ತು. ಆದರೆ, ಕಾಂಗ್ರೆಸ್ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿರಲಿಲ್ಲ. ಅಂತಿಮವಾಗಿ ನಾಮಪತ್ರ ಸಲ್ಲಿಕೆ ಕಡೆಯ ದಿನ (ಮೇ 3) ರಾಯ್ಬರೇಲಿಯಲ್ಲಿ ರಾಹುಲ್ ಮತ್ತು ಅಮೇಥಿಯಲ್ಲಿ ಕೆ.ಎಲ್ ಶರ್ಮಾ ನಾಮಪತ್ರ ಸಲ್ಲಿಸಿದರು.
ಉಭಯ ಕ್ಷೇತ್ರಗಳಲ್ಲಿ ಪ್ರಿಯಾಂಕಾ ಪ್ರಭಾವ
ರಾಯ್ಬರೇಲಿಯಲ್ಲಿ ಪ್ರಿಯಾಂಕಾ ಉಪಸ್ಥಿತಿಯು ಪಕ್ಷವನ್ನು ಗಟ್ಟಿಗೊಳಿಸಿದೆ. ಅವರ ಭಾವನಾತ್ಮಕ ಸಂಪರ್ಕವು ವಿಶೇಷವಾಗಿ ಮಹಿಳೆಯರು ಮತ್ತು ವಯಸ್ಸಾದ ಜನರೊಂದಿಗೆ ಬಲವಾಗಿ ಉಳಿದಿದೆ ಅವರು ಪ್ರಚಾರದಲ್ಲಿ ನವೀನತೆಯನ್ನು ತರುತ್ತಿದ್ದು, ಜನರ ಮನ ಸೆಳೆಯುತ್ತಿದ್ದಾರೆ. ಜೊತೆಗೆ, ಸೋನಿಯಾ ಸ್ಪರ್ಧೆಯಿಂದ ಹೊರಗುಳಿದದ್ದು ಕ್ಷೇತ್ರದ ಜನರಿಗೆ ನಿರಾಶೆಯನ್ನುಂಟು ಮಾಡಿತ್ತು. ಆದರೆ ಅಲ್ಲಿ ರಾಹುಲ್ ಕಣಕ್ಕಿಳಿದದ್ದು, ಅವರನ್ನು ಮತ್ತೆ ಹುರಿದುಂಬಿಸಿದೆ.
“ಕಾಂಗ್ರೆಸ್ ಎರಡೂ ಕ್ಷೇತ್ರಗಳಲ್ಲಿ ಜನರೊಂದಿಗೆ ವಿಶೇಷ ಸಂಬಂಧ ಹೊಂದಿದೆ. ಭಾವನಾತ್ಮಕವಾಗಿ ಬೆಸೆದುಕೊಂಡಿದೆ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಮೈತ್ರಿಯು ಬಿಜೆಪಿಗೆ ಕಠಿಣ ಸವಾಲನ್ನು ಒಡ್ಡುತ್ತದೆ” ಎಂದು ಹಿರಿಯ ರಾಜಕೀಯ ವಿಶ್ಲೇಷಕ ಮತ್ತು ಸಾಮಾಜಿಕ ವಿದ್ವಾಂಸ ಪ್ರೊಫೆಸರ್ ಹಿಲಾಲ್ ಅಹ್ಮದ್ ಹೇಳುತ್ತಾರೆ.
ರಾಯ್ ಬರೇಲಿ ಕ್ಷೇತ್ರವು ಕಳೆದ 40 ವರ್ಷಗಳಿಂದ ವಿಶೇಷವಾಗಿ ಅಸೆಂಬ್ಲಿ ಚುನಾವಣೆಯಲ್ಲಿ ಠಾಕೂರ್ (ರಜಪೂತ್) ಜಾತಿಯ ಪ್ರಾಬಲ್ಯವನ್ನು ಕಂಡಿದೆ. 2022ರ ರಾಜ್ಯ ಚುನಾವಣೆಯಲ್ಲಿ ಕ್ಷೇತ್ರವ್ಯಾಪ್ತಿಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕನ್ನು ಎಸ್ಪಿ ಮತತು ಎರಡನ್ನು ಬಿಜೆಪಿ ಗೆದ್ದಿದ್ದವು. ಈ ಆರು ಮಂದಿಯಲ್ಲಿ ಮೂವರು ಠಾಕೂರ್ ಸಮುದಾಯಕ್ಕೆ ಸೇರಿದವರು.
ಪ್ರಸ್ತುತ, ಬಿಜೆಪಿ ಅಭ್ಯರ್ಥಿ ದಿನೇಶ್ ಪ್ರತಾಪ್ ಸಿಂಗ್ ಕೂಡ ಇದೇ ಸಮುದಾಯದ ಪ್ರಭಾವಿ ಕುಟುಂಬಕ್ಕೆ ಸೇರಿದವರು. ಅವರು ದೀರ್ಘಕಾಲ ಕಾಂಗ್ರೆಸ್ನಲ್ಲಿದ್ದರು. 2010 ಮತ್ತು 2016ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ಅವರು 2018ರಲ್ಲಿ ಕಾಂಗ್ರೆಸ್ ತೊರೆದು, ಬಿಜೆಪಿ ಸೇರಿದರು. 2019ರಲ್ಲಿ ಸೋನಿಯಾ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದರು. ಈಗಲೂ ಎಂಎಲ್ಸಿ ಆಗಿರುವ ಅವರು ಯೋಗಿ ಸರ್ಕಾರದಲ್ಲಿ ಸಚಿವರಾಗಿದ್ದಾರೆ.
ಅದಾಗ್ಯೂ, “ಪಕ್ಷದ ಬೆಂಬಲಿಗರು ಹೇಳುವಂತೆ ಸ್ಥಳೀಯ ಜನರಲ್ಲಿ ಕಾಂಗ್ರೆಸ್ ಜೊತೆಗೆ ಭಾವನಾತ್ಮಕ ಸಂಪರ್ಕವಿದೆ. ರಾಹುಲ್ ಅವರು ತಮ್ಮ ಪ್ರಚಾರಕ್ಕಾಗಿ ರಾಯ್ಬರೇಲಿಗೆ ಬರಬೇಕಾಗಿಲ್ಲ. ಪ್ರಿಯಾಂಕಾ ಅವರ ಉಪಸ್ಥಿತಿ ಮತ್ತು ಸೋನಿಯಾ ಅವರ ಭಾವನಾತ್ಮಕ ಮನವಿಯು ರಾಹುಲ್ ಗೆಲುವನ್ನು ಖಚಿತಪಡಿಸುತ್ತದೆ” ಎನ್ನುತ್ತಾರೆ ಎನ್ನುತ್ತಾರೆ ಶಿಕ್ಷಕ, ಕಾಂಗ್ರೆಸ್ ಬೆಂಬಲಿಗ ಬನ್ವಾರಿ ಮಿಶ್ರಾ ಹೇಳಿದರು.
ಪಕ್ಷನಿಷ್ಠೆ
ಇದಕ್ಕೆ ವ್ಯತಿರಿಕ್ತವಾಗಿ, ಅಮೇಥಿಯಲ್ಲಿ ಕೆ.ಎಲ್ ಶರ್ಮಾ ಕಣದಲ್ಲಿದ್ದಾರೆ. ಆದರೆ, ಅವರು ಸಕ್ರಿಯ ರಾಜಕಾರಣಿಯಲ್ಲ. ಅವರು ರಾಹುಲ್ ಗಾಂಧಿಗೆ ಸೂಕ್ತ ಬದಲಿ ಅಭ್ಯರ್ಥಿಯಲ್ಲ ಎಂದು ಕ್ಷೇತ್ರದ ಜನರು ಹೇಳುತ್ತಾರೆ. ಕ್ಷೇತ್ರದಲ್ಲಿ ಪ್ರಚಾರ ನೀರಸವಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ.
ಕುತೂಹಲಕಾರಿಯಾಗಿ, 1991 ಮತ್ತು 1996ರಲ್ಲಿ ಸತೀಶ್ ಶರ್ಮಾ ಅವರು ಅಮೇಥಿಯಲ್ಲಿ ಗೆದ್ದು, ಗಾಂಧಿ ಕುಟುಂಬೇತರ ಸಂಸದರಾಗಿದ್ದರು. ಅವರು ರಾಜೀವ್ ಗಾಂಧಿಯವರ ಆತ್ಮೀಯ ಸ್ನೇಹಿತರಾಗಿದ್ದರು. ಸತೀಶ್ ಶರ್ಮಾ ಬಳಿಕ, ಇದೀಗ ಕೆಎಲ್ ಶರ್ಮಾ ಅವರು ಗಾಂಧಿ ಕುಟುಂಬದ ಹೊರಗಿನವರಾಗಿ ಸ್ಪರ್ಧೆಯಲ್ಲಿದ್ದಾರೆ.
ಈ ವರದಿ ಓದಿದ್ದೀರಾ?: ಮತ್ತೆ ಟ್ರ್ಯಾಕ್ಗೆ ಮರಳುತ್ತಿವೆ ಗೋದಿ ಮೀಡಿಯಾಗಳು: ದ್ವೇಷಿ ನಿರೂಪಕರನ್ನ ಹೊರಗಟ್ಟಿದ ‘ಜೀ ನ್ಯೂಸ್’; ಮೋದಿಯನ್ನು ಪ್ರಶ್ನಿಸುತ್ತಿರುವ ‘ಆಜ್ತಕ್’
ಇತ್ತೀಚಿನ ರ್ಯಾಲಿಯಲ್ಲಿ, ಪ್ರಿಯಾಂಕಾ ವಾದ್ರಾ, ಅಶೋಕ್ ಗೆಹ್ಲೋಟ್ ಮತ್ತು ಇತರ ಕಾಂಗ್ರೆಸ್ ನಾಯಕರು, ಉಭಯ ಕ್ಷೇತ್ರಗಳಲ್ಲಿ ಪಕ್ಷವನ್ನು ಬಲಪಡಿಸುವಲ್ಲಿ ಕೆ.ಎಲ್ ಶರ್ಮಾ ಅವರ ಕೊಡುಗೆಯ ಬಗ್ಗೆ ನಿರರ್ಗಳವಾಗಿ ಮಾತನಾಡಿದರು. ಅವರ ನಿಸ್ವಾರ್ಥ ಕೆಲಸಗಳ ಬಗ್ಗೆ ಮಾತನಾಡಿದರು. ಆದರೆ, ಇದು ಕ್ಷೇತ್ರದ ಜನರಿಗೆ ಹೆಚ್ಚಾಗಿ ತಿಳಿದಿಲ್ಲ.
ರಾಹುಲ್ ನಂತರದ ಅಮೇಥಿ
ಅಮೇಥಿಯಲ್ಲಿ, ರಾಹುಲ್ ನಂತರದ ಅವಧಿಯು ಸ್ಮೃತಿ ಇರಾನಿಯವರ ಕೆಲವು ಭೇಟಿಗಳಿಗೆ ಸೀಮಿತವಾಗಿದೆ. ಇರಾನಿ ಈ ಹಿಂದೆ ಜವಳಿ ಸಚಿವರಾಗಿ ಹಾಗೂ ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾಗಿದ್ದಾರೆ. ಕ್ಷೇತ್ರದಲ್ಲಿ ಕೆಲವು ಯೋಜನೆಗಳನ್ನೂ ಜಾರಿಗೆ ತಂದಿದ್ದಾರೆ. ಅಲ್ಲದೆ, ಇತ್ತೀಚೆಗೆ, ಗೌರಿಗಂಜ್ ಬಳಿ ಮನೆಯನ್ನೂ ನಿರ್ಮಿಸಿದ್ದಾರೆ.
ಅದೇನೇ ಇರಲಿ, ಅಮೇಥಿ ಇರಾನಿ ಗೆದ್ದ ಸ್ಥಾನಕ್ಕಿಂತ ಹೆಚ್ಚಾಗಿ ರಾಹುಲ್ ಗಾಂಧಿ ಕಳೆದುಕೊಂಡ ಸ್ಥಾನ ಎಂಬ ಕಾರಣಕ್ಕಾಗಿ ಹೆಚ್ಚು ಸುದ್ದಿಯಲ್ಲಿದೆ. ಈಗ, ಇಲ್ಲಿನ ಜನರು ಸೋತ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುತ್ತಾರೆಯೇ ಅಥವಾ ಗೆದ್ದವರನ್ನೇ ಮತ್ತೆ ಗೆಲ್ಲಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.