2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ರೈತರು ನಂಬುವುದಿಲ್ಲ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಕಾರ್ಪೋರೇಟ್ ನಿಯಂತ್ರಣವಿದೆ. ಕೇಂದ್ರ ಸರ್ಕಾರವು ಬಂಡವಾಳಶಾಹಿಗಳ ಆಜ್ಞೆಯಂತೆ ಕೆಲಸ ಮಾಡುತ್ತಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.
“ಭಾರತವನ್ನು ಅಗ್ಗದ ಕಾರ್ಮಿಕರ ಮೂಲವಾಗಿ ನೋಡಲಾಗುತ್ತಿದೆ. ಸರ್ಕಾರದ ಮೇಲೆ ಕಾರ್ಪೊರೇಟ್‌ಗಳ ನಿಯಂತ್ರಣವು ಬೆಳೆದಿದೆ. ಸಮಸ್ಯೆಗಳನ್ನು ಎದುರಿಸಲು ಮತ್ತು ತಮ್ಮ ಗುರಿಗಳನ್ನು ಸಾಧಿಸಲು ರೈತ ಸಂಘಟನೆಗಳು ಬಲವಾಗಿರಬೇಕು” ಎಂದು ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
“ಬಿಜೆಪಿ ಪ್ರಣಾಳಿಕೆ ಮೇಲೆ ನಮಗೆ ನಂಬಿಕೆ ಇಲ್ಲ. 2014ರಲ್ಲೂ ಸ್ವಾಮಿನಾಥನ್ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಲಾಗಿತ್ತು, 10 ವರ್ಷ ಕಳೆದರೂ ಶಿಫಾರಸುಗಳು ಜಾರಿಯಾಗಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಬಿಜೆಪಿ ಜನರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸುತ್ತಿದೆ. ಸ್ವಾಮಿನಾಥನ್ ಆಯೋಗವು ಸಮಗ್ರ ಉತ್ಪಾದನಾ ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳುವ C2+50% ಸೂತ್ರದಲ್ಲಿ ಎಂಎಸ್‌ಪಿ ನೀಡಲು ಶಿಫಾರಸು ಮಾಡಿದೆ. ಆದರೆ, ಬಿಜೆಪಿ ಬೆಳೆಗಳಿಗೆ A2+FL (ರೈತ ಮತ್ತು ಕುಟುಂಬದ ದುಡಿಮೆಯ ಮೌಲ್ಯ ಒಳಗೊಂಡಿರುತ್ತದೆ) ಸೂತ್ರದಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡುವುದಾಗಿ ಬಿಜೆಪಿ ಹಿಂದಿನ ಚುನಾವಣೆಗಳಲ್ಲಿ ಹೇಳಿತ್ತು. ಆದರೆ, ಯಾವುದನ್ನೂ ಸರ್ಕಾರ ಜಾರಿಗೆ ತರಲಿಲ್ಲ” ಎಂದು ಆರೋಪಿಸಿದರು.
“ಉದ್ಯಮಿಗಳ ಗುಂಪು ಬಿಜೆಪಿಯನ್ನು ವಶಪಡಿಸಿಕೊಂಡಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ನಿರ್ದಿಷ್ಟ ವ್ಯಕ್ತಿಯ ಸರ್ಕಾರವಾಗಿದೆ. ಹೀಗಾಗಿಯೇ, ಅದು ರೈತರು ಮತ್ತು ದೇಶದ ಜನರಿಗಾಗಿ ಕೆಲಸ ಮಾಡುತ್ತಿಲ್ಲ. ಅದು ಕೆಲವರಿಗಾಗಿ ಮಾತ್ರ ಕೆಲಸ ಮಾಡುತ್ತಿದೆ” ಎಂದು ಟಿಕಾಯತ್ ಹೇಳಿದ್ದಾರೆ.
“ಈಗ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ರೈತರ ಬಗ್ಗೆ ಮಾತನಾಡುತ್ತಿವೆ. ಪ್ರತಿಯೊಬ್ಬ ರಾಜಕಾರಣಿಯೂ ಬಡವರು, ಯುವಕರು ಮತ್ತು ಆದಿವಾಸಿಗಳು ಹಾಗೂ ರೈತರ ಬಗ್ಗೆ ಮಾತನಾಡುತ್ತಿದ್ದಾರೆ. ರೈತ ಸಂಘಟನೆಗಳು ಬಲಿಷ್ಠವಾಗಬೇಕು. ರೈತ ಸಂಘಟನೆಗಳು ಬಲಿಷ್ಠವಾದರೆ ಎಲ್ಲವೂ ಆಗುತ್ತದೆ. ರೈತ ಸಂಘಟನೆಗಳು ದುರ್ಬಲವಾದರೆ ಏನೂ ಆಗುವುದಿಲ್ಲ” ಎಂದು ಅವರು ಹೇಳಿದ್ದಾರೆ.