ಉತ್ತರ ಕನ್ನಡದ ಗೊರಕೆ ಸಂಸದನೆಂದೇ ಚಿರಪರಿಚಿತರಾಗಿರುವ ಅನಂತ್‌ಕುಮಾರ್ ಹೆಗಡೆ ಮತಾಂಧ ಗುಟುರು ಹಾಕಲಾರಂಭಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಷ್ಟೇ ಮತೀಯ ಮಸಲತ್ತಿನ ಭೀಷಣ ಭಾಷಣ-ಹೇಳಿಕೆ ಬಿತ್ತರಿಸುತ್ತ ಕಾಣಿಸಿಕೊಳ್ಳುವ ‘ಚಾಳಿ’ಯ ಈ ಅನಂತ್ ಹೆಗಡೆ ಹಿಂದೆಲ್ಲ ಗೆಲ್ಲಲು ಹಿಂದುತ್ವ ಪ್ರಯೋಗಿಸುತ್ತಿದ್ದರು. ಈ ಬಾರಿ ಅನಂತ್ ಕೇಸರಿ ಟಿಕೆಟ್‌ಗೆ ಕೋಮು ಕೌರ್ಯದ ವರಸೆಗಿಳಿದು ಬಿಜೆಪಿ ಹೈಕಮಾಂಡ್‌ಗೆ ತನ್ನ ಅಸ್ತಿತ್ವ ತೋರಿಸಬೇಕಾದ ದರ್ದು ಎದುರಾಗಿದೆ. ಅತ್ಯುಗ್ರ ಹಿಂದುತ್ವವಾದಿಯಾದ ತನ್ನನ್ನು ಬಿಟ್ಟು ಬಿಜೆಪಿ ಬೇರ್ಯಾರಿಗೆ ಟಿಕೆಟ್ ಕೊಡತ್ತದೆ ಎಂಬ ಅಹಮಿಕೆಯಲ್ಲಿ ಕ್ಷೇತ್ರ ಕಡೆಗಣಿಸಿ ‘ಭೂಗತ’ರಾಗಿರುತ್ತಿದ್ದ ಅನಂತ್‌ಗೆ ಮತ್ತೆ ಅವಕಾಶ ಕೊಡಕೂಡದೆಂಬ ಕೂಗು ಬಿಜೆಪಿಯಲ್ಲಿ ಎದ್ದಿದೆ.
ತನ್ನ ವಿರುದ್ಧ ಮಾತಾಡುವವರ ಮೈಮೇಲೇರಿ ಹೋಗುವ ಸ್ವಭಾವದ ಅನಂತ್‌ರನ್ನು ಎದುರು ಹಾಕಿಕೊಳ್ಳಲು ಹೆದರುತ್ತಿದ್ದವರೆಲ್ಲ ಈ ಸಲ ತಿರುಗಿಬಿದ್ದಿದ್ದಾರೆ. ಜಿಲ್ಲೆಯಲ್ಲಿ ಈ ಪರಿಸ್ಥಿತಿಯಾದರೆ ಅತ್ತ ಹೈಕಮಾಂಡ್ ಮಟ್ಟದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮುಂತಾದವರು ಅನಂತ್ ವಿರುದ್ಧವಿದ್ದಾರೆ. ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯ ಬಿಜೆಪಿ ವಕ್ತಾರ-ಸಂಘಿ ಪತ್ರಕರ್ತ ಹರಿಪ್ರಸಾದ್ ಕೋಣೆಮನೆಯಂಥವರು ಉತ್ತರ ಕನ್ನಡದಿಂದ ಬಿಜೆಪಿ ಅಭ್ಯರ್ಥಿಯಾಗಲು ಶತಾಯಗತಾಯ ಹೋರಾಟ ನಡೆಸಿದ್ದಾರೆಂಬ ಬಾತ್ಮಿಗಳು ಹರಿದಾಡುತ್ತಿವೆ. ತನ್ನ ಪ್ರತಿಸ್ಪರ್ಥಿಗಳನ್ನು ಹಿಮ್ಮೆಟ್ಟಿಸಿ ಕೇಸರಿ ಟಿಕೆಟ್ ಪಡೆಯಲು ಅನಂತ್ ಈಗ ಕಂಡಕಂಡಲ್ಲಿ ಯಾವ್ಯಾವುದೋ ಮಸೀದಿ ಒಡೆಯುವ, ಸಿಎಂ ಸಿದ್ದರಾಮಯ್ಯರನ್ನು ಏಕವಚನದಲ್ಲಿ ಬೈಯ್ಯುವ ಕೋಮು ಪ್ರಚೋದಕ ಕರಾಮತ್ತಿಗಿಳಿದ್ದಾರೆಂದು ವಿಶ್ಲೇಷಿಸಲಾಗುತ್ತಿದೆ.
ಕುಮಟಾದಲ್ಲಿ ಶನಿವಾರ ಹಿಂಬಾಲಕರ ಸಭೆಯಲ್ಲಿ ಅನಂತ್ ಭಯೋತ್ಪಾದಕ ಭಾಷೆಯಲ್ಲಿ ಮಾತಾಡಿದ್ದಾರೆ; “ಶಿರಸಿಯ ಸಿಪಿ ಬಝಾರ್‌ನಲ್ಲಿರುವ ಮಸೀದಿ, ಭಟ್ಕಳದ ಚಿನ್ನದ ಪಳ್ಳಿ ಮತ್ತು ಶ್ರೀರಂಗಪಟ್ಟಣದ ಮಸೀದಿಗಳು ಹಿಂದೆ ಹಿಂದು ದೇವಾಲಯಗಳಾಗಿತ್ತು. ಇದೆಲ್ಲ ಒಡೆದು ಹಾಕವುದು ಗ್ಯಾರಂಟಿ. ಸಾವಿರ ವರ್ಷದ ಸೇಡು ತೀರಿಸಿಕೊಳ್ಳಲು ಹಿಂದು ರಕ್ತ ಸನ್ನದ್ಧವಾಗಿದೆ. ಹಿಂದು ವಿರೋಧಿಗಳನ್ನು ಮುಂದಿನ ಜನ್ಮದಲ್ಲೂ ಸಾಯುವಹಾಗೆ ಹೊಡೆದುಹಾಕಬೇಕು. ಕಾಂಗ್ರೆಸ್ ನಮ್ಮ ವೈರಿಯಲ್ಲ; ಅಹಿಂದು ಸಿದ್ದರಾಮಯ್ಯ ನಮ್ಮ ಶತ್ರು…..” ಎಂದೆಲ್ಲ ಬಡಬಡಿಸಿ ಹಿಂಬಾಲಕರ ಕೆರಳಿಸಿ ಟಿಕೆಟ್ ಲಾಬಿಯ ತಂತ್ರಗಾರಿಕೆ ಮಾಡಿದ್ದಾರೆ.
ಅನಂತ್ ಕುಮಟಾದಿಂದ ಆಚೆಹೋಗುತ್ತಿದ್ದಂತೆಯೇ ಇಡೀ ಉತ್ತರ ಕನ್ನಡ ಬಿಜೆಪಿಗರೂ ಸೇರಿಂದತೆ ಜನರೆಲ್ಲ- “ ಅನಂತನ ಹಣೆ ಬರಹವೇ ಇಷ್ಟು; ಇಲೆಕ್ಷನ್ ಬಂದಾಗ ಹಿಂದು-ಮುಸ್ಲಿಮ್ ಜಗಳ ಹಚ್ಚಾಕೋ ಭಾಷಣ ಮಾಡೋದು ;ಗೆದ್ದ ಮೇಲೆ ಕ್ಷೇತ್ರದ ಜನರಿಗೆ ದ್ರೋಹಮಾಡಿ ಬಿಲ ಸೇರಿಕೊಂಡು ಖಾಸಗಿ ದಂಧೆ ನಡೆಸೋದು; ಇಲ್ಲಾಂತಂದ್ರೆ ಆರಾಮಿಲ್ಲಾಂತ ನಾಪತ್ತೆ ಆಗೋದು. ಈ ಸರ್ತಿ ಇವ್ನ ಆಟ ನಡೆಯೋದಿಲ್ಲ….” ಎಂದು ಮಾತಾಡಿಕೊಳ್ಳಲಾರಂಭಿಸಿದ್ದಾರೆ.
ನೇತಾಜಿ ಸಭಾಶ್ಚಂದ್ರ ಭೋಸರ ಆರ್ಮಿಯಲ್ಲಿದ್ದ ಕುಟುಂಬಿಕರು-ಒಡನಾಡಿಗಳನ್ನು ಕಂಡುಬಂದಿದ್ದೇನೆ; ಅವರು ನೇತಾಜಿ ನಿಗೂಢ ಸಾವಿನ ‘ರಹಸ್ಯ’ ತನಗೆ ವಿವರಿದ್ದಾರೆಂದು ಬುರುಡೆಬಿಟ್ಟಿದ್ದ ಈ ಬೊಗಳೆ ಭೂಪನೆಂದೇ ಹೆಸರುವಾಸಿಯಾಗಿರುವ ಅನಂತ್ ಬಹುಸಂಖ್ಯಾತ ಹಿಂದುಗಳನ್ನು ದಿಕ್ಕು ತಪ್ಪಿಸಿ ಭಾವನೆಗಳನ್ನು ಕೆರಳಿಸಿ ಓಟು ಪಡೆಯಲು ಅಥವಾ ಕೇಸರಿ ಟಿಕೆಟ್ ಪಡೆಯಲು ಹಸೀ-ಹಸೀ ಸುಳ್ಳು ಪುರಾಣ, ಇತಿಹಾಸ, ಭೂಗೋಳ ಹೇಳಬಲ್ಲರೆಂಬುದಕ್ಕೆ ಕುಮಟಾದಲ್ಲಿ ನಿನ್ನೆ ಬಿತ್ತರಿಸಿದ ‘ಉಪ ಕತೆ’ಯೊಂದು ಸಣ್ಣ ಸ್ಯಾಂಪಲ್‌ನಂತಿದೆ.
ಅವರ ಕತೆ ಹೀಗಿದೆ: “ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಕರಪಾತ್ರಿ ಮಹಾರಾಜ್ ಎಂಬ ಸಂತ ಗೋಹತ್ಯಾ ನಿಷೇಧದ ಬಗ್ಗೆ ಹೋರಾಟ ಮಾಡಿದ್ದರು. ಆಗ ಗೋಲಿಬಾರ್ ಮಾಡಿ ಹತ್ತಾರು ಸಾಧುಗಳನ್ನು ಮತ್ತು ನೂರಾರು ಗೋವುಗಳನ್ನ ಕೊಂದುಹಾಕಲಾಗಿತ್ತು.ಇದರಿಂದ ನೊಂದಿದ್ದ ಕರಪತ್ರಿ ಮಹಾರಾಜ್, ‘ಗೋಪಾಷ್ಠಮಿ (ಗೋಕುಲಾಷ್ಠಮಿ)ಯಂದೇ ಇಂದಿರಾ ಗಾಂಧಿ ಕುಟುಂಬ ಸರ್ವನಾಶವಾಗಲಿ’ ಎಂದು ಶಾಪ ಕೊಟ್ಟಿದ್ದರು. ಇದರ ಪರಿಣಾಮವಾಗಿ ಇಂದಿರಾ ಗಾಂಧಿ ಹತ್ಯೆ,ಅವರ ಸಣ್ಣ ಮಗ ಸಂಜಯ್‌ನ ವಿಮಾನಾಪಘಾತದ ದರ್ಮರಣ ಮತ್ತು ದೊಡ್ಡ ಮಗ ರಾಜೀವ್ ಗಾಂಧಿಯ ಬಾಂಬ್ ಬ್ಬಾಸ್ಟ್ ಹತ್ಯೆಗಳೆಲ್ಲ ಗೋಕುಲಾಷ್ಠಮಿಯಂದೇ ಆಗಿದೆ” ಎಂದು ಮನಸ್ಸಿಗೆ ತೋಚಿದ್ದನ್ನು ಹೇಳಿ ಸ್ಯಾಡಿಸ್ಟ್ ಉದ್ವೇಗ ಹುಟ್ಟುಹಾಕಲು ಹವಣಿಸಿದ್ದಾರೆ.
ಆದರೆ, ಅನಂತ್ ಉವಾಚ ಕಪೋಲಕಲ್ಪಿತ; ಜನರನ್ನು ಗೋ ಹೆಸರಲ್ಲಿ ಕೆರಳಿಸುವ ರಾಜಕೀಯ ಮೈಲೇಜಿನ ಪ್ರಯತ್ನದ ಹಿಕಮ್ಮತ್ತೆಂಬುದು ದಾಖಲೆಗಳು ಮತ್ತು ಇತಿಹಾಸ ಖಾತ್ರಿ ಮಾಡುವಂತಿದೆ. ಕೃಷ್ಣ ಹುಟ್ಟಿದ ದಿನ-ಗೋಕುಲಾಷ್ಟಮಿ ಬರುವುದು ಶ್ರಾವಣ ಮಾಸದಲ್ಲಿ; ಅಂದರೆ ಸಾಮಾನ್ಯವಾಗಿ ಅಗಸ್ಟ್ ತಿಂಗಳಲ್ಲಿ. ಆದರೆ, ಇಂದಿರಾ ಗಾಂಧಿ ಸಾವಿಗೀಡಾಗಿದ್ದು ಅಕ್ಟೋಬರ್‌ನಲ್ಲಿ; ಸಂಜಯ್ ಗಾಂಧಿ ವಿಮಾನ ದುರಂತ ನಡೆದ್ದು ಜೂನ್‌ನಲ್ಲಿ; ರಾಜೀವ್ ಗಾಂಧಿ ಎಲ್‌ಟಿಟಿ ಮಾನವ ಬಾಂಬ್‌ಗೆ ಬಲಿಯಾಗಿದ್ದು ಮೇ ತಿಂಗಳಲ್ಲಿ.
ಅಷ್ಟೇ ಅಲ್ಲ, ಅನಂತ್ ಹೆಗಡೆಯದು ಕೋಮು ಗಲಭೆ ಹುಟ್ಟುಹಾಕುವ ಅನಂತ ಕುಚೋದ್ಯದ ಕಟ್ಟು ಕತೆ ಅಥವಾ ಅಜ್ಞಾನ ಅತಿರೇಕವೆಂಬುದನ್ನು ದಾಕಲೆ ಹೇಳುತ್ತದೆ. ಅಖಿಲ ಭಾರತೀಯ ರಾಮರಾಜ್ ಪರಿಷತ್ ಸಂಸ್ಥಾಪಕ ಕರಪತ್ರಿ ಮಹಾರಾಜ್ ಗೋಹತ್ಯಾ ನಿಷೇಧ ಒತ್ತಾಯಿಸುವ ಹೋರಾಟ ನಡೆಸಿಡಿದ್ದೇ 1996ರಲ್ಲಿ. ಸಂಜಯ್ ಸಾವು ಸಂಭವಿಸಿದ್ದು 1980ರಲ್ಲಾದರೆ,ಇಂದಿರಾ ಕೊಲೆಯಾಗಿದ್ದು 1984ರಲ್ಲಿ. ಮಾಜಿ ಪ್ರಧಾನಿ ರಾಜೀವ್ ಹತ್ಯೆ ಸಂಭವಿಸಿದ್ದು 1991. ಕಾಲ ಘಟ್ಟದ ಹೊಂದಾಣಿಕೆಯೂ ಇಲ್ಲದ ಅನಂತ್ ಹೆಗಡೆಯ ‘ಶಾಪ ಪುರಾಣ’ಕ್ಕೇನಾದರೂ ಅರ್ಥವಿದೆಯಾ? ಶಾಪ ಯಾರದು? ಯಾರಿಗೆ? ಕರಪತ್ರಿ ಮಹಾರಜ್ ‘ವರ’ದಿಂದೇನಾದರೂ ಅನಂತ್ ಹೆಗಡೆ ಅವಾಂತರಕೀಡಾಗಿ ಹಾಸ್ಯಾಸ್ಪದರಾಗುತ್ತಿದ್ದಾರಾ? ಒಟ್ಟಿನಲ್ಲಿ ಕೇಸರಿ ಟಿಕೆಟ್ ಆಸೆಯಲ್ಲಿ ಅನಂತ್ ಸ್ಥಿಮಿತವನ್ನೇ ಕಳೆದುಕೊಂಡು ಬೇಕಾಬಿಟ್ಟಿ ಅಪಲಾಪಿಸುತ್ತಿದ್ದಾರೆಂದು ಜನರೀಗ ಮಾತಡಿಕೊಳ್ಳುವುದು ಸಾಮಾನ್ಯವಾಗದೆ!