ಯುವ ಕಾಂಗ್ರೆಸ್ ಚುನಾವಣೆ ಮುಗಿದಿದೆ. ಚುನಾವಣೆಯಲ್ಲಿ ಗೆದ್ದವರು, ಸೋತವರು ಎಲ್ಲರೂ ಒಗ್ಗಟ್ಟಾಗಿ ಸೈದ್ಧಾಂತಿಕವಾಗಿ ರಾಜಕೀಯ ಎದುರಾಳಿಗಳಾಗಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ವಿರುದ್ಧ ಎಲ್ಲಾ ಬೂತ್ ಮಟ್ಟದಲ್ಲಿ ಹೋರಾಟ ಮಾಡಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕರೆ ನೀಡಿದರು.
ಅರಮನೆ ಮೈದಾನದಲ್ಲಿ ಸೋಮವಾರ ನಡೆದ “ಯುವ ಸಂಕಲ್ಪ” ಪದಗ್ರಹಣ ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಚುನಾವಣೆ ಮೂಲಕ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು. ಇದೇ ವೇಳೆ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮೊಹಮದ್ ಹ್ಯಾರಿಸ್ ನಲಪಾಡ್ ಅವರು ನೂತನ ಅಧ್ಯಕ್ಷರಾದ ಮಂಜುನಾಥ್ ಗೌಡ ಅವರಿಗೆ ಕಾಂಗ್ರೆಸ್ ಧ್ವಜ ಹಸ್ತಾಂತರ ಮಾಡಿದರು.
“ಕರ್ನಾಟಕದಲ್ಲಿ 25 ಲಕ್ಷ ಯುವ ಕಾಂಗ್ರೆಸ್ ಸದಸ್ಯತ್ವ ಮಾಡಲಾಗಿದೆ. ಇಲ್ಲಿ 15-20 ಸಾವಿರ ಸದಸ್ಯರು ಬಂದಿದ್ದೀರಿ. ಉಳಿದ ಸದಸ್ಯರು ಎಲ್ಲಿ ಹೋದರು ಎಂದು ಕೇಳಲು ಬಯಸುತ್ತೇನೆ. 25 ಲಕ್ಷ ಸದಸ್ಯತ್ವ ದೊಡ್ಡ ಮಟ್ಟದಲ್ಲಿ ತಾಲೂಕು ಮಟ್ಟದ ಅಧ್ಯಕ್ಷರು ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಇಂತಹುದೇ ಪದಗ್ರಹಣ ಕಾರ್ಯಕ್ರಮ ಮಾಡಬೇಕು. ಆ ಕಾರ್ಯಕ್ರಮಕ್ಕೆ ಆ ತಾಲೂಕಿನ ಯುವ ಕಾಂಗ್ರೆಸ್ ಸದಸ್ಯರನ್ನು ಆಹ್ವಾನಿಸಬೇಕು. ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸದಸ್ಯತ್ವ ಪಡೆದವರಿಂದ ಮತ ಹಾಕಿಸಿಕೊಂಡು ನಂತರ ಅವರನ್ನು ಬಿಡುವುದಲ್ಲ. ಸದಸ್ಯತ್ವ ಪಡೆದವರು ಕಾಂಗ್ರೆಸ್ ಪಕ್ಷದ ಲೆಕ್ಕದಲ್ಲಿರಬೇಕು. ಆಗ ಯಾರೆಲ್ಲಾ ನಿಜವಾದ ಸದಸ್ಯರು ಎಂಬುದು ತಿಳಿಯುತ್ತದೆ” ಎಂದರು.
“ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಶತಮಾನೋತ್ಸವ ಆಚರಿಸಿದೆವು. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದ ಜನನ ಅದಿಕಾರಕ್ಕೆ ಬಂದಂತೆ. ಇಂದು ನೀವೆಲ್ಲರೂ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪದಾಧಿಕಾರಿಗಳಿದ್ದೀರಿ. ನಿಮಗೆಲ್ಲರಿಗೂ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಅವರ ಪರವಾಗಿ ತುಬು ಹೃದಯದ ಶುಭಾಶಯ ಅರ್ಪಿಸಲು ಬಯಸುತ್ತೇನೆ” ಎಂದರು.
“ರಾಜಕೀಯದಲ್ಲಿ ಚುನಾವಣೆ ಗೆಲುವು ಸೋಲು ಸಹಜ. ಚುನಾವಣೆಯಲ್ಲಿ ಸ್ಪರ್ಧಿಸಿದವರೆಲ್ಲಾ ಗೆಲ್ಲಲು ಆಗುವುದಿಲ್ಲ. ಚುನಾವಣೆಯಲ್ಲಿ ಗೆದ್ದವರೆಲ್ಲಾ ನಾಯಕರಲ್ಲ. ಯಾರು ಪ್ರಾಮಾಣಿಕವಾಗಿ ಪಕ್ಷವನ್ನು ಶಿಸ್ತಿನಿಂದ ಸಂಘಟನೆ ಮಾಡುತ್ತಾರೋ, ಕಾಂಗ್ರೆಸ್ ತತ್ವ ಸಿದ್ಧಾಂತ ಬೆಳೆಸಿಕೊಂಡು, ದೇಶದ ಸಮಗ್ರತೆ, ಐಕ್ಯತೆ ಕಾಪಾಡಿಕೊಂಡು ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತಿ ಕಾಪಾಡುವವರು ನಿಜವಾದ ನಾಯಕ. ಅವರೇ ನಿಜವಾದ ಕಾಂಗ್ರೆಸಿಗ” ಎಂದು ತಿಳಿಸಿದರು.
ಶಿಸ್ತು ನಿಮ್ಮ ಮೂಲ ಮಂತ್ರವಾಗಬೇಕು
“ಶಿಸ್ತು ಇಲ್ಲದಿದ್ದರೆ ಯಾರೂ ನಾಯಕರಾಗುವುದಿಲ್ಲ. ಶಿಸ್ತೇ ನಿಮ್ಮ ಯಶಸ್ಸಿನ ಮೂಲಮಂತ್ರ. ಪೋಸ್ಟರ್ ಬ್ಯಾನರ್ ಹಾಕಿದಾಕ್ಷಣ ನೀವು ನಾಯಕರಾಗುವುದಿಲ್ಲ. ನಿಮ್ಮ ಸಮರ ಸಿದ್ದಾಂತದ ಮೇಲೆ ಇರಬೇಕು. ಬೂತ್ ಮಟ್ಟದಲ್ಲಿ ಬಿಜೆಪಿ ಹಾಗೂ ಜನತಾ ದಳದವರ ವಿರುದ್ಧ ಇರಬೇಕೇ ಹೊರತು ಪೋಸ್ಟರ್ ಹಾಕಿಕೊಂಡು ಮಾಡುವುದಲ್ಲ. ನಿಮ್ಮ ಪೋಸ್ಟರ್ ನಿಮ್ಮ ಬೂತ್ ಮಟ್ಟದಲ್ಲಿ ಇರಬೇಕು. ಪೋಸ್ಟರ್ ಹಾಕುವಾಗ ಶಿಷ್ಟಾಚಾರ ಪಾಲನೆ ಮಾಡಬೇಕು. ನಿಮಗೆ ಹಸ್ತದ ಚಿಹ್ನೆಗೆ ಮತ ಹಾಕುತ್ತಾರೆ ಎಂಬುದನ್ನು ಮರೆಯಬೇಡಿ. ಅಡುಗೆ ಬೆಂದಾಗ ರುಚಿ ಇರುತ್ತದೆ, ಅದೇ ರೀತಿ ಜೀವನದಲ್ಲಿ ನೊಂದಾಗ ನಮಗೆ ಬುದ್ಧಿ ಕಲಿಸುತ್ತದೆ. ನೀವು ನಿಮ್ಮಲ್ಲಿರುವ ಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.
“ಬೂತ್ ಮಟ್ಟದಲ್ಲಿ ಬಿಜೆಪಿ ವಿರುದ್ಧ ಹೋರಾಟ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವವನು ಮಾತ್ರ ನಿಜವಾದ ನಾಯಕ. ಇಲ್ಲಿ ಚುನಾವಣೆಯಲ್ಲಿ ಗೆದ್ದಿರುವವರಷ್ಟೇ ನಮ್ಮ ಪಾಲಿನ ನಾಯಕರಲ್ಲ. ನಿಮ್ಮ ಪರವಾಗಿ ಕೆಲಸ ಮಾಡಿ ನಿಮ್ಮನ್ನು ಗೆಲ್ಲಿಸಿರುವ ಕಾರ್ಯಕರ್ತರು ನಮ್ಮ ನಿಜವಾದ ನಾಯಕರು. ಅವೆರೆಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ನಿಮ್ಮ ಚುನಾವಣೆ ಮುಗಿದಿದೆ. ಇದು ಆಂತರಿಕ ಚುನಾವಣೆಯಷ್ಟೇ. ನಿಮ್ಮ ನಿಜವಾದ ಹೋರಾಟ ಏನೇ ಇದ್ದರು, ಮುಂಬರುವ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಪಾಲಿಕೆ ಚುನಾವಣೆಯಲ್ಲಿ ತೋರಿಸಬೇಕು. 2028ರಲ್ಲಿ ಕಾಂಗ್ರೆಸ್ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವಂತೆ ಹೋರಾಟ ಮಾಡಬೇಕು” ಎಂದು ಕರೆ ನೀಡಿದರು.
2028ರಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿ
“2028ರಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವತ್ತ ಗಮನ ಇರಬೇಕು. ನಿಮ್ಮ ಪದಾಧಿಕಾರಿಗಳ ಸಭೆಗೆ ಬಂದು ಮತ್ತಷ್ಟು ಸಲಹೆ ನೀಡುತ್ತೇನೆ. ಯಾರು ವಿದ್ಯಾರ್ಥಿ ಹಾಗೂ ಯುವ ಕಾಂಗ್ರೆಸ್ ಸದಸ್ಯರಾಗುತ್ತಾರೋ ಅವರಲ್ಲಿ 90% ಜನ ಕಾಂಗ್ರೆಸ್ ಪಕ್ಷದಲ್ಲೇ ಉಳಿದುಕೊಳ್ಳುತ್ತಾರೆ. ಸಧ್ಯದಲ್ಲೇ ಮಹಿಳಾ ಮೀಸಲಾತಿ ಜಾರಿಯಾಗಲಿದೆ. ಆಗ ಮುಂದಿನ ಚುನಾವಣೆಯಲ್ಲಿ 224 ಕ್ಷೇತ್ರಗಳ ಪೈಕಿ 74 ಕ್ಷೇತ್ರಗಳಿಗೆ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು. ಹಾಗೆಂದು ನನ್ನ ಮಕ್ಕಳು, ಪತ್ನಿಯನ್ನು ಕಣಕ್ಕಿಳಿಸುವುದು ನನ್ನ ಗುರಿಯಲ್ಲ. ನೀವು ಕಾರ್ಯಕರ್ತರು ಟಿಕೆಟ್ ಪಡೆಯಲು ಶಕ್ತಿಶಾಲಿಗಳಾಗಬೇಕು” ಎಂದು ತಿಳಿಸಿದರು.
“ದೇವರು ವರ ಹಾಗೂ ಶಾಪ ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ದೇವರು ನಿಮಗೆ ಕೊಟ್ಟಿರುವ ನಾಯಕತ್ವದ ಅವಕಾಶವನ್ನು ಬಳಸಿಕೊಂಡು ದೊಡ್ಡ ಭವಿಷ್ಯ ರೂಪಿಸಿಕೊಳ್ಳಬೇಕು. ನಿಮ್ಮ ಆಲೋಚನೆಗಳು ನಿಮ್ಮ ನಾಯಕತ್ವ ರೂಪಿಸುತ್ತದೆ. ಗೆದ್ದವರು, ಸೋತವರನ್ನು, ಸೋತವವರು ಗೆದ್ದವರನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನಿಸಿದರೆ ನಿಮಗೆ ಈ ಡಿ.ಕೆ. ಶಿವಕುಮಾರ್ ಮತ್ತೆ ಯಾವುದೇ ಅವಕಾಶ ನೀಡುವುದಿಲ್ಲ. ನಿಮ್ಮ ವೈಯಕ್ತಿಕ ವಿಚಾರ ಬಿಟ್ಟು ಪಕ್ಷದ ಕೆಲಸ ಮಾಡುತ್ತೀರೋ ಅಂತಹವರಿಗೆ ಪಕ್ಷ ಗೌರವ ನೀಡಲಿದೆ” ಎಂದು ಸಂದೇಶ ರವಾನಿಸಿದರು.