- ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುವ ಸ್ಪರ್ಧೆಗೆ ಆಯ್ಕೆಯಾಗಿದ್ದ ವಿದ್ಯಾರ್ಥಿ
- ಕೆಪಿಸಿಸಿ ಕಚೇರಿಯಲ್ಲಿ ಸಚಿವ ಝಮೀರ್ ಅಹಮದ್ ಅಹವಾಲು ಸ್ವೀಕಾರ
ಇಂಡೋನೇಷ್ಯಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್‌ಗೆ ಆಯ್ಕೆಯಾಗಿದ್ದರೂ, ಆರ್ಥಿಕ ಸಂಕಷ್ಟದಿಂದ ತೆರಳಲು ಒದ್ದಾಡುತ್ತಿದ್ದ ವಿದ್ಯಾರ್ಥಿಯೋರ್ವನಿಗೆ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹಮದ್ ಖಾನ್ ಅವರು ನೆರವು ಒದಗಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಅಹವಾಲು ಸ್ವೀಕರಿಸುತ್ತಿದ್ದ ವೇಳೆ ಹೆಬ್ಬಾಳದ ಕ್ರೆಸೆಂಟ್ ಇಂಗ್ಲಿಷ್ ಶಾಲೆಯ 8 ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ತಾಹೀರ್ ಅಮೀರ್ ಸೆ.19 ರಿಂದ 24ವರೆಗೆ ಜಕಾರ್ತದಲ್ಲಿ ನಡೆಯುವ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಗೆ ಆಯ್ಕೆಯಾಗಿದ್ದೇನೆ. ಆರ್ಥಿಕ ಸಂಕಷ್ಟದಿಂದ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಸಚಿವರಲ್ಲಿ ಅಳಲು ತೋಡಿಕೊಂಡರು.
ಇದಕ್ಕೆ ತಕ್ಷಣ ಸ್ಪಂದಿಸಿದ ಸಚಿವ ಝಮೀರ್, ತಮ್ಮ ವೈಯಕ್ತಿಕ ವೆಚ್ಚದಲ್ಲಿ ಸ್ಪರ್ಧೆಗೆ ಹೋಗಿ ಬರುವ ವಿಮಾನ ವೆಚ್ಚ 65 ಸಾವಿರ ರೂ. ಟಿಕೆಟ್ ಮಾಡಿಸಿ ಸ್ಥಳದಲ್ಲೇ ನೀಡಿ ಶುಭ ಹಾರೈಸಿದರು.
ಇದೇ ವೇಳೆ ಮಾತನಾಡಿದ ಸಚಿವರು, ‘ತಿಂಗಳಲ್ಲಿ ಒಮ್ಮೆ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ಅಹವಾಲು ಸ್ವೀಕರಿಸಬೇಕು ಎಂಬ ಪಕ್ಷದ ಆದೇಶದಂತೆ ಇಂದು ಭೇಟಿ ನೀಡಿದ್ದೇನೆ. ಸಾರ್ವಜನಿಕರಿಂದ ಸ್ವೀಕರಿಸಿದ ಅರ್ಜಿ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಉಸ್ತುವಾರಿ ಜಿಲ್ಲೆ ವಿಜಯನಗರ ಸೇರಿದಂತೆ ರಾಜ್ಯ ಪ್ರವಾಸ ಸಂದರ್ಭದಲ್ಲೂ ಜಿಲ್ಲಾ ಅಥವಾ ತಾಲ್ಲೂಕಿನಲ್ಲಿ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡುತ್ತಿದ್ದೇನೆ’ ಎಂದು ತಿಳಿಸಿದರು.
ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ವಕ್ಫ್ ಇಲಾಖೆಗಳಿಗೆ ಸಂಬಂಧಿಸಿದ ಅರ್ಜಿ ಸ್ವೀಕಾರ ಮಾಡಿದ ಸಚಿವರು, ಸಂಬಂಧ ಪಟ್ಟ ಇಲಾಖೆ ಗಳಿಗೆ ಕಳುಹಿಸಿ ಸೂಕ್ತ ದಾಖಲೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದರು.