ಹಮಸ್ ಹಾಗೂ ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷದ ವೇಳೆ ಗಾಝಾದ ಮೇಲೆ ಇಸ್ರೇಲ್ ನಿರಂತರವಾಗಿ ಬಾಂಬ್ ಸುರಿಯುತ್ತಿರುವುದನ್ನು ಖಂಡಿಸಿ, ಬೆಂಗಳೂರಿನಲ್ಲಿ ಪ್ಯಾಲೆಸ್ತೀನ್ ಪರ ನಿಂತು ಪ್ರತಿಭಟನೆ ನಡೆಸಿದವರ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಎಂಜಿ ರಸ್ತೆಯಲ್ಲಿ ಪ್ಯಾಲೆಸ್ತೀನ್ ಪರವಾಗಿ ಪ್ರತಿಭಟನೆ ನಡೆಸಿ, ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಬಹುತ್ವ ಕರ್ನಾಟಕ ಸದಸ್ಯರ ಮೇಲೆ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಗಾಝಾ ಮೇಲೆ ಇಸ್ರೇಲ್ ನಡೆಸುತ್ತಿರುವ ಅಕ್ರಮ ದಾಳಿ ನಿಲ್ಲಿಸಬೇಕು. ಭಾರತ ಇಸ್ರೇಲ್ ಮೇಲೆ ಒತ್ತಡ ಹಾಕಿ ಪ್ಯಾಲೆಸ್ತೀನ್ ಅನ್ನು ಪ್ರತ್ಯೇಕ ದೇಶವಾಗಿಸಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಎಂಜಿ ರಸ್ತೆಯ ಮೆಟ್ರೋ ನಿಲ್ದಾಣದ ಬಳಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಗಿತ್ತು.
ಇದನ್ನೂ ಓದಿ: ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧ ಖಂಡಿಸಿ ಬೆಂಗಳೂರಿನಲ್ಲಿ ಬೃಹತ್ ‘ಮಾನವ ಸರಪಳಿ’
ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿರುವ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಠಾಣಾಧಿಕಾರಿ, ‘ಯಾವುದೇ ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದ್ದಾರೆ. ನೂರಾರು ಮಂದಿ ಸಾರ್ವಜನಿಕರು ಇದರಲ್ಲಿ ಭಾಗವಹಿಸಿದ್ದರು. ಬೆಂಗಳೂರಿನಲ್ಲಿ ಫ್ರೀಡಂ ಪಾರ್ಕಿನಲ್ಲಿ ಮಾತ್ರ ಪ್ರತಿಭಟನೆ ನಡೆಸಲು ಅನುಮತಿ ಇರುವುದು. ಎಂಜಿ ರೋಡ್‌ನಲ್ಲಿ ಪ್ರತಿಭಟನೆ ನಡೆಸಿ, ನಿಯಮ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಮುಂಚೂಣಿಯಲ್ಲಿದ್ದ ಬಹುತ್ವ ಕರ್ನಾಟಕ ಸಂಘಟನೆಯ ಸುಮಾರು 10ರಿಂದ 12 ಮಂದಿ ಕಾರ್ಯಕರ್ತರ ಮೇಲೆ ಎಫ್‌ಐಆರ್ ದಾಖಲಿಸಿದ್ದೇವೆ’ ಎಂದು ತಿಳಿಸಿದ್ದಾರೆ.
ಎಫ್‌ಐಆರ್ ದಾಖಲಾದ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಬಹುತ್ವ ಕರ್ನಾಟಕ ಸಂಘಟನೆಯ ವಿನಯ್ ಶ್ರೀನಿವಾಸ್, ‘ಎಫ್‌ಐಆರ್ ದಾಖಲಾದ ಬಗ್ಗೆ ಮಾಹಿತಿ ಬಂದಿದೆ. ಯಾವ ಸೆಕ್ಷನ್ ಮತ್ತು ಯಾರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಮಾಹಿತಿ ಪಡೆದುಕೊಳ್ಳುತ್ತೇನೆ’ ಎಂದು ತಿಳಿಸಿದ್ದಾರೆ.
ಭಾರತದ ನಿಲುವು ಪ್ಯಾಲೆಸ್ತೀನ್ ಪರ
ಇತ್ತೀಚೆಗೆ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಾಧ್ಯಮಗಳೊಂದಿಗೆ ಮಾತನಾಡಿ, ‘ಭಾರತವು ಯಾವಾಗಲೂ ಪ್ಯಾಲೆಸ್ತೀನ್ ಸಾರ್ವಭೌಮ, ಸ್ವತಂತ್ರ ಮತ್ತು ಕಾರ್ಯಸಾಧ್ಯವಾದ ರಾಜ್ಯವನ್ನು ಸ್ಥಾಪಿಸಲು ನೇರ ಮಾತುಕತೆಗಳ ಪುನರಾರಂಭವನ್ನು ಪ್ರತಿಪಾದಿಸುತ್ತದೆ ಹಾಗೂ ಇಸ್ರೇಲ್‌ನೊಂದಿಗೆ ಅಕ್ಕಪಕ್ಕದಲ್ಲಿ, ಶಾಂತಿಯಿಂದ ಸುರಕ್ಷಿತ ಮತ್ತು ಮಾನ್ಯತೆ ಪಡೆದ ಗಡಿಗಳಲ್ಲಿ ವಾಸಿಸುವ ಹಾಗೆ ಪ್ರತಿಪಾದಿಸುತ್ತದೆ’ ಎಂದು ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.