- ಕರ್ನಾಟಕದಲ್ಲಿ 40% ಕಮಿಷನ್ ಆದರೆ ಕೇರಳದಲ್ಲಿ 80% ಎಂದ ಚೆನ್ನಿತ್ತಲ
- ಮಹಾರಾಷ್ಟ್ರದಲ್ಲಿ 100% ಕಮಿಷನ್ ಎಂದು ಟೀಕಿಸಿದ ಸಂಜಯ್ ರಾವುತ್
ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳೆ ಭಾರಿ ಸದ್ದು ಮಾಡಿದ್ದ 40% ಕಮಿಷನ್ ವಿಚಾರ ಇದೀಗ ಉಳಿದ ರಾಜ್ಯಗಳಲ್ಲೂ ಸದ್ದು ಮಾಡುತ್ತಿದೆ.
ಆಡಳಿತರೂಢ ಬಿಜೆಪಿ ಸರ್ಕಾರದ ವಿರುದ್ಧ ಕರ್ನಾಟಕದಲ್ಲಿ ಕಾಂಗ್ರೆಸ್ 40% ಕಮಿಷನ್ ವಿಚಾರವನ್ನು ಚುನವಾಣಾ ಪ್ರಚಾರದ ವೇಳೆ ಪ್ರಮುಖವಾಗಿ ಬಳಸಿಕೊಂಡಿತ್ತು. ಇದೀಗ ಕರ್ನಾಟಕದಲ್ಲಿ ಕಾಂಗ್ರೆಸ್ ದಿಗ್ವಿಜಯದಿಂದ ಪ್ರಭಾವಿತರಾಗಿರುವ ಉಳಿದ ರಾಜ್ಯಗಳ ವಿಪಕ್ಷ ನಾಯಕರೂ ಸಹ ತಮ್ಮ ರಾಜ್ಯ ಸರ್ಕಾರಗಳ ವಿರುದ್ಧ ಕಮಿಷನ್ ಭ್ರಷ್ಟಾಚಾರ ಆರೋಪಗಳನ್ನು ಮಾಡುತ್ತಿವೆ.
ಕೇರಳದಲ್ಲಿ 80% ಕಮಿಷನ್
ಕೇರಳ ರಾಜ್ಯಾದ್ಯಂತ ಸಂಚಾರ ನಿಯಮಗಳ ಉಲ್ಲಂಘನೆ ಪತ್ತೆಹಚ್ಚಲು 72 ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ‘ಸುರಕ್ಷಿತ ಕೇರಳ’ ಯೋಜನೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಆರೋಪಿಸಿದ್ದಾರೆ.
“ಕರ್ನಾಟಕದಲ್ಲಿ 40% ಕಮಿಷನ್ ಆಗಿದ್ದರೆ, ಕೇರಳದಲ್ಲಿ 80% ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ. ಎಲ್‌ಡಿಎಫ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ‘ಸುರಕ್ಷಿತ ಕೇರಳ’ ಯೋಜನೆಯ ನೆಪದಲ್ಲಿ ಅಧಿಕಾರದಲ್ಲಿರುವವರವವರ ಜೇಬು ತುಂಬಿಸಲು ಎಡಪಕ್ಷಗಳ ಸರ್ಕಾರ ಜನರನ್ನು ಲೂಟಿ ಮಾಡುತ್ತಿದೆ” ಎಂದು ಚೆನ್ನಿತ್ತಲ ಕಿಡಿಕಾರಿದ್ದಾರೆ.
ಮಹಾರಾಷ್ಟ್ರದಲ್ಲಿ 100% ಕಮಿಷನ್
ಕರ್ನಾಟಕದಲ್ಲಿ ಕಾಂಗ್ರೆಸ್ ಯಶಸ್ಸಿನ ನಂತರ ಮಹಾರಾಷ್ಟ್ರದ ಮಹಾ ಅಘಾಡಿ ಮೈತ್ರಿ ಕೂಟ (ಎಂವಿಎ) ಹೊಸ ಹುರುಪಿನಲ್ಲಿದೆ. ಭಾನುವಾರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರ ನಿವಾಸದಲ್ಲಿ ಎಂವಿಎ ನಾಯಕರು ಸಭೆ ಸೇರಿ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳ ಕುರಿತು ಚರ್ಚಿಸಿದ್ದಾರೆ.
ಸಭೆಯ ಬಳಿಕ ಮಾತನಾಡಿದ ಶಿವಸೇನೆ (ಯುಬಿಟಿ ಬಣ) ನಾಯಕ ಸಂಜಯ್ ರಾವುತ್, ಕರ್ನಾಟಕದಲ್ಲಿ 40% ಕಮಿಷನ್ ಪಡೆದು ಭ್ರಷ್ಟಾಚಾರ ನಡೆದಿದ್ದರೆ, ಮಹಾರಾಷ್ಟ್ರದಲ್ಲಿ ಶೇ. 100% ಕಮಿಷನ್ ಪಡೆಯುವ ಭ್ರಷ್ಟಾಚಾರ ನಡೆದಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಭ್ರಷ್ಟಚಾರದಲ್ಲಿ ಮುಳುಗಿದೆ. ಮುಂದಿನ ಚುನಾವಣೆಯಲ್ಲಿ ಇವರಿಗೆ ಜನತೆ ತಕ್ಕ ಪಾಠ ಕಲಿಸಲಿದೆ ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಚುನಾವಣಾ ಕಾರ್ಯಯೋಜನೆ ಚರ್ಚೆಗೆ ಮಹಾರಾಷ್ಟ್ರದ ಅಘಾಡಿ ಮೈತ್ರಿ ಕೂಟ ಸಭೆ
ಕಾಂಗ್ರೆಸ್ ಗೆಲುವಿಗೆ 40% ಕಮಿಷನ್ ಸರ್ಕಾರ ಘೋಷಣೆ ಕಾರಣ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲು ಬೊಮ್ಮಾಯಿ ಸರ್ಕಾರದ ವಿರುದ್ಧ ಮಾಡಿದ 40 ಪರ್ಸೆಂಟ್ ಕಮಿಷನ್ ಸರ್ಕಾರ ಎನ್ನುವ ಆರೋಪ ಪ್ರಮುಖ ಪಾತ್ರ ವಹಿಸಿದೆ ಎಂದು ರಾಜಸ್ಥಾನದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಹೇಳಿದ್ದಾರೆ.
ವಸುಂಧರಾ ರಾಜೇ ನೇತೃತ್ವದ ಹಿಂದಿನ ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರದ ವಿಷಯವನ್ನು ಪ್ರಸ್ತಾಪಿಸಲು ‘ಜನಸಂಘರ್ಷ್ ಯಾತ್ರೆ’ ಆರಂಭಿಸಿರುವ ಪೈಲೆಟ್, “ಕರ್ನಾಟಕದಲ್ಲಿ ನಾವು ಭರ್ಜರಿ ಗೆಲುವು ಸಾಧಿಸಿದ್ದೇವೆ. ನಾವು ನೀಡಿದ 40% ಕಮಿಷನ್ ಸರ್ಕಾರ ಎಂಬ ಘೋಷಣೆಯನ್ನು ನಾಡಿನ ಜನಸಾಮಾನ್ಯರು ಒಪ್ಪಿಕೊಂಡಿದ್ದಾರೆ. ಇದು ಬಿಜೆಪಿ ಸೋಲಿಸಲು ನಾವು ಎತ್ತಿದ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ. ಜನರು ಅದನ್ನು ಸ್ವೀಕರಿಸಿ ಕಾಂಗ್ರೆಸ್‌ಗೆ ಬಹುಮತ ನೀಡಿದ್ದಾರೆ” ಎಂದು ಸಚಿನ್ ಪೈಲಟ್ ಹೇಳಿದ್ದಾರೆ.
“ಕರ್ನಾಟಕ ವಿಧಾನಸಭಾ ಚುನಾವಣೆಯಿಂದ ತಮ್ಮ ಪಕ್ಷ ಕಲಿಯಬೇಕು. ನಾವು ರಾಜಸ್ಥಾನದಲ್ಲೂ ಅದನ್ನೇ ಹೇಳಿದ್ದೇವೆ. ಆದರೆ, ನಮ್ಮ ಭರವಸೆಯ ಮೇಲೆ ಕಾರ್ಯನಿರ್ವಹಿಸಲು ವಿಫಲರಾದರೆ, ನಾವು ಸಾರ್ವಜನಿಕರ ವಿಶ್ವಾಸವನ್ನು ಹೇಗೆ ಗೆಲ್ಲುತ್ತೇವೆ?” ಎಂದು ಪೈಲಟ್ ಕೇಳಿದ್ದಾರೆ.
ರಾಜೇ ಸರ್ಕಾರದ ಅವಧಿಯಲ್ಲಿ ಆಪಾದಿತ ಭ್ರಷ್ಟಾಚಾರದ ವಿಷಯವನ್ನು ತನಿಖೆಗೊಳಪಡಿಸಲು ಅಶೋಕ್ ಗೆಹ್ಲೋಟ್ ನೇತೃತ್ವದ ತಮ್ಮದೇ ಕಾಂಗ್ರೆಸ್ ಸರ್ಕಾರವನ್ನು ಪೈಲಟ್ ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ.