ರಾಜ್ಯ ಸರ್ಕಾರಕ್ಕೆ ಬದ್ಧತೆ ಇದ್ದರೆ ತಕ್ಷಣ ಒಳಮೀಸಲಾತಿ ಜಾರಿ ಮಾಡಲಿ : ಮಾಜಿ ಸಚಿವ ಜೆ ಸಿ ಮಾಧುಸ್ವಾಮಿ

Date:

Advertisements

ಒಳಮೀಸಲಾತಿ ಅನುಷ್ಠಾನ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು ಪರಿಶಿಷ್ಟ ಜಾತಿಗಳಲ್ಲೇ ಅಸ್ಪೃಶ್ಯರಾಗಿ ಗುರುತಿಸಿಕೊಂಡು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದ ತಳ ಸಮಾಜಗಳಲ್ಲಿ ಹೊಸ ಭರವಸೆ ಚಿಗುರೊಡೆದಿದೆ. ಅದೇಷ್ಟೋ ವರ್ಷಗಳ ಹೋರಾಟದ ಫಲ ಕೈಸೇರುವ ಸಮಯ ಸನ್ನಿಹಿತವಾಗಿದೆ ಎಂಬ ಸಂಭ್ರಮ ತಳ ಸಮುದಾಯಗಳಲ್ಲಿ ಮನೆ ಮಾಡಿದೆ. ಇದರ ಜೊತೆಗೆ ಒಳಮೀಸಲಾತಿ ಕುರಿತು ಹಲವಾರು ವಿಶ್ಲೇಷಣೆಗಳು, ಚರ್ಚೆಗಳು ಶುರುವಾಗಿವೆ.

ಪ್ರಸ್ತುತ ಒಳ ಮೀಸಲಾತಿ ಕುರಿತು ನ್ಯಾ.ಸದಾಶಿವ ಆಯೋಗ ಹಾಗೂ ನ್ಯಾ. ನಾಗಮೋಹನ್ ದಾಸ್ ಆಯೋಗಗಳು ನೀಡಿರುವ ಎರಡು ವರದಿಗಳು ರಾಜ್ಯ ಸರ್ಕಾರದ ಮುಂದಿವೆ. ಈ ಎರಡು ವರದಿಗಳಲ್ಲಿ ಯಾವುದನ್ನ ಅನುಷ್ಠಾನ ಮಾಡಬೇಕು? ಯಾವ ವರದಿಯನ್ನು ಅನುಷ್ಠಾನ ಮಾಡಿದರೆ ಸೂಕ್ತ, ವರದಿ ಜಾರಿಗೆ ಎದುರಾಗುವ ಸವಾಲುಗಳು ಏನು ಎಂಬ ಬಗ್ಗೆ ಮಾಜಿ ಕಾನೂನು ಸಚಿವ ಹಾಗೂ ಈ ಹಿಂದೆ ಒಳ ಮೀಸಲಾತಿ ಕುರಿತು ರಚಿಸಲಾಗಿದ್ದ ಸಂಪುಟ ಉಪ ಸಮಿತಿ ಸಭೆ ಅಧ್ಯಕ್ಷರಾಗಿದ್ದ ಜೆ. ಸಿ. ಮಾಧುಸ್ವಾಮಿ ಸುಪ್ರೀಂ ಕೋರ್ಟ್ ತೀರ್ಪು ಮತ್ತು ಒಳಮೀಸಲಾತಿ ಅನುಷ್ಠಾನದ ಬಗ್ಗೆ ಮಾತನಾಡಿದ್ದಾರೆ. ಅವರು ಹಂಚಿಕೊಂಡ ವಿಷಯದ ಪೂರ್ಣಪಾಠ ಇಲ್ಲಿದೆ.

ಸಂವಿಧಾನಾತ್ಮಕವಾಗಿ ನೀಡಿರುವ ಮೀಸಲಾತಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ನೀಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುನ್ನು ಗೌರವದಿಂದ ಸ್ವಾಗತಿಸುತ್ತೇನೆ.

Advertisements

ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ಅವರ ಆಶಯದಂತೆ ಸಂವಿಧಾನಾತ್ಮಕವಾಗಿ ರಾಜ್ಯದಲ್ಲಿ ಶೇ.15ರಷ್ಟು ಪರಿಶಿಷ್ಟ ಜಾತಿಯವರಿಗೆ, ಶೇ.3 ಪರಿಶಿಷ್ಟ ಪಂಗಡಕ್ಕೆ ಸೇರಿ ಒಟ್ಟು ಶೇ.18 ರಷ್ಟು ಮೀಸಲಾತಿ ನಿಗದಿಯಾಗಿತ್ತು. ಆದರೆ ಅಸ್ಪೃಷ್ಯರಿಗೆ ಸಹಾಯವಾಗಬೇಕಾದ ಮೀಸಲಾತಿಯನ್ನ ಕೆಲವೇ ಸ್ಪೃಷ್ಯ ಜಾತಿಗಳು ಮಾತ್ರ ಬಳಸಿಕೊಳ್ಳುತ್ತಿವೆ ಎಂದು ಅಸ್ಪೃಷ್ಯ ಜಾತಿಗಳು ಹೋರಾಟ ಮಾಡಿ ಹೈಕೋರ್ಟ್ ಮೊರೆ ಹೋಗಿದ್ದರು.

ರಾಜ್ಯದಲ್ಲಿ ಸುಮಾರು 102 ರಿಂದ 103 ಪ.ಜಾತಿಗಳ ಜನಾಂಗದವರಿದ್ದಾರೆ. 53 ರಿಂದ 54 ಪರಿಶಿಷ್ಟ ಪಂಗಡದ ಜನಾಂಗದವರಿದ್ದಾರೆ. ಪ್ರಮುಖವಾಗಿ ಪರಿಶಿಷ್ಟ ಜಾತಿಯವರು ಮಾತ್ರವೇ ಒಳ ಮೀಸಲಾತಿ ಜಾರಿಗೆ ಹೋರಾಟ ಮಾಡುತ್ತಿದ್ದರು. ಆಗ ಸರ್ಕಾರ ನ್ಯಾಯಾಧೀಶ ಎ. ಜೆ. ಸದಾಶಿವ ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚನೆ ಮಾಡಿ ಒಂದು ವರದಿ ಕೇಳಿತ್ತು. ಅದರಂತೆ ಆಯೋಗ ವರದಿ ನೀಡಿತ್ತು. ಅದರ ಪ್ರಕಾರ ಪರಿಶಿಷ್ಟ ಜಾತಿಯಲ್ಲಿ 4 ಗುಂಪುಗಳಾಗಿ ಮಾಡಿದರು. ಎಡಗೈ ಮಾದಿಗ ಸಮುದಾಯಕ್ಕೆ ಶೇ 6, ಬಲಗೈ ಹೊಲೆಯ ಸಮುದಾಯಕ್ಕೆ ಶೇ 5, ಇನ್ನಿತರೆ ಲಂಬಾಣಿ, ಬೋವಿ ಸಮುದಾಯಗಳು ಪ.ಜಾತಿಯಲ್ಲೇ ಸ್ಪೃಷ್ಯ ಜಾತಿಗಳು ಎಂದು ಶೇ. 3ರಷ್ಟು ನೀಡಿದ್ದರು. ಇನ್ನೂ ಶೇ 1 ನ್ನ ಮೈಕ್ರೋ ಮೈನಾರಿಟೀಸ್ ಪ.ಜಾತಿಯವರಿಗೆ ನೀಡಲಾಯಿತು. ಇದಾದ ಮೇಲೆ ಯಾವುದೋ ಕೇಸಲ್ಲಿ ಸುಪ್ರೀಂ ಕೋರ್ಟ್ ಮುಂದೆ ಒಳಮೀಸಲಾತಿ ಮಾಡಬಾರದು ಎಂದು ನಿರ್ಧಾರವಾಯಿತು.

ಇದಾದ ಬಳಿಕ ನಮ್ಮ ಬಿಜೆಪಿ ಸರ್ಕಾರ ಬಂದಾಗ ಪ. ಜಾ ಮತ್ತು ಪ ಪಂಗಡದ ಮೀಸಲಾತಿಯನ್ನ ಹೆಚ್ಚು ಮಾಡಬೇಕು ಎಂದು ಬಹಳ ಒತ್ತಡ ಬಂದಾಗ ನ್ಯಾ. ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಒಂದು ಆಯೋಗ ರಚನೆ ಮಾಡಿ ಕಮಿಟಿ ಮಾಡಿದ್ದೆವು. ಅವರು ಎಸ್ ಸಿಗೆ 15ರಿಂದ 17 ಮತ್ತು ಎಸ್ಟಿಗೆ 3ರಿಂದ 7 ಮಾಡಿ ಶೇ. 6 ಹೆಚ್ಚು ಮಾಡಿಕೊಟ್ಟರು. ಇದನ್ನ ಹೇಗೆ ಇತ್ಯರ್ಥ ಮಾಡಬೇಕೆಂದು ಒಳಮೀಸಲಾತಿ ಕುರಿತ ಸಚಿವ ಸಂಪುಟ ಉಪ ಸಮೀತಿಗೆ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿ ಒಂದು ಶಿಫಾರಸನ್ನು ತಕ್ಷಣ ಮಾಡಬೇಕು ಎಂದು ಸರ್ಕಾರ ಅಪೇಕ್ಷೆ ಮಾಡಿದ ಮೇಲೆ ನಾವು ನಮ್ಮ ಸಮಿತಿಯವರು ಒಂದು ವರದಿಯನ್ನು ಕೊಟ್ಟೆವು.

ಅದರ ಪ್ರಕಾರ, ಸದಾಶಿವ ಆಯೋಗದಲ್ಲಿ ಎಡಗೈ ಮಾದಿಗ ಸಮಾಜಕ್ಕೆ ಶೇ 6 ಮಾಡಿದ್ದರು, ಅದನ್ನು ಹಾಗೆ ಉಳಿಸಿ ಬಲಗೈ ಸಮಾಜಕ್ಕೆ 5 ಇದ್ದಿದ್ದನ್ನ 5.5 ಹೆಚ್ಚಿಸಿದ್ದೆವು. ಲಂಬಾಣಿ ಬೋವಿಯವರಿಗೆ 3 ಇದ್ದಿದ್ದನ್ನು ಶೇ 4.5 ಮಾಡಿದ್ದೇವು. ಮೈಕ್ರೋ ಮೈನಾರಿಟಿ ಸಣ್ಣ ಪುಟ್ಟ ಸಮುದಾಯಗಳಿಗೆ ಶೇ 1 ನೀಡಿ ಮೀಸಲಾತಿಯನ್ನ ಘೋಷಣೆ ಮಾಡಿದ್ದೇವೆ. ಇದರಲ್ಲಿ ಎರಡು ಸಮಸ್ಯೆಗಳು ಇದ್ದವು. ಮೀಸಲಾತಿಯಲ್ಲಿ ಒಳಮೀಸಲಾತಿ ಮಾಡುವ ಅಧಿಕಾರ ರಾಜ್ಯಗಳಿಗೆ ಇಲ್ಲ ಎಂಬ ಸುಪ್ರೀಂ ಕೋರ್ಟ್ ನಿರ್ಧಾರ ಮತ್ತು ಶೇ 6 ಜಾಸ್ತಿ ಕೊಟ್ಟಿದ್ದರಿಂದ ಶೇ 50 ಮೀಸಲಾತಿಯನ್ನು ದಾಟಿ ಹೋಗಬಾರದು ಎಂಬ ಸುಪ್ರೀಂ ಕೋರ್ಟ್ ಆದೇಶವನ್ನು ದಾಟಿ ಹೋಗುತ್ತಿದೆ ಎಂಬುದು. ಈ ಎರಡು ಪ್ರಕರಣಗಳು ನಮ್ಮ ಮುಂದೆ ಇತ್ತು. ನಾವು ಎರಡನೆಯದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ. ಶೇ.50 ದಾಟಿ ಹೋಗುವುದನ್ನ ಆಮೇಲೆ ನಿಭಾಯಿಸಿಕೊಳ್ಳುತ್ತೇವೆ ಎಂದು ಹೇಳಿ, ಶೇ.24 ಮೀಸಲಾತಿಯನ್ನ ವಿಂಗಡಿಸಿ ಕೊಟ್ಟೆವು. ಅದು ಅನುಷ್ಠಾನ ಮಾಡಲು ಸರ್ಕಾರದಿಂದ ಆದೇಶವನ್ನ ಮಾಡಲಾಯಿತು ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್ ಅಸ್ತು: ರಾಜ್ಯ ಸರ್ಕಾರದ ಮುಂದೆ ಎರಡು ಸವಾಲು;

ಇದೀಗ ಮತ್ತೆ ಸುಪ್ರೀಂ ಕೋರ್ಟ್ ಮೀಸಲಾತಿಯಲ್ಲಿ ರಾಜ್ಯ ಸರ್ಕಾರಗಳಿಗೆ ಒಳ ಮೀಸಲಾತಿ ನೀಡುವ ಅಧಿಕಾರ ಇದೆ. ಇರಬೇಕು, ಇದರಲ್ಲಿ ಯಾವುದೇ ಗಹನವಾದ ವ್ಯತಿರಿಕ್ತ ಗಮನಿಸಿಲ್ಲ ಎಂದಿದೆ. ಅಲ್ಲಿಯ ಪರಿಸ್ಥಿತಿಗನುಗುಣವಾಗಿ ಜನಸಂಖ್ಯೆಗೆ ಅನುಗುಣವಾಗಿ ಅವರ ಜೀವನದ ಮಟ್ಟಕ್ಕೆ ಅನುಗುಣವಾಗಿ ಪರಿಶಿಷ್ಟ ಜಾತಿಯಲ್ಲಿ ಯಾರು ಯಾರಿಗೆ ಎಷ್ಟು ಎಂಬುದನ್ನ ವಿಂಗಡಣೆ ಮಾಡಬಹುದು ಎಂಬ ತೀರ್ಮಾನ ಕೊಟ್ಟಿದೆ.

ಈಗ ನಮ್ಮ ರಾಜ್ಯದ ಮುಂದೆ ಎರಡು ವಿಚಾರ ಇದೆ. ಶೇ.18, 15+3 ಕೊಟ್ಟುಕೊಂಡು ಹೋಗುವುದಾದರೆ ಯಾವುದೇ ಸಮಸ್ಯೆ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ. ಅದು ನಮ್ಮಲ್ಲಿ ಚಾಲ್ತಿಯಲ್ಲಿದ್ದ ಶೇ.50 ಮೀಸಲಾತಿಯೊಳಗೆ ಬರಲಿದೆ.

ಒಳಮೀಸಲಾತಿ ನಿಯಮ ಒಪ್ಪಿಕೊಂಡು ಇದನ್ನ ತಕ್ಷಣ ಅನುಷ್ಠಾನ ಮಾಡಬೇಕಾದರೆ ಯಾವ ಅಡಚಣೆ ಕಾನೂನಿನಲ್ಲಿ ಇದೆ ಎಂದು ನಾನು ಭಾವಿಸಿಲ್ಲ. ಆದರೆ ಹೆಚ್ಚುವರಿ ಶೇ.6 ನ್ನು ಸೇರಿಸಿ ಶೇ.24 ಮಾಡಿರುವುದನ್ನ ಕೊಡಬೇಕು ಅಂದ್ರೆ ಅವರಿಗೆ ಶೇ.50 ದಾಟುತ್ತದೆ. ಅಂದ್ರೆ ಹೆಚ್ಚುವರಿ ಕೊಟ್ಟಿರುವುದಕ್ಕೆ ಅವರು ಸಂವಿಧಾನದಲ್ಲಿ ತಿದ್ದುಪಡಿಯನ್ನ ಪಾರ್ಲಿಮೆಂಟ್ ಮುಂದೆ ಮಾಡಿಸಿಕೊಳ್ಳುತ್ತಾರಾ..? ಅಥವಾ ಅವರಿಗೊಂದು ಒತ್ತಡ ಇತ್ತು. ಶೆಡ್ಯೂಲ್ 9ರಲ್ಲಿ ಸೇರಿಸಿಕೊಡಿ ಎಂಬುದು. ಶೆಡ್ಯೂಲ್ 9 ರಲ್ಲಿ ಹೇಳಿದ್ರೆ ಹೈಕೋರ್ಟ್ ನಮ್ಮ ಮುಂದೆ ಬರಲ್ಲ, ಇಮ್ಯೂನಿಟಿ ಇರುತ್ತ ಆ ಸೆಕ್ಷನ್ ಗೆ ಅಂತ ತಿಳಿಸಿತ್ತು.

ಶೆಡ್ಯೂಲ್ 9 ಕೂಡ ಇಮ್ಯೂನ್ ಅಲ್ಲ ಅನ್ನೊದು ನಮ್ಮ ವಾದ ಇತ್ತು. ಶೆಡ್ಯೂಲ್ 9 ಪರಿಚಯಿಸಿದ್ದು ಬೇರೆ ಕಾರಣಕ್ಕೆ. ಹಾಗಾಗಿ ಅವೆಲ್ಲವನ್ನೂ ತಗೊಂಡೊಗಿ ಶೆಡ್ಯೂಲ್ 9 ರಲ್ಲಿ ಹಾಕಿ ಸುಪ್ರೀಂ ಕೋರ್ಟ್ ಗೆ ಆ ಶೆಡ್ಯೂಲ್ 9 ನಲ್ಲಿ ಹಾಕಿರೊರ ಮೇಲೆ ಅಧಿಕಾರ ವ್ಯಾಪ್ತಿ ಇಲ್ಲ ಅಂತಾ ವಾದ ಮಾಡಲಿಕ್ಕೆ ಆಗುವುದಿಲ್ಲ. ಅದರಂತೆ ಅಲ್ಲೂ ಕೂಡ ಅವರು ವಾದ ಮಾಡಬಹುದು. ಅದರಂತೆ ತಮಿಳುನಾಡು ಸರ್ಕಾರದು, ಬೇರೆ ಸರ್ಕಾರದು ಸುಪ್ರೀಂ ಕೋರ್ಟಿನಲ್ಲಿ ಶೆಡ್ಯೂಲ್‌ 9 ನಲ್ಲಿ ಇದ್ರು ಕೋರ್ಟ್ ಮುಂದೆ ಪ್ರಶ್ನೆಯಾಗಿತ್ತು. ಹಾಗಾಗಿ ನಾವು ಏನಾಗುತ್ತೇ ಆಗಲಿ ಅಂತಾ ನಿರ್ಧಾರ ಮಾಡಿ ನಮ್ಮ ಸರ್ಕಾರ ಇದ್ದಾಗ ಮಾಡಿ‌ಕೊಟ್ಟೆವು ಎಂದು ಜೆ ಸಿ ಮಾಧುಸ್ವಾಮಿ ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯನವರ ಸರ್ಕಾರ ಪ.ಜಾತಿಗೆ ಶೇ.15 ಗೆ ನಿಲ್ತಾರೋ ಶೇ.17 ಹೋಗ್ತಾರೋ ಅದು ಅವರಿಗೆ ಬಿಟ್ಟದ್ದು. ಎರಡಕ್ಕೂ ಪರಿಹಾರ ಇದೆ.

ಒಳಮೀಸಲಾತಿ ಅನುಷ್ಠಾನ ಕುರಿತು ಮಾತನಾಡಿದ ಮಾಜಿ ಸಚಿವ ಮಾಧುಸ್ವಾಮಿ, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುನ್ನು ಗೌರವದಿಂದ ಸ್ವಾಗತಿಸುತ್ತೇನೆ. ಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿ ಇರಬೇಕು. ಇದನ್ನು ನಾನು ಸಾರ್ವಜನಿಕವಾಗಿಯೂ, ವೈಯಕ್ತಿಕವಾಗಿಯೂ ಬಹಳ ಮೆಚ್ಚುಗೆಯಿಂದ ಸ್ವಾಗತಿಸುತ್ತೇನೆ ಎಂದಿದ್ದಾರೆ.

ಯಾರಿಗೆ ಅನ್ಯಾಯವಾಗುತ್ತಿತ್ತೋ, ಯಾರೆಲ್ಲಾ ತುಳಿತಕ್ಕೆ ಒಳಗಾಗುತ್ತಿದ್ದರೋ, ಸಮಾಜದಿಂದ ಬಹಿಷ್ಕೃತರು ಅಂತ ಜೀವನ ಮಾಡುತ್ತಿದ್ದಾರೋ, ಊರಿಂದ ಆಚೆ ಇರಬೇಕು ಎನ್ನುವ ಸ್ಥಿತಿಯಲ್ಲಿ ಇದ್ದರೋ ಅವರೆಲ್ಲರಿಗೂ ಮುಖ್ಯವಾಹಿನಿಗೆ ಬರುವ ಅವಕಾಶ ಸಿಕ್ಕಿದೆ. ಇವರ ಹೆಸರೇಳಿಕೊಂಡು ಚೆನ್ನಾಗಿರೋರೆಲ್ಲ, ಯಾವ್ಯಾವುದೋ ಕಾರಣಕ್ಕೆ ನಾವು ಆ ಜಾತಿಯವರು ಈ ಜಾತಿಯವರು ಅಂತೇಳಿ 102 ಜಾತಿಗಳು ಪರಿಶಿಷ್ಟ ಜಾತಿಯಾಗಿ ಎಲ್ಲಾ ರಸವನ್ನ ಯಾರೋ‌ ಬಳಸುತ್ತಿದ್ದವರಿಗೆ ಸುಪ್ರೀಂ ಕೋರ್ಟ್ ತೀರ್ಪು ಸಮಾಧಾನ ಆಗಿಲ್ಲ ಎಂದು ತಿಳಿಸಿದ್ದಾರೆ.

ನನ್ನ ದೃಷ್ಠಿಯಲ್ಲಿ ಇದನ್ನು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ತಕ್ಷಣ ಅನುಷ್ಠಾನ ಮಾಡಬೇಕು. ಪರಿಶಿಷ್ಟ ಜಾತಿಗೆ ಶೇ. 15ಕ್ಕೆ ನಿಲ್ತಾರೋ ಅಥವಾ ಶೇ 17ಕ್ಕೆ ಹೋಗ್ತಾರೊ ಅದು ಅವರಿಗೆ ಬಿಟ್ಟದ್ದು. ನಾವು ಶೇ. 17ಗೆ ಹೋಗಿ ಬಿಟ್ಟಿದ್ದೇವೆ, ಅವರು ಶೇ 17ಗೆ ಹೋದ್ರೆ ಏನ್ ಮಾಡಬೇಕು ಎಂದು ನಾನು ಪರಿಹಾರ ಕೊಟ್ಟಿದ್ದೇನೆ. ಶೇ 17ಗೆ ಹೋಗದೆ ಇದ್ದರೆ ಏನ್ ಮಾಡಬೇಕು ಅನ್ನೋದಕ್ಕೆ ಸದಾಶಿವ ಆಯೋಗದ ವರದಿ ಇದೆ. ಯಾವುದಾದ್ರೂ ಅನುಷ್ಠಾನ ಮಾಡಲಿ. ತಕ್ಷಣ ಒಳಮೀಸಲಾತಿಯನ್ನು ಜಾರಿಗೆ ತರುವುದು ಸೂಕ್ತ. ಈಗಾಗಲೇ ಸುಮಾರು ವರ್ಷಗಳ ಕಾಲ‌ ಹಾಳಾಗಿದೆ. ಇದರಿಂದ ಅವರಿಗೆ ಏನು ನ್ಯಾಯ ಸಿಕ್ಕಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪರಿಶಿಷ್ಟ ಜಾತಿಯಲ್ಲೂ ಕೆನೆ ಪದರ ಗುರುತಿಸಬೇಕು

ಕೆನೆ ಪದರ ವಿಚಾರವಾಗಿ ಮಾತನಾಡಿದ ಮಾಧುಸ್ವಾಮಿ, “ಪ.ಜಾತಿಯಲ್ಲೂ ಸಹ ಕೆನೆಪದರವನ್ನ ಗುರುತಿಸಬೇಕು ಎಂದು ನಾನು ವರದಿಯಲ್ಲಿ ಬರೆದಿದ್ದೇನೆ. ಸುಪ್ರೀಂ ಕೋರ್ಟು ಕೂಡ ಹೇಳಿದೆ. ಯಾರು ಮೀಸಲಾತಿಯನ್ನ ಬಳಸಿಕೊಂಡಿದ್ದಾರೆ, ಯಾರಿಗೆ ಶಕ್ತಿಯಿದೆ ಯಾರು ಮೀಸಲಾತಿಯನ್ನ ಬಳಸಿಕೊಂಡು ಮೇಲೆ ಬಂದಿದ್ದಾರೆ ಇನ್ಮುಂದೆ ಅವರನ್ನ ಮೀಸಲಾತಿಯಿಂದ ಹೊರಗಿಡಬೇಕು ಎಂಬ ಪ್ರಶ್ನೆ ಇದೆ. ಇದನ್ನ ಕೂಡ ಸರ್ಕಾರ ಗಮನಿಸಬೇಕು” ಎಂದು ಹೇಳಿದರು.

ವರದಿ: ಚಂದನ್ ತುಮಕೂರು

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X