ಪೂಜೆ ಮಾಡುತ್ತಿದ್ದ ವೇಳೆ ಬಟ್ಟೆಗೆ ಬೆಂಕಿ ಹೊತ್ತಿಕೊಂಡು ಗಂಭೀರ ಸುಟ್ಟು ಗಾಯಗಳಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಕೇಂದ್ರ ಸಚಿವೆ ಗಿರಿಜಾ ವ್ಯಾಸ್, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ರಾಜಸ್ಥಾನದ ಉದಯಪಯದಲ್ಲಿ ಗಿರಿಜಾ ವ್ಯಾಸ್ ಅವರ ನಿವಾಸದಲ್ಲಿ ಮಾರ್ಚ್ 31ರಂದು ಘಟನೆ ನಡೆದಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಿ, ಕಳೆದ ಒಂದು ತಿಂಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೂ, ಚಿಕಿತ್ಸೆ ಫಲಿಸದೆ ಮೇ 1ರ ತಡರಾತ್ರಿ ಅವರು ಮೃತಪಟ್ಟಿದ್ದಾರೆ.
ಕಾಂಗ್ರೆಸ್ ನಾಯಕಿ ಗಿರಿಜಾ ಅವರು ಮಾರ್ಚ್ 31ರಂದು ತಮ್ಮ ನಿವಾಸದಲ್ಲಿ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ದೇವರಿಗೆ ಪೂಜೆ ಸಲ್ಲಿಸುತ್ತಿದ್ದ ವೇಳೆ, ನೆಲದ ಮೇಲೆ ಇರಿಸಲಾಗಿದ್ದ ದೀಪದಿಂದ ಬೆಂಕಿ ಗಿರಿಜಾ ಅವರ ದುಪ್ಪಟ್ಟಾಗೆ ತಗುಲಿತ್ತು. ಕ್ಷಣಾರ್ಧದಲ್ಲಿ ಇಡೀ ಬಟ್ಟೆಗೆ ಬೆಂಕಿ ಆವರಿಸಿಕೊಂಡು, ಗಿರಿಜಾ ಅವರಿಗೆ ಗಂಭೀರ ಸುಟ್ಟು ಗಾಯಗಳಾಗಿದ್ದವು. ಒಂದು ತಿಂಗಳು ಸುಟ್ಟ ಗಾಯಗಳಿಂದ ನೋವನನುಭವಿಸಿದ ಗಿರಿಜಾ ಅವರು ಕೊನೆಯುಸಿರೆಳೆದಿದ್ದಾರೆ.
ಗಿರಿಜಾ ವ್ಯಾಸ್ ಅವರು ರಾಜಸ್ಥಾನ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಜಸ್ಥಾನ ರಾಜ್ಯ ಸರ್ಕಾರದಲ್ಲಿ ಮತ್ತು ಕೇಂದ್ರ ಸರ್ಕಾರದಲ್ಲಿ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು. 1991ರಲ್ಲಿ ಪ್ರಧಾನಿ ನರಸಿಂಹ ರಾವ್ ನೇತೃತ್ವದ ಸರ್ಕಾರದಲ್ಲಿ ಅವರು ಕೇಂದ್ರ ಸಚಿವೆಯಾಗಿದ್ದರು. ರಾಜಸ್ಥಾನ ಕಾಂಗ್ರೆಸ್‌ನ ಅಧ್ಯಕ್ಷೆಯಾಗಿಯೂ ಪಕ್ಷವನ್ನು ಮುನ್ನಡೆಸಿದ್ದರು. ಅಲ್ಲದೆ, ರಾಷ್ಟ್ರೀಯ ಮಹಿಳಾ ಆಯೋಗದ (NCW) ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಈ ವರದಿ ಓದಿದ್ಧೀರಾ?: ಜಾತಿ ಗಣತಿ ವರದಿ ವಿರೋಧಿಸುತ್ತಿರುವ ಶಾಮನೂರು ಹುನ್ನಾರವೇನು? ಕಾಂಗ್ರೆಸ್‌ನಲ್ಲಿ ಕ್ರಮ ಯಾಕಿಲ್ಲ?
ಅವರ ಸಾವಿಗೆ ಕಾಂಗ್ರೆಸ್ ನಾಯಕರು ಸಂತಾಪ ಸೂಚಿಸಿದ್ದಾರೆ. ರಾಜಸ್ಥಾನ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು, ”ಮಾಜಿ ಕೇಂದ್ರ ಸಚಿವೆ, ಕಾಂಗ್ರೆಸ್ ನಾಯಕಿ ಡಾ. ಗಿರಿಜಾ ವ್ಯಾಸ್ ಅವರ ನಿಧನವು ತುಂಬಲಾರದ ನಷ್ಟ ಉಂಟುಮಾಡಿದೆ. ಗಿರಿಜಾ ವ್ಯಾಸ್ ಅವರು ಶಿಕ್ಷಣ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಬೃಹತ್ ಕೊಡುಗೆ ನೀಡಿದ್ದಾರೆ. ಅವರ ಅಕಾಲಿಕ ನಿಧನ ನಮಗೆಲ್ಲರಿಗೂ ದೊಡ್ಡ ಆಘಾತವಾಗಿದೆ. ಅವರ ಆತ್ಮಕ್ಕೆ ದೇವರ ಪಾದದಲ್ಲಿ ಸ್ಥಾನ ದೊರೆಯಲಿ” ಎಂದಿದ್ದಾರೆ.