ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪೋರ್ ಜಿಲ್ಲೆಯಲ್ಲಿ ರಾಮನವಮಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆದಿದ್ದು ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಈ ಘಟನೆಯು ಪೂರ್ವ ಯೋಜಿತ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಬುಧವಾರ ರಾತ್ರಿ 9.10ರ ಸುಮಾರಿಗೆ ಮೆರವಣಿಗೆಯು ಎಗ್ರಾದ ಕಾಲೇಜ್ ಮೋರ್ ಮೂಲಕ ಹಾದು ಹೋಗುತ್ತಿದ್ದಾಗ ಕಲ್ಲು ತೂರಾಟ ನಡೆಸಿದ ನಾಲ್ವರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಭೆ ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು ಎಂದು ಕೂಡಾ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ರಾಮನವಮಿ ಆಚರಣೆಯ ಸಂದರ್ಭದಲ್ಲಿ ಬಿಜೆಪಿ ಹಿಂಸಾಚಾರವನ್ನು ಪ್ರಚೋದಿಸಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಹೇಳಿದ್ದಾರೆ. ಹಿಂಸಾಚಾರ ಪೂರ್ವ ಯೋಜಿತ ಎಂದು ಅವರು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ರಾಮ ನವಮಿ ಸಂಘರ್ಷ | ಪ.ಬಂಗಾಳದ ಹೂಗ್ಲಿಯಲ್ಲಿ ಮತ್ತೆ ಕೋಮು ಹಿಂಸಾಚಾರ
ರಾಯ್‌ಗಂಜ್ ಲೋಕಸಭಾ ಕ್ಷೇತ್ರದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ ಅವರು, “ಘರ್ಷಣೆಗೆ ಮುನ್ನ ಮುರ್ಷಿದಾಬಾದ್‌ನಿಂದ ಪೊಲೀಸ್ ಅಧಿಕಾರಿಯನ್ನು ತೆಗೆದುಹಾಕಲಾಗಿದೆ” ಎಂದು ಹೇಳಿದ್ದಾರೆ.
“ಎಲ್ಲವೂ ಪೂರ್ವ ಯೋಜಿತವಾಗಿತ್ತು. ರಾಮನವಮಿಯ ಒಂದು ದಿನ ಮುಂಚಿತವಾಗಿ ಮುರ್ಷಿದಾಬಾದ್‌ನ ಡಿಐಜಿ ಅವರನ್ನು ತೆಗೆದುಹಾಕಲಾಗಿದೆ. ಆದ್ದರಿಂದ ನೀವು (ಬಿಜೆಪಿ) ಹಿಂಸಾಚಾರವನ್ನು ನಡೆಸಬಹುದು” ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಗಲಭೆ ಸೃಷ್ಟಿಸಲಿದೆ: ಮಮತಾ ಬ್ಯಾನರ್ಜಿ ಎಚ್ಚರಿಕೆ
ಇನ್ನು “ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ನಾವು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ನಾಲ್ವರನ್ನು ಬಂಧಿಸಲಾಗಿದೆ ಮತ್ತು ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ” ಎಂದು ಪೊಲೀಸ್ ಅಧಿಕಾರಿ ಪಿಟಿಐಗೆ ತಿಳಿಸಿದರು.
“ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಗಲಭೆಯನ್ನು ಸೃಷ್ಟಿಸಲಿದೆ” ಎಂದು ಈ ಹಿಂದೆ ಹಲವಾರು ಬಾರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದರು.