ಮುಂದಿನ ದಿನಗಳಲ್ಲಿ ನಡೆಯುವ ನಾಲ್ಕು ರಾಜ್ಯಗಳ ಚುನಾವಣೆ ಬಿಜೆಪಿ ಪಾಲಿಗೆ ಬಿಸಿ ತುಪ್ಪವಾಗಿವೆ. ಆಂತರಿಕ ಬಂಡಾಯ, ಆಡಳಿತ ವಿರೋಧಿ ಅಲೆಯನ್ನು ಎದುರಾಗಿದೆ. ಇದೆಲ್ಲವನ್ನೂ ಭೇದಿಸಿ ಬಿಜೆಪಿ ಹೊರಬರುವುದೇ? ಬಿಜೆಪಿ ಎದುರಿಸುತ್ತಿರುವ ಸವಾಲುಗಳು ಕಾಂಗ್ರೆಸ್‌ಗೆ ಹೆಚ್ಚು ಅನುಕೂಲ ಮಾಡಿಕೊಡುವುದೇ?
ಇತ್ತೀಚೆಗೆ, 2024ರ ಲೋಕಸಭಾ ಚುನಾವಣೆ ಮುಗಿದಿದ್ದು, ಹೀನಾಯವಾಗಿ ಸೋಲುಂಡ ಬಿಜೆಪಿ, ತನ್ನ ಮಿತ್ರಪಕ್ಷಗಳೊಂದಿಗೆ 3ನೇ ಅವಧಿಗೆ ಸರ್ಕಾರ ರಚಿಸಿದೆ. ಎನ್‌ಡಿಎ ಮೈತ್ರಿಕೂಟದ ಹಂಗಿನಲ್ಲಿ ಮೋದಿ ಅವರೇ ಮೂರನೇ ಬಾರಿಗೆ ಪ್ರಧಾನಿಯಾಗಿದ್ದಾರೆ. ತನ್ನ ಸೋಲನ್ನು ಅರಗಿಸಿಕೊಳ್ಳುತ್ತಿರುವ ಬಿಜೆಪಿಗೆ ಇದೀಗ ಮತ್ತೆ ಅಗ್ನಿಪರೀಕ್ಷೆ ಎದುರಾಗುತ್ತಿದೆ. ಪ್ರಮುಖ ನಾಲ್ಕು ರಾಜ್ಯಗಳಿಗೆ ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್‌ನಲ್ಲಿ ಚುನಾವಣೆಗಳು ನಡೆಯಲಿದ್ದು, ಬಿಜೆಪಿಗೆ ಭಾರೀ ಸವಾಲುಗಳಿವೆ.
ಈಗಾಗಲೇ ಜಮ್ಮು ಮತ್ತು ಕಾಶ್ಮೀರ, ಹರಿಯಾಣ ರಾಜ್ಯಗಳಿಗೆ ಚುನಾವಣಾ ಆಯೋಗ ಚುನಾವಣೆಯ ದಿನಾಂಕ ಘೋಷಿಸಿದೆ. ಜಮ್ಮು-ಕಾಶ್ಮೀರದ 90 ಕ್ಷೇತ್ರಗಳಿಗೆ ಸೆಪ್ಟಂಬರ್ 18, ಸೆಪ್ಟಂಬರ್ 25 ಹಾಗೂ ಅಕ್ಟೋಬರ್ 1 ರಂದು ಮೂರು ಹಂತಗಳಲ್ಲಿ ಮತದಾನ ನಡೆಯಲಿದ್ದು, ಅಕ್ಟೋಬರ್ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಹರಿಯಾಣದ 90 ಕ್ಷೇತ್ರಗಳಿಗೆ ಅಕ್ಟೋಬರ್ 5ರಂದು ಒಂದೇ ಹಂತದ ಮತದಾನ ನಡೆಯಲಿದ್ದು, ಅಕ್ಟೋಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ.
ಇನ್ನು, ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳಿಗೆ ಬಹುತೇಕ ನವೆಂಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ನಾಲ್ಕು ರಾಜ್ಯಗಳ ಪೈಕಿ, ಜಮ್ಮು-ಕಾಶ್ಮೀರದಲ್ಲಿ ಯಾವುದೇ ಚುನಾಯಿತ ಸರ್ಕಾರವಿಲ್ಲ. ಅಲ್ಲಿ, ರಾಷ್ಟ್ರಪತಿ ಆಳ್ವಿಕೆ ಇದ್ದು, ರಾಜ್ಯಪಾಲರ ಅಡಳಿತ ನಡೆಯುತ್ತಿದೆ. ಇನ್ನು, ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಅದರ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿವೆ. ಜಾರ್ಖಂಡ್‌ನಲ್ಲಿ ಸ್ಥಳೀಯ ಪಕ್ಷಗಳ ಆಳ್ವಿಕೆಯಿದೆ.
ಈ ನಾಲ್ಕೂ ರಾಜ್ಯಗಳು ಬಿಜೆಪಿ ಪಾಲಿಗೆ ಸವಾಲಿನ ರಾಜ್ಯಗಳೇ ಆಗಿವೆ. ಜಮ್ಮು-ಕಾಶ್ಮೀರದ ಜನರು ತಮ್ಮ ಪರವಾಗಿದ್ದಾರೆ ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ. ವಾಸ್ತವದಲ್ಲಿ ಅಲ್ಲಿನ ಜನರು ಬಿಜೆಪಿ ವಿರುದ್ಧ ಕೆಂಡ ಕಾರುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು 2019ರಲ್ಲಿ ಮೋದಿ ಸರ್ಕಾರ ರದ್ದುಗೊಳಿಸಿತ್ತು. ಮಾತ್ರವಲ್ಲದೆ, ರಾಜ್ಯವನ್ನು ಇಬ್ಬಾಗಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿತು. ನಿಷೇಧಾಜ್ಞೆಗಳು, ಗೃಹ ಬಂಧನಗಳನ್ನು ವಿಧಿಸಿ ಅಲ್ಲಿನ ಜನರ ಧ್ವನಿಯನ್ನು ಹತ್ತಿಕ್ಕಿತ್ತು. ಈಗ ಜಮ್ಮು-ಕಾಶ್ಮೀರದ ಆಡಳಿತ ಮತ್ತು ಪೋಲೀಸ್ ಇಲಾಖೆಯ ಪ್ರತಿಯೊಂದು ಹಿರಿಯ ಹುದ್ದೆಗಳಲ್ಲಿ ಕಾಶ್ಮೀರೇತರ ಅಧಿಕಾರಿಗಳೇ ತುಂಬಿದ್ದಾರೆ.

ಮೋದಿ ಸರ್ಕಾರ ಕಾಶ್ಮೀರದಲ್ಲಿನ ರಾಜಕೀಯ ಭಿನ್ನಾಭಿಪ್ರಾಯವನ್ನು ನಿರ್ದಯವಾಗಿ ಹತ್ತಿಕ್ಕಿದೆ. ಸಾರ್ವಜನಿಕ ಸುರಕ್ಷತಾ ಕಾಯಿದೆಯಡಿಯಲ್ಲಿ ಸುರಕ್ಷತೆಯ ಹೆಸರಿನಲ್ಲಿ ಬರೋಬ್ಬರಿ 4,000ಕ್ಕೂ ಹೆಚ್ಚು ಕಾಶ್ಮೀರಿಗಳನ್ನು ಮೋದಿ ಸರ್ಕಾರ ಬಂಧಿಸಿದೆ. ಮಾತ್ರವಲ್ಲದೆ, ಅವರ ಪೈಕಿ ಕನಿಷ್ಠ 1,122 ಜನರನ್ನು ಕಾಶ್ಮೀರದ ಹೊರಗಿನ ಜೈಲುಗಳಿಗೆ ಕಳುಹಿಸಿದೆ.
ಪ್ರಧಾನಿ ಮೋದಿಯವರು ತಮ್ಮ ಅಜ್ಞಾನ ಮತ್ತು ಪೂರ್ವಾಗ್ರಹದಿಂದಾಗಿ ಕಾಶ್ಮೀರದ ಮೇಲೆ ಕ್ರೌರ್ಯ ಎಸಗಿದ್ದಾರೆ ಎಂದು ಕಾಶ್ಮೀರಿ ಪಂಡಿತರೂ ಸೇರಿದಂತೆ ಜಮ್ಮು-ಕಾಶ್ಮೀರದ ಜನರು ಆಕ್ರೋಶಗೊಂಡಿದ್ದಾರೆ. ಅವರ ಆಕ್ರೋಶವನ್ನು ಹೊರಹಾಕಲು ಕಾಯುತ್ತಿದ್ದಾರೆ. ಆದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನೇ ಕಣಕ್ಕಿಳಿಸದೆ, ಚುನಾವಣಾ ಕಣದಿಂದ ಓಡಿಹೋಗಿತ್ತು. ಹೀಗಾಗಿ, ಅಲ್ಲಿನ ಜನರ ಆಕ್ರೋಶ ಇನ್ನೂ ಮಡುಗಟ್ಟಿದೆ. ಅದನ್ನು ವಿಧಾನಸಭಾ ಚುನಾವಣೆಯಲ್ಲಿ ವ್ಯಕ್ತಪಡಿಸಲು ಕಾಯುತ್ತಿದೆ. ಅದಾಗ್ಯೂ, ಬಿಜೆಪಿ ವಿಧಾನಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿ, ಮತ್ತೆ ಹಿಂಪಡೆದುಕೊಂಡಿದೆ.
ಈ ಹಿಂದೆ, 2015ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ಜೊತೆ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಪಿಡಿಪಿ ಮೈತ್ರಿ ಮಾಡಿಕೊಂಡಿತ್ತು. ಅದಾಗ್ಯೂ, ಬಿಜೆಪಿಯ ಜನವಿರೋಧಿ ನಡೆಯನ್ನು ಖಂಡಿಸಿ, ಮೈತ್ರಿಯನ್ನು ಮುರಿದಿತ್ತು.
ಸದ್ಯ, ಜಮ್ಮು-ಕಾಶ್ಮೀರದಲ್ಲಿ ಪಿಡಿಪಿ, ಎನ್‌ಸಿ ಪ್ರಬಲ ರಾಜಕೀಯ ಪಕ್ಷಗಳಾಗಿವೆ. ಕಾಂಗ್ರೆಸ್ ಕೂಡ ತನ್ನ ಪ್ರಾಬಲ್ಯತೆಯನ್ನು ಹೊಂದಿದೆ. 370ನೇ ವಿಧಿಯನ್ನು ರದ್ದುಗೊಳಿಸಿದ ಬಿಜೆಪಿ ನಡೆಯನ್ನು ಜಮ್ಮು-ಕಾಶ್ಮೀರದಲ್ಲಿ ನೆಲೆ ಹೊಂದಿರುವ ಎಲ್ಲ ಪಕ್ಷಗಳು ವಿರೋಧಿಸಿವೆ. ಹೀಗಾಗಿ, ಬಿಜೆಪಿ ಅಲ್ಲಿ ಏಕಾಂಗಿಯಾಗಿದೆ. ಪಿಡಿಪಿ ಕೂಡ ಏಕಾಂಗಿ ಹೋರಾಟಕ್ಕೆ ಸಿದ್ದವಾಗಿದೆ. ಎನ್‌ಸಿ ಮತ್ತು ಕಾಂಗ್ರೆಸ್ ಮೈತ್ರಿಯಲ್ಲಿ ಚುನಾವಣೆ ಎದುರಿಸಲಿವೆ.
ಜಮ್ಮು-ಕಾಶ್ಮೀರದ ಜನರು ಬಿಜೆಪಿ ವಿರುದ್ಧವೇ ಮತ ಚಲಾಯಿಸಿದರೂ, ಪಿಡಿಪಿ ಮತ್ತು ಎನ್ಸಿ-ಕಾಂಗ್ರೆಸ್ ಮೈತ್ರಿ ನಡುವೆ ಪೈಪೋಟಿ ಇರಲಿದೆ. ಅಂತಿಮವಾಗಿ, ಕಳೆದ ಐದು ವರ್ಷಗಳಿಂದ ಚುನಾಯಿತ ಸರ್ಕಾರವಿಲ್ಲದೆ, ಮುನ್ನಡೆದಿರುವ ಜಮ್ಮು-ಕಾಶ್ಮೀರ ಯಾರಿಗೆ ಮಣೆ ಹಾಕಲಿದೆ. ಕಾದು ನೋಡಬೇಕಿದೆ.
ಇನ್ನು, ಬಿಜೆಪಿಯೇ ಅಧಿಕಾರದಲ್ಲಿರುವ ಹರಿಯಾಣದಲ್ಲಿ ಬಿಜೆಪಿ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ. 2020-21ರಲ್ಲಿ ನಡೆದ ರೈತ ಹೋರಾಟದ ಸಮಯದಲ್ಲಿ ರೈತರ ಮೇಲೆ ಹರಿಯಾಣದ ಬಿಜೆಪಿ ಸರ್ಕಾರ ಭಾರೀ ದೌರ್ಜನ್ಯ ಎಸಗಿತ್ತು. ರೈತರ ಮೇಲೆ ನಡೆದ ಆ ದಮನಗಳನ್ನು ರೈತರು ಮರೆತಿಲ್ಲ. ಆಗ, ದೆಹಲಿಯತ್ತ ಹೊರಟಿದ್ದ ರೈತರನ್ನು ತಡೆಯಲು ಯತ್ನಿಸಿದ್ದ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ, ರಸ್ತೆಗಳಿಗೆ ಬ್ಯಾರಿಕೇಡ್ ಬೇಲಿಗಳನ್ನು ಹಾಕಿತ್ತು, ರಸ್ತೆಗಳಲ್ಲಿ ಕಂದಕಗಳನ್ನು ತೋಡಿತ್ತು. ಲಾಠಿ ಜಾರ್ಜ್, ಜಲಪಿರಂಗಿ ದಾಳಿ ನಡೆಸಿತ್ತು. ಅಲ್ಲದೆ, ಇತ್ತೀಚೆಗೆ ನಡೆದ ರೈತ ಪ್ರತಿಭಟನೆಯ ಸಮಯದಲ್ಲೂ ಇದೆಲ್ಲವೂ ಮತ್ತೆ ಮರುಕಳಿಸಿವೆ. ಹೀಗಾಗಿ, ಬಿಜೆಪಿ ಸರ್ಕಾರದ ನಡೆ ರೈತರನ್ನು ಆಕ್ರೋಶಗೊಳಿಸಿದೆ.

ಪ್ರಮುಖವಾಗಿ, ಹರಿಯಾಣದಲ್ಲಿ ಪ್ರಾಬಲ್ಯ ಜಾಟ್ ಸಮುದಾಯ ಪ್ರಾಬಲ್ಯ ಹೊಂದಿದೆ. ಹರಿಯಾಣದ ಬಹುತೇಕ ರೈತರೂ ಇದೇ ಸಮುದಾಯಕ್ಕೆ ಸೇರಿದವರಾಗಿದ್ದು, ಇಡೀ ಸಮುದಾಯ ಬಿಜೆಪಿ ವಿರುದ್ಧ ಸಿಟ್ಟಾಗಿದೆ. ಈ ಸಿಟ್ಟನ್ನು ತಣಿಸಲು ಬಿಜೆಪಿ ಕಸರತ್ತು ನಡೆಸುತ್ತಿದೆ. ಅದರ ಭಾಗವಾಗಿಯೇ ಕಳೆದ ಮಾರ್ಚ್ ನಲ್ಲಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಸಿ, ಒಬಿಸಿ ಸಮುದಾಯದ ನಯಾಬ್ ಸಿಂಗ್ ಸೈನಿ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿದೆ. ಅದಾಗ್ಯೂ, ಒಬಿಸಿ ಮತ್ತು ಜಾಟ್ ಸಮುದಾಯದ ರೈತರು ಬಿಜೆಪಿಯ ತಂತ್ರಕ್ಕೆ ಮರುಳಾಗಿಲ್ಲ. ಬಿಜೆಪಿ ರೈತ ವಿರೋಧಿ ನಡೆಯ ವಿರುದ್ಧ ಸಿಡಿದೆದ್ದಿದ್ದಾರೆ.
ಮಾತ್ರವಲ್ಲದೆ, ಯುವಜನರಿಗೆ ಉದ್ಯೋಗ ನೀಡುವಲ್ಲಿಯೂ ಬಿಜೆಪಿ ಸರ್ಕಾರ ವಿಫಲವಾಗಿದೆ. ಹರಿಯಾಣದಲ್ಲಿ ನಿರುದ್ಯೋಗ ದರವು 11%ಗಿಂತ ಹೆಚ್ಚಾಗಿದೆ. ಇನ್ನು, ಮಹಿಳೆಯರು, ದಲಿತರ ಮೇಲಿನ ದೌರ್ಜನ್ಯ, ಕೋಮು ಗಲಭೆಗಳು, ಭ್ರಷ್ಟಾಚಾರವು ಬಿಜೆಪಿ ವಿರುದ್ಧ ಹರಿಯಾಣ ಜನರು ಅಸಹನೆ ಹೊಂದುವಂತೆ ಮಾಡಿವೆ. ಜೊತೆಗೆ, ಬಿಜೆಪಿ ಈಗ ಆಂತರಿಕ ಬಂಡಾಯವನ್ನೂ ಎದುರಿಸುತ್ತಿದೆ. ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಳಿಕ, ಬಿಜೆಪಿಯಲ್ಲಿ ಭಾರೀ ಬಂಡಾಯ ಎದುರಾಗಿದೆ. ಹಲವು ಹಾಲಿ ಸಚಿವರು, ಶಾಸಕರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.
ಹೀಗಾಗಿ, 2014ರಿಂದಲೂ ಎರಡು ಅವಧಿಯ ಆಡಳಿತ ನಡೆಸಿರುವ ಬಿಜೆಪಿಗೆ ಮೂರನೇ ಅವಧಿಯ ಗೆಲುವು ಸುಲಭವಾಗಿಲ್ಲ. ಜೊತೆಗೆ, ಕಾಂಗ್ರೆಸ್ ಕೂಡ ತನ್ನ ನೆಲೆಯನ್ನು ಗಟ್ಟಿಗೊಳಿಸಿಕೊಂಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಒಟ್ಟು 10 ಸಂಸತ್ ಸ್ಥಾನಗಳ ಪೈಕಿ 5 ಸ್ಥಾನಗಳನ್ನು ಬಿಜೆಪಿಯಿಂದ ಕಾಂಗ್ರೆಸ್ ಕಸಿದುಕೊಂಡಿದೆ. ವಿಧಾನಸಭಾ ಚುನಾವಣೆಯಲ್ಲಿಯೂ ಈ ಬಾರಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆಗಳಿವೆ ಎಂದು ಸಮೀಕ್ಷೆಗಳು ಹೇಳುತ್ತಿವೆ.
ಈ ವರದಿ ಓದಿದ್ದೀರಾ?: ʼಡಿವೈನ್ ರೇಪ್ʼ | ಇದು ದೇವರು, ಅಧ್ಯಾತ್ಮ, ಯೋಗದ ಹೆಸರಲ್ಲಿ ನಡೆಯುತ್ತಿರುವ ಕ್ರೌರ್ಯ
ಹರಿಯಾಣದ ಒಟ್ಟು 90 ವಿಧಾನಸಭಾ ಕ್ಷೇತ್ರಗಳ ಪೈಕಿ, ಕಾಂಗ್ರೆಸ್ 50-52 ಸ್ಥಾನಗಳನ್ನು ಗೆಲ್ಲಬಹುದು. ಬಿಜೆಪಿ 28-30 ಸ್ಥಾನಗಳಿಗೆ ಕುಸಿಯುವ ಸಾಧ್ಯತೆಗಳಿವೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಎಎಪಿ ಸೇರಿದಂತೆ ಇತರರು 8-9 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿವೆ. ಹೀಗಾಗಿ, ಕಾಂಗ್ರೆಸ್ ತನ್ನದೇ ಸ್ವಂತ ಬಲದಿಂದ ಸರ್ಕಾರ ರಚಿಸುತ್ತದೆ ಎಂದು ಸಮೀಕ್ಷೆಗಳು ಒತ್ತಿ ಹೇಳುತ್ತಿವೆ.
ಇದಲ್ಲದೆ, ಇನ್ನೂ ಚುನಾವಣೆ ಘೋಷಣೆಯಾಗದ ಮಹಾರಾಷ್ಟ್ರದಲ್ಲಿಯೂ ಬಿಜೆಪಿ ನೆಲೆ ಕಳೆದುಕೊಳ್ಳುತ್ತಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದಲ್ಲಿ ಎನ್‌ಸಿಪಿ (ಅಜಿತ್ ಬಣ) ಮತ್ತು ಶಿವಸೇನೆ (ಶಿಂಧೆ ಬಣ)ಗಳ ಮಹಾಯುತಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ. 2019ರ ಅಂತ್ಯದಲ್ಲಿ ಮಹಾರಾಷ್ಟ್ರದಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯ ಬಳಿಕ ಕಾಂಗ್ರೆಸ್-ಶಿವಸೇನೆ-ಎನ್ಸಿಪಿ ಮೈತ್ರಿ ಮಾಡಿಕೊಂಡು ‘ಮಹಾ ವಿಕಾಸ್ ಅಗಾಢಿ’ ಸರ್ಕಾರವನ್ನು ರಚಿಸಿದ್ದವು. ಆದರೆ, 2022ರ ಜೂನ್ ನಲ್ಲಿ ಎನ್ಸಿಪಿ ಮತ್ತು ಶಿವಸೇನೆ ಪಕ್ಷಗಳನ್ನು ಒಡೆದು ಇಬ್ಬಾಗ ಮಾಡಿದ ಬಿಜೆಪಿ, ಎನ್‌ಸಿಪಿ ಅಜಿತ್ ಪವಾರ್ ಬಣ ಮತ್ತು ಶಿವಸೇನೆಯ ಏಕನಾಥ್ ಶಿಂಧೆ ಬಣವನ್ನು ಸೇರಿಸಿಕೊಂಡು ಸರ್ಕಾರ ರಚನೆ ಮಾಡಿತು.

ಆಡಳಿತ ಸರ್ಕಾರವನ್ನು ಉರುಳಿಸಿ, ಹಿಂಬಾಗಿಲಿನಿಂದ ಸರ್ಕಾರ ರಚಿಸಿದ ಬಿಜೆಪಿ ವಿರುದ್ಧ ಮಹಾರಾಷ್ಟ್ರ ಜನರು ಸಿಟ್ಟಾಗಿದ್ದಾರೆ. ಜೊತೆಗೆ, ಮಹಾರಾಷ್ಟ್ರದಲ್ಲೂ ನಿರುದ್ಯೋಗ, ಭ್ರಷ್ಟಾಚಾರ, ಹಿಂಸಾಚಾರಗಳು ಎಗ್ಗಿಲ್ಲದೆ ನಡೆಯುತ್ತಿದ್ದು, ಆಡಳಿತ ವಿರೋಧಿ ಅಲೆಯೂ ಇದೆ. ಮಾತ್ರವಲ್ಲದೆ, ಅಜಿತ್ ಬಣ ಮತ್ತು ಶಿಂಧೆ ಬಣಗಳಿಗಿಂತ ಶರದ್ ಪವಾರ್ ಅವರ ಎನ್‌ಸಿಪಿ ಮತ್ತು ಉದ್ಧವ್ ಠಾಕ್ರೆ ಅವರ ಶಿವಸೇನೆ ಹೆಚ್ಚು ಪ್ರಾಬಲ್ಯ ಹೊಂದಿವೆ. ಕಾಂಗ್ರೆಸ್ ಕೂಡ ಗಟ್ಟಿ ನೆಲೆಯನ್ನು ಹೊಂದಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ ಒಟ್ಟು 48 ಲೋಕಸಭಾ ಸ್ಥಾನಗಳ ಪೈಕಿ, ಕಾಂಗ್ರೆಸ್-ಎನ್‌ಸಿಪಿ-ಶಿವಸೇನೆಯ ‘ಮಹಾವಿಕಾಸ್ ಅಗಾಢಿ’ ಬರೋಬ್ಬರಿ 30 ಸ್ಥಾನಗಳನ್ನು ಗೆದ್ದಿವೆ. ಈ ಪೈಕಿ, ಕಾಂಗ್ರೆಸ್ 17 ಸ್ಥಾನಗಳನ್ನು ಗೆದ್ದಿದೆ. ಅದಾಗ್ಯೂ, ಆಡಳಿತಾರೂಢ ಮಹಾಯುತಿ ಕೇವಲ 18 ಸ್ಥಾನಗಳನ್ನು ಗೆದ್ದಿದ್ದು, ಬಿಜೆಪಿ ಕೇವಲ 12 ಸ್ಥಾನಗಳನ್ನು ಮಾತ್ರವೇ ಗೆದ್ದಿದೆ.
ಇದು, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಗಾಡಿ ಪರವಾದ ಅಲೆ ಇರುವುದನ್ನು ಸೂಚಿಸುತ್ತದೆ. ಮಹಾರಾಷ್ಟ್ರದಲ್ಲಿ 288 ವಿಧಾನಸಭಾ ಕ್ಷೇತ್ರಗಳಿದ್ದು, ಕನಿಷ್ಠ 170 ಸ್ಥಾನಗಳನ್ನು ಗೆಲ್ಲುತ್ತೇವೆಂದು ‘ಮಹಾ ವಿಕಾಸ್ ಅಘಾಡಿ’ ವಿಶ್ವಾಸ ಹೊಂದಿದೆ. ಆಡಳಿತ ಸರ್ಕಾರಗಳನ್ನು ಉರುಳಿಸಿ, ಸರ್ಕಾರ ರಚಿಸುವ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಮುಖಭಂಗ ಅನುಭವಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಸದ್ಯ, ಇನ್ನೂ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ಘೊಷಣೆಯಾಗಿಲ್ಲ. ನವೆಂಬರ್‌ನಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನು ಜಾರ್ಖಂಡ್‌ನಲ್ಲಿಯೂ ವಿಧಾನಸಭಾ ಚುನಾವಣೆ ನಡೆಯಲಿದೆ. ಜಾರ್ಖಂಡ್ ನಲ್ಲಿ ಮುಖ್ಯಮಂತ್ರಿ ಹುದ್ದೆಯಲ್ಲಿದ್ದ ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ನಾಯಕ ಹೇಮಂತ್ ಸೊರೇನ್ ಅವರನ್ನು ಮೋದಿ ಸರ್ಕಾರ ಜೈಲಿಗಟ್ಟಿದೆ. ಭೂ ಹಗರಣ ಮತ್ತು ಅದಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸೊರೇನ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಇದೇ ವರ್ಷದ ಜನವರಿಯಲ್ಲಿ ಬಂಧಿಸಿದೆ. ಹೀಗಾಗಿ, ಸೊರೇನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸೊರೇನ್ ಜೈಲು ಸೇರಿದ ನಂತರ ಅವರ ಸಂಪುಟದಲ್ಲಿ ಹಿರಿಯ ಸಚಿವರಾಗಿದ್ದ ಚಂಪಾಯ್ ಸೊರೇನ್ ಮುಖ್ಯಮಂತ್ರಿಯಾಗಿದ್ದರು.

ಆದರೆ, ಚಂಪಾನ್ ಇತ್ತೀಚೆಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಜೆಎಂಎಂ ತೊರೆದು ಬಿಜೆಪಿ ಸೇರಿದ್ದಾರೆ. ಜಾಮೀನಿನ ಮೇಲೆ ಹೊರಬಂದಿರುವ ಹೇಮಂತ್ ಸೊರೇನ್ ಮತ್ತೆ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಸದ್ಯ, ಜಾರ್ಖಂಡ್‌ನಲ್ಲಿ ಜೆಎಂಎಂ, ಕಾಂಗ್ರೆಸ್ ಮತ್ತು ಆರ್‌ಜೆಡಿ ಮೈತ್ರಿ ಮಾಡಿಕೊಂಡಿವೆ. ಜಾರ್ಖಂಡ್ ವಿಕಾಸ್ ಮೂರ್ಚಾ (ಜೆವಿಎಂ) ಏಕಾಂಗಿಯಾಗಿ ಸ್ಪರ್ಧಿಸಲು ಮುಂದಾಗಿದೆ. ಜೆವಿಎಂ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ.
ಹಾಲಿ ಮುಖ್ಯಮಂತ್ರಿಯನ್ನು ಜೈಲಿಗೆ ದೂಡಿದ್ದರಿಂದ ಹೇಮಂತ್ ಸೊರೇನ್ ಬಗ್ಗೆ ಜಾರ್ಖಂಡ್‌ನಲ್ಲಿ ಅನುಕಂಪದ ಅಲೆ ಇದೆ. ತಮ್ಮನ್ನು ಜೈಲಿಗೆ ಕಳಿಸಿದ್ದನ್ನೇ ಅಸ್ತ್ರವಾಗಿಟ್ಟುಕೊಂಡು ಸೊರೇನ್ ಬಿಜೆಪಿ ವಿರುದ್ಧ ಭಾರೀ ಪ್ರಚಾರಕ್ಕೆ ಇಳಿದಿದ್ದಾರೆ.
ಜಾರ್ಖಂಡ್ ವಿಧಾನಸಭಾ ಚುನಾವಣೆ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ನಡೆಯುವ ಸಾಧ್ಯತೆಗಳಿವೆ. ಚುನಾವಣೆ ಘೋಷಣೆಯಾದ ಬಳಿಕ, ಜಾರ್ಖಂಡ್‌ನ ರಾಜಕೀಯದಲ್ಲಿ ಏನೆಲ್ಲಾ ಬದಲಾವಣೆಗಳಾಗಲಿವೆ. ಜನರು ಯಾರಿಗೆ ಮಣೆ ಹಾಕುತ್ತಾರೆ. ಕಾದು ನೋಡಬೇಕಿದೆ.
ಒಟ್ಟಿನಲ್ಲಿ, ಜಮ್ಮು-ಕಾಶ್ಮೀರ, ಹರಿಯಾಣ ಹಾಗೂ ಮಹಾರಾಷ್ಟ್ರ – ಈ ಮೂರು ರಾಜ್ಯಗಳಲ್ಲಿ ಬಿಜೆಪಿ ಭಾರೀ ವಿರೋಧವನ್ನು ಎದುರಿಸುತ್ತಿದೆ. ಜಾರ್ಖಂಡ್‌ನಲ್ಲಿ ಯಾವ ರೀತಿಯ ಅಲೆ ಇದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅದಾಗ್ಯೂ, ಈ ನಾಲ್ಕು ರಾಜ್ಯಗಳ ಚುನಾವಣೆ ಬಿಜೆಪಿ ಪಾಲಿಗೆ ಬಿಸಿ ತುಪ್ಪವಾಗಿವೆ. ಆಂತರಿಕ ಬಂಡಾಯ, ಆಡಳಿತ ವಿರೋಧಿ ಅಲೆಯನ್ನು ಭೇದಿಸಿ ಬಿಜೆಪಿ ಹೊರಬರುವುದೇ, ಬಿಜೆಪಿ ಎದುರಿಸುತ್ತಿರುವ ಸವಾಲುಗಳು ಕಾಂಗ್ರೆಸ್‌ಗೆ ಹೆಚ್ಚು ಅನುಕೂಲ ಮಾಡಿಕೊಡುವುದೇ ಚುನಾವಣಾ ಕಣ ಎಲ್ಲದಕ್ಕೂ ಉತ್ತರ ನೀಡಲಿದೆ.