ವಿಧಾನಸಭಾ ಚುನಾವಣೆಯಲ್ಲಿ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ, ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಚೈತ್ರಾ ಕುಂದಾಪುರ ಅವರನ್ನು ಸಿಸಿಬಿ ಪೊಲೀಸರು ಕಳೆದ ಎರಡು ದಿನಗಳಿಂದ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ವಿಚಾರಣೆಯ ಎರಡನೇ ದಿನವಾದ ಶುಕ್ರವಾರ ಚೈತ್ರಾ ಅನಾರೋಗ್ಯದಿಂದ ಕುಸಿದು ಬಿದ್ದಿದ್ದಾರೆ. ಅವರನ್ನು ಸಿಸಿಬಿ ಅಧಿಕಾರಿಗಳು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಶುಕ್ರವಾರ ಬೆಳಗ್ಗೆ 8 ಗಂಟೆಗೆ ಮಹಿಳಾ ಸಾಂತ್ವನ ಕೇಂದ್ರದಿಂದ ಚೈತ್ರಾ ಅವರನ್ನು ಸಿಸಿಬಿ ಕಚೇರಿಗೆ ವಿಚಾರಣೆಗೆ ಕರೆತಂದಿದ್ದಾರೆ. 45 ನಿಮಿಷಗಳ ಕಾಲ ವಿಚಾರಣೆ ವೇಳೆ ಏಕಾಏಕಿ ಪ್ರಜ್ಞೆ ಕಳೆದುಕೊಂಡ ಚೈತ್ರಾ ಕುಸಿದು ಬಿದ್ದಿದ್ದಾರೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸದ್ಯ ಚೈತ್ರಾ ಅವರಿಗೆ ತುರ್ತು ಚಿಕಿತ್ಸಾ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚೈತ್ರಾ ಮೂರ್ಛೆ ರೋಗದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದ್ದು, ವಿಚಾರಣೆ ವೇಳೆ ಮಾನಸಿಕ ಒತ್ತಡ ಉಂಟಾಗಿ ಮೂರ್ಛೆ ಹೋಗಿದ್ದಾರೆ ಎನ್ನಲಾಗಿದೆ.
ಆರೋಪಿ ಚೈತ್ರಾ ಕುಂದಾಪುರ ಅವರನ್ನು ಸೆ.23 ರವರೆಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಅದರಂತೆ ಗುರುವಾರದಿಂದ ಸಿಸಿಬಿ ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.
ಗುರುವಾರ ಸಿಸಿಬಿ ಪೊಲೀಸರು ವಿಚಾರಣೆಗಾಗಿ ಕಚೇರಿಗೆ ಕರೆ ತಂದ ವೇಳೆ, ಚೈತ್ರಾ ಕುಂದಾಪುರ ಕಾರಿನಿಂದ ಇಳಿಯುವಾಗ, “ಸ್ವಾಮೀಜಿ ಸಿಕ್ಕಿಹಾಕಿಕೊಳ್ಳಲಿ, ಸತ್ಯ ಹೊರಗಡೆ ಬರುತ್ತದೆ. ಆಗ ದೊಡ್ಡ ದೊಡ್ಡವರ ಹೆಸರು ಆಚೆ ಬರುತ್ತೆ. ಇಂದಿರಾ ಕ್ಯಾಂಟೀನ್ ಬಿಲ್ ಬಾಕಿ ಇರುವುದರಿಂದ ಈ ಷಡ್ಯಂತ್ರ ನಡೆದಿದೆ” ಎಂದು ಹೇಳುತ್ತಾ ಸಿಸಿಬಿ ಕಚೇರಿಯ ಒಳಗಡೆ ಹೋಗಿದ್ದರು.
ಈ ಸುದ್ದಿ ಓದಿದ್ದೀರಾ? ವಂಚನೆ ಪ್ರಕರಣ | ಸ್ವಾಮೀಜಿ ಬಂಧನವಾದ್ರೆ, ಸತ್ಯ ಹೊರಬರಲಿದೆ: ಚೈತ್ರಾ ಕುಂದಾಪುರ
ಎ1 ಆರೋಪಿ ನೀವೆ ಅಲ್ವಾ ಎಂದು ಪ್ರಶ್ನಿಸಿದ್ದಕ್ಕೆ, “ಆಗಿರಲಿ, ಸತ್ಯ ಹೊರಗಡೆ ಬರುತ್ತೆ” ಎಂಬ ಹೇಳಿಕೆ ನೀಡಿದ್ದರು.
ವಿಧಾನಸಭೆ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ ₹5 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘಪರಿವಾರದಲ್ಲಿ ಗುರುತಿಸಿಕೊಂಡಿದ್ದ ಚೈತ್ರಾ ಕುಂದಾಪುರ ಅವರನ್ನು, ಮಂಗಳವಾರ ರಾತ್ರಿ ಬೆಂಗಳೂರಿನ ಸಿಸಿಬಿ ಪೊಲೀಸರು ಉಡುಪಿ ಶ್ರೀ ಕೃಷ್ಣ ಮಠದ ಬಳಿ ಬಂಧಿಸಿದ್ದರು.