- ದಾವಣಗೆರೆಯ ಚನ್ನಗಿರಿ ತಾಲೂಕಿನ ಹಿರೇಮಳಲಿ ಗ್ರಾಮದ ನ್ಯಾಯಬೆಲೆ ಅಂಗಡಿ
- ಪಡಿತರ ಚೀಟಿಗೆ 1 ಕೆ.ಜಿ ಪಡಿತರ ಕಡಿಮೆ ವಿತರಿಸುತ್ತಿದ್ದ ಬಗ್ಗೆ ಟ್ವಟ್ಟರ್‌ನಲ್ಲಿ ಬಂದಿದ್ದ ದೂರು
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆಯ ಅಕ್ಕಿಯ ವಿತರಣೆಯ ವೇಳೆ ವಂಚಿಸುತ್ತಿರುವ ಬಗ್ಗೆ ಟ್ವಿಟ್ಟರ್‌ನಲ್ಲಿ ಬಂದ ದೂರಿಗೆ ಸ್ಪಂದಿಸಿರುವ ಸಿಎಂ ಕಚೇರಿ, ನ್ಯಾಯಬೆಲೆ ಅಂಗಡಿಯನ್ನು ಅಮಾನತುಗೊಳಿಸಿರುವುದಾಗಿ ತಿಳಿಸಿದ್ದಾರೆ.
ದಾವಣಗೆರೆಯ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೇಮಳಲಿ ಗ್ರಾಮದಲ್ಲಿ ಪ್ರತಿ ರೇಷನ್ ಕಾರ್ಡಿಗೆ ಒಂದು ಕೆಜಿ ಅಕ್ಕಿ ಕಡಿತ ಮಾಡಿ ನೀಡಲಾಗುತ್ತಿದೆ. ಇದು ತಾಲೂಕಿನಾದ್ಯಂತ ಎಗ್ಗಿಲ್ಲದೇ ನಡೆಯುತ್ತಿದೆ. ಇಂತವರನ್ನು ಅಮಾನತು ಮಾಡಿ ಎಂದು ವಿಡಿಯೋ ದಾಖಲೆ ಸಹಿತ ಸಿಎಂ ಕಚೇರಿಗೆ ಚಂದ್ರಶೇಖರ್ ಎಂಬವರು ಟ್ವೀಟ್ ಮೂಲಕ ದೂರು ನೀಡಿದ್ದರು.
ಇದಕ್ಕೆ ಸ್ಪಂದಿಸಿರುವ ಸಿಎಂ ಕಚೇರಿಯ ಅಧಿಕಾರಿಗಳು, ಸ್ಥಳೀಯ ಅಧಿಕಾರಿಗಳಿಂದ ವರದಿ ಪಡೆದ ಬಳಿಕ ಜಿಲ್ಲಾಧಿಕಾರಿಗಳು ನ್ಯಾಯಬೆಲೆ ಅಂಗಡಿಯನ್ನು ಅಮಾನತುಗೊಳಿಸಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ ಸಿಎಂ ಕಚೇರಿಯ ಅಧಿಕಾರಿಗಳು, ಚನ್ನಗಿರಿ ತಾಲೂಕಿನ ಹಿರೇಮಳಲಿ ಗ್ರಾಮದ ನ್ಯಾಯಬೆಲೆ ಅಂಗಡಿಯವರು ಪ್ರತಿ ಪಡಿತರ ಚೀಟಿಗೆ 1 ಕೆ.ಜಿ ಪಡಿತರ ಕಡಿಮೆ ವಿತರಿಸುತ್ತಿರುವ ವಿಷಯವನ್ನು ಚಂದ್ರಶೇಖರ್ ಎನ್ನುವವರು ಟ್ವಿಟ್ಟರ್ ಮೂಲಕ ನಮ್ಮ ಗಮನಕ್ಕೆ ತಂದರು. ದೂರು ಬಂದ ತಕ್ಷಣ ಸಂಬಂಧಪಟ್ಟ ಇಲಾಖೆಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಯಿತು. ದೂರು ಕೇಳಿಬಂದ ಕೆಲವೇ ಗಂಟೆಗಳ ಒಳಗೆ ಆಹಾರ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಿರುತ್ತಾರೆ. ಅವರ ವರದಿ ಆಧರಿಸಿ ಜಿಲ್ಲಾಧಿಕಾರಿಯವರು ನಿಯಮ ಉಲ್ಲಂಘನೆ ಮಾಡಿರುವ ನ್ಯಾಯಬೆಲೆ ಅಂಗಡಿಯನ್ನು ಅಮಾನತುಗೊಳಿಸಿ, ಪಡಿತರ ವಿತರಣೆಗೆ ತಾತ್ಕಾಲಿಕ ವ್ಯವಸ್ಥೆ ಮಾಡಿರುತ್ತಾರೆ” ಎಂದು ತಿಳಿಸಿದೆ.
“ಬಡಜನರ ಹಸಿವು ನೀಗಿಸುವ ಉದ್ದೇಶದ ಪಡಿತರ ವಿತರಣಾ ವ್ಯವಸ್ಥೆಯನ್ನು ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳುವ ಇಂತಹ ಯಾವುದೇ ಘಟನೆಗಳನ್ನು ನಾವು ಸಹಿಸುವುದಿಲ್ಲ. ಜನರಿಗೆ ಅವರ ಹಕ್ಕಿನ ಪಡಿತರ ಸಾಮಗ್ರಿಗಳನ್ನು ಸಿಗುವಂತೆ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ಸಿಎಂ ಸಿದ್ದರಾಮಯ್ಯ ಅವರ ಕಚೇರಿ ತಿಳಿಸಿದೆ.